
ಮೈಸೂರು (ಆ.14): ಇನ್ನು ಕೆಲವೇ ತಿಂಗಳುಗಳಲ್ಲಿ ಹೊಸ ಜೀವನಕ್ಕೆ ಕಾಲಿಟ್ಟು, ಹಸೆಮಣೆ ಏರಬೇಕಿದ್ದ ಯುವ ಜೋಡಿಯೊಂದು ನೂರೆಂಟು ಕನಸುಗಳೊಂದಿಗೆ ಜೀವನವನ್ನೇ ಮುಗಿಸಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ. ಎಸ್‌ಬಿಐ (SBI) ಬ್ಯಾಂಕ್ ಉದ್ಯೋಗಿಗಳಾಗಿದ್ದ ಮೂಲತಃ ಕೇರಳದ ಯುವಕ ಮತ್ತು ಯುವತಿ ಹುಣಸೂರು ಹಾಗೂ ಕೇರಳದ ಲಾಡ್ಜ್ ಒಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಮೃತರನ್ನು ಕಾಸರಗೋಡು ಜಿಲ್ಲೆಯ ಕಾಟುಪಳ್ಳ ಗ್ರಾಮದ ಚಂದ್ರನ್ ಅವರ ಪುತ್ರಿ ಅನುಶ್ರೀ (26) ಹಾಗೂ ಕೇರಳದ ಇರಿಟ್ಟಿ ಮೂಲದ ಅಮಲ್ ಎಂದು ಗುರುತಿಸಲಾಗಿದೆ.
ಮೃತ ಅನುಶ್ರೀ ಇತ್ತೀಚೆಗಷ್ಟೇ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರು. ಪ್ರಸ್ತುತ ಮೈಸೂರು ಜಿಲ್ಲೆಯ ಹುಣಸೂರು ನಗರದ ಸುಬ್ಬಣ್ಣ ಬಡಾವಣೆಯಲ್ಲಿ ವಾಸವಾಗಿದ್ದರು. ಇತ್ತ ಅಮಲ್ ಕೇರಳದ ಎರ್ನಾಕುಲಂನ ಎಸ್‌ಬಿಐ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಉದ್ಯೋಗಕ್ಕೆ ಸೇರಿದ ಆರಂಭದಲ್ಲಿ ನಡೆದ ತರಬೇತಿ (Training) ಅವಧಿಯಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಈ ಪರಿಚಯ ದಿನಕಳೆದಂತೆ ಪ್ರೀತಿಗೆ ತಿರುಗಿ, ಇಬ್ಬರ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆ ಕೂಡ ನಿಶ್ಚಯವಾಗಿತ್ತು. ಬರುವ ಡಿಸೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ಮದುವೆಯಾಗಲು ಇಬ್ಬರೂ ಸಿದ್ಧತೆ ನಡೆಸುತ್ತಿದ್ದರು.
ಸಾವಿಗೂ ಮುನ್ನ ಅನುಶ್ರೀ ತಮ್ಮ ತಂದೆ, ತಾಯಿ ಹಾಗೂ ಸಹೋದರಿಯೊಂದಿಗೆ ದೂರವಾಣಿ ಮೂಲಕ ಸಾಮಾನ್ಯವಾಗಿಯೇ ಮಾತನಾಡಿದ್ದರು. ಆದರೆ, ತದನಂತರ ಅನುಶ್ರೀ ಹಾಗೂ ಅಮಲ್ ನಡುವೆ ಫೋನ್‌ನಲ್ಲಿ ಮಾತನಾಡುವಾಗ ಯಾವುದೋ ವಿಚಾರಕ್ಕೆ ದೊಡ್ಡ ಮಟ್ಟದ ಜಗಳ ನಡೆದಿದೆ ಎನ್ನಲಾಗಿದೆ. ಜಗಳದಿಂದ ತೀವ್ರ ಮನನೊಂದ ಅನುಶ್ರೀ, ಹುಣಸೂರಿನ ತಮ್ಮ ಬಾಡಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಅತ್ತ ಅನುಶ್ರೀ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ಅಮಲ್, ಕೇರಳದ ಇರಿಟ್ಟಿ ನಗರದ ಲಾಡ್ಜ್ ಒಂದರಲ್ಲಿ ರೂಮ್ ಪಡೆದುಕೊಂಡು ಅಲ್ಲೇ ನೇಣಿಗೆ ಶರಣಾಗಿದ್ದಾರೆ. ಪ್ರೀತಿಸಿದ ಹುಡುಗಿ ಇಲ್ಲವಾದ ಮೇಲಷ್ಟೇ ತಾನೂ ಬದುಕಿರಲಾರೆ ಎಂದು ನಿರ್ಧರಿಸಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆನ್ನಲಾಗಿದೆ.
ಇಬ್ಬರೂ ಭವಿಷ್ಯದ ಬಗ್ಗೆ ಸಾಲು ಸಾಲು ಕನಸುಗಳನ್ನು ಕಂಡಿದ್ದರು. ಆದರೆ, ಸಣ್ಣ ಜಗಳ ಇಬ್ಬರ ಜೀವವನ್ನೇ ಬಲಿ ಪಡೆದಿದ್ದು, ಎರಡೂ ಕುಟುಂಬಗಳಲ್ಲಿ ಶೋಕಸಾಗರ ಆವರಿಸಿದೆ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.