Kodagu: ವಾಣಿಜ್ಯ ಭೂಪರಿವರ್ತನೆಗೆ ಪರಿಸರವಾದಿಗಳ ವಿರೋಧ: ರದ್ದತಿಗೆ ಮನವಿ
ನಾಲ್ಕು ವರ್ಷದಲ್ಲಿ 3 ಸಾವಿರ ಎಕೆರೆ ಭೂಮಿ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ
ಸರ್ಕಾರ 7 ದಿನಗಳಲ್ಲಿಯೇ ಭೂಪರಿರ್ತನೆಗೆ ಅವಕಾಶ ನೀಡುತ್ತಿರುವುದು ಮತ್ತಷ್ಟು ಮಾರಕ
ಭೂಪರಿವರ್ತನೆ ಅವಕಾಶದಿಂದ ಕೊಡಗು ಕೈಬಿಡುವಂತೆ ಸಿಎಂಗೆ ಮನವಿ
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.09): ಕೊಡಗು ಜಿಲ್ಲೆಯಲ್ಲಿ 2018 ರಿಂದಲೂ ನಿರಂತರವಾಗಿ ಭೂಕುಸಿತ ಮತ್ತು ಪ್ರವಾಹ ಪ್ರತೀ ವರ್ಷ ಎದುರಾಗುತ್ತಿರುವುದು ಗೊತ್ತೇ ಇದೆ. ಹೀಗೆ ಆಗುವುದಕ್ಕೆ ಕೊಡಗಿನ ಭೂಪ್ರದೇಶದ ಮೇಲೆ ನಡೆಯುತ್ತಿರುವ ಅನಾಚಾರವೇ ಕಾರಣ ಎನ್ನಲಾಗುತ್ತಿದೆ. ಹೀಗಾಗಿಯೇ ಕೋರ್ಟ್ ಮೆಟ್ಟಿಲೇರಿರುವ ಪರಿಸರವಾದಿಗಳು ಮುಖ್ಯಮಂತ್ರಿಗೂ ದೂರು ನೀಡಿ ಭೂಪರಿವರ್ತನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ.
ಕೊಡಗು ಎಂದರೆ ದಕ್ಷಿಣದ ಕಾಶ್ಮೀರ ಎಂದೇ ಹೆಸರಿದ್ದು, ಇದು ಪ್ರವಾಸಿಗರ ಪಾಲಿಗೆ ಸ್ವರ್ಗತಾಣ. ಈ ಸ್ವರ್ಗತಾಣ 2018 ಅಕ್ಷರಶಃ ನರಕವೇ ಆಗಿತ್ತು. ಅದಕ್ಕೆ ಕಾರಣ ಜಿಲ್ಲೆಯಲ್ಲಿ 32 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡು ಕೇಳರಿಯದಷ್ಟು ಭೂಕುಸಿತ, ಪ್ರವಾಹವಾಗಿತ್ತು. ಅದಕ್ಕೆಲ್ಲಾ ಕಾರಣ ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ಮೇಲೆ ನಡೆಯುತ್ತಿರುವ ದೌರ್ಜನ್ಯವೇ ಕಾರಣ ಎಂದು ಹಲವು ವಿಜ್ಞಾನಿಗಳ ತಂಡ ವರದಿಯನ್ನು ನೀಡಿದೆ. ಇದೀಗ ಮತ್ತೆ ರಾಜ್ಯ ಸರ್ಕಾರ 7 ದಿನಗಳಲ್ಲಿಯೇ ಭೂಪರಿರ್ತನೆಗೆ ಅವಕಾಶ ನೀಡುತ್ತಿರುವುದು ಮತ್ತಷ್ಟು ಮಾರಕವಾಗಿ ಪರಿಣಮಿಸಲಿದೆ ಎನ್ನುವುದು ಪರಿಸರವಾದಿಗಳ ಆತಂಕವಾಗಿದೆ.
Kodagu:ಬಿರುಕು ಬಿಟ್ಟ ಕಾವೇರಿ ನಾಲೆಗಳು: ನೀರು ಪೋಲಾಗಿ ಕೊನೆ ಭಾಗರದ ರೈತರ ಪರದಾಟ
ಭೂ ಪರಿವರ್ತನೆ ಅವಧಿ ಕಡಿತ ಬೇಡ:
ಹೀಗಾಗಿಯೇ ರಾಜ್ಯದಲ್ಲಿ ಏಳು ದಿನಗಳಲ್ಲಿ ಭೂಪರಿವರ್ತನೆಗೆ ನೀಡುತ್ತಿರುವ ಅವಕಾಶವನ್ನು ಕೊಡಗಿಗೆ ನೀಡಬಾರದು ಎನ್ನುವುದು ಪರಿಸರವಾದಿಗಳ ಒತ್ತಾಯ. ಸಂಪೂರ್ಣ ಬೆಟ್ಟಗುಡ್ಡಗಳಿಂದಲೇ ಆವೃತವಾಗಿರುವ ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಕೂಡ ಭೂಪರಿವರ್ತನೆ ಮಾಡಲು ಅವಕಾಶವಿಲ್ಲ. ಹೀಗಿದ್ದರೂ ಹಲವು ಜಿಲ್ಲಾಧಿಕಾರಿಗಳು ಭೂಪರಿವರ್ತನೆಗೆ ಅವಕಾಶ ನೀಡಿದ್ದಾರೆ. ಈ ಕುರಿತು ಪರಿಸರವಾದಿಗಳು 2019-20 ರಲ್ಲಿ ಹೈಕೋಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಭೂಪರಿವರ್ತನೆ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಿದೆ ಎಂದು ಪರಿಸರವಾದಿ ಕರ್ನಲ್ ಮುತ್ತಣ್ಣ ತಿಳಿಸಿದ್ದಾರೆ.
ನಾಲ್ಕು ವರ್ಷದಲ್ಲಿ 3 ಸಾವಿರ ಎಕೆರೆ ಭೂ ಪರಿವರ್ತನೆ:
ಕೊಡಗು ಜಿಲ್ಲೆಯಲ್ಲಿ 2018 ರಿಂದ ಇದುವರೆಗೆ 3,000 ಕ್ಕೂ ಹೆಚ್ಚು ಎಕರೆ ಭೂ ಪ್ರದೇಶವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪರಿವರ್ತನೆ ಮಾಡಲಾಗಿದೆ. ಅರಣ್ಯ ಭೂಮಿಯಾಗಲಿ ಅಥವಾ ಕೃಷಿ ಭೂಮಿಯಾಗಲಿ ಭೂ ಪರಿವರ್ತನೆ ಮಾಡಿದ್ದರಿಂದಾಗಿ ಎಲ್ಲೆಡೆ ಭೂಕುಸಿತವಾಗುತ್ತಿದೆ. ಮತ್ತೊಂದೆಡೆ ಕೊಡಜು ಜಿಲ್ಲೆಯಲ್ಲಿ ದಕ್ಷಿಣ ಕರ್ನಾಟಕದ ಜೀವನಾಡಿಯಾದ ಕಾವೇರಿ ನದಿಯ ಒಡಲು ಬರಿದಾಗುತ್ತಿದೆ ಎನ್ನುವುದು ಮತ್ತೊಂದು ಆತಂಕ. ಹೌದು ಕೃಷಿ ಮತ್ತು ಅರಣ್ಯ ಭೂಮಿಗಳ ಪರಿವರ್ತನೆಯಿಂದಾಗಿ ಜಲಮೂಲಗಳು ಬತ್ತಿಹೋಗುತ್ತಿದ್ದು, ಕೋಟ್ಯಂತರ ಜನರಿಗೆ ಕುಡಿಯುವ ನೀರು ಒದಗಿಸುತ್ತಿರುವ ಕಾವೇರಿ ನದಿ ಬೇಸಿಗೆ ಬಂತೆಂದರೆ ಬಹುತೇಕ ಬತ್ತಿಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Kodagu: ಹೃದಯಾಘಾತಕ್ಕೆ 6ನೇ ತರಗತಿ ವಿದ್ಯಾರ್ಥಿ ಬಲಿ
ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆಗೆ ವಿರೋಧ:
ವಾಸದ ಮನೆಗಳ ನಿರ್ಮಾಣಕ್ಕಾಗಿ ಭೂಪರಿವರ್ತನೆ ಮಾಡುವುದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಆದರೆ ವಾಣಿಜ್ಯ ಉದ್ದೇಶಗಳಿಗೆ ಭೂಪರಿವರ್ತನೆಗೆ ಅವಕಾಶ ನೀಡಲಾಗುತ್ತಿದ್ದು, ಮುಂದೊಂದು ದಿನ ಮುಂದಿನ ಪೀಳಿಗೆಗೆ ಕೊಡಗು ಜಿಲ್ಲೆಯನ್ನು ತೋರಿಸಲು ಉಳಿದಿರುವುದಿಲ್ಲ ಎನ್ನುವ ಆತಂಕವನ್ನು ಪರಿಸರವಾದಿ ಶ್ಯಾನ್ ಬೋಪಣ್ಣ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಭೂಕುಸಿತ, ಪ್ರವಾಹಗಳು ನಿರಂತರವಾಗಿ ನಡೆಯುತ್ತಿರುವುದು ಇಲ್ಲಿನ ಪ್ರಕೃತಿ ಮೇಲೆ ನಡೆಯುತ್ತಿರುವ ಮಾನವನ ದೌರ್ಜನ್ಯವೇ ಕಾರಣ ಎನ್ನುವುದು ಗೊತ್ತಿದೆ. ಆದರೂ ಸರ್ಕಾರ ಮತ್ತೆ ಭೂ ಪರಿವರ್ತನೆಗೆ ಅವಕಾಶ ನೀಡುತ್ತಿರುವುದಕ್ಕೆ ಪರಿಸರವಾದಿಗಳು ತೀವ್ರ ವ್ಯಕ್ತಪಡಿಸುತ್ತಿದ್ದಾರೆ.