ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಗಾಳಿ ಸಹಿತ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಕಾವೇರಿ ನದಿ ಮೆಲ್ಲನೆ ಮೈದುಂಬಿಕೊಳ್ಳುತ್ತಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.5): ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಗಾಳಿ ಸಹಿತ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಕಾವೇರಿ ನದಿ ಮೆಲ್ಲನೆ ಮೈದುಂಬಿಕೊಳ್ಳುತ್ತಿದೆ. ಭಾರೀ ಮಳೆ ಸುರಿಯುವುದರ ಜೊತೆಗೆ ತೀವ್ರ ಗಾಳಿ ಬೀಸುತ್ತಿದ್ದು ತುಂಬಾ ಚಳಿಯ ವಾತಾವರಣ ಎನಿಸುತ್ತಿದೆ. ಹೀಗಾಗಿ ಕೊಡಗಿನ ಜನರು ಮನೆಬಿಟ್ಟು ಹೊರಗೆ ಬರಲು ಭಯಪಡುವಂತೆ ಆಗಿದೆ. ಮಡಿಕೇರಿ ನಗರದಲ್ಲೂ ಜನರ ಓಡಾಟ ಕಡಿಮೆ ಸಂಖ್ಯೆಯಲ್ಲಿದೆ. ಜೊತೆಗೆ 2018 ರಿಂದ ಜಿಲ್ಲೆಯಲ್ಲಿ ಎದುರಾದ ಭೂಕುಸಿತ, ಪ್ರವಾಹದಂತ ಘಟನೆಗಳು ಮೂರು ನಾಲ್ಕು ವರ್ಷಗಳ ಕಾಲ ನಿರಂತರವಾಗಿ ನಡೆದಿದ್ದವು. ಇದರಿಂದಾಗಿ ಜನರು ಮಳೆಗಾಲದಲ್ಲಿ ಮನೆಯಿಂದ ಹೊರಗೆ ಬರುವುದಕ್ಕೆ ಒಂದಷ್ಟು ಭಯಪಡುವಂತ ಸ್ಥಿತಿಯೂ ನಿರ್ಮಾಣವಾಗಿದೆ.
undefined
ಮಡಿಕೇರಿ ತಾಲ್ಲೂಕಿನಾದ್ಯಂತ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದರೆ, ಉಳಿದೆಡೆಯೂ ಸಾಧಾರಣ ಮಳೆಯಾಗುತ್ತಿದೆ. ತಲಕಾವೇರಿ, ಪುಷ್ಪಗಿರಿ ಬೆಟ್ಟ ಪ್ರದೇಶದಲ್ಲಿ ಸಾಕಷ್ಟು ಮಳೆ ಸುರಿಯುತ್ತಿರುವುದರಿಂದ ಭಾಗಮಂಡಲದ ತ್ರಿವೇಣಿ ಸಂಗಮವೂ ಭರ್ತಿಯಾಗಿದೆ. ತ್ರಿವೇಣಿ ಸಂಗಮದಲ್ಲಿರುವ ಅಶ್ವತ್ಥ ಕಟ್ಟೆಯವರೆಗೆ ಈಗಾಗಲೇ ನೀರು ಬಂದಿದ್ದು ಮಳೆ ಹೀಗೆಯೇ ಮುಂದುವರಿದಲ್ಲಿ ತ್ರಿವೇಣಿ ಸಂಗಮ ಮುಳುಗಡೆಯಾಗುವ ಸಾಧ್ಯತೆಯೂ ಇದೆ. ಕಳೆದ ಒಂದು ವಾರದ ಹಿಂದೆಯಷ್ಟೇ ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೂ ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ಇತ್ತು. ಒಂದು ವೇಳೆ ತ್ರಿವೇಣಿ ಸಂಗಮ ಮುಳುಗಡೆಯಾದಲ್ಲಿ ಕೋರಂಗಾಲ, ಅಯ್ಯಂಗೇರಿ, ಕುಯ್ಯಂಗೇರಿ ಭಾಗಮಂಡಲ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಕೊಡಗಿನಲ್ಲಿ ವಿಪರೀತ ಮಳೆ, ಮಡಿಕೇರಿ-ಮೈಸೂರು ನಡುವೆ ಸಂಚಾರ ಸ್ಥಗಿತ
ಕಳೆದ ವರ್ಷವೇ ಮುಗಿಯಬೇಕಾಗಿದ್ದ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಜನರ ಬಳಕೆಗೆ ಈ ಸೇತುವೆ ಸಿಗದೆ, ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಭಾರಿ ಗಾಳಿ ಜೊತೆಗೆ ಮಳೆ ಸುರಿಯುತ್ತಿರುವುದರಿಂದ ಅಲ್ಲಲ್ಲಿ ಮರಗಳು ರಸ್ತೆಗಳ ಮೇಲೆ ಉರುಳಿ ಬೀಳುತ್ತಿವೆ. ಬುಧವಾರ ಬೆಳಿಗ್ಗೆ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ಸಿನ ಮೇಲೆ ಮರವೊಂದು ಉರುಳಿ ಬಿದ್ದಿದೆ. ಆದರೆ ಬಸ್ಸಿನ ಹಿಂಬದಿಯ ಭಾಗಕ್ಕೆ ಮರ ಬಿದ್ದಿರುವುದರಿಂದ ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತೆ ಆಗಿದೆ. ಆದರೆ ಬಸ್ಸಿನ ಕೆಲವು ಕಿಟಕಿಗಳು ಹೊಡೆದು ಹೋಗಿವೆ. ಜೊತೆಗೆ ಬಸ್ಸಿನ ಹಿಂಬಿಯಲ್ಲಿದ್ದ ಏಣಿ ಜಖಂಗೊಂಡಿದೆ. ಬಸ್ಸಿನ ಹಿಂಬದಿಯಲ್ಲಿ ಲಾರಿ ಬರುತಿತ್ತು. ಬಸ್ಸಿನ ಮೇಲೆ ಮರ ಉರುಳಿ ಬೀಳುತ್ತಿರುವುದನ್ನು ಗಮನಿಸಿದ ಲಾರಿ ಚಾಲಕ ಎಚ್ಚೆತ್ತುಕೊಂಡು ಕೂಡಲೇ ಲಾರಿ ನಿಲ್ಲಿಸಿದ್ದಾರೆ.
ಕೊಡಗಿನಲ್ಲಿ ಬೀಡುಬಿಟ್ಟು ಎನ್‌ಡಿಆರ್‌ಎಫ್ ತಂಡ ತಾಲೀಮು, ಭೂಕುಸಿತದಲ್ಲಿ
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು 24 ಗಂಟೆ ಅವಧಿಯಲ್ಲಿ 204 ಮಿಲಿ ಮೀಟರ್ ವರೆಗೂ ತುಂಬಾ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿಯೇ ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 8. 30 ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿಯೇ ಸಾಕಷ್ಟು ಮಳೆಯಾಗಿದ್ದರಿಂದ ಈ ವೇಳೆಗಾಗಲೇ ಜಿಲ್ಲೆಯಲ್ಲಿ ರೈತರು ಬಿತ್ತನೆ ಕಾರ್ಯವನ್ನು ಮಾಡಿದ್ದರು. ಆದರೆ ಈ ಬಾರಿ ಮಳೆ ಜುಲೈ ತಿಂಗಳಲ್ಲಿ ಆರಂಭವಾಗಿದ್ದರಿಂದ ಒಂದೆರಡು ದಿನಗಳಿಂದ ಕೃಷಿ ಚಟುವಟಿಕೆ ಕಾರ್ಯಗಳು ಚುರುಕುಗೊಂಡಿವೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಏನಾದರೂ ಅನಾಹುತಗಳು ಸಂಭವಿಸುವ ಸಾಧ್ಯತೆಯೂ ಇದೆ.