ಸಾಮ್ರಾಜ್ಯ ಕಟ್ಟಿದ್ದೀವಿ, ಅದನ್ನು ಉಳಿಸಲು ನಮ್ಮ ಮಕ್ಕಳು ರಾಜಕೀಯಕ್ಕೆ ಬರ್ತಾರೆ: ಜಾರಕಿಹೊಳಿ

By Kannadaprabha News  |  First Published Feb 9, 2021, 9:41 AM IST

ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕೈದು ತಿಂಗಳಿನಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದೇನೆ: ಪ್ರಿಯಾಂಕಾ ಜಾರಕಿಹೊಳಿ|ಸಾಮಾಜಿಕ, ರಾಜಕೀಯವಾಗಿ, ಉದ್ದಿಮೆಯಲ್ಲಿ ನಮ್ಮಂತೆಯೇ ಮಕ್ಕಳೂ ಬೆಳೆಯಬೇಕು| ನಮ್ಮಂತೆಯೇ ನಮ್ಮ ಸಾಮ್ರಾಜ್ಯವನ್ನೂ ಮಕ್ಕಳು ಮುಂದುವರಿಸುತ್ತಾರೆ: ಸತೀಶ ಜಾರಕಿಹೊಳಿ| 


ದಾವಣಗೆರೆ(ಫೆ.09): ಇಷ್ಟೆಲ್ಲಾ ದೊಡ್ಡ ಸಾಮ್ರಾಜ್ಯ ಕಟ್ಟಿದ್ದೀವಿ. ಅದನ್ನು ಉಳಿಸಲು ಮಕ್ಕಳು ಬೇಕೇ ಬೇಕು. ಮುಂದೆ ನೂರಕ್ಕೆ ನೂರರಷ್ಟು ನಮ್ಮ ಮಕ್ಕಳು ರಾಜಕೀಯ ಬಂದೇ ಬರುತ್ತಾರೆ. ಈಗಾಗಲೇ ಇದನ್ನು ಘೋಷಣೆ ಸಹ ಮಾಡಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. 

ರಾಜಕೀಯದಲ್ಲಿ ಶುದ್ಧ ಹಸ್ತ ರಾಜಕಾರಣಿಯೆಂದೇ ಗುರುತಿಸಿಕೊಂಡ ಸತೀಶ ಜಾರಕಿಹೊಳಿ ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾಜಿಕ, ರಾಜಕೀಯವಾಗಿ, ಉದ್ದಿಮೆಯಲ್ಲಿ ನಮ್ಮಂತೆಯೇ ಮಕ್ಕಳೂ ಬೆಳೆಯಬೇಕು. ನಮ್ಮಂತೆಯೇ ನಮ್ಮ ಸಾಮ್ರಾಜ್ಯವನ್ನೂ ಮಕ್ಕಳು ಮುಂದುವರಿಸುತ್ತಾರೆ. ಈಗಾಗಲೇ ಮಕ್ಕಳಿಗೆ ಎಲ್ಲ ರೀತಿಯಿಂದಲೂ ಕಲಿಸುವ ಪ್ರಯತ್ನ ನಡೆಯುತ್ತಿದೆ. ಮುಂದೆ ಅನುಭವದಿಂದ ತಾವೂ ಕಲಿಯುತ್ತಾರೆ. ನಮ್ಮ ಮಕ್ಕಳು ರಾಜಕೀಯಕ್ಕೆ ಬರುತ್ತಾರೆಂಬುದನ್ನು ಮುಂಚೆಯೇ ಘೋಷಿಸಿದ್ದೇವೆ. ಎಲ್ಲ ಕಲಿತ ನಂತರ ನ್ಯಾಚುರಲಿ ರಾಜಕೀಯಕ್ಕೆ ಬಂದೇ ಬರುತ್ತಾರೆ ಎಂದು ತಮ್ಮ ಮಕ್ಕಳ ರಾಜಕೀಯ ಪ್ರವೇಶದ ಕುರಿತಂತೆ ಮನದಾಳದ ಇಂಗಿತವನ್ನು ಸತೀಶ ಜಾರಕಿಹೊಳಿ ತೋಡಿಕೊಂಡರು.

Latest Videos

undefined

ಬೆಳಗಾವಿ ಜಿಲ್ಲೆಯನ್ನೂ ವಿಭಜನೆ ಮಾಡಿ: ಸತೀಶ ಜಾರಕಿಹೊಳಿ

ತಂದೆ ಹೇಳಿದ್ರೆ ರಾಜಕೀಯಕ್ಕೆ ಬರುವೆ: ಪ್ರಿಯಾಂಕಾ 

ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ನಡೆದಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯ ಕುರಿತಂತೆ ಸತೀಶ ಜಾರಕಿಹೊಳಿ ಸುಳಿವು ನೀಡಿದರೆ, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಪ್ರತಿಕ್ರಿಯಿಸಿ, ತಂದೆ ಆಸೆಯಂತೆ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದರಾದರೂ, ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಪ್ರಿಯಾಂಕ ಗಾಂಧಿ-ರಾಹುಲ್‌ ಗಾಂಧಿ ಅಂತಲೇ ಗುರುತಿಸಿಕೊಂಡ ಸತೀಶ ಜಾರಕಿಹೊಳಿ ಪುತ್ರಿ-ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಸತೀಶ ಸುಳಿವು ನೀಡಿದರೆ, ಪುತ್ರಿ ಪ್ರಿಯಾಂಕಾ ಮಾತ್ರ ಗುಟ್ಟು ಬಿಟ್ಟು ಕೊಡಲಿಲ್ಲ.

ಆದರೆ, ತಂದೆ ಹೇಳಿದರೆ ರಾಜಕೀಯಕ್ಕೆ ಬರುತ್ತೇನೆ. ನಾಲ್ಕೈದು ತಿಂಗಳಿನಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ತಂದೆ ಸತೀಶ ಜಾರಕಿಹೊಳಿ ಈಗ ಮಾಡುತ್ತಿರುವ ಸಾಮಾಜಿಕ ಕಾರ್ಯಗಳನ್ನಷ್ಟೇ ಮುಂದುವರಿಸಿಕೊಂಡು ಹೋಗಲು ಹೇಳಿದ್ದಾರೆ. ಹಾಗಾಗಿ, ಜನಪರ ಕಾರ್ಯಗಳನ್ನು ನಮ್ಮ ಜಿಲ್ಲೆಯಲ್ಲಿ ಮಾಡುತ್ತಿದ್ದೇನೆ. ತಂದೆ ಹೇಳಿದರೆ ಮುಂದೆ ರಾಜಕೀಯಕ್ಕೆ ಬರುತ್ತೇನೆ ಎಂದು ಪ್ರಿಯಾಂಕಾ ತಿಳಿಸಿದರು.
 

click me!