ಮಲೆನಾಡಲ್ಲಿ ಮತ್ತೆ ಆತಂಕ: ಸಮಯಕ್ಕೂ ಮೊದಲೇ ಕಾಣಿಸಿಕೊಂಡ ಕೆಎಫ್‌ಡಿ ಸೋಂಕು, 50 ವರ್ಷದ ಮಹಿಳೆಯಲ್ಲಿ ದೃಢ!

Published : Dec 02, 2025, 04:48 PM IST
Shivamogga KFD

ಸಾರಾಂಶ

ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಅಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲೇ ಕಾಣಿಸಿಕೊಂಡಿದೆ. ಹೊಸನಗರ ತಾಲೂಕಿನ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿ, ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದೆ.

ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಮಂಗನ ಕಾಯಿಲೆ (Kyasanur Forest Disease) ಮತ್ತೆ ತಲೆದೋರಿದೆ. ಸಾಮಾನ್ಯವಾಗಿ ಜನವರಿ–ಫೆಬ್ರವರಿ ತಿಂಗಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್‌ ಸೋಂಕು, ಈ ಬಾರಿ ಅಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲೇ ಪತ್ತೆಯಾಗಿದ್ದು, ಆರೋಗ್ಯ ಅಧಿಕಾರಿಗಳಲ್ಲಿ ಎಚ್ಚರಿಕೆ ಮೂಡಿಸಿದೆ.

ಹೊಸನಗರ ತಾಲೂಕಿನ ಬಿಳ್ಳೂಡಿ ಗ್ರಾಮದಲ್ಲಿ ಪ್ರಕರಣ ದೃಢ

ಹೊಸನಗರ ತಾಲೂಕಿನ ಸೊನಲೆ ಗ್ರಾಮಪಂಚಾಯತ್ ವ್ಯಾಪ್ತಿಯ ಬಿಳ್ಳೂಡಿ ಗ್ರಾಮಕ್ಕೆ ಸೇರಿದ 50 ವರ್ಷದ ಮಹಿಳೆಯಲ್ಲಿ ಕೆಎಫ್‌ಡಿ ಸೋಂಕು ದೃಢಪಟ್ಟಿದೆ. ಕೆಲ ದಿನಗಳಿಂದ ತಲೆನೋವು, ಜ್ವರ ಮತ್ತು ದೌರ್ಬಲ್ಯದಂತಹ ಲಕ್ಷಣಗಳಿಂದ ಬಳಲುತ್ತಿದ್ದ ಮಹಿಳೆ ಪ್ರಾಥಮಿಕವಾಗಿ ಸೊನಲೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ನಂತರ ಲಕ್ಷಣಗಳು ಮುಂದುವರಿದ ಹಿನ್ನೆಲೆಯಲ್ಲಿ ಹೆಚ್ಚಿನ ಪರೀಕ್ಷೆಗಳಿಗೆ ಕಳುಹಿಸಲಾಯಿತು. ವೈದ್ಯಕೀಯ ವರದಿಯಲ್ಲಿ ಕೆಎಫ್‌ಡಿ ಸೋಂಕು ಇರುವುದನ್ನು ದೃಢಪಡಿಸಲಾಗಿದೆ. ಪ್ರಸ್ತುತ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವೈದ್ಯರು ಮಹಿಳೆಯ ಆರೋಗ್ಯದಲ್ಲಿ ಕ್ರಮೇಣ ಸ್ಥಿರತೆ ಕಾಣಿಸುತ್ತಿದೆ ಎಂದು ತಿಳಿಸಿದ್ದಾರೆ.

ಉಣ್ಣೆ ಕಚ್ಚಿ ಸೋಂಕಿನ ಶಂಕೆ

ಕಾಡು ಪ್ರದೇಶಗಳಲ್ಲಿ ಸಂಚರಿಸುವವರು, ಕಾಡಿಗೆ ಸೌದೆ ಸೊಪ್ಪು ತರಲು ಹೋಗುವವರಿಗೆ ಕೆಎಫ್‌ಡಿ ಸೋಂಕಿನ ಅಪಾಯ ಹೆಚ್ಚು ಇರುತ್ತದೆ. ಸಂಬಂಧಿತ ಅಧಿಕಾರಿಗಳ ಪ್ರಾಥಮಿಕ ಅಂದಾಜು ಪ್ರಕಾರ, ಮಹಿಳೆ ಕಾಡಿನೊಳಗೆ ದರಗು ತರಲು ಹೋದ ಸಂದರ್ಭದಲ್ಲಿ ಉಣ್ಣೆ (ticks) ಕಚ್ಚಿರುವುದರಿಂದ ವೈರಸ್ ಬಂದಿರಬಹುದು ಎಂದು ಶಂಕಿಸಲಾಗಿದೆ.

ನವೆಂಬರ್‌ನಲ್ಲೇ ಪ್ರಕರಣ

ಪ್ರತಿವರ್ಷ ಮಂಗನ ಕಾಯಿಲೆ ಪ್ರಕರಣಗಳು ಸಾಮಾನ್ಯವಾಗಿ ಜನವರಿಯಲ್ಲಿ ಹೆಚ್ಚಾಗುತ್ತವೆ. ಆದರೆ ಈ ಬಾರಿ ನವೆಂಬರ್‌ನಲ್ಲೇ ಪ್ರಕರಣ ಕಾಣಿಸಿಕೊಂಡಿರುವುದು ಗಮನಾರ್ಹ. ಇದರ ಪರಿಣಾಮವಾಗಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದ್ದು, ಕಾಡು ವ್ಯಾಪ್ತಿಯ ಗ್ರಾಮಗಳಲ್ಲಿ ಜಾಗೃತಿ ಅಭಿಯಾನ, ಮನೆಮನೆಗೆ ಆರೋಗ್ಯ ಸಿಬ್ಬಂದಿಗಳ ಭೇಟಿ, ಉಣ್ಣೆ ಕೀಟ ನಿಯಂತ್ರಣ ಕಾರ್ಯಕ್ರಮ, ಕಾಡು ಪ್ರದೇಶಗಳಿಗೆ ತೆರಳುವವರಿಗೆ ಮುನ್ನೆಚ್ಚರಿಕಾ ಸಲಹೆ, ಲಸಿಕೆ ಮುಂತಾದ ಮುಂಜಾಗೃತಾ ಕ್ರಮ ಅಗತ್ಯವಿದೆ.

ಗ್ರಾಮಸ್ಥರಲ್ಲಿ ಆತಂಕ, ಅಧಿಕಾರಿಗಳ ಸಭೆ

ಬಿಳ್ಳೂಡಿ ಗ್ರಾಮದಲ್ಲಿ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮೂಡಿದೆ. ತಾಲೂಕು ಆರೋಗ್ಯಾಧಿಕಾರಿಗಳು ತಕ್ಷಣ ಸಭೆ ಕರೆದಿದ್ದು, ಗ್ರಾಮದಲ್ಲಿನ ಎಲ್ಲ ಮನೆಗಳಿಗೆ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ಕಾಡು ಪ್ರದೇಶಗಳಿಗೆ ಅನವಶ್ಯಕ ಪ್ರವೇಶ ಮಾಡದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.

ಮಂಗನ ಕಾಯಿಲೆ ಲಕ್ಷಣಗಳು ಯಾವುವು?

  • ಹಠಾತ್ ಜ್ವರ
  • ತೀವ್ರ ತಲೆನೋವು
  • ದೇಹ ನೋವು
  • ವಾಂತಿ
  • ದೌರ್ಬಲ್ಯ
  • ಕೆಲವೊಮ್ಮೆ ರಕ್ತಸ್ರಾವ

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.

ಕೆಎಫ್ ಡಿ ಎಚ್ಚರ ವಹಿಸಿ: 

ಈ ಬಾರಿ ಕೆಎಫ್‌ಡಿ ನಿಯಂತ್ರಣಕ್ಕೆ ಅತಿ ಎಚ್ಚರಿಕೆಯಿಂದ ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಭಾನುವಾರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೂಚನೆ ನೀಡಿದರು.

2025ನೇ ಸಾಲಿನಿಂದ ಇಲ್ಲಿಯವರೆಗೆ ಕೆಎಫ್‌ಡಿ ಪತ್ತೆಗೆ 7155 ಪರೀಕ್ಷೆ ನಡೆಸಲಾಗಿದ್ದು, 72 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 02 ಮರಣ ಸಂಭವಿಸಿರುತ್ತದೆ. 450 ಉಣ್ಣೆ ಸಂಗ್ರಹ, 229 ಮಂಗಗಳ ಸಾವು ಸಂಭವಿಸಿದೆ ಎಂದು ವಿಡಿಎಲ್ ನ ಡಿಸಿಎಂಒ ಡಾ.ಹರ್ಷವರ್ದನ್ ತಿಳಿಸಿದರು.

ಮಂಗನ ಸಾವು ಕುರಿತು ಕೂಡಲೇ ವರದಿ‌ ಮಾಡಬೇಕು. ಕೆಎಫ್ ಡಿ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ಕ್ರಮ‌ವಹಿಸಬೇಕು.ಈ ವರ್ಷ ಬಹಳ ಜಾಗೃತೆಯಿಂದ ಇದ್ದು ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಕೆಎಫ್ ಡಿ ಪರೀಕ್ಷೆಗೆ ಶಿರಸಿಯಲ್ಲಿ ಪ್ರಯೋಗಾಲಯ ಆರಂಭಿಸಲು ಅನುಮತಿ ದೊರೆತಿದ್ದು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಈವರೆಗೆ 143 ಡೆಂಘೀ, ಚಿಗುನ್ ಗುನ್ಯ 64 ಮತ್ತು ಮಲೇರಿಯಾ 31 ಪ್ರಕರಣಗಳು ದಾಖಲಾಗಿದೆ. ಟಿಬಿ ಪರೀಕ್ಷೆಯಲ್ಲಿ ಶೇ.99 ಪ್ರಗತಿ ಸಾಧಿಸಲಾಗಿದ್ದು 1492 ಜನ ಚಿಕಿತ್ಸೆಯಲ್ಲಿದ್ದಾರೆ ಎಂದು ತಿಳಿಸಿದರು. ಕುಷ್ಟರೋಗ 32 ಪಾಸಿಟಿವ್ ಇದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ 72% ಸಾಧನೆ ಮಾಡಲಾಗಿದೆ. ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಕನ್ನಡಕ ನೀಡುವ ಆಶಾಕಿರಣ ಕೇಂದ್ರಗಳನ್ನು ರಾಜ್ಯಾದ್ಯಂತ ತೆರೆಯಲಾಗಿದ್ದು ಜಿಲ್ಲೆಯ 14 ಕಡೆ ಮತ್ತು ರಾಜ್ಯದಲ್ಲಿ 398 ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ತಾಲೂಕು ಆಸ್ಪತ್ರೆಯಲ್ಲಿ ಇಬ್ಬರು ಪ್ರಸೂತಿ ಮತ್ತು ಅರವಳಿಕೆ ತಜ್ಞರು ನೇಮಕ ಮಾಡಲು‌ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ‌ ಜಿಲ್ಲಾ ನೋಡಲ್ ಅಧಿಕಾರಿ ಡಾ.ರಘುನಂದನ್, ಡಿಎಚ್‌ಒ ಡಾ.ನಟರಾಜ್, ಎನ್ ವಿಬಿಡಿಸಿಪಿ ಅಧಿಕಾರಿ ಡಾ.ಗುಡುದಪ್ಪ ಕಸಬಿ, ಡಿಎಸ್ ಓ ಡಾ.ನಾಗರಾಜ ನಾಯ್ಕ್ , ಆರ್‌ಸಿಎಚ್‌ಒ ಡಾ.ಮಲ್ಲಪ್ಪ, ಡಿಎಲ್ ಒ ಡಾ.ಕಿರಣ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಹಾಜರಿದ್ದರು.

PREV
Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!