
ಕರ್ನಾಟಕದ ಮಹಿಳೆಯರ ಸಾಧನೆ ಮತ್ತೊಮ್ಮೆ ದೇಶದ ಗಮನ ಸೆಳೆದಿದೆ. ಕಣ್ಮರೆಯಾಗುತ್ತಿದ್ದ ಸಾಂಪ್ರದಾಯಿಕ ಬೆಳೆಗಳ ಬೀಜಗಳನ್ನು ಉಳಿಸಬೇಕು ಎಂಬ ಉದ್ದೇಶದಿಂದ 2018ರಲ್ಲಿ ಕೇವಲ 14 ಮಹಿಳೆಯರು ಆರಂಭಿಸಿದ ಪುಟ್ಟ ಪ್ರಯತ್ನ ಇಂದು ದೊಡ್ಡ ಕೃಷಿ ಆಂದೋಲನವಾಗಿ ಬೆಳೆದಿದೆ. ಎಂಟು ವರ್ಷಗಳಲ್ಲಿ 30 ಹಳ್ಳಿಗಳಿಗೆ ವಿಸ್ತರಿಸಿರುವ ಈ ಮಹಿಳಾ ಸಂಘಕ್ಕೆ ಇದೀಗ ₹10 ಲಕ್ಷ ನಗದು ಬಹುಮಾನ ಹೊಂದಿರುವ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥಾ ಗ್ರಾಮದ ಬಿಬಿಜಾನ್ ಮೌಲಾಸಾಬ್ ಹಳೇಮನಿ ಅವರ ನೇತೃತ್ವದಲ್ಲಿ ಆರಂಭವಾದ ಈ ಅಭಿಯಾನ ಇಂದು ನೂರಾರು ಸಾಂಪ್ರದಾಯಿಕ ಬೀಜಗಳ ಸಂರಕ್ಷಣೆಗೆ ನೆರವಾಗುತ್ತಿದೆ. ಬಿಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘ (SHG) ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ತಂಡ, ರೈತರಲ್ಲಿ ಸಿರಿಧಾನ್ಯ ಕೃಷಿಯನ್ನು ಮತ್ತೆ ಜನಪ್ರಿಯಗೊಳಿಸುವುದರ ಜೊತೆಗೆ ಸ್ಥಳೀಯ ತಳಿಗಳ ಬೀಜಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡುತ್ತಿದೆ.
ಈ ಸಾಧನೆಯನ್ನು ಗುರುತಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ (PPVFRA), ಸಂಘಕ್ಕೆ 'ಪ್ಲಾಂಟ್ ಜೀನೋಮ್ ಸೇವಿಯರ್ ಕಮ್ಯುನಿಟಿ ಅವಾರ್ಡ್' ಪ್ರಶಸ್ತಿಯನ್ನು ಘೋಷಿಸಿದೆ. ಈ ಪ್ರಶಸ್ತಿಯು ₹10 ಲಕ್ಷ ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ನವೆಂಬರ್ 12, 2026ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಬಿಬಿಜಾನ್ ಹಳೇಮನಿ ಅವರಿಗೆ ಸಾಂಪ್ರದಾಯಿಕ ಬೀಜಗಳನ್ನು ಸಂರಕ್ಷಿಸುವ ಆಸಕ್ತಿ ಚಿಕ್ಕಂದಿನಿಂದಲೇ ಇತ್ತು. ಇದಕ್ಕೆ ಅವರ ತಂದೆಯೇ ಮುಖ್ಯ ಪ್ರೇರಣೆ. ತಂದೆ ವಿವಿಧ ಬೆಳೆಗಳ ಬೀಜಗಳನ್ನು ಜೋಪಾನವಾಗಿ ಸಂಗ್ರಹಿಸಿ ಮುಂದಿನ ಕೃಷಿಗೆ ಬಳಸುವುದನ್ನು ಅವರು ಬಾಲ್ಯದಿಂದ ನೋಡಿಕೊಂಡು ಬೆಳೆದಿದ್ದರು. ಕಾಲಕ್ರಮೇಣ ಹಳೆಯ ತಳಿಯ ಬೆಳೆಗಳು ಹೊಲಗಳಿಂದ ಕಣ್ಮರೆಯಾಗುತ್ತಿರುವುದನ್ನು ಗಮನಿಸಿದ ಅವರು, ಅವುಗಳನ್ನು ಉಳಿಸಬೇಕೆಂದು ನಿರ್ಧರಿಸಿದರು. 2018ರಲ್ಲಿ ತಮ್ಮ ಗ್ರಾಮದ ಇತರ 14 ಮಹಿಳೆಯರನ್ನು ಒಗ್ಗೂಡಿಸಿ ಬೀಜ ಸಂರಕ್ಷಣೆಯ ಕಾರ್ಯಕ್ಕೆ ಕೈಹಾಕಿದರು. ಈ ಪ್ರಯತ್ನಕ್ಕೆ ಸಾವಯವ ಕೃಷಿ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಸಹಜ ಸಮೃದ್ಧ ಸಂಸ್ಥೆಯ ಮಾರ್ಗದರ್ಶನ ಹಾಗೂ ಬೆಂಬಲವೂ ದೊರೆಯಿತು.
ಆ ಸಮಯದಲ್ಲಿ ಈ ಭಾಗದಲ್ಲಿ ಸಿರಿಧಾನ್ಯ ಕೃಷಿ ಕಡಿಮೆಯಾಗುತ್ತಿತ್ತು. ರೈತರು ರಾಗಿ, ನವಣೆ ಸೇರಿದಂತೆ ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಮೆಕ್ಕೆಜೋಳ, ಹತ್ತಿ ಮತ್ತು ಭತ್ತದಂತಹ ಬೆಳೆಗಳತ್ತ ಹೆಚ್ಚು ಒಲವು ತೋರಿಸುತ್ತಿದ್ದರು. ಸಿರಿಧಾನ್ಯ ಬೆಳೆದರೂ ಕಟಾವಿನ ನಂತರ ಸ್ವಚ್ಛಗೊಳಿಸುವುದು ಕಷ್ಟವಾಗುತ್ತಿತ್ತು. ಇದರಿಂದ ಕೃಷಿ ಲಾಭದಾಯಕವಲ್ಲ ಎಂಬ ಭಾವನೆ ರೈತರಲ್ಲಿ ಮೂಡಿತ್ತು.
2018ರಲ್ಲಿ ಬಿಬಿಜಾನ್ ಅವರ ಮನೆಯ ಪಕ್ಕದಲ್ಲೇ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲಾಯಿತು. ಆರಂಭದಲ್ಲಿ ಸಿರಿಧಾನ್ಯಗಳ ಬೀಜ ಸಂಗ್ರಹ ಮತ್ತು ವಿತರಣೆಗೆ ಒತ್ತು ನೀಡಿದ್ದ ಮಹಿಳೆಯರು, ನಂತರ ಬೇಳೆಕಾಳು, ಎಣ್ಣೆಕಾಳು, ಭತ್ತ ಹಾಗೂ ತರಕಾರಿ ಬೀಜಗಳನ್ನೂ ಸಂಗ್ರಹಿಸಲು ಆರಂಭಿಸಿದರು.
ಇಂದು ಈ ಬೀಜ ಬ್ಯಾಂಕ್ನಲ್ಲಿ 250ಕ್ಕೂ ಹೆಚ್ಚು ಸಾಂಪ್ರದಾಯಿಕ ಬೀಜದ ತಳಿಗಳನ್ನು ಸಂರಕ್ಷಿಸಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದವು:
- 70 ಬಗೆಯ ರಾಗಿ ತಳಿಗಳು
- 25 ಬಗೆಯ ಸಾಮೆ ತಳಿಗಳು
- 2 ಬಗೆಯ ಬರ್ನ್ಯಾರ್ಡ್ ಮಿಲೆಟ್ ತಳಿಗಳು
- 25 ಬಗೆಯ ಹುರಳಿಕಾಳು ತಳಿಗಳು
- 10 ಬಗೆಯ ಕಡಲೆ ತಳಿಗಳು
- 25 ಬಗೆಯ ಭತ್ತದ ತಳಿಗಳು
- ನವಣೆ, ಹೆಸರುಕಾಳು, ಎಣ್ಣೆಕಾಳು ಮತ್ತು ಸ್ಥಳೀಯ ತರಕಾರಿ ತಳಿಗಳು.
ಈ ಬೀಜ ಬ್ಯಾಂಕ್ನ ಮತ್ತೊಂದು ವಿಶೇಷವೆಂದರೆ, ರೈತರು ಇಲ್ಲಿಂದ ಬೀಜಗಳನ್ನು ಸಾಲವಾಗಿ ಪಡೆಯಬಹುದು. ಬೆಳೆ ಕಟಾವಿನ ನಂತರ ಪಡೆದ ಬೀಜಕ್ಕಿಂತ ಹೆಚ್ಚಿನ ಪ್ರಮಾಣದ ಬೀಜವನ್ನು ಮರಳಿ ನೀಡಬೇಕು. ಹೀಗೆ ಬೀಜಗಳ ಸಂಗ್ರಹ ನಿರಂತರವಾಗಿ ಹೆಚ್ಚಾಗುವ ವ್ಯವಸ್ಥೆಯನ್ನು ಮಹಿಳೆಯರು ರೂಪಿಸಿದ್ದಾರೆ. ಹವಾಮಾನ ಬದಲಾವಣೆ, ಮಳೆಯ ಏರಿಳಿತಗಳ ನಡುವೆಯೂ ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರುವ ಸಾಂಪ್ರದಾಯಿಕ ತಳಿಗಳನ್ನು ರೈತರಿಗೆ ತಲುಪಿಸುವುದು ಈ ಸಂಘದ ಪ್ರಮುಖ ಉದ್ದೇಶವಾಗಿದೆ.
ಬೀಜಗಳನ್ನು ಸಂಗ್ರಹಿಸುವುದಷ್ಟೇ ಈ ಮಹಿಳೆಯರ ಗುರಿಯಾಗಿರಲಿಲ್ಲ. ರೈತರು ಮತ್ತೆ ಸಿರಿಧಾನ್ಯ ಕೃಷಿ ಆರಂಭಿಸುವಂತೆ ಪ್ರೇರೇಪಿಸುವ ಸವಾಲನ್ನೂ ಅವರು ಎದುರಿಸಬೇಕಾಯಿತು. ಆರಂಭದಲ್ಲಿ ವಿವಿಧ ತಾಲೂಕುಗಳ ಹಳ್ಳಿಗಳಿಗೆ ತೆರಳಿ ರೈತರನ್ನು ಭೇಟಿಯಾಗಿ ಸಿರಿಧಾನ್ಯ ಕೃಷಿಯ ಪ್ರಯೋಜನಗಳನ್ನು ವಿವರಿಸುತ್ತಿದ್ದರು. ಆದರೆ ರೈತರಿಂದ ಅಷ್ಟಾಗಿ ಸ್ಪಂದನೆ ಸಿಗುತ್ತಿರಲಿಲ್ಲ. ಸಭೆಗಳಿಗೆ ಬರಲು ಕೂಡ ಹಲವರು ಹಿಂದೇಟು ಹಾಕುತ್ತಿದ್ದರು.
ಆಗ ಸಹಜ ಸಮೃದ್ಧ ಸಂಸ್ಥೆಯ ನೆರವಿನಿಂದ 'ನವಧಾನ್ಯ ಕಿಟ್'ಗಳನ್ನು ವಿತರಿಸಲು ಆರಂಭಿಸಿದರು. ಪ್ರತಿ ಕಿಟ್ನಲ್ಲಿ ಒಂದು ಎಕರೆ ಜಮೀನಿನಲ್ಲಿ ಬೆಳೆಯಬಹುದಾದ ಒಂಬತ್ತು ಬಗೆಯ ಸಿರಿಧಾನ್ಯಗಳ ಬೀಜಗಳಿದ್ದವು. ಇದರಿಂದ ರೈತರು ವಿವಿಧ ತಳಿಗಳನ್ನು ಪ್ರಯೋಗಿಸಲು ಅವಕಾಶ ದೊರೆಯಿತು. ಕ್ರಮೇಣ ರೈತರ ಆಸಕ್ತಿ ಹೆಚ್ಚಾಯಿತು. ಇಂದು ಮಳೆಯಾಶ್ರಿತ ಕೃಷಿ ಪ್ರದೇಶಗಳ 30 ಹಳ್ಳಿಗಳಲ್ಲಿ ಮಿಶ್ರ ಬೆಳೆ ಪದ್ಧತಿಯೊಂದಿಗೆ ಸಿರಿಧಾನ್ಯ ಕೃಷಿ ಪುನರುಜ್ಜೀವನಗೊಳ್ಳಲು ಈ ಮಹಿಳೆಯರ ಪ್ರಯತ್ನ ಪ್ರಮುಖ ಪಾತ್ರ ವಹಿಸಿದೆ.
ಸಿರಿಧಾನ್ಯ ಕೃಷಿ ಹೆಚ್ಚಾದರೂ ಕಟಾವಿನ ನಂತರ ಧಾನ್ಯಗಳನ್ನು ಸ್ವಚ್ಛಗೊಳಿಸಿ ಸಂಸ್ಕರಿಸುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಹಿಳೆಯರು 2022ರಲ್ಲಿ ತೀರ್ಥಾ ಗ್ರಾಮದಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕವನ್ನು ಆರಂಭಿಸಿದರು. ಸಹಜ ಸಮೃದ್ಧ, ಹೈದರಾಬಾದ್ನ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ (IIMR) ಮತ್ತು CROPS4HD ಯೋಜನೆಯ ಸಹಕಾರದಿಂದ ಈ ಘಟಕ ಸ್ಥಾಪನೆಯಾಯಿತು.
ಈ ಘಟಕವನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಸೆಲ್ಕೊ ಫೌಂಡೇಶನ್ ಸೌರ ವಿದ್ಯುತ್ ವ್ಯವಸ್ಥೆ ಒದಗಿಸಿದ್ದು, ಇದರಿಂದ ವಿದ್ಯುತ್ ವೆಚ್ಚ ಕಡಿಮೆ ಮಾಡಲು ಸಹಾಯವಾಗಿದೆ. ಬೆಂಗಳೂರಿನ ಮಿಲೆಟ್ ಫೌಂಡೇಶನ್ ಘಟಕದ ಯಂತ್ರೋಪಕರಣಗಳನ್ನು ನಿರ್ವಹಿಸುವ ಕುರಿತು ಮಹಿಳೆಯರಿಗೆ ತರಬೇತಿ ನೀಡಿದೆ.ಇದರ ಮೂಲಕ ರೈತರು ತಮ್ಮ ಬೆಳೆಗಳನ್ನು ಸಂಸ್ಕರಿಸಿ ಮಾರುಕಟ್ಟೆಗೆ ತಲುಪಿಸಲು ನೆರವಾಗುತ್ತಿದ್ದಾರೆ. ಮಧ್ಯವರ್ತಿಗಳ ಮೇಲಿನ ಅವಲಂಬನೆಯನ್ನೂ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ.
ಈ ಮಹಿಳೆಯರ ಪಯಣ ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಗ್ರಾಮದ ಕೆಲವರು ಅವರ ಕೆಲಸವನ್ನು ಗಂಭೀರವಾಗಿ ಪರಿಗಣಿಸದೆ ಅಪಹಾಸ್ಯ ಮಾಡುತ್ತಿದ್ದರು. ಕೆಲಸದ ನಿಮಿತ್ತ ಹೆಗಲಿಗೆ ಚೀಲ ಹಾಕಿಕೊಂಡು ಹೋಗುತ್ತಿದ್ದರೂ ಕೆಲವರು ಟೀಕೆ ಮಾಡುತ್ತಿದ್ದರು ಎಂದು ಬಿಬಿಜಾನ್ ನೆನಪಿಸಿಕೊಂಡಿದ್ದಾರೆ. ಸಂಘದ ಕೆಲಸಕ್ಕಾಗಿ ಬ್ಯಾಂಕ್ ಖಾತೆ ತೆರೆಯುವ ಸಂದರ್ಭದಲ್ಲೂ ಮಹಿಳೆಯರು ಸಮಸ್ಯೆ ಎದುರಿಸಿದ್ದರು. ಈ ಪ್ರಕ್ರಿಯೆ ವೇಳೆ ಫೋನ್ ಕರೆ ಸ್ವೀಕರಿಸಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್ ಅಗೌರವದಿಂದ ವರ್ತಿಸಿದ್ದ ಘಟನೆಯನ್ನೂ ಅವರು ಸ್ಮರಿಸಿದ್ದಾರೆ.
ಆದರೆ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಮಹಿಳೆಯರು ತಮ್ಮ ಕೆಲಸ ಮುಂದುವರಿಸಿದರು. ಒಂದು ಮನೆಯ ಪಕ್ಕದಲ್ಲಿ ಆರಂಭವಾದ ಪುಟ್ಟ ಬೀಜ ಬ್ಯಾಂಕ್ ಇಂದು 30 ಹಳ್ಳಿಗಳ ರೈತರಿಗೆ ನೆರವಾಗುತ್ತಿದೆ. ನೂರಾರು ಸಾಂಪ್ರದಾಯಿಕ ಬೀಜದ ತಳಿಗಳನ್ನು ಉಳಿಸುವುದರ ಜೊತೆಗೆ ಮಹಿಳೆಯರೇ ಕೃಷಿ ಉದ್ಯಮವನ್ನೂ ಮುನ್ನಡೆಸುತ್ತಿದ್ದಾರೆ. ಈಗ ₹10 ಲಕ್ಷದ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅವರ ಎಂಟು ವರ್ಷಗಳ ಶ್ರಮಕ್ಕೆ ಸಂದ ಗೌರವವಾಗಿದೆ. ಕಣ್ಮರೆಯಾಗುತ್ತಿದ್ದ ಬೀಜಗಳನ್ನು ಉಳಿಸುವ ಸಂಕಲ್ಪದೊಂದಿಗೆ ಆರಂಭವಾದ 14 ಮಹಿಳೆಯರ ಪ್ರಯತ್ನ ಇಂದು ಇಡೀ ಸಮುದಾಯಕ್ಕೆ ಮಾದರಿಯಾಗಿದೆ.