
ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ; ತಿಟಿಪಟೂರಿನಲ್ಲಿ ನಾಳೆ ಅಂತ್ಯಕ್ರಿಯೆ!
ಕರ್ನಾಟಕ ರಾಜಕಾರಣದ ಹಿರಿಯ ನಾಯಕ, ಮಾಜಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಹಾಗೂ ತಿಪಟೂರು ಕ್ಷೇತ್ರದ ಮಾಜಿ ಶಾಸಕರಾದ ಬಿ.ಸಿ.ನಾಗೇಶ್ (67) ಅವರು ಅನಾರೋಗ್ಯದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಂತೆ, ಸದ್ಧಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಅವರ ನಿಧನ ಸುದ್ದಿ ಕೇಳಿ ರಾಜ್ಯ ರಾಜಕೀಯ ಕ್ಷೇತ್ರ, ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಶೋಕ ಸಾಗರ ಮನೆಮಾಡಿದೆ.
ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ (ಸಕಾಲ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು) ಕಾರ್ಯನಿರ್ವಹಿಸಿದ್ದ ಬಿ.ಸಿ. ನಾಗೇಶ್ ಅವರು ತಮ್ಮ ಆಡಳಿತಾವಧಿಯಲ್ಲಿ ಹಲವು ಪ್ರಮುಖ ಹಾಗೂ ದಿಟ್ಟ ನಿರ್ಧಾರಗಳನ್ನು ಕೈಗೊಂಡು ಕರಾವಳಿಯಿಂದ ಹಿಡಿದು ಕಲ್ಯಾಣ ಕರ್ನಾಟಕದವರೆಗೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಲ್ಲಿದ್ದರು.
ಪಠ್ಯಪುಸ್ತಕ ಪರಿಷ್ಕರಣೆ; ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ವಿಷಯದಲ್ಲಿ ಅತ್ಯಂತ ಧೈರ್ಯದಿಂದ ಹೆಜ್ಜೆ ಇಟ್ಟು, ತಮ್ಮ ಸಿದ್ಧಾಂತ ಹಾಗೂ ನಿಲುವಿಗೆ ಬದ್ಧರಾಗಿ ಕಾರ್ಯನಿರ್ವಹಿಸಿದ್ದರು.
ಶಾಲಾ ಸಮವಸ್ತ್ರ ನಿಯಮ; ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಮತ್ತು ಶಿಸ್ತು ಪಾಲನೆ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೇಶದ ಗಮನ ಸೆಳೆದಿದ್ದರು.
ಶಿಕ್ಷಣದಲ್ಲಿ ಮೌಲ್ಯವರ್ಧನೆ; ಶಾಲಾ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಪ್ರಾರ್ಥನೆ ಮತ್ತು ಕಲಿವಿನ ವಾತಾವರಣ ಸುಧಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿನ್ನೆಲೆಯಿಂದ ಬಂದಿದ್ದ ಬಿ.ಸಿ. ನಾಗೇಶ್ ಅವರು ರಾಜಕೀಯಕ್ಕೆ ಬಂದ ಮೇಲೆಯೂ ತಮ್ಮ ಸರಳತೆಯನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ತುಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಅವರು ಕ್ಷೇತ್ರದ ಜನರೊಂದಿಗೆ ಅತ್ಯಂತ ನಿಕಟ ಹಾಗೂ ಪ್ರೀತಿಯ ಬಾಂಧವ್ಯ ಹೊಂದಿದ್ದರು. ವಿಧಾನಸಭೆಯ ಸದಸ್ಯರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಅವರು, ಜನಸಾಮಾನ್ಯರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಗುಣದಿಂದಾಗಿ 'ಟಿಪಟೂರಿನ ಜನಪ್ರಿಯ ನಾಯಕ' ಎನಿಸಿಕೊಂಡಿದ್ದರು. ರಾಜಕೀಯದಲ್ಲಿ ಅಧಿಕಾರ ಅನುಭವಿಸಿದರೂ ಯಾವುದೇ ಹಮ್ಮು-ಬಿಮ್ಮು ಇಲ್ಲದೆ, ಶಾಸಕರಾಗಿಯೂ, ಸಚಿವರಾಗಿಯೂ ಕೇವಲ ಕರ್ತವ್ಯಕ್ಕೆ ಆದ್ಯತೆ ನೀಡಿದ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು.
ಕರ್ನಾಟಕದ ಮಾಜಿ ಶಿಕ್ಷಣ ಸಚಿವರು ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ (೬೭) ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬಿ.ಇ. ಇಂಜಿನಿಯರಿಂಗ್ ಪದವೀಧರರಾಗಿದ್ದ ಅವರು, ತಮ್ಮ ರಾಜಕೀಯ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪೂರ್ಣಕಾಲಿಕ ಕಾರ್ಯಕರ್ತರಾಗಿ ಪ್ರಾರಂಭಿಸಿದ್ದರು. ತಿಪಟೂರು ಕ್ಷೇತ್ರದಿಂದ ೨೦೦೮ ಮತ್ತು ೨೦೧೮ ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್, ಬೊಮ್ಮಾಯಿ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಅವರಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆಯಾಗಿತ್ತು. ಬೆಂಗಳೂರಿನ ಮಗಳ ಮನೆಯಲ್ಲಿ ಕೊನೆಯುಸಿರೆಳೆದ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ತಿಪಟೂರಿಗೆ ತೆಗೆದುಕೊಂಡು ಹೋಗುತ್ತಿದ್ದು, ನಾಳೆ ಸ್ವಕ್ಷೇತ್ರದಲ್ಲೇ ಅಂತಿಮ ಸಂಸ್ಕಾರ ನಡೆಯಲಿದೆ. ಮೃತರು ಒಬ್ಬ ಮಗ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ.