ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ

Published : Sep 01, 2022, 12:34 PM ISTUpdated : Sep 01, 2022, 12:36 PM IST
ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೆ  ಭೂಮಿ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ

ಸಾರಾಂಶ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಿರ್ಮಾಣ ಆಗಲಿರುವ ಥೀಮ್ ಪಾರ್ಕ್‌ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದ್ದಾರೆ.

ಬೆಂಗಳೂರು (ಆ.1): ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಿರ್ಮಾಣ ಆಗಲಿರುವ ಥೀಮ್ ಪಾರ್ಕ್‌ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದೇ ವೇಳೆ  ಸಿಎಂ ಬೊಮ್ಮಾಯಿ ಸೇರಿ ಸಚಿವರಿಂದ ಅಭಿಯಾನ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ.  ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ  ಇಂದು ನಡೆದ ಕಾರ್ಯಕ್ರಮದಲ್ಲಿ  ಸಿಎಂ ಬೊಮ್ಮಾಯಿ ಅವರು ಅಭಿಯಾನದ ಉದ್ಘಾಟನೆ ಜತೆಗೆ ನಾಡಪ್ರಭು ಕೆಂಪೇಗೌಡ ಥೀಮ್‌ಪಾರ್ಕ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ. ಥೀಮ್ ಪಾರ್ಕ್​ಗೆ ಪ್ರತಿ ಹಳ್ಳಿಯಿಂದ ಮಣ್ಣು ಮತ್ತು ನೀರು ಸಂಗ್ರಹ ಅಭಿಯಾನಕ್ಕೆ ಚಾಲನೆ  ದೊರೆತಿದೆ. ರಾಜಧಾನಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ನೆನಪನ್ನು ಅಜರಾಮರಗೊಳಿಸುವ ಉದ್ದೇಶದಿಂದ ಇಡೀ ನಾಡಿನ ಜನತೆಯನ್ನು ಏಕತೆಯ ಭಾವದಲ್ಲಿ ಒಗ್ಗೂಡಿಸಲು ಮುಂದಾಗಿರುವ ರಾಜ್ಯ ಸರ್ಕಾರವು ಇದಕ್ಕಾಗಿ 45 ದಿನಗಳ ವಿಶಿಷ್ಟಅಭಿಯಾನವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನು ಮೂರು ತಿಂಗಳಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದೆ.

ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಲು ಕೆಂಪೇಗೌಡರೇ ಮೂಲಕಾರಣ. ಹೀಗಾಗಿ, ಅವರ ಪ್ರತಿಮೆಯ ಉದ್ಘಾಟನೆಯಲ್ಲಿ ಇಡೀ ರಾಜ್ಯದ ಜನರು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಪಾಲ್ಗೊಳ್ಳಬೇಕು ಎನ್ನುವುದು ಸರ್ಕಾರದ ಆಶಯ. ಈ ಕನಸಿನೊಂದಿಗೆ ರೂಪು ಪಡೆದಿರುವ ಅಭಿಯಾನದ ಅಡಿಯಲ್ಲಿ ಥೀಮ್‌ ಪಾರ್ಕ್ಗೆ ಎಲ್ಲ ಜಿಲ್ಲೆಗಳ ಪ್ರತಿ ಹಳ್ಳಿಯ ಪವಿತ್ರ ಮೃತ್ತಿಕಾ (ಮಣ್ಣು)ವನ್ನು ಆಯಾಯ ಊರುಗಳಲ್ಲಿರುವ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ಕೊಳ, ಚಿಲುಮೆ ಮತ್ತು ಝರಿಗಳಿಂದ ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಜತೆಗೆ ನಾಡಿನ ಉದ್ದಗಲಕ್ಕೂ ಇರುವ ಅನುಕರಣೀಯ ಸಾಧಕರ ಮನೆಗಳಿಂದಲೂ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕಾಗಿ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಿರುವ ತಲಾ ಒಂದು ವಾಹನವನ್ನು ಪ್ರತಿ ಜಿಲ್ಲೆಗೂ ನಿಯೋಜಿಸಲಾಗುವುದು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಮತ್ತು ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ನಾಡಿನ ಪ್ರಮುಖ ಸ್ವಾಮೀಜಿಗಳ ಸಂದೇಶಗಳು ಬಿತ್ತರವಾಗಲಿವೆ. ಜೊತೆಗೆ ಕೆಂಪೇಗೌಡರಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರವೂ ಪ್ರಸಾರವಾಗಲಿದೆ. ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದ ಬಳಿಕ ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ, ವಿಮಾನ ನಿಲ್ದಾಣದ ಸಮುಚ್ಚಯದಲ್ಲಿ ತಲೆ ಎತ್ತುತ್ತಿರುವ ಕೆಂಪೇಗೌಡರ ಭವ್ಯವಾದ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿದು ಬಂದಿದೆ.

108 ಅಡಿ ಎತ್ತರದ ಕೆಂಪೇಗೌಡರ ಪುತ್ಥಳಿ ನಿರ್ಮಾಣಕ್ಕೆ ಸಿಎಂರಿಂದ ಶಂಕು ಸ್ಥಾಪನೆ

ಈ ಬಗ್ಗೆ ಏರ್ಪೋರ್ಟ್ ನಲ್ಲಿ ಸಚಿವ ಅಶ್ವಥ್ ನಾರಾಯಣ  ಮಾತನಾಡಿ, ಬೆಂಗಳೂರು ವಿಶ್ವದಲ್ಲಿ ಗಮನ ಸೆಳೆದಿದೆ. ಬೆಂಗಳೂರು ಸಂಸ್ಥಾಪಕರಾದ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವುದು ಬಹು ದಿನದ ಬೇಡಿಕೆ ಆಗಿತ್ತು. ಪ್ರತಿಮೆ ಈ ಮಟ್ಟದಲ್ಲಿ ಆಗೋದು ಯಾರ ಕಲ್ಪನೆಯೂ ಇರಲಿಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಸ್ಮರಿಸಿಕೊಳ್ಳುವಂತೆ ಪ್ರತಿಮೆ ಮಾಡಿಸಿದ್ದಾರೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣ ಆಗ್ತಿದೆ. ಎಲ್ಲದಕ್ಕೂ ಹೆಸರಾಗಿರೋದು ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಇಂದು ಹೆಸರು ಘೋಷಿಸುವ ಕೆಲಸ ಆಗಲಿದೆ. ಪ್ರಗತಿಯ ಪ್ರತಿಮೆ(Statue Of Prosperity) ಹೆಸರನ್ನು ಸಿಎಂ ಘೋಷಿಸಸಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಕೆಂಪೇಗೌಡರ 108 ಅಡಿ ಪ್ರತಿಮೆ ಉದ್ಘಾಟನೆ ಆಗಲಿದೆ. ಪ್ರತಿಮೆ ಯಾರು ಉದ್ಘಾಟನೆ ಮಾಡಬೇಕು ಅನ್ನೋದು ಸಿಎಂ ನಿರ್ಧಾರ ಮಾಡಲಿದ್ದಾರೆ. ಅದಕ್ಕೆ ದಿನಾಂಕ ಕೂಡ ಸಿಎಂ ನಿಗದಿ ಮಾಡ್ತಾರೆ. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಆಗಬೇಕು ಅನ್ನೋದು ನಮ್ಮೆಲ್ಲರ ನಿರೀಕ್ಷೆ. ನಾಡಿನ ಜನ ಸೇರಿ ಈ ಕಾರ್ಯಕ್ರಮ ಮಾಡಬೇಕು. ನಮ್ಮ‌ ಅಭಿಮಾನ ಸೇರಿ ಎಲ್ಲರೂ ಮಾಡಬೇಕು ಎಂದಿದ್ದಾರೆ.

Kempegowda Theme Park : ಎಲ್ಲ ಜಿಲ್ಲೆಗಳಿಂದ ಮಣ್ಣು ಪವಿತ್ರ ಮಣ್ಣು ಸಂಗ್ರಹಿಸಲು ತೀರ್ಮಾನ

ಇನ್ನು ಸಚಿವ ಗೋಪಾಲಯ್ಯ ಹೇಳಿಕೆ ನೀಡಿ, ಕೆಂಪೇಗೌಡರ‌ ಸೇವೆ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ.  ಇಲ್ಲಿ ವಾಸವಾಗಿರೋ ಜನರಿಗೆ ಕೆರೆ, ಕಟ್ಟೆ ನಿರ್ಮಾಣ ಮಾಡಿದವರು‌. ಅವರವರ ಕುಲಕಸುಬು ಮಾಡುವವರಿಗೆ ಅನುಕೂಲ ಮಾಡಿಕೊಟ್ಟಿದ್ರು. ಕುಲ ಕಸುಬು ಮಾಡುವವರಿಗೆ ಪ್ರತ್ಯೇಕ ಜಾಗ ಮಾಡಿಕೊಟ್ಟರು. ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪನೆ ಆಗಲಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಆಗ್ತಿರೋ ಒಳ್ಳೆಯ ಕೆಲಸ.  ನಮ್ಮ ಸರ್ಕಾರ ಮಾಡ್ತಿರೋದು ನಮಗೆ ಹೆಮ್ಮೆ ತಂದಿದೆ. ಕೆಂಪೇಗೌಡರ ಹೆಸರು ಉಳಿಸುವ ಕೆಲಸ ಮಾಡಿದ್ದಾರೆ. ಸಿಎಂ‌ ಅವರ ದೂರ ದೃಷ್ಟಿ ಇದಕ್ಕೆ ಸಾಕ್ಷಿ.

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ