ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರು, ಅಜ್ಜಂಪುರ ಹಾಗೂ ತರೀಕೆರೆ ತಾಲೂಕಿನ ಕೆಲ ಭಾಗದಲ್ಲೂ ಅಲ್ಲಲ್ಲೇ ಧಾರಾಕಾರ ಮಳೆಯಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.12) : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವಲಯದ ಮುತ್ತೋಡಿ, ಮಲ್ಲಂದೂರು ಹಾಗೂ ಶಿರವಾಸೆ ಭಾಗದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಇನ್ನು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತ ಮುತ್ತಲೂ ಧಾರಾಕಾರ ಮಳೆ ಸುರಿದಿದೆ. ಕೊಟ್ಟಿಗೆಹಾರ ಬಾಳೂರು, ಬಣಕಲ್ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆಯಿಂದ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವೆಂದು ವಾಹನ ಸವಾರರು ಕೊಟ್ಟಿಗೆಹಾರದಲ್ಲಿ ಅರ್ಧ ಗಂಟೆಗಳ ಕಾಲ ವಾಹನವನ್ನು ನಿಲ್ಲಿಸಿಕೊಂಡು ಮಳೆ ಕಡಿಮೆಯಾದ ಬಳಿಕ ಮುಂದೆ ಹೋಗಿದ್ದಾರೆ.
undefined
ಬಯಲುಸೀಮೆ ಭಾಗದಲ್ಲೂ ಮಳೆ :
ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರು, ಅಜ್ಜಂಪುರ ಹಾಗೂ ತರೀಕೆರೆ ತಾಲೂಕಿನ ಕೆಲ ಭಾಗದಲ್ಲೂ ಅಲ್ಲಲ್ಲೇ ಧಾರಾಕಾರ ಮಳೆಯಾಗಿದೆ. ಕಡೂರು ತಾಲೂಕಿನ ಕೆಲ ಭಾಗದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಉತ್ತಮ ಮಳೆಯಾಗಿದೆ. ಮಲೆನಾಡು ಹಾಗೂ ಬಯಲು ಸೀಮೆ ಭಾಗದಲ್ಲಿ ಮಧ್ಯಾಹ್ನ 1 ಮಳೆ ಆರಂಭವಾದ ಕಾರಣ ಹೊಲ-ಗದ್ದೆ ಹಾಗೂ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ಪರದಾಡಿದ್ದಾರೆ. ಮಲೆನಾಡು ಭಾಗದಲ್ಲಿ ಇದ್ದಕ್ಕಿದ್ದಂತೆ ಮಳೆ ಆರಂಭವಾದ ಹಿನ್ನೆಲೆ ಜನಜೀವನ ಕೂಡ ಅಸ್ತವ್ಯಸ್ತಗೊಂಡಿದೆ.
ಕೊಡಗಿನಲ್ಲಿ ಮಳೆ ಇಲ್ಲದಿದ್ದರೂ ಇಡೀ ಊರಿಗೆ ಸಿಡಿಲು ಬಡಿದ ಅನುಭವ, ಭಾರೀ ಶಬ್ಧದೊಂದಿಗೆ ಭೂಮಿ ಛಿದ್ರ!
ಮಳೆಗೆ ಮೂರನೇ ಬಲಿ :
ಭಾರೀ ಗಾಳಿ ಮಳೆಗೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕಾನೂರು-ಕಟ್ಟಿನಮನೆ ಗ್ರಾಮದಲ್ಲಿ ನಡೆದಿದೆ. ಮೃತರನ್ನ ಕೊಪ್ಪ ತಾಲೂಕಿನ ಮೇಲಿನಪೇಟೆ ಮೂಲದ 48 ವರ್ಷದ ಸವಿತಾ ಎಂದು ಗುರುತಿಸಲಾಗಿದೆ. ಮೃತ ಸವಿತಾ ಅವರ ತೋಟ ಕಟ್ಟಿನ ಮನೆ ಬಳಿ ಇತ್ತು. ತೋಟಕ್ಕೆ ಬಂದಿದ್ದ ಮಹಿಳೆ ರಸ್ತೆ ಬದಿ ನಡೆದುಕೊಂಡು ಹೋಗುವಾಗ ಭಾರೀ ಗಾಳಿ-ಮಳೆಗೆ ಬೃಹತ್ ಮರವೊದು ಮುರಿದು ಮಹಿಳೆ ಮೇಲೆ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಇದೆ ವೇಳೆ, ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಮೇಲು ಮರ ಬಿತ್ತು ಕಾರು ಸಂಪೂರ್ಣ ಜಖಂಗೊಂಡಿದೆ.
ಕಾರಿನಲ್ಲಿದ್ದ ಮೂವರು ಪುರುಷರಿಗೂ ಗಂಭೀರ ಗಾಯವಾಗಿತ್ತು ಗಾಯಾಳುಗಳನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರಿ ಗಾಳಿ-ಮಳೆಗೆ ಮುರಿದುಬಿದ್ದ ರಸ್ತೆ ಬದಿಯ ಮರ ಏಕಕಾಲದಲ್ಲಿ ಮಹಿಳೆ ಹಾಗೂ ಕಾರಿನ ಮೇಲೆ ಬಿದ್ದಿದೆ. ಇದರಿಂದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ-ಮಳೆ ಗಾಳಿಗೆ ಇದು ಮೂರನೇ ಸಾವಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಮರ ಬಿದ್ದು ಓರ್ವ ಸಾವನ್ನಪ್ಪಿದ್ದರು. ಎನ್. ಆರ್.ಪುರ ತಾಲೂಕಿನಲ್ಲಿ ತೋಟದಿಂದ ಹಿಂದಿರುಗುವಾಗ ಸಿಡಿಲು ಬಡಿದು ಒಬ್ಬರು ಸಾವನ್ನಪ್ಪಿದ್ದರು. ಕಳೆದ ನಾಲ್ಕೈದು ದಿನಗಳಿಂದ ಮಲೆನಾಡು ಭಾಗದಲ್ಲಿ ಮಧ್ಯಾಹ್ನ ಆರಂಭವಾಗುವ ಮಳೆ ಸಂಜೆವರೆಗೂ ಸುರಿಯುತ್ತಿದ್ದು ನಾನಾ ರೀತಿಯ ಅವಾಂತರ ಸೃಷ್ಟಿಸಿದೆ.