Karwar Warship Museum: ವಾರ್‌ಶಿಪ್ ಮ್ಯೂಸಿಯಂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಪ್ರವಾಸಿಗರ ಬೇಸರ

By Suvarna NewsFirst Published Dec 5, 2022, 9:28 PM IST
Highlights

ಇಂಡೋ- ಪಾಕ್ ಯುದ್ಧದಲ್ಲಿ ವಿಜಯ ಸಾಧಿಸಿದ ಯುದ್ಧದಲ್ಲಿ ಮಂಚೂಣಿಯಲ್ಲಿದ್ದ ನೌಕೆಯೊಂದನ್ನು ಮ್ಯೂಸಿಯಂ ಆಗಿ ಸ್ಥಾಪಿಸಲಾಗಿದ್ದರೂ, ಆಡಳಿತದ ನಿರ್ಲಕ್ಷ್ಯದಿಂದಾಗಿ ಅವಸಾನದ ಹಂತ ತಲುಪಿದೆ. ಇದನ್ನು ವೀಕ್ಷಿಸಲು ಬಂದ ಪ್ರವಾಸಿಗರು ಕೂಡಾ ಬೇಸರದಿಂದಲೇ ಹಿಂತಿರುಗುತ್ತಿದ್ದಾರೆ.

ವರದಿ: ಭರತ್‌ರಾಜ್ ಕಲ್ಲಡ್ಕ , ಏಷಿಯಾನೆಟ್ ಸುವರ್ಣ ನ್ಯೂಸ್ 

ಕಾರವಾರ (ಡಿ.5): ಇಂಡೋ- ಪಾಕ್ ಯುದ್ಧದಲ್ಲಿ ವಿಜಯ ಸಾಧಿಸಿದ ದಿನವನ್ನು ದೇಶದೆಲ್ಲೆಡೆ ಭಾರತೀಯ ನೌಕಾ ದಿನವನ್ನಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ, ಈ ಯುದ್ಧದಲ್ಲಿ ಮಂಚೂಣಿಯಲ್ಲಿದ್ದ ನೌಕೆಯೊಂದನ್ನು ಮ್ಯೂಸಿಯಂ ಆಗಿ ಸ್ಥಾಪಿಸಲಾಗಿದ್ದರೂ, ಆಡಳಿತದ ನಿರ್ಲಕ್ಷ್ಯದಿಂದಾಗಿ ಅವಸಾನದ ಹಂತ ತಲುಪಿದೆ. ಇದನ್ನು ವೀಕ್ಷಿಸಲು ಬಂದ ಪ್ರವಾಸಿಗರು ಕೂಡಾ ಬೇಸರದಿಂದಲೇ ಹಿಂತಿರುಗುತ್ತಿದ್ದಾರೆ. ಈ‌ ಕುರಿತ ಒಂದು ಸ್ಟೋರಿ ಇಲ್ಲಿದೆ. 1971ರಲ್ಲಿ ಭಾರತ- ಪಾಕಿಸ್ತಾನಗಳ ನಡುವೆ ಯುದ್ಧ ನಡೆದಿದ್ದು, ಭಾರತೀಯ ನೌಕಾಪಡೆ ಈ ವೇಳೆ ಪ್ರಮುಖ ಪಾತ್ರ ವಹಿಸಿ ಡಿ.4ರಂದು  ವಿಜಯ ಪಡೆಯುವಲ್ಲಿ ಕೊಡುಗೆ ನೀಡಿತ್ತು. ಯುದ್ಧದ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ಬಾಂಬ್ ದಾಳಿ ಮಾಡಲು ಮತ್ತು ಅರಬ್ಬಿ ಸಮುದ್ರದಲ್ಲಿ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುವಲ್ಲಿ ಐಎನ್‌ಎಸ್ ಚಾಪೆಲ್ ಬಹುಮುಖ್ಯ ಪಾತ್ರ ವಹಿಸಿತ್ತು. ಇದು ಪಾಕಿಸ್ತಾನದ ವಾಣಿಜ್ಯ ರಾಜಧಾನಿಯನ್ನು ದುರ್ಬಲಗೊಳಿಸಿ, ಭಾರತದ ಅಂತಿಮ ವಿಜಯದಲ್ಲಿ ನೆರವಾಗಿತ್ತು. ಈ ಚಾಪೆಲ್‌ನಲ್ಲಿ ಕಾರ್ಯನಿರ್ವಹಿಸಿದ್ದ ಇಬ್ಬರು ಸಿಬ್ಬಂದಿಗೆ ಪರಮ ವೀರ ಚಕ್ರ ಮತ್ತು 8 ವೀರ ಚಕ್ರಗಳು ಬಂದಿತ್ತು. ಈ ಯುದ್ಧದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ‌ ದೇಶದಾದ್ಯಂತ ಪ್ರತೀ ವರ್ಷ ಡಿಸೆಂಬರ್ 4 ಅನ್ನು ಭಾರತೀಯ ನೌಕಾ ದಿನವನ್ನಾಗಿ ಆಚರಿಸಲಾಗುತ್ತದೆ.

ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 29 ವರ್ಷಗಳ ಸೇವೆಯ ಬಳಿಕ 2005ರ ಮೇ 5ರಂದು ಐಎನ್‌ಎಸ್ ಚಾಪಲ್ ಅನ್ನು ನಿವೃತ್ತಿಗೊಳಿಸಲಾಯಿತು. ಒಂದು ವರ್ಷದ ಬಳಿಕ ಕಾರವಾರದ ಟ್ಯಾಗೋರ್ ತೀರದಲ್ಲಿ, ಪನ್ವೇಲ್- ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಮ್ಯೂಸಿಯಂ ಆಗಿ ಸ್ಥಾಪಿಸಲಾಯಿತು. ಪ್ರತಿದಿನ ನೂರಾರು ಪ್ರವಾಸಿಗರು ಈ ಮ್ಯೂಸಿಯಂ ವೀಕ್ಷಣೆಗೆಂದೇ ಕಾರವಾರಕ್ಕೆ ಭೇಟಿ ನೀಡುತ್ತಾರೆ. ಮ್ಯೂಸಿಯಂನ ಪ್ರವೇಶ ದ್ವಾರದಲ್ಲೇ 15 ರೂ. ಪ್ರವೇಶ ಶುಲ್ಕ ಪಾವತಿಸಿ ತೆರಳಬೇಕಿದೆ. ಈ ಮ್ಯೂಸಿಯಮ್‌ಗೆ ಈಗಾಗಲೇ 16 ವರ್ಷಗಳಾಗಿದ್ದು, ಸದ್ಯ ತುಕ್ಕು ಹಿಡಿದು ಹಾಳಾಗುತ್ತಿದೆ. ಒಳಭಾಗದಲ್ಲಿದ್ದ ಎಸಿಯಂತೂ ಕೆಟ್ಟಿದ್ದು, ತ್ರೀಫೇಸ್ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಮ್ಯೂಸಿಯಂ ಒಳಗೆ ಹೊಕ್ಕಂತೇ ಪ್ರವಾಸಿಗರಿಗೆ ಉಸಿರುಗಟ್ಟುವಂತೆ ಭಾಸವಾಗುತ್ತದೆ. 

ಕ್ಷಿಪಣಿ ಉಡಾವಣೆ ವ್ಯವಸ್ಥೆ ಹೊಂದಿರುವ ಚಾಪೆಲ್ ನೌಕೆ, 1976ರ ನವೆಂಬರ್ 4ರಂದು ಭಾರತೀಯ ನೌಕಾಪಡೆಯ ಸೇವೆಗೆ ಸೇರ್ಪಡೆಗೊಂಡಿತ್ತು. 245 ಟನ್ ತೂಕ, 38.6 ಮೀಟರ್ ಉದ್ದ ಹಾಗೂ 7.6 ಮೀ. ಅಗಲ ಇರುವ ನೌಕೆ, ಗರಿಷ್ಠ ಗಂಟೆಗೆ 37 ನಾಟಿಕಲ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿತ್ತು. ಎರಡು 30 ಎಂಎಂ ಗನ್‌ಗಳು, ಒಂದು ಮೇಲ್ಮೈಯಿಂದ ಕ್ಷಿಪಣಿ ಉಡಾವಣಾ ವ್ಯವಸ್ಥೆ, ನಾಲ್ಕು ಹಡಗು ವಿರೋಧಿ ಕ್ಷಿಪಣಿ ಲಾಂಚರ್‌ಗಳು ಇದರಲ್ಲಿವೆ. ಈ ವಾರ್‌ಶಿಪ್ ಅನ್ನು ನೋಡಲು ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರೂ, ಇಲ್ಲಿ ಶೌಚಾಲಯದ ವ್ಯವಸ್ಥೆ ಸರಿಯಾಗಿಲ್ಲ. ಕೊಂಚ ದೂರದಲ್ಲೇ ಶೌಚಾಲಯವಿದ್ದರೂ ನೀರು ಬಾರದೆ ಪ್ರವಾಸಿಗರು ಪರದಾಡುವಂತಾಗಿದೆ.

ಉತ್ತರಕನ್ನಡ: ವಿಕ್ರಮಾದಿತ್ಯದ ಸಾಹಸಗಾಥೆಯ ಮ್ಯೂಸಿಯಂ..!

 ರಾತ್ರಿ ಹೊತ್ತಿನಲ್ಲಿ ಇಲ್ಲಿ ವಿದ್ಯುತ್ ವ್ಯವಸ್ಥೆ ಕೂಡಾ ಇಲ್ಲ. ಅಲ್ಲದೇ, ಈ ಮುಂಚೆ ನೌಕೆಯ ಒಳಗೆ ತೋರಿಸುತ್ತಿದ್ದ 15 ನಿಮಿಷಗಳ ಸಾಕ್ಷ್ಯಚಿತ್ರವನ್ನು ಕೂಡಾ ವಿದ್ಯುತ್ ಸಂಪರ್ಕವಿರದ ಕಾರಣ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಗೂಗಲ್‌ನಲ್ಲಿ ನೌಕೆಯ ಹೊರ ಭಾಗದ ಅಂದದ ಫೊಟೊಗಳನ್ನು ನೋಡಿಕೊಂಡು ಇಲ್ಲಿಗೆ ಬಂದವರು ಯಾಕಾದ್ರೂ ಇಲ್ಲಿಗೆ ಬಂದಿದ್ದೇವೋ ಅನ್ನುವಂತಾಗಿದೆ. ನೂರಾರು ಕಿಲೋ ಮೀಟರ್ ದೂರದಿಂದ ಬಂದು ಹಣ ಪಾವತಿಸಿ ಈ ಚಾಪೆಲ್ ನೋಡುವವರು ಇಲ್ಲಿಗೆ ಬಂದು ಯಾವುದೇ ಪ್ರಯೋಜನವಿಲ್ಲ ಅನ್ನುತ್ತಿದ್ದಾರೆ. ಇನ್ನು  ವಾರ್‌ಶಿಪ್ ಮ್ಯೂಸಿಯಂನಲ್ಲಿರುವ ಅವ್ಯವಸ್ಥೆಯಿಂದಾಗಿ ಇದನ್ನು ನೋಡಲು ಬರುವ ಪ್ರವಾಸಿಗರು ಇಲ್ಲಿನ ಕ್ಯೂರೇಟರ್‌ಗಳೊಂದಿಗೆ ಪ್ರತಿನಿತ್ಯ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿರುವ ಕ್ಯೂರೇಟರ್‌ಗಳು ಕೂಡ ಅಸಹಾಯಕರಂತಾಗಿದ್ದು, ಪ್ರವಾಸಿಗರಿಂದ ಸುಮ್ಮನೆ ಬೈಗುಳ ಕೇಳುವಂತಾಗಿದೆ.

ಹಳೆ ಟ್ರಕ್ ನ್ಯೂ ಲುಕ್: ಮಂಜೂಷಾ ಮ್ಯೂಸಿಯಂ ಸೇರಿದ 1960ರ ಟಾಟಾ ಗಾಡಿ

ಒಟ್ಟಿನಲ್ಲಿ ನೂರಾರು ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ಸ್ಥಳ, ಅದರಲ್ಲೂ ಯುದ್ಧದ ಕ್ಷಣವನ್ನು ಕಣ್ಣೆದುರು ಕಟ್ಟಿಕೊಡುತ್ತಿದ್ದ ಜೀವಂತ ನೌಕೆಯೊಂದು ಹೀಗೆ ತುಕ್ಕು ಹಿಡಿದು ಅವ್ಯವಸ್ಥೆಗಳಿಂದ ಹಾಳಾಗುತ್ತಿರುವ ನಿಜಕ್ಕೂ ಬೇಸರದ ಸಂಗತಿ. ತಕ್ಷಣವೇ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಿ, ನೌಕೆಯನ್ನು ದುರಸ್ತಿಪಡಿಸಿ ಮತ್ತೆ ಪ್ರವಾಸಿಗರನ್ನು ಸೆಳೆಯುವಂತೆ ಮಾಡುವ ಮೂಲಕ‌ ಪ್ರವಾಸೋದ್ಯಮ ಬೆಳೆಸಬೇಕಿದೆ.

click me!