ಮಂಡ್ಯ ಜೈಲಿನಲ್ಲೂ ರಾಜಾತಿಥ್ಯ: ಕೈದಿಗಳ ಸೆಲ್‌ಗೂ ರೇಟು, ಮಟನ್‌-ಚಿಕನ್‌ 'ರೇಟ್ ಕಾರ್ಡ್' ಪತ್ರ ವೈರಲ್!

Published : Aug 27, 2026, 01:05 PM IST
Mandya District Jail

ಸಾರಾಂಶ

ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಸವಲತ್ತುಗಳಿಗೆ 'ರೇಟ್ ಕಾರ್ಡ್' ನಿಗದಿಪಡಿಸಿ ವಸೂಲಿ ದಂಧೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಖೈದಿಗಳು ಬರೆದಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ. ಜೈಲು ಅಧೀಕ್ಷಕಿ ಶಾಂತಮ್ಮ ಸೇರಿದಂತೆ ನಾಲ್ವರ ಮೇಲೆ ಗಂಭೀರ ಆರೋಪ ಹೊರಿಸಲಾಗಿದ್ದು, ಈ ಪತ್ರದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಡಿಐಜಿ ದಿವ್ಯಶ್ರೀ ತಿಳಿಸಿದ್ದಾರೆ.

ಮಂಡ್ಯ (ಆ.27): ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡುತ್ತಿದ್ದ ಪ್ರಕರಣದ ಬೆನ್ನಲ್ಲೇ, ಇದೀಗ ಸಕ್ಕರೆ ನಾಡು ಮಂಡ್ಯದ ಜಿಲ್ಲಾ ಕಾರಾಗೃಹದಲ್ಲೂ (Mandya District Prison) ಭಾರೀ ಅಕ್ರಮ ಮತ್ತು ವಸೂಲಿ ದಂಧೆಯ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಜೈಲಿನಲ್ಲಿ ಸವಲತ್ತು ಕಲ್ಪಿಸಲು ಪ್ರತಿಯೊಂದಕ್ಕೂ ಪ್ರತ್ಯೇಕ 'ರೇಟ್ ಕಾರ್ಡ್' ಫಿಕ್ಸ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಖೈದಿಗಳು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಜೈಲು ಅಧೀಕ್ಷಕಿ ಶಾಂತಮ್ಮ ಹಾಗೂ ಸಿಬ್ಬಂದಿಗಳಾದ ಅನಿಲ್, ಶಿವರಾಜ ಮತ್ತು ರವಿ ವಿರುದ್ಧ ಈ ಪತ್ರದಲ್ಲಿ ನೇರ ಆರೋಪ ಮಾಡಲಾಗಿದ್ದು, ಕಾರಾಗೃಹಗಳ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಜೈಲಿನಲ್ಲಿದೆ ಒಂದೊಂದು ಸೆಲ್ಲಿಗೂ ಒಂದೊಂದು ರೇಟ್!

ವೈರಲ್ ಆಗಿರುವ ಪತ್ರದ ಪ್ರಕಾರ, ವಿಚಾರಣಾಧೀನ ಕೈದಿಗಳಿಗೆ (UTP) ಜೈಲಿನ ಸೆಲ್‌ಗಳಲ್ಲಿ ಮೂಲಸೌಕರ್ಯ ನೀಡಲು ಮಾಸಿಕ ರೇಟ್ ನಿಗದಿಪಡಿಸಲಾಗಿದೆ:

  • ಸೆಲ್ - 1: ಪ್ರತಿ ತಿಂಗಳಿಗೆ ₹10,000
  • ಸೆಲ್ - 3: ಪ್ರತಿ ತಿಂಗಳಿಗೆ ₹15,000
  • ಸೆಲ್ - 4: ಪ್ರತಿ ತಿಂಗಳಿಗೆ ₹15,000
  • ಸೆಲ್ - 5: ಪ್ರತಿ ತಿಂಗಳಿಗೆ ₹5,000
  • ಸೆಲ್ - 6: ಪ್ರತಿ ತಿಂಗಳಿಗೆ ₹8,000
  • ರೂಮ್ ಬದಲಾವಣೆಗೆ (Room Change): ₹2,000
  • ಪನಿಷ್ಮೆಂಟ್ ಸೆಲ್‌ನಿಂದ ಹೊರಬರಲು: ₹10,000

ಕ್ಯಾಟರಿಂಗ್ ವ್ಯವಸ್ಥೆ: ಮಟನ್-ಚಿಕನ್‌ಗೆ ಜೈಲಲ್ಲೇ ಪ್ರತ್ಯೇಕ ಬೆಲೆ!

ಜೈಲಿನಲ್ಲಿ ಹಣ ನೀಡುವ ಖೈದಿಗಳಿಗೆ ಸ್ಪೆಷಲ್ ಅಡುಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ಪತ್ರದಲ್ಲಿದೆ.

ಮಟನ್ ಊಟಕ್ಕೆ: ₹1,250 (ಪ್ರತಿ ಕೆ.ಜಿ)

ಚಿಕನ್ ಊಟಕ್ಕೆ: ₹700 (ಪ್ರತಿ ಕೆ.ಜಿ)

ಖೈದಿಗಳು ಹಣ ನೀಡಿದರೆ ಅವರಿಗೆ ಬೇಕಾದ ರೀತಿಯಲ್ಲಿ ಜೈಲು ಸಿಬ್ಬಂದಿಯೇ ಮಾಂಸಾಹಾರ ಅಡುಗೆ ಮಾಡಿಸಿಕೊಡುತ್ತಾರೆ. ಒಂದು ವೇಳೆ ಹಣ ನೀಡಲು ನಿರಾಕರಿಸಿದರೆ 'ಕಮಾನು ಹತ್ತಿಸುವ' (ದೈಹಿಕ ಶಿಕ್ಷೆ/ಹಿಂಸೆ) ಬೆದರಿಕೆ ಹಾಕುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

15 ಮಂದಿ ಖೈದಿಗಳ ಹೆಬ್ಬೆಟ್ಟು ಮುದ್ರೆ ಇರುವ ಪತ್ರ!

ಈ ಪತ್ರದಲ್ಲಿ 15 ಜನ ವಿಚಾರಣಾಧೀನ ಖೈದಿಗಳ ಯುಟಿಪಿ (UTP) ನಂಬರ್ ಹಾಗೂ ಹೆಬ್ಬೆಟ್ಟಿನ ಮುದ್ರೆಗಳಿದ್ದು, ಜೈಲಿನ ಅಧೀಕ್ಷಕಿ ಶಾಂತಮ್ಮ ಮತ್ತು ಇತರ ಮೂವರು ಸಿಬ್ಬಂದಿಗಳ ವಿರುದ್ಧ ಕಠಿಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಕಾರಾಗೃಹಗಳ ಪೊಲೀಸ್ ಮಹಾನಿರ್ದೇಶಕರಿಗೆ (DGP) ಲಿಖಿತ ಮನವಿ ಸಲ್ಲಿಸಲಾಗಿದೆ.

ಡಿಐಜಿ ದಿವ್ಯಶ್ರೀ ನೀಡಿದ ಸ್ಪಷ್ಟನೆ ಏನು?

ಮೊನ್ನೆಯಷ್ಟೇ ಡಿಜಿಪಿ ಅಲೋಕ್ ಕುಮಾರ್ ಹಾಗೂ ಡಿಐಜಿ (ಕಾರಾಗೃಹ) ದಿವ್ಯಶ್ರೀ ಅವರು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಪತ್ರ ವೈರಲ್ ಆದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಡಿಐಜಿ ದಿವ್ಯಶ್ರೀ, 'ನಾವು ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಖೈದಿಗಳು ಇಂತಹ ಯಾವುದೇ ಪತ್ರವನ್ನು ನಮಗೆ ನೀಡಿಲ್ಲ. ಆದಾಗ್ಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ಮತ್ತು ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದು' ಎಂದು ಮಾಹಿತಿ ನೀಡಿದ್ದಾರೆ.

PREV
Read more Articles on
click me!

Recommended Stories

ದರ್ಶನ್‌ಗೆ ಡಬಲ್ ಶಾಕ್: ರೇಣುಕಾಸ್ವಾಮಿ ಕೇಸ್‌ನಲ್ಲಿ ಅಚ್ಚರಿಯ ತಿರುವು! ಪವಿತ್ರಾ ಗೌಡ ಸೇರಿ ಮೂವರಿಂದ ಜಾಮೀನು ಅರ್ಜಿ
ಬರಗಾಲದ ಬಿಸಿ, ಗ್ರಾಹಕರಿಗೆ ನಿಂಬೆಹಣ್ಣಿನ ಬರೆ: ರಾಜ್ಯದಲ್ಲಿ ನಾಲ್ಕು ಪಟ್ಟು ಜಿಗಿತ ಕಂಡ ದರ, ಬೆಂಗಳೂರಿನಲ್ಲಿ ಕೆಜಿಗೆ ₹350!