ಧಾರವಾಡದಲ್ಲಿ ಮೂವರು ರೈತರ ಸಾವು: ಸಚಿವರ ಬರ ವೀಕ್ಷಣೆ ವೇಳೆ ಸಂತ್ರಸ್ತರಿಗೆ ಸಿಗದ ಸಾಂತ್ವನ; ಸೌಜನ್ಯಕ್ಕೂ ಬರಲಿಲ್ಲ ಎಂದು ಆಕ್ರೋಶ

Published : Aug 18, 2026, 10:10 PM IST
santosh lad

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಮೂವರು ರೈತರು ಆತ್ಮ*ತ್ಯೆ ಮಾಡಿಕೊಂಡಿದ್ದರೂ, ಜಿಲ್ಲಾಡಳಿತ ಸೌಜನ್ಯಕ್ಕೂ ಅವರ ಮನೆಗೆ ಭೇಟಿ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಧಾರವಾಡ: ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಜಿಲ್ಲಾಡಳಿತ ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದೆಯೇ? ಕಳೆದ ಒಂದೂವರೆ ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಮೂವರು ರೈತರು ಆತ್ಮ*ತ್ಯೆ ಮಾಡಿಕೊಂಡಿದ್ದರೂ, ಜಿಲ್ಲಾಧಿಕಾರಿಯಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಸೌಜನ್ಯಕ್ಕೂ ಸಂತ್ರಸ್ತ ಕುಟುಂಬಗಳ ಮನೆಗೆ ಭೇಟಿ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಜಿಲ್ಲೆಯಾದ್ಯಂತ ಬರ ವೀಕ್ಷಣೆ ನಡೆಸುತ್ತಿದ್ದಾರೆ. ಆದರೆ ಬೆನ್ನೆಲುಬು ಮುರಿದು ಆತ್ಮ*ತ್ಯೆಗೆ ಶರಣಾದ ರೈತರ ಬಗ್ಗೆ ಸಚಿವರಿಗೆ ಜಿಲ್ಲಾಡಳಿತ ಮಾಹಿತಿ ನೀಡಿದೆಯೇ ಎಂಬ ಸಂಶಯ ಮೂಡಿದೆ. ಸಚಿವರು ಬರ ವೀಕ್ಷಣೆ ನಡೆಸುತ್ತಿದ್ದರೂ, ಆತ್ಮ*ತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಅಧಿಕಾರಿಗಳು ಹಾಕಿಕೊಂಡಿಲ್ಲ. ಇದು ರೈತ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸಾಲದ ಬಾಧೆ ಹಾಗೂ ಬರದಿಂದಾಗಿ ಮೂವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ.

ವೀರುಪಾಕ್ಷಪ್ಪ (ಧಾರವಾಡ ತಾಲೂಕಿನ ಕಬ್ಬೇನೂರು) ಜುಲೈ 3ರಂದು ಸಾವಿಗೆ ಶರಣಾದರು. ನಾಗಪ್ಪ ಗೂಡದೂರ್ (ಅಣ್ಣಿಗೇರಿ ಪಟ್ಟಣ) ಜುಲೈ 28ರಂದು ಪ್ರಾಣಬಿಟ್ಟರೆ, ಬಸವರಾಜ ಆಗಸ್ಟ್ 17ರಂದು ಜೀವ ಬಿಟ್ಟಿದ್ದಾರೆ.

ಐದು ಕಿಲೋಮೀಟರ್ ದೂರದಲ್ಲಿದ್ದರೂ ಮಾಹಿತಿ ಇಲ್ಲ

ಸಚಿವ ಸಂತೋಷ್ ಲಾಡ್ ಅವರು ಧಾರವಾಡ ತಾಲೂಕಿನ ಹಾರೋಬೆಳವಡಿಯಲ್ಲಿ ಬರ ವೀಕ್ಷಣೆ ಮಾಡಿದ್ದರು. ಅಲ್ಲಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಕಬ್ಬೇನೂರು ಗ್ರಾಮದಲ್ಲಿ ರೈತ ವೀರುಪಾಕ್ಷಪ್ಪ ಆತ್ಮ*ತ್ಯೆ ಮಾಡಿಕೊಂಡಿದ್ದರು. ಸಚಿವರು ಅಷ್ಟು ಹತ್ತಿರದಲ್ಲಿದ್ದರೂ ಅಧಿಕಾರಿಗಳು ಅವರ ಗಮನಕ್ಕೆ ಈ ವಿಷಯವನ್ನು ತರಲಿಲ್ಲ ಎಂಬುದು ಜಿಲ್ಲಾಡಳಿತದ ರೈತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ.

ರೈತರು ಆತ್ಮಹತ್ಯೆ ಮಾಡಿಕೊಂಡು ತಿಂಗಳು ಕಳೆದರೂ ಇಲ್ಲಿಯವರೆಗೆ ಸಂತ್ರಸ್ತ ಕುಟುಂಬಗಳಿಗೆ ಯಾವುದೇ ಪರಿಹಾರ ತಲುಪಿಲ್ಲ. ಮೂವರು ರೈತರಿಗೆ ಪರಿಹಾರ ಕೊಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲವೇ ಅಥವಾ ಜಿಲ್ಲಾಡಳಿತಕ್ಕೆ ಮಾನವೀಯತೆ ಇಲ್ಲವೇ? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ, ಬಾಕಿ ಇರುವ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

Dharwad: ಡಿಸಿ ಕಚೇರಿಯಲ್ಲಿ ನೌಕರನ ಆತ್ಮ*ತ್ಯೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪ್ರಧಾನಿ ಮೋದಿಗೆ ಪತ್ರ ಬರೆದು ಕೈ ಕೊಯ್ದುಕೊಂಡ ನೌಕರ!
Dharwad Protest: ನಾವು ಮಾಡಿದ್ದಾದರೂ ಏನು ಅಪರಾಧ ಸ್ವಾಮಿ? ಧಾರವಾಡ ಬೀದಿಯಲ್ಲಿ ಕನಸುಗಳ ಹೊಸಕಿ ಹಾಕಿತಾ ಖಾಕಿ ದರ್ಪ! ನೊಂದ ಉದ್ಯೋಗಾಂಕ್ಷಿಗಳಿಂದ ಸ್ಟ್ರೇಟ್‌ ಸವಾಲ್!