Kayaking to Farmers: ಬೆಳಗಾವಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕೇವಲ ರೈತರು ಹಾಗೂ ರೈತರ ಮಕ್ಕಳಿಗಾಗಿ ಕಾಯಾಕಿಂಗ್ ವ್ಯವಸ್ಥೆ ಮಾಡಲಾಗಿದೆ
ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್
ಚಿಕ್ಕೋಡಿ (ಅ. 28):ಕಾಯಾಕಿಂಗ್ (Kayaking) ಅನುಭವ ಅಥವಾ ರಿವರ್ ರಾಫ್ಟಿಂಗ್ (River Rafting) ಅನುಭವ ಪಡೀಬೇಕು ಅಂದ್ರೆ ಉತ್ತರ ಕರ್ನಾಟದ ಜನ ದಾಂಡೇಲಿ, ಗೋವಾ ಅಥವಾ ಕಾರವಾರಕ್ಕೆ ಹೋಗಲೇಬೇಕು. ಆದರೆ ಬೆಳಗಾವಿ (Belagavi) ಜಿಲ್ಲೆಯಲ್ಲಿ ಪ್ರಪ್ರಥಮಬಾರಿಗೆ ಕೇವಲ ರೈತರು (Farmers) ಹಾಗೂ ರೈತರ ಮಕ್ಕಳಿಗಾಗಿ ಕಯಾಕಿಂಗ್ ವ್ಯವಸ್ಥೆ ಮಾಡಲಾಗಿದೆ. ತುಂಬಿ ಹರಿಯುತ್ತಿರುವ ಹಳ್ಳ ಲೈಫ್ ಜಾಕೇಟ್ ಹಾಕ್ಕೊಂಡು ಕಯಾಕಿಂಗ್ ನಡೆಸ್ತಿರೋ ಮಕ್ಕಳು. ಮಕ್ಕಳ ಕಯಾಕಿಂಗ್ ವೀಕ್ಷಿಸುತ್ತಿರುವ ಊರ ಹಿರಿಯರು ಮತ್ತು ಶಾಸಕರು. ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ (Athani) ತಾಲೂಕಿನ ಕಾಗವಾಡ ಮತಕ್ಷೇತ್ರ ವ್ಯಾಪ್ತಿಯ ಸಂಬರಗಿ ಗ್ರಾಮದಲ್ಲಿ.
ಇಷ್ಟು ದಿನ ಹೊಲ ಗದ್ದೆಗಳಿಗೆ ನೀರು ಬೇಕು ಅಂತ ಪರಿತಪಿಸುತ್ತಿದ್ದ ಗ್ರಾಮಸ್ಥರಿಗೆ ನೀರಾವರಿ ಇಲಾಖೆಯಿಂದ ಹೊಸದಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸಲಾಗಿದೆ. ಇದರಿಂದ ಬರಡು ಭೂಮಿಗೆ ನೀರು ಸಿಕ್ಕಂತಾಗಿದೆ. ಅಲ್ಲದೇ ಶಾಸಕ ಶ್ರೀಮಂತ ಪಾಟೀಲ್ ಫೌಂಡೇಷನ್ ವತಿಯಿಂದ ಅಗ್ರಾಣಿ ಹಳ್ಳದಲ್ಲಿ 3 ಕಯಾಕಿಂಗ್ ಬೋಟ್ ಹಾಗೂ ಒಂದು ದೊಡ್ಡ ಬೋಟ್ ನೀಡಲಾಗಿದೆ.
ಶ್ರೀಮಂತ ಪಾಟೀಲ್ ಫೌಂಡಡೇಷನ್ ಅಕರ್ಯಕ್ಕೆ ಮೆಚ್ಚುಗೆ: ಉತ್ತರ ಕರ್ನಾಟಕದ ಜನ, ಅದರಲ್ಲೂ ರೈತರು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿದರೆ ಅವರಿಗೆ ಮನರಂಜನೆಗೆ ಅವಕಾಶಗಳು ಕಡಿಮೆ. ದೂರದ ಉತ್ತರ ಕನ್ನಡ, ಗೋವಾ ಹಾಗೂ ಕಾರವಾರಕ್ಕೆ ಹೋಗಿ ಬರೋದಕ್ಕೂ ಸಹ ಸಮಯವಿಲ್ಲದಂತ ಸ್ಥಿತಿ. ಇದನ್ನ ಮನಗಂಡು ಶಾಸಕ ಶ್ರೀಮಂತ ಪಾಟೀಲ್ ಫೌಂಡಡೇಷನ್ ವತಿಯಿಂದ ಹಳ್ಳಕ್ಕೆ 3 ಕಯಾಕಿಂಗ್ ಬೋಟ್ ಹಾಗೂ ಒಂದು ದೊಡ್ಡ ಬೋಟ್ ನೀಡಲಾಗಿದೆ.
ಇದು ಕೇವಲ ಮನರಂಜನೆಗಷ್ಟೇ ಅಲ್ಲದೇ ರೈತರ ಮಕ್ಕಳು ದೋಣಿ ನಡೆಸೋದು ಕಲಿಯಲೂ ಸಹಾಯಕವಾಗಲಿದೆ. ಪ್ರತಿ ಬಾರಿ ಕೃಷ್ಣಾ ಪ್ರವಾಹ ಬಂದಾಗ ಜನ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲೂ ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಹೀಗಾಗಿ ರೈತರು ಮಕ್ಕಳೂ ದೋಣಿ ನಡೆಸೋದನ್ನ ಕಲಿಯಲಿ ಎಂಬ ಉದ್ದೇಶದಿಂದ ಫೌಂಡೇಷನ್ ಈ ಕೆಲಸಕ್ಕೆ ಮುಂದಾಗಿದೆ.
ಇದನ್ನೂ ಓದಿ: ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ರೈತ ವಿದ್ಯಾ ನಿಧಿ ಯೋಜನೆಗೆ ಚಾಲನೆ
ಒಟ್ಟಿನಲ್ಲಿ ಕಾಯಾಕಿಂಗ್ ಅನುಭವವನ್ನ ರೈತರು ಹಾಗೂ ರೈತರ ಮಕ್ಕಳಿಗೂ ನೀಡಬೇಕು ಎನ್ನುವ ಸದುದ್ದೇಶ ಹೊಂದಿದ ಶ್ರೀಮಂತ ಪಾಟೀಲ್ ಫೌಂಡೇಷನ್ ಕಾರ್ಯಕ್ಕೆ ಈಗ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಪ್ರವಾಹದ ಸಂದರ್ಭದಲ್ಲಿ ಜನ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಈ ಕಾಯಾಕಿಂಗ್ ಸಹಕಾರಿಯಾಗಲಿದೆ ಎಂಬ ಮಾತುಗಳು ಕ್ಷೇತ್ರದಾದ್ಯಂತ ಕೇಳಿ ಬರ್ತಿವೆ.