ಕೊಡಗು ಆರೋಗ್ಯ ಇಲಾಖೆ ಹೊರಗುತ್ತಿಗೆ ಡಿ ದರ್ಜೆ ನೌಕರರಿಗಿಲ್ಲ ವೇತನ: ಸರ್ಕಾರದ ಬಳಿ ಹಣ ಇಲ್ಲವೆ?

By Govindaraj SFirst Published Sep 19, 2024, 10:55 PM IST
Highlights

ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ ಎಂದು ಸರ್ಕಾರವೇನೋ ಹೇಳುತ್ತಿದೆ. ಆದರೆ ಕೆಲವು ಇಲಾಖೆಯ ಸಿಬ್ಬಂದಿಗೆ ಮೂರ್ನಾಲ್ಕು ತಿಂಗಳಿನಿಂದ ವೇತನ ಕೊಡದೆ ಇರುವುದನ್ನು ನೋಡಿದರೆ ಸರ್ಕಾರದ ಬಳಿ ಹಣ ಇಲ್ಲವೆ ಎನ್ನುವ ಅನುಮಾನ ದೊಡ್ಡದಾಗಿ ಕಾಡುತ್ತದೆ. 
 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.19): ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ ಎಂದು ಸರ್ಕಾರವೇನೋ ಹೇಳುತ್ತಿದೆ. ಆದರೆ ಕೆಲವು ಇಲಾಖೆಯ ಸಿಬ್ಬಂದಿಗೆ ಮೂರ್ನಾಲ್ಕು ತಿಂಗಳಿನಿಂದ ವೇತನ ಕೊಡದೆ ಇರುವುದನ್ನು ನೋಡಿದರೆ ಸರ್ಕಾರದ ಬಳಿ ಹಣ ಇಲ್ಲವೆ ಎನ್ನುವ ಅನುಮಾನ ದೊಡ್ಡದಾಗಿ ಕಾಡುತ್ತದೆ. ಹೌದು ಕಳೆದ ವಾರವಷ್ಟೇ ಕೊಡಗು ಜಿಲ್ಲೆಯ ಅಂಗನವಾಡಿ ಶಿಕ್ಷಕಿಯರಿಗೆ ಮೂರ್ನಾಲ್ಕು ತಿಂಗಳಿನಿಂದ ಗೌರವಧನ ಕೊಡದಿರುವ ಬಗ್ಗೆ ಸುವರ್ಣ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು. ಇದೀಗ ಇಂತಹದ್ದೇ ಸಮಸ್ಯೆಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಎದುರಿಸುತ್ತಿದ್ದಾರೆ. 

Latest Videos

ಆರೋಗ್ಯ ಇಲಾಖೆಯ ಪ್ರಾಥಮಿಕ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತತ್ತಿರುವ ಡಿ ದರ್ಜೆ ನೌಕರರಿಗೆ ಮೂರರಿಂದ ನಾಲ್ಕು ತಿಂಗಳಿನಿಂದ ವೇತನವನ್ನೇ ನೀಡಿಲ್ಲ. ಹಾಗಾದರೆ ಡಿ ದರ್ಜೆ ನೌಕರರಿಗೆ ವೇತನ ಕೊಡುವುದಕ್ಕೂ ಸರ್ಕಾರದ ಬಳಿ ಹಣವಿಲ್ಲದಾಯಿತೆ ಎನ್ನುವ ಅನುಮಾನ ಎದುರಾಗಿದೆ. ಜಿಲ್ಲೆಯ ಹಲವು ಪಿಎಚ್ಸಿ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಹಿಂದೂಸ್ಥಾನ ಸೆಕ್ಯೂರಿಟಿ ಸರ್ವೀಸಸ್ ಕಂಪನಿ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ನೂರಕ್ಕೂ ಹೆಚ್ಚು ಹೊರಗುತ್ತಿಗೆ ಡಿ ದರ್ಜೆ ನೌಕರರಿಗೆ ವೇತನವನ್ನೇ ನೀಡಿಲ್ಲ. ಹೀಗಾಗಿ ಈ ನೌಕರರು ವೇತನವಿಲ್ಲದೆ ಪರದಾಡುವಂತೆ ಆಗಿದೆ. 

ಶೃಂಗೇರಿ ಬಳಿಕ ಹೊರನಾಡಲ್ಲೂ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಡ್ರೆಸ್ ಕೋಡ್ ಜಾರಿ

ಮನೆ ಬಾಡಿಗೆ ಕಟ್ಟಿಕೊಂಡು, ತಮ್ಮ ಮನೆಯ ಖರ್ಚು ವೆಚ್ಚಗಳನ್ನು ಭರಿಸುತ್ತಾ ತಮ್ಮ ಮಕ್ಕಳನ್ನೂ ಓದಿಸುವುದು ತೀರಾ ಕಷ್ಟಕರವಾಗಿ ಹೋಗಿದೆ ಎಂದು ಡಿ ದರ್ಜೆ ನೌಕರರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ನಾಲ್ಕು ತಿಂಗಳಿನಿಂದ ವೇತನ ಕೇಳಿ ಸುಸ್ತಾದ ಸಿಬ್ಬಂದಿ ಕೊನೆಗೆ ತಮ್ಮ ಸಂಘಟನೆಗಳ ಮೂಲಕ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಂಬಂಧಿಸಿದ ಕಂಪನಿಯ ಮ್ಯಾನೇಜರ್ಗಳಿಗೆ ನೋಟಿಸ್ ನೀಡಿದ್ದಾರೆ. ವೇತನ ಬಿಡುಗಡೆ ಮಾಡಿ ಇಲ್ಲವೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇವೆ. ಅದನ್ನು ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಕೆ ನೀಡಿದ್ದಾರೆ. 

ಗುತ್ತಿಗೆದಾರನಿಗೆ ಫೋನ್ ಕರೆ ಮಾಡಿ ವೇತನ ಬಿಡುಗಡೆ ಮಾಡುವಂತೆ ಕಾರ್ಮಿಕ ಇಲಾಖೆ ಅಧಿಕಾರಿ ಯತ್ನಟ್ಟಿ ಸೂಚಿಸಿದ್ದಾರೆ. ಈ ವೇಳೆ ಗುತ್ತಿಗೆದಾರ ಕಳೆದ ನಾಲ್ಕು ತಿಂಗಳಿನಿಂದ ಸರ್ಕಾರದಿಂದ ನಮಗೆ ಅನುದಾನ ಬಿಡುಗಡೆಯಾಗಿಲ್ಲ, ನಾನು ಈಗಾಗಲೇ ಎರಡು ತಿಂಗಳ ವೇತನವನ್ನು ಕೈಯಿಂದ ಕೊಟ್ಟಿದ್ದೇವೆ. ನಾವೇನು ಮಾಡುವುದು ಎಂದು ಅಳಲು ತೋಡಿಕೊಂಡಿದ್ದಾರಂತೆ.  ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ್ ಅವರು ಹೊರಗುತ್ತಿಗೆ ಡಿ ದರ್ಜೆ ನೌಕರರ ಎರಡು ತಿಂಗಳ ವೇತನ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆ ಪತ್ರ ಬರೆದಿದ್ದೇವೆ. 

ಹಿಂದೂ ಮಹಾಸಭಾ ಗಣಪತಿ ವಿಸರ್ಜನ ಮಹೋತ್ಸವ: ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಜನತೆ

ಅನುದಾನ ಬಿಡುಗಡೆಯಾಗುತ್ತಿದ್ದಂತೆ ವೇತನ ಬಿಡುಗಡೆಯಾಗಲಿದೆ. ಇನ್ನೆರಡು ದಿನಗಳಲ್ಲಿ ವೇತನ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ವೇತನ ಕೊಡದಿರುವುದಕ್ಕೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾರಣ ಇರಬಹುದು. ಗ್ಯಾರಂಟಿ ಯೋಜನೆ ಕೊಡುತ್ತೇವೆಂದು ದುಡಿದು ತಿನ್ನುವವರ ವೇತನ ಕೊಡದಿದ್ದರೆ ಹೇಗೆ. ಸರ್ಕಾರದ ಈ ನಡವಳಿಕೆ ಸರಿಯಲ್ಲ ಎಂದು ಕಾರ್ಮಿಕ ಮುಖಂಡ ಭರತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ವೇತನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ವೇತನ ಬಿಡುಗಡೆಗೂ ಸರ್ಕಾರದ ಬಳಿ ಹಣ ಇಲ್ಲವೆ ಎನ್ನುವ ಅನುಮಾನ ಹುಟ್ಟಿಸಿರುವುದಂತು ಸತ್ಯ.

click me!