
ಕುರುಗೋಡು: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ಕೃಷಿ ಹೊಲಗಳಲ್ಲಿ ಜೈನ ಧರ್ಮದ ‘ಸಲ್ಲೇಖನ ವ್ರತ’ ಹಾಗೂ ಸಾಂಸ್ಕೃತಿಕ ಪರಂಪರೆಯ ಮೇಲೆ ಬೆಳಕು ಚೆಲ್ಲುವ ನಾಲ್ಕು ಅಪರೂಪದ ಗ್ರಾನೈಟ್ ಶಿಲ್ಪಗಳನ್ನು ವಿಜಯನಗರ ಸಾಮ್ರಾಜ್ಯ ಸಂಶೋಧನಾ ತಿರುಗಾಟ ತಂಡವು ಪತ್ತೆಹಚ್ಚಿದೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಎಚ್. ತಿಪ್ಪೇಸ್ವಾಮಿ ಅವರ ನೇತೃತ್ವದ ಅಧ್ಯಯನ ತಂಡವು ನಡೆಸಿದ ಕ್ಷೇತ್ರಕಾರ್ಯದ ವೇಳೆ ಈ ಪ್ರಮುಖ ಐತಿಹಾಸಿಕ ಕುರುಹುಗಳು ಬೆಳಕಿಗೆ ಬಂದಿದೆ.
ಕೋಳೂರು ಗ್ರಾಮದ ಮಧ್ಯಭಾಗದಲ್ಲಿರುವ ಪುರಾತನ ಸೂರ್ಯನಾರಾಯಣ ದೇವಸ್ಥಾನದಲ್ಲಿ ಲಭ್ಯವಿರುವ ಬೃಹತ್ ಶಾಸನವು ಈ ಮಹತ್ವದ ಶೋಧಕ್ಕೆ ಮೂಲ ಪ್ರೇರಣೆಯಾಗಿದೆ. ಈ ದೇವಾಲಯದಲ್ಲಿರುವ 103 ಸಾಲುಗಳ ಬೃಹತ್ ಕಲ್ಲಿನ ಶಾಸನವನ್ನು ಕನ್ನಡ ಲಿಪಿಯಲ್ಲಿ ಸಂಸ್ಕೃತ ಭಾಷೆಯ ಮೂಲಕ ಬರೆಯಲಾಗಿದೆ. ಕಲ್ಯಾಣಿ ಚಾಲುಕ್ಯರ ದೊರೆ ಜಗದೇಕಮಲ್ಲನ ಕಾಲದಲ್ಲಿ ಪಾಳೆಗಾರನಾಗಿದ್ದ (ಸಾಮಂತ) ಇಮ್ಮಡಿ ಭೀಮರಸನಿಗೆ ಸೇರಿದ ಈ ಶಾಸನವು ಈಗಾಗಲೇ ಬಳ್ಳಾರಿ ಜಿಲ್ಲಾ ಶಾಸನ ಸಂಪುಟದಲ್ಲಿ ಪ್ರಕಟಗೊಂಡಿದೆ. ಈ ಶಾಸನದಲ್ಲಿ ಪ್ರಾಚೀನ ನಂದ ಮತ್ತು ಮೌರ್ಯ ರಾಜವಂಶಗಳ ಉಲ್ಲೇಖವಿರುವುದನ್ನು ಗಮನಿಸಿದ ಸಂಶೋಧಕರ ತಂಡ, ಗ್ರಾಮದ ಸುತ್ತಮುತ್ತ ಆ ಕಾಲದ ಹೆಚ್ಚಿನ ಐತಿಹಾಸಿಕ ಆಧಾರಗಳು ಸಿಗಬಹುದು ಎಂಬ ನಿರೀಕ್ಷೆಯಿಂದ ತಪಾಸಣೆ ಕೈಗೊಂಡಿತು. ಅದರಂತೆ ಕೃಷಿ ಭೂಮಿಯ ಆಗ್ನೇಯ, ಈಶಾನ್ಯ, ನೈಋತ್ಯ ಮತ್ತು ವಾಯುವ್ಯ ದಿಕ್ಕುಗಳಲ್ಲಿ ಸಮೀಕ್ಷೆ ನಡೆಸಿದಾಗ ಈ ಸುಂದರ ಜೀನಮೂರ್ತಿ ಶಿಲ್ಪಗಳು ಕಂಡುಬಂದವು.
ಪತ್ತೆಯಾಗಿರುವ ನಾಲ್ಕು ಜಿನಮೂರ್ತಿ ಶಿಲ್ಪಗಳನ್ನು ಗಟ್ಟಿ ಗ್ರಾನೈಟ್ ಕಲ್ಲಿನಲ್ಲಿ ಅತ್ಯಂತ ಕಲಾತ್ಮಕವಾಗಿ ಕೆತ್ತಲಾಗಿದೆ. ಇವು ಜೈನ ಮುನಿಗಳು ಕೈಗೊಳ್ಳುತ್ತಿದ್ದ ಸಲ್ಲೇಖನ ಪ್ರತಿಜ್ಞೆ ಹಾಗೂ ಪೂಜಾ ಪರಂಪರೆಯನ್ನು ಪ್ರತಿನಿಧಿಸುತ್ತವೆ. ಈ ಪೈಕಿ ಒಂದು ಬೃಹತ್ ಶಿಲ್ಪವು ಸುಮಾರು 7 ಅಡಿ ಎತ್ತರ ಮತ್ತು 3 ಅಡಿ ಅಗಲವಿದ್ದು, ಇದರ ಒಂದು ಸಣ್ಣ ಭಾಗ ಹಾನಿಗೊಳಗಾಗಿದೆ. ಉಳಿದ ಮೂರು ಶಿಲ್ಪಗಳು ತಲಾ 5 ಅಡಿ ಎತ್ತರ ಹಾಗೂ 3 ಅಡಿ ಅಗಲವನ್ನು ಹೊಂದಿವೆ. ನಾಲ್ಕೂ ಶಿಲ್ಪಗಳಲ್ಲಿ ಜಿನ ಮುನಿಗಳನ್ನು ಮೂರು ಹಂತದ ಮೇಲಾವರಣದ (ಮುಕ್ಕೊಡೆ) ಕೆಳಗೆ ಪದ್ಮಾಸನ ಭಂಗಿಯಲ್ಲಿ ಪ್ರಶಾಂತವಾಗಿ ಕುಳಿತಿರುವಂತೆ ಚಿತ್ರಿಸಲಾಗಿದೆ.
ಜಿನಮೂರ್ತಿಗಳ ಮೇಲ್ಭಾಗದ ಎಡಬದಿಯಲ್ಲಿ ಚಂದ್ರ ಮತ್ತು ಬಲಬದಿಯಲ್ಲಿ ಸೂರ್ಯನ ಚಿತ್ರಗಳನ್ನು ಕೆತ್ತಲಾಗಿದ್ದು, ಇವು ಸೂರ್ಯ-ಚಂದ್ರರಿರುವವರೆಗೆ ಈ ಧರ್ಮ ಹಾಗೂ ಕೀರ್ತಿ ಸ್ಥಿರವಾಗಿರಲಿ ಎಂಬುದನ್ನು ಸೂಚಿಸುತ್ತವೆ. ಇನ್ನು ಶಿಲ್ಪದ ತಳಭಾಗದಲ್ಲಿ ಹಸು ಮತ್ತು ಖಡ್ಗದ ಚಿತ್ರಗಳನ್ನು ಸ್ಪಷ್ಟವಾಗಿ ಕೆತ್ತಲಾಗಿದೆ. ಈ ಪವಿತ್ರ ಶಿಲ್ಪಗಳಿಗೆ ಹಾನಿ ಮಾಡುವವರು ಅಥವಾ ನಾಶಪಡಿಸುವವರು ಹಸುವನ್ನು ಕೊಂದ ಮಹಾಪಾಪಕ್ಕೆ ಗುರಿಯಾಗುತ್ತಾರೆ ಎಂಬ ಎಚ್ಚರಿಕೆಯ ಸಂಕೇತ ಇದಾಗಿದೆ.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕರಾದ ಡಾ. ಗೋವಿಂದ್ ಅವರು ನೀಡಿರುವ ಮಾಹಿತಿಯಂತೆ, ಈ ಶಿಲ್ಪಗಳಲ್ಲಿ ಯಾವುದೇ ರೀತಿಯ ಲಿಪಿ ಅಥವಾ ಅಕ್ಷರಗಳು ಕೆತ್ತಲ್ಪಟ್ಟಿಲ್ಲ. ಆದರೂ, ಇವುಗಳ ಶೈಲಿ, ಕಲಾತ್ಮಕ ಲಕ್ಷಣಗಳು , ಕುರುಹುಗಳು ಇವು ಜೈನ ಧರ್ಮಕ್ಕೆ ಸಂಪೂರ್ಣವಾಗಿ ಸಂಬಂಧಿಸಿದವು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಈ ಪ್ರದೇಶದಲ್ಲಿ ಈ ಹಿಂದೆ ಜೈನಧರ್ಮದವರು ವಾಸವಾಗಿದ್ದರು ಎನ್ನುವುದಕ್ಕೆ ಈ ನಾಲ್ಕು ಶಿಲ್ಪಗಳು ಸಾಕ್ಷಿಯಾಗಿ ನಿಂತಿವೆ.
ದೃಶ್ಯಕಲಾ ವಿಭಾಗದ ಡಾ. ಕೃಷ್ಣೇಗೌಡ ಅವರು ತಿಳಿಸಿರುವಂತೆ, ಈ ಭಾಗದಲ್ಲಿ ಹಿಂದೆ ಜೈನ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದರು ಮತ್ತು ಜೈನ ಸಂಸ್ಕೃತಿ ಪ್ರಭಾವಶಾಲಿಯಾಗಿತ್ತು ಎಂಬುದಕ್ಕೆ ಈ ನಾಲ್ಕು ಶಿಲ್ಪಗಳೇ ಜ್ವಲಂತ ಸಾಕ್ಷಿಯಾಗಿವೆ. ಆದರೆ ಕಾಲಕ್ರಮೇಣ ಈ ಶಿಲ್ಪಗಳ ನೈಜ ಐತಿಹಾಸಿಕ ಹಿನ್ನೆಲೆಯ ಅರಿವಿಲ್ಲದೆ, ಸ್ಥಳೀಯ ಗ್ರಾಮಸ್ಥರು ಇವುಗಳನ್ನು ಬೇರೆ ಬೇರೆ ದೇವತೆಗಳ ಹೆಸರಿನಲ್ಲಿ ಪೂಜಿಸುತ್ತಾ ಬಂದಿದ್ದಾರೆ. ಈ ಶಿಲ್ಪಗಳಲ್ಲಿ ಒಂದನ್ನು 'ವೀರಭದ್ರ' ಎಂದು ಕರೆದರೆ, ಉಳಿದ ಮೂರು ಶಿಲ್ಪಗಳನ್ನು 'ಖಾಜಾಪಿರ್', 'ದೊಡ್ಡ ಸಂಕ್ರಮಣ' ಮತ್ತು 'ಸಣ್ಣ ಸಂಕ್ರಮಣ' ಎಂಬ ವಿಭಿನ್ನ ಹೆಸರುಗಳಿಂದ ಆರಾಧಿಸಲಾಗುತ್ತಿದೆ.
ಈ ಮಹತ್ವದ ಪತ್ತೆಯ ಕಾರ್ಯದಲ್ಲಿ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ್, ಡಾ. ಕೃಷ್ಣೇಗೌಡ ಅವರೊಂದಿಗೆ ಸಂಶೋಧಕರಾದ ದಾದಾ ಖಲಂದರ್, ಇಸ್ಮಾಯಿಲ್ ಸಿದ್ದಿಕಿ, ಅಶೋಕ್ ನಾಯಕ್ ದಿಡ್ಡಿಗಿ, ಕೆ. ಶಿವರಾಮಪ್ಪ ಹಾಗೂ ಬಂಡ್ರಿ ಪಾಪಯ್ಯ ಭಾಗವಹಿಸಿದ್ದರು. ಕ್ಷೇತ್ರ ಅಧ್ಯಯನದ ಸಮಯದಲ್ಲಿ ಸ್ಥಳೀಯ ವಕೀಲರಾದ ಕೆ. ಲಕ್ಷ್ಮಣ್ ಮತ್ತು ಮಲ್ಲಿಕಾರ್ಜುನ ಅವರು ಸಂಶೋಧನಾ ತಂಡಕ್ಕೆ ಅಗತ್ಯ ಮಾರ್ಗದರ್ಶನ ಹಾಗೂ ನೆರವು ನೀಡಿದರು.
ಈ ಪ್ರದೇಶದಲ್ಲಿ ಪುರಾತತ್ವ ಇಲಾಖೆ ಹಾಗೂ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಸಮಗ್ರ ಉತ್ಖನನ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಂಡರೆ, ಬಳ್ಳಾರಿ ಪ್ರದೇಶದಲ್ಲಿ ಜೈನ ಧರ್ಮದ ಹರಡುವಿಕೆ, ರಾಜ್ಯಶ್ರಯ ಮತ್ತು ಧಾರ್ಮಿಕ ಸಹವಾಳದ ಕುರಿತು ಇನ್ನಷ್ಟು ಅಪರೂಪದ ಐತಿಹಾಸಿಕ ಸಾಕ್ಷ್ಯಾಧಾರಗಳು ಬೆಳಕಿಗೆ ಬರಲಿವೆ ಎಂದು ಪ್ರೊ. ಎಚ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.