ಕಸ್ತೂರಿರಂಗನ್ ವರದಿ ಜನರು ಆತಂಕಪಡುವ ಅಗತ್ಯವಿಲ್ಲ: ಸಚಿವ ಮಧು ಬಂಗಾರಪ್ಪ

Published : Aug 27, 2026, 02:55 PM IST
Minister Madhu Bangarappa

ಸಾರಾಂಶ

ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದ್ದು, ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಆದರೆ, ರಾಜ್ಯ ಸರ್ಕಾರ ಈ ವರದಿಯನ್ನು ಈಗಾಗಲೇ ತಿರಸ್ಕರಿಸಿದ್ದು, ರೈತರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗ: ಕಸ್ತೂರಿ ರಂಗನ್ ಸಮಿತಿ ವರದಿಯ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈಗಾಗಲೇ ವಿಧಾನಸಭೆಯಲ್ಲಿ ಈ ವರದಿಯನ್ನು ತಿರಸ್ಕರಿಸುವ ತೀರ್ಮಾನವನ್ನು ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸಿರುವುದರಿಂದ ಈ ವರದಿಯ ಜಾರಿಯ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈ ವರದಿಯನ್ನು ತಿರಸ್ಕರಿಸಿರುವುದಾಗಿ ಕೇಂದ್ರಕ್ಕೆ ಅಧಿಕೃತವಾಗಿ ಮಾಹಿತಿ ನೀಡಿದ್ದರೂ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಗ ಮತ್ತೆ ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶ (ESA) ಗುರುತಿಸಿ, ಹೊಸ ಕರಡು ಅಧಿಸೂಚನೆ ಪ್ರಕಟಿಸಿದೆ. ಇದು ಖಂಡನೀಯ. ಈ ಕರಡು ಅಧಿಸೂಚನೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಈ ವಿಷಯದ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದೆ. ಅರಣ್ಯ ಸಚಿವ ರಾಮಲಿಂಗರೆಡ್ಡಿ ಅವರು ಸಹ ವಿಧಾನಸಭೆಯಲ್ಲಿಯೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಕಸ್ತೂರಿ ರಂಗನ್ ಸಮಿತಿ ವರದಿ ಪ್ರಕಾರ, 1,576 ಗ್ರಾಮಗಳು ʻಪರಿಸರ ಸೂಕ್ಷ್ಮ ಪ್ರದೇಶʼ

ಕಸ್ತೂರಿ ರಂಗನ್ ಸಮಿತಿ ವರದಿ ಹೇಳಿರುವಂತೆಯೇ ಕರ್ನಾಟಕದ ರಾಜ್ಯದ 1,576 ಗ್ರಾಮ ವ್ಯಾಪ್ತಿಯ 20,668 ಚದರ ಕಿ.ಮೀ. ಪ್ರದೇಶವನ್ನು ʻಪರಿಸರ ಸೂಕ್ಷ್ಮ ಪ್ರದೇಶʼ ಎಂದು ಈ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ 484 ಗ್ರಾಮಗಳು ಪ್ರಸ್ತಾವಿತ ಪಟ್ಟಿಯಲ್ಲಿವೆ. ಜನವಸತಿ ಪ್ರದೇಶ, ಕೃಷಿ ಭೂಮಿ ಇರುವ ಪ್ರದೇಶವನ್ನೂ ʻಪರಿಸರ ಸೂಕ್ಷ್ಮ ಪ್ರದೇಶʼ ಎಂದು ಗುರುತಿಸಿರುವುದರಿಂದ ಮಲೆನಾಡಿನ ರೈತರು ಸಹಜವಾಗಿಯೇ ಆತಂಕಗೊಂಡಿದ್ದಾರೆ. ಆದರೆ ಸರ್ಕಾರ ಈ ವರದಿಯ ಜಾರಿಗೆ ಅವಕಾಶ ನೀಡುವುದಿಲ್ಲ. ಈ ಕರಡು ಅಧಿಸೂಚನೆಯನ್ನು ವಿರೋಧಿಸಲಿದೆ. ಹೀಗಾಗಿ ಮಲೆನಾಡಿನ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಮಲೆನಾಡಿನ ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮಕ್ಕೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ರೈತರ ಪರವಾಗಿದೆ. ಈ ವಿಚಾರವನ್ನು ಪಕ್ಷದ ಹಿರಿಯ ನಾಯಕ ಆರ್.ವಿ. ದೇಶಪಾಂಡೆ, ಶಾಸಕರಾದ ಭೀಮಣ್ಣ ಟಿ. ನಾಯಕ್, ಟಿ.ಡಿ. ರಾಜೇಗೌಡ, ಎಚ್. ಡಿ. ತಮ್ಮಯ್ಯ ಹಾಗೂ ಎ.ಎಸ್. ಪೊನ್ನಣ್ಣ ಅವರು ಸದನದ ಒಳಗೂ ಮತ್ತು ಹೊರಗೆ ಪ್ರಸ್ತಾಪಿಸಿ ಚರ್ಚಿಸಿದ್ದಾರೆ. ಸರ್ಕಾರ ಈ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದು ವಿವರಿಸಿದ್ದಾರೆ.

ವಿಪಕ್ಷ ನಾಯಕರು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನವನ್ನು ಖಂಡಿಸುವುದಕ್ಕೆ ಬದಲಾಗಿ ಗೊಂದಲ ಉಂಟುಮಾಡುವ ಹೇಳಿಕೆ ನೀಡುತ್ತಿದ್ದಾರೆ. ಅನಗತ್ಯವಾಗಿ ಮಲೆನಾಡು ಭಾಗದ ರೈತರಲ್ಲಿ ಆತಂಕ ಸೃಷ್ಟಿಸುತ್ತಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಅತ್ಯಂತ ಮಹತ್ವದ ಈ ವಿಷಯದ ಕುರಿತು ಚರ್ಚೆಗೆ ಮುಂದಾಗುವ ಬದಲು ಗದ್ದಲ ನಡೆಸಿ ಅಧಿವೇಶನದ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಕಾಳಜಿಯೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಆರೋಪಿಸಿದ್ದಾರೆ.

ಸಿಎಂರೊಂದಿಗೆ ಚರ್ಚೆ: ಸಚಿವ ಮಧು ಬಂಗಾರಪ್ಪ

ಈ ವಿಚಾರವಾಗಿ ನಾನು ವೈಯಕ್ತಿಕವಾಗಿಯೂ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಸಹ ಈ ಕರಡು ಅಧಿಸೂಚನೆಯನ್ನು ವಿರೋಧಿಸುವ ತೀರ್ಮಾನ ಪ್ರಕಟಿಸಿದ್ದಾರೆ. ರೈತರ ಜೊತೆ ನಿಲ್ಲುವುದಾಗಿ ಅಭಯ ನೀಡಿದ್ದಾರೆ. ಹೀಗಾಗಿ ಮಲೆನಾಡಿನ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರೈತರು ಯಾವುದೇ ಆತಂಕ ಪಡಬಾರದು ಎಂದು ಧೈರ್ಯ ತುಂಬಿದ್ದಾರೆ.

ತಂದೆ ಮಾಜಿ ಸಿಎಂ ದಿ.ಎಸ್. ಬಂಗಾರಪ್ಪ ಅವರು ಸದಾ ರೈತರು ಹಾಗೂ ಜನಸಾಮಾನ್ಯರ ಪರವಾಗಿ ನಿಂತವರು. ಅವರ ಆಶಯಗಳನ್ನು ಎತ್ತಿಹಿಡಿಯುವುದೇ ನನ್ನ ಗುರಿ. ಅವರ ಮಾರ್ಗದಲ್ಲಿಯೇ ನಾನು ನಡೆಯುತ್ತಿದ್ದೇನೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

PREV
Read more Articles on
click me!

Recommended Stories

Highest Paying Jobs: ಐಟಿ ಕೆಲಸ ಬಿಟ್ಟುಬಿಡಿ! ಬೆಂಗಳೂರಿನಲ್ಲಿ ‘ದೊಡ್ಡ ಸಂಪಾದನೆ’ ಮಾಡೋ 5 ಕೆಲಸಗಳಿವು
Gadag ನಿಲ್ದಾಣದಲ್ಲಿ ಶೇಂಗಾ ಮಾರೋ ತಿಪ್ಪಮ್ಮ ಅಜ್ಜಿಯ ಆದಾಯ, ಮಾಡಿದ ಆಸ್ತಿ ಎಷ್ಟು?