
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ ಎನ್ನೋದು ಮಾಮೂಲಾಗಿಬಿಟ್ಟಿದೆ. ಕೆಲವು ಪ್ರಕರಣಗಳಲ್ಲಿ ಇದು ನಿಜವೇ ಆಗಿದ್ದರೆ, ಮತ್ತೆ ಕೆಲವು ಪ್ರಕರಣಗಳಲ್ಲಿ ಮಾಡಬಾರದ್ದನ್ನು ಮಾಡಿದ ಆರೋಪಿ ಸಿಕ್ಕಿಬಿದ್ದರೆ ಅದಕ್ಕೆ ಹನಿಟ್ರ್ಯಾಪ್ ಹೆಸರು ಕೊಟ್ಟು ತಪ್ಪಿಸಿಕೊಳ್ಳಲು ನೋಡುವುದು ಇದೆ. ಇದಾಗಲೇ ಸಾಕಷ್ಟು ಧುರೀಣರು ಈ ಹನಿಟ್ರ್ಯಾಪ್, ಸ್ಟಿಂಗ್ ಆಪರೇಷನ್ ಕೇಸ್ನಲ್ಲಿ ಸಿಲುಕಿರುವುದು ಇದೆ. ಮನೆಯಲ್ಲಿ ಪತ್ನಿ ಇದ್ದರೂ, ಬೇರೆಯವರ ಸಹವಾಸ ಬಯಸುವ ಗಂಡಸರ ಬುದ್ಧಿಯನ್ನು ಉಪಯೋಗಪಡಿಸಿಕೊಂಡು ಹನಿಟ್ರ್ಯಾಪ್ ಮಾಡುವ ದೊಡ್ಡ ಜಾಲವೇ ಹುಟ್ಟಿಕೊಂಡಿದೆ. "ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎಂದರೆ ಕಾಮಕ್ಕೆ ಆತುರನಾಗಿದ್ದವನಿಗೆ ಭಯವೂ ಇರುವುದಿಲ್ಲ, ನಾಚಿಕೆಯೂ ಇರುವುದಿಲ್ಲ ಎನ್ನುವಂತೆ ದೊಡ್ಡ ದೊಡ್ಡ ಮುಖಂಡರೂ ತಮ್ಮ ಸ್ಥಾನದ ಘನತೆಯನ್ನೂ ಲೆಕ್ಕಿಸದೇ ಇದಕ್ಕೆ ಬಿದ್ದು ಕೊನೆಗೆ ಒದ್ದಾಡುವುದು ಇದಾಗಲೇ ಸಾಕಷ್ಟು ಪ್ರಕರಣಗಳಲ್ಲಿ ನೋಡಲಾಗುತ್ತಿದೆ.
ಈಗ ಅಂಥದ್ದೇ ಒಂದು ಪ್ರಕರಣ ಹೈಕೋರ್ಟ್ಗೆ ಬಂದಿದೆ. ಇಲ್ಲಿ 62 ವರ್ಷದ ಮುಖಂಡರೊಬ್ಬರ ಮೇಲೆ ಅ*ತ್ಯಾಚಾರ ಕೇಸ್ ದಾಖಲಾಗಿದೆ. ಅದು ಕೂಡ ಅಪ್ರಾಪ್ತೆಯ ಮೇಲೆ ಆಗಿರುವ ಕಾರಣದಿಂದ ಪೋಕ್ಸೋ ಕಾಯ್ದೆ ಮೇಲೆ ದೂರು ದಾಖಲಾಗಿದೆ. ಇದರ ರದ್ದತಿಗೆ ಆತ ಹೈಕೋರ್ಟ್ ಮೊರೆಹೋಗಿದ್ದ. ಇದು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಆರೋಪಿ ಪರ ವಕೀಲರು ತಮ್ಮ ಕಕ್ಷಿದಾರರನ್ನು ಸಮರ್ಥಿಸಿಕೊಳ್ಳುತ್ತಾ, ಇದು ಅ*ತ್ಯಾಚಾರ ಅಲ್ಲ, ಹನಿಟ್ರ್ಯಾಪ್. ಅವರಿಗೆ ವಯಸ್ಸಾಗಿದೆ, ಏನು ಮಾಡುವುದಕ್ಕೂ ಕೆಪ್ಯಾಸಿಟಿ ಇಲ್ಲ. ಅವರು ಹೇಗೆ ಅ*ತ್ಯಾಚಾರ ಮಾಡಲು ಸಾಧ್ಯ. 17 ವರ್ಷದ ಬಾಲಕಿ ಹನಿಟ್ರ್ಯಾಪ್ ಮಾಡಿ ಸಿಕ್ಕಿಸಿಹಾಕಿದ್ದಾಳೆ. ಆದ್ದರಿಂದ ಪೊಕ್ಸೋ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಬೇಕು ಎಂದು ಕೋರಿದರು.
ಇದರಿಂದ ನ್ಯಾಯಮೂರ್ತಿ ನಾಗಪ್ರಸನ್ನ ಗರಂ ಆದರು. ನಂಬರ್ ಎನ್ನೋದು ಲೆಕ್ಕಕ್ಕೇ ಇಲ್ಲ ಎನ್ನುವ ಹಾಗೆ ಮಾಡುವುದನ್ನು ಮಾಡಿ ಈಗ ಹನಿಟ್ರ್ಯಾಪ್ ಅನ್ನುತ್ತೀದ್ದೀರಾ ಎಂದು ಪ್ರಶ್ನಿಸಿದರು. ಅವರಿಗೆ 62 ವರ್ಷ. ಆಕೆ ಇನ್ನೂ ಅಪ್ರಾಪ್ತಳು. ಅವಳು ಹೋದಲೆಲ್ಲಾ, ಕೊನೆಗೆ ಬಾತ್ರೂಮ್ಗೆ ಹೋದಾಗಲೂ ಹಿಂಬಾಲಿಸಿರುವ ಸಾಕ್ಷಿ ಇದೆ. ಏನಂತ ಮಾತನಾಡುತ್ತೀರಿ, ಮಾಡುವುದನ್ನು ಮಾಡಿ ಈಗ ಹನಿಟ್ರ್ಯಾಪ್ ಎನ್ನುತ್ತೀರಾ ಎಂದು ಆರೋಪಿಯನ್ನು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು. ಹೈಕೋರ್ಟ್ ಕಲಾಪ ಲೈವ್ಸ್ಟ್ರೀಮ್ ಆಗುವ ಹಿನ್ನೆಲೆಯಲ್ಲಿ ಇದು ಕೂಡ ಸೋಷಿಯಲ್ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೊನೆಗೆ ಕೋರ್ಟ್ ಏನು ತೀರ್ಪು ಕೊಟ್ಟಿದೆ ಎನ್ನುವುದು ಇದರಲ್ಲಿ ದಾಖಲಾಗಿಲ್ಲ.