ಕೊಡಗು: ಪೊಲೀಸ್ ಇಲಾಖೆಯ ಸೇವೆ ಪ್ರಶಂಸನೀಯ: ಎಸ್ಪಿ ಕೆ. ರಾಮರಾಜನ್ ಅಭಿಮತ 

By Ravi JanekalFirst Published Apr 2, 2024, 8:37 PM IST
Highlights

ಸಮಾಜದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ, ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳ ಸೇವೆ ಪ್ರಶಂಸನೀಯವಾಗಿದೆ ಎಂದು ನಿವೃತ್ತ ಸಿಪಿಐ ಎಚ್.ಜೆ.ಶಿವಶಂಕರಪ್ಪ ಅವರು ಹೇಳಿದರು. 

 ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಏ.2): ಸಮಾಜದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ, ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳ ಸೇವೆ ಪ್ರಶಂಸನೀಯವಾಗಿದೆ ಎಂದು ನಿವೃತ್ತ ಸಿಪಿಐ ಎಚ್.ಜೆ.ಶಿವಶಂಕರಪ್ಪ ಅವರು ಹೇಳಿದರು. 

ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಕವಾಯತು ಮೈದಾನ ಆವರಣದಲ್ಲಿ ಮಂಗಳವಾರ ನಡೆದ  ಕೊಡಗು ಜಿಲ್ಲಾ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 

ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ; ಆದ್ರೂ ಜನ ಮೋದಿ ಮೋದಿ ಅಂತಾ ಕೂಗ್ತಾರೆ: ಎಚ್‌ಸಿ ಮಹದೇವಪ್ಪ ಕಿಡಿ

1965 ಏಪ್ರಿಲ್, 02 ರಂದು ಪೊಲೀಸ್ ಕಾಯ್ದೆ ಜಾರಿಗೆ ತರಲಾಗಿದ್ದು, ಆ ದಿನದ ನೆನಪಿಗಾಗಿ ಪೊಲೀಸ್ ಧ್ವಜ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸುತ್ತಾ ಬರಲಾಗುತ್ತಿದೆ. ಪೊಲೀಸ್ ಕಲ್ಯಾಣ ನಿಧಿಗೆ ಸಹಾಯಧನ ಪಡೆದು ಅದನ್ನು ಪೊಲೀಸರ ಕುಟುಂಬಗಳಿಗೆ ಸದ್ವಿನಿಯೋಗ ಮಾಡಲಾಗುತ್ತಿದೆ ಎಂದರು. 

ಪೊಲೀಸ್ ಇಲಾಖೆಯಲ್ಲಿ ಪ್ರತಿಯೊಬ್ಬರ ಸೇವೆ ಮಹತ್ವದ್ದಾಗಿದೆ. ದೈನಂದಿನ ಕರ್ತವ್ಯದಲ್ಲಿ ಪೊಲೀಸರು ಶಿಸ್ತು ಹಾಗೂ ಸಂಯಮಕ್ಕೆ ಹೆಸರುವಾಸಿ. ಶೌರ್ಯ, ಸೇವೆ ಒಳಗೊಂಡ ಕಾರ್ಯನಿರ್ವಹಣೆಯಿಂದಾಗಿ ಸಮಾಜದಲ್ಲಿ ಶಾಂತಿ ನೆಲೆಸಲು ಪೊಲೀಸರ ಕರ್ತವ್ಯ ಅಪಾರವಾಗಿದೆ ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್ ಅವರುಗಳ ನೇತೃತ್ವದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿಗಾಗಿ ಜಿಲ್ಲಾ ಪೊಲೀಸ್ ಇಲಾಖೆ ನಿರಂತರ ಕಾರ್ಯನಿರ್ವಹಣೆ ಮಾಡುತ್ತಿದೆ. ಇದರಿಂದ ಪೊಲೀಸ್ ಇಲಾಖೆ ನೌಕರರ ಕುಟುಂಬಗಳಿಗೆ ನೆಮ್ಮದಿಯ ಜೀವನ ಸಾಗಿಸಲು ಸಹಕಾರಿಯಾಗಿದೆ ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ದೇಶದಲ್ಲಿನ ಆಂತರಿಕ ಹಾಗೂ ಬಾಹ್ಯ ಭದ್ರತೆ ಸಾಮಾನ್ಯವಾಗಿತ್ತು. ನಂತರದ ದಿನಗಳಲ್ಲಿ ಅದು ಅಭಿವೃದ್ಧಿಯಾಗುತ್ತಾ ಸುಭದ್ರ ರಾಷ್ಟ್ರ ಮುನ್ನಡೆಸುವಲ್ಲಿ ಪೊಲೀಸರ ಪಾತ್ರ ಅಪಾರ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ. ಪ್ರಕರಣಗಳ ಕಾರ್ಯಾಚರಣೆಯಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಪೊಲೀಸರು ತಮ್ಮ ಪ್ರಾಣ ತ್ಯಾಗ ಮಾಡಿದ ಅನೇಕ ಉದಾಹರಣೆಗಳು ಉಂಟು ಎಂದು ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯ ಸಂದರ್ಭಗಳನ್ನು ವಿವರಿಸಿದರು. 

ಪ್ರತೀ ವರ್ಷದಂತೆ ಈ ವರ್ಷವೂ ಸಹ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಪಿಯನ್ನು ಇಲಾಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುವವರನ್ನು ಗುರುತಿಸಿ ನೀಡಲಾಗುತ್ತಿದೆ. ಇಲಾಖೆಯ ಪೊಲೀಸ್ ಪೇದೆಯಿಂದ ಉನ್ನತ ಅಧಿಕಾರಿಗಳ ಮಟ್ಟದವರೆಗೂ ಪ್ರಕರಣಗಳ ಬೇದಿಸುವಲ್ಲಿ ಹಾಗೂ ಕರ್ತವ್ಯ ನಿಷ್ಠೆ ತೋರಿಸಿದವರಿಗೆ ಈ ಪ್ರಶಸ್ತಿಯನ್ನು ಕೊಡ ಮಾಡಲಾಗುತ್ತಿದೆ ಎಂದರು. 

ಪೊಲೀಸ್ ಇಲಾಖೆಯ ಸಮವಸ್ತ್ರ ತೊಟ್ಟು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ವಿಫುಲ ಅವಕಾಶ ಇವೆ. ಕಾನೂನು ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡೋಣ ಎಂದು ಹೇಳಿದರು. 

2024ನೇ ಸಾಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿಯನ್ನು ಭಾಗಮಂಡಲ ಪೊಲೀಸ್ ಠಾಣೆಯ ಹೆಡ್ ಕಾನ್ಸೆಟೇಬಲ್ ಸುನೀಲ್ ಕುಮಾರ್ ಪಿ.ಎಂ. ಅವರಿಗೆ ನೀಡಲಾಯಿತು. ವಿಶೇಷ ಘಟಕಗಳ ಪ್ರಶಸ್ತಿಯನ್ನು ಡಿಎಆರ್ ಘಟಕದ ಪ್ರದೀಪ್ ಎಸ್. ಅವರಿಗೆ ವಿತರಿಸಲಾಯಿತು. 

News Hour Special : ಸಿದ್ದರಾಮಯ್ಯ, ಡಿಕೆಶಿ ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ: ಪ್ರತಾಪ್‌ ಸಿಂಹ

ಆರ್.ಪಿ.ಐ ಚೆನ್ನನಾಯಕ ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಪೊಲೀಸ್ ಪೆರೇಡ್ ನಡೆಸಲಾಯಿತು. ಜಿಲ್ಲಾ ಸಶಸ್ತ್ರ ಪೊಲೀಸ್ ತಂಡದ ನೇತೃತ್ವವನ್ನು ಮಂಜುನಾಥ್ ಅವರು ವಹಿಸಿದ್ದರು. ಮಡಿಕೇರಿ ಉಪ ವಿಭಾಗದ ತಂಡದ ನೇತೃತ್ವವನ್ನು ರಾಘವೇಂದ್ರ, ವಿರಾಜಪೇಟೆ ಉಪ ವಿಭಾಗದ ಪೊಲೀಸ್ ತಂಡದ ನೇತೃತ್ವವನ್ನು ಶಿವಾನಂದ, ಸೋಮವಾರಪೇಟೆ ಪೊಲೀಸ್ ತಂಡದ ನೇತೃತ್ವ ಮಂಜುನಾಥ್, ಸಂಚಾರಿ ಪೊಲೀಸ್ ತಂಡದ ನೇತೃತ್ವವನ್ನು ಕಾಶಿನಾಥ್, ಜಿಲ್ಲಾ ಮಹಿಳಾ ಪೊಲೀಸ್ ತಂಡದ ನೇತೃತ್ವವನ್ನು ಶೋಭಾ ವಹಿಸಿದ್ದರು. 

ಪೊಲೀಸ್ ಬ್ಯಾಂಡ್ ನೇತೃತ್ವವನ್ನು ಸಿದ್ದೇಶ್ ಅವರು ವಹಿಸುವ ಮೂಲಕ ಉತ್ತಮ ಪೊಲೀಸ್ ವಾದ್ಯ ನುಡಿಸಿದರು. ಆರ್‍ಎಸ್‍ಐ ರಾಕೇಶ್ ನೇತೃತ್ವದಲ್ಲಿ ರಾಷ್ಟ್ರಧ್ವಜ ಹಾಗೂ ಪೊಲೀಸ್ ಧ್ವಜ ಪೆರೇಡ್ ಶಿಸ್ತುಬದ್ಧವಾಗಿ ನಡೆಯಿತು. 
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

click me!