
ಬೆಂಗಳೂರು (ಆ.01) ಕರ್ನಾಟಕದ ಪೊಲೀಸ್ ಕಾನ್ಸ್‌ಸ್ಟೇಬಲ್ ಪರೀಕ್ಷೆಗೆ ಸರ್ಕಾರ ಸಜ್ಜಾಗಿದೆ. ಆಗಸ್ಟ್ 2ರಂದು ರಾಜ್ಯದಲ್ಲಿ ಪೊಲೀಸ್ ಪೇದೆ ಲಿಖಿತ ಪರೀಕ್ಷೆ ನಡೆಯಲಿದೆ. ಈಗಾಗಲೇ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಯುವ ಸಮೂಹದ ಪ್ರತಿಭಟನೆಯಿಂದ ದೇಶದಲ್ಲೇ ಶಿಕ್ಷಣ ಹಾಗೂ ಪರೀಕ್ಷಾ ಸುಧಾರಣೆಗಳಿಗೆ ಒತ್ತಾಯ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯದ ಕಾನ್ಸ್‌ಸ್ಟೇಬಲ್ ಪರೀಕ್ಷೆಯನ್ನು ಸೂಸೂತ್ರವಾಗಿ ನಡೆಸಲು ರಾಜ್ಯ ಗೃಹ ಸಚಿವ ಪ್ರಿಯಾಂಕ ಖರ್ಗೆ ಮುತುವರ್ಜಿ ವಹಿಸಿದ್ದಾರೆ. ಇದೇ ವೇಳೆ ಎದ್ದಿರುವ ಕೆಲ ಗೊಂದಲಗಳಿಗೆ ಪ್ರಿಯಾಂಕ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಪೈಕಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾೆ.
ಪೊಲೀಸ್ ಕಾನ್ಸ್‌ಸ್ಟೇಬಲ್ ಲಿಖಿತ ಪರೀಕ್ಷೆಯಲ್ಲಿ ಹಿಜಾಬ್ ಹಾಕಲು ಅವಕಾಶವಿಲ್ಲ. ಧಾರ್ಮಿಕ ಉಡುಪುಗಳ ಬಗ್ಗೆ ಗೊಂದಲ ಆಗದಂತೆ ಮೊದಲೇ ನೋಡಿಕೊಳ್ಳಲಾಗುವುದು ಎಂದು ಪ್ರಿಯಾಂಕಾ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಪರೀಕ್ಷೆ ವೇಳೆ ಯಾವ ಉಡುಪು ಹಾಕಬಹುದು..ಯಾವುದು ಹಾಕಬಾರದು ಅಂತ ಪ್ರವೇಶ ಪತ್ರದಲ್ಲಿ ಹಾಕಿರುತ್ತೇವೆ. ಹೀಗಾಗಿ ಪರೀಕ್ಷಾ ಕೊಠಡಿ ಬಳಿ ಯಾವುದೇ ಗೊಂದಲಕ್ಕೆ ಅವಕಾಶವಿರುವುದಿಲ್ಲ ಎಂದು ಪ್ರಿಯಾಂಕ ಖರ್ಗೆ ಸ್ಪಷ್ಟಪಡಿಸಿದ್ದಾರೆ.
24 ಗಂಟೆ ಮುಂಚೆ ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸೇಶನ್ ಮಾಡಲಾಗುತ್ತದೆ. ಪರೀಕ್ಷಾ ರೂಮ್ ನಲ್ಲಿ ನಿಯೋಜಿತ ಸಿಬ್ಬಂದಿ ಸಹ ಮೊಬೈಲ್ ಬಳಕೆ ಮಾಡುವಂತಿಲ್ಲ. ಪರೀಕ್ಷೆ ಹಿನ್ನೆಲೆಯಲ್ಲಿ ಖಾಸಗಿ ತರಬೇತಿ ಸೆಂಟರ್ ಮೇಲೂ ನಿಗಾ ವಹಿಸುತ್ತೇವೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಜನಿವಾರ, ಶಿವದಾರ, ಉಡದಾರ, ಮಾಂಗಲ್ಯ ಸರ, ಮುಗುತಿ, ಕುಂಕುಮ, ಉಂಗುರ, ತಾಯತಾ ಹಾಕುವುದು ಸೇರಿದಂತೆ ಎಲ್ಲಾ ವಸ್ತುಗಳ ಬಳಕೆ ಬಗ್ಗೆ ಮೊದಲೇ ತಿಳಿಸಲಾಗುವುದು. ಈ ಮೂಲಕ ಯಾವುದೇ ರೀತಿಯಲ್ಲಿ ಕೊನೆಕ್ಷಣದ ಗೊಂದಲಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುವುದು. ಎರಡುವರೆ ಗಂಟೆ ಮುಂಚೆ ಬಂದು ಇವುಗಳನ್ನು ಚೆಕ್ ಮಾಡಿಸಲು ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ.
ಪರೀಕ್ಷೆ ಹಾಗೂ ನಿಯಮಗಳ ಕುರಿತು ಈಗಾಗಲೇ KEA ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಹೆಚ್ ಪ್ರತಿಕ್ರಿಯಿಸಿದ್ದಾರೆ. ಆಗಸ್ಟ್ 2 ರಂದು ಪೊಲೀಸ್ ಪೇದೆ ಲಿಖಿತ ಪರೀಕ್ಷೆ ನಡೆಯಲಿದೆ. ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಶೂ, ಟೋಪಿ, ಕಿವಿ, ತಲೆ ಹಾಗೂ ಮುಖವನ್ನು ಮುಚ್ಚುವ ಯಾವುದೇ ಬಟ್ಟೆ ಹಾಕುವಂತಿಲ್ಲ. ಇನ್ನು ಹೆಚ್ಚಿನ ಜೇಬುಗಳಿರುವ ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ. ಪರೀಕ್ಷಾ ಕೊಠಡಿಯೊಳಗೆ ಆಹಾರ ಪದಾರ್ಥಗಳು, ನೀರಿನ ಬಾಟಲಿ, ಯಾವುದೇ ಪಾನೀಯ, ಚೀಟಿ ಅಥವಾ ಕಾಗದ, ಪುಸ್ತಕಗಳು, ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಸ್ಕೆಲ್, ನೋಟ್‌ಪ್ಯಾಡ್, ರಬ್ಬರ್ ನಿಷೇಧಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪೇಪರ್ ಲೀಕ್ ಆಗಿದೆ ಸೇರಿದಂತೆ ಯಾವುದೇ ರೀತಿಯ ಸುಳ್ಳು ಪೋಸ್ಟ್ ಮಾಡಿದರೆ ಪ್ರಕರಣ ದಾಖಲಾಗಲಿದೆ. ಇಷ್ಟೇ ಅಲ್ಲ ಕಾನೂನು ಪ್ರಕಾರ ಗಂಭೀರ ಶಿಕ್ಷೆಗು ಗುರಿಯಾಗಬೇಕಾಗುತ್ತದೆ. ಹೀಗಾಗಿ ರಾಜ್ಯ ಪೊಲೀಸ್ ಇಲಾಖೆ ಸೋಶಿಯಲ್ ಮೀಡಿಯಾದ ಮೇಲೂ ಹದ್ದಿನ ಕಣ್ಣಿಟ್ಟಿದೆ.
ಕಳೆದ ಬಾರಿ ಕೆ.ಎಇ ಪರೀಕ್ಷೆ ನಡೆಸುವ ವೇಳೆ ಜನಿವಾರ ಗಲಾಟೆ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಈ ಬಾರಿ ಗೊಂದಲ ಆಗಂದತೆ ಮೊದಲೇ ಸೂಚನೆ ನೀಡಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಧರಿಸಿದ ಜನಿವಾರ, ಶಿವದಾರ ತೆಗೆಸದಂತೆ ಕೆ.ಇಎ ಸೂಚನೆ ನೀಡಲಾಗಿದೆ. ಜನಿವಾರ, ಶಿವದಾರ ಮಾತ್ರವಲ್ಲ ಉಡುದಾರ, ಬಳೆಗಳು, ಮೂಗುತಿ, ಕಾಲುಂಗುರ, ಸಿಂಧೂರ ಅಥವಾ ಸ್ಟಿಕ್ಕರ್, ಮಂಗಳಸೂತ್ರ, ಕೈಗೆ ಕಟ್ಟಿರುವ ಧಾರ್ಮಿಕ ದಾರ, ಕಾಲ್ಲೆಜ್ಜೆ ಸೇರಿದಂತೆ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಭರಣಗಳನ್ನು ತೆಗೆಯುವಂತೆ ಯಾವುದೇ ಅಭ್ಯರ್ಥಿಯನ್ನು ಒತ್ತಾಯಿಸಬಾರದು ಎಂದು ಪರೀಕ್ಷಾ ಸಿಬ್ಬಂದಿಗೆ ಕಟುನಿಟಿನ ಸೂಚನೆ ನೀಡಲಾಗಿದೆ ಎಂದು ಪ್ರಸನ್ನ ಹೆಚ್ ಹೇಳಿದ್ದಾರೆ.