ಸಾಲಮನ್ನಾ ಒಂದು ಪ್ಯಾಷನ್ ಹೇಳಿಕೆಯಾಗಿದೆ, ಹುಚ್ಚರ ಹಾಗೆ ಹೇಳುವುದು ಬಿಡಬೇಕು| ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಮಾತೆಯರ ಸಾಲಮನ್ನಾ ಎಂಬ ಘೋಷಣೆ| ಈ ಸಂಬಂಧ ಇದುವರೆಗೂ ಹಣ ಬಂದಿಲ್ಲ| ಇಂತಹ ಹೇಳಿಕೆಗಳು ಮಹಿಳೆಯರಲ್ಲಿ ಗೊಂದಲ ಸೃಷ್ಟಿಸಲಿದೆ ಎಂದ ಕೆ.ಎನ್.ರಾಜಣ್ಣ|
ಪಾವಗಡ(ಫೆ.09): ಡಿಸಿಸಿ ಬ್ಯಾಂಕಿನಿಂದ ಇದುವರೆಗೂ ಸಾಲ ಪಡೆಯದ ರೈತರಿಗೆ ಸುಮಾರು 5 ಕೋಟಿಯಷ್ಟು ಹೊಸ ಸಾಲ ಕಲ್ಪಿಸಲಾಗಿದೆ. ಸರ್ಕಾರದಿಂದ ಬರಬೇಕಿದ್ದ 64 ಕೋಟಿ ಸಾಲಮನ್ನಾದ ಹಣ ಬಂದ ಕೂಡಲೇ ಹಳಬರಿಗೆ ಬೆಳೆ ಸಾಲ ಕಲ್ಪಿಸುವುದಾಗಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಈಗಾಗಲೇ ಬೆಳೆ ಸಾಲ ಪಡೆದ ರೈತರ ಸಾಲಮನ್ನಾ ಮತ್ತೆ ಮನ್ನಾ ಆಗುವ ಸಾಧ್ಯತೆಗಳಿವೆ. ಕಾರಣ ಚುನಾವಣೆ ವೇಳೆ ಗ್ರಾಮಗಳಿಗೆ ಬಂದ ರಾಜಕಾರಣಿಗಳು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡುವ ಭರವಸೆ ವ್ಯಕ್ತಪಡಿಸಲಿದ್ದಾರೆ. ಹೀಗಾಗಿ ಮತ್ತೆ ಸಾಲಮನ್ನಾ ಆಗಲಿರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಸಿದ್ದು ಬಣ್ಣ ಬಯಲು: ದೇವೇಗೌಡ
ಸಭೆಯಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಬಗ್ಗೆ ಪ್ರಸ್ತಾಪಿಸಿದ ಕೆ.ಎನ್.ರಾಜಣ್ಣ, ಸಹಕಾರಿ ಬ್ಯಾಂಕಿನ ಸೇವೆ ಅತ್ಯಂತ ಸಂತಸ ತಂದಿದೆ. ಹೀಗಾಗಿ ಜನ ನನ್ನ ಪರವಾಗಿದ್ದಾರೆ ಎಂದ ಅವರು, ಇಲ್ಲಿನ ತಿಮ್ಮಾರೆಡ್ಡಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅತ್ಯಂತ ಆಪ್ತರಾಗಿದ್ದು, ಅವರು ಬೇಸರಪಟ್ಟರೂ ಪರವಾಗಿಲ್ಲ, ಕಳೆದ ತುಮಕೂರು ಲೋಕಸಭಾ ಚುನಾವಣೆ ಪ್ರಚಾರದ ವೇಳೆ ದೇವೇಗೌಡರು ನನ್ನ ಮನೆಯ ಪಕ್ಕದಲ್ಲಿಯೇ ಹೋಗಿದ್ದಾರೆ. ಚುನಾವಣೆಯಲ್ಲಿ ಜನತೆ ಅವರನ್ನು ಸೋಲಿಸಿದ್ದು ನನ್ನಗೆ ತೃಪ್ತಿ ತಂದಿದೆ ಎಂದರು.
ಸಾಲಮನ್ನಾ ಒಂದು ಪ್ಯಾಷನ್ ಹೇಳಿಕೆಯಾಗಿದೆ. ಹುಚ್ಚರ ಹಾಗೆ ಹೇಳುವುದು ಬಿಡಬೇಕು. ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಮಾತೆಯರ ಸಾಲಮನ್ನಾ ಎಂದು ಘೋಷಿಸಿದ್ದರು. ಈ ಸಂಬಂಧ ಇದುವರೆಗೂ ಹಣ ಬಂದಿಲ್ಲ, ಇಂತಹ ಹೇಳಿಕೆಗಳು ಮಹಿಳೆಯರಲ್ಲಿ ಗೊಂದಲ ಸೃಷ್ಟಿಸಲಿದೆ ಎಂದರು.