
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಗಳು ಹಾಗೂ ತಾವು ಟ್ರೋಲ್ ಆದ ಕುರಿತು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಮಾಧ್ಯಮಗಳ ಮುಂದೆ ಮುಕ್ತವಾಗಿ ಮಾತನಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಸಂದರ್ಭದ ಘಟನೆ, ತಮಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹಾಗೂ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಒಲಿದಿರುವ ಬಗ್ಗೆ ಅವರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನ, ಅವರ ಕಾರಿನಲ್ಲಿ ಶಾಸಕ ಪ್ರದೀಪ್ ಈಶ್ವರ್ ಅತ್ಯಂತ ಮೌನವಾಗಿ, ಗಂಭೀರವಾಗಿ ಕುಳಿತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಆಗುತ್ತಿರುವುದಕ್ಕೆ ಶಾಸಕರು ಸ್ಪಷ್ಟನೆ ನೀಡಿದ್ದಾರೆ.
"ನಾನು ಅಲ್ಲಿ ಮೌನವಾಗಿ ಕುಳಿತಿದ್ದೆ ಎನ್ನುವುದರಲ್ಲಿ ಯಾವುದೇ ವಿಶೇಷ ಅರ್ಥವಿಲ್ಲ. ಹಿರಿಯ ನಾಯಕರೊಬ್ಬರು ಜವಾಬ್ದಾರಿಯಿಂದ ಹೊರಡುತ್ತಿದ್ದಾರೆ, ಮತ್ತೊಬ್ಬ ಹೊಸ ನಾಯಕರು ಆ ಸ್ಥಾನಕ್ಕೆ ಬರುತ್ತಿದ್ದಾರೆ. ಆ ಗ್ಯಾಪ್ ನಲ್ಲಿ ಏನು ಮಾತನಾಡೋದು ಅಂತ ರಿಯಾಕ್ಟ್ ಮಾಡಲಿಲ್ಲ ಅಷ್ಟೇ. ಕೆಲವು ಎಮೋಷನಲ್ ಟೈಮ್ ನಲ್ಲಿ ಏನು ಮಾತಾಡುದ್ರು ತಪ್ಪಾಗುತ್ತೆ. ಆ ಭಾವುಕ ಕ್ಷಣದಲ್ಲಿ ಸುಮ್ಮನೆ ಇದ್ದೆ ಅಷ್ಟೇ ನಾವು ಏನೇ ಮಾತನಾಡಿದರೂ ಅದು ತಪ್ಪಾಗಿ ಬಿಂಬಿತವಾಗುವ ಸಾಧ್ಯತೆ ಇರುತ್ತದೆ. ಆ ಭಾವುಕ ಕ್ಷಣವನ್ನು ಗೌರವಿಸಿ ನಾನು ಸುಮ್ಮನಿದ್ದೆ ಎಂದು ಅವರು ವಿವರಿಸಿದರು. ಇದೇ ವೇಳೆ ಟ್ರೋಲ್‌ಗಳ ಬಗ್ಗೆ ನಗುತ್ತಲೇ ಪ್ರತಿಕ್ರಿಯಿಸಿದ ಅವರು, "ಟ್ರೋಲ್ ಆಗುವುದು ನನಗೇನು ಹೊಸದಲ್ಲ, ನಾನು ಕರ್ನಾಟಕದ ಟ್ರೋಲ್ ಪೇಜ್‌ಗಳ ಪಾಲಿನ 'ಕ್ರಶ್' ಇದ್ದಂತೆ" ಎಂದು ವ್ಯಂಗ್ಯವಾಡಿದರು.
ನಿಮಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಆಸೆ ಅಂತೂ ಇದೆ, ಕೊಟ್ರು ಓಕೆ ಕೊಡದಿದ್ರು ಓಕೆ. ನಾವೆಲ್ಲಾ ಪಾರ್ಟಿ ಐಡಿಯಾಲಜಿಗಾಗಿ ಬಂದಿರೋದು, ಅಧಿಕಾರಕ್ಕೆ ಅಲ್ಲ, ಕೊಡದಿದ್ದರೂ ಯಾವುದೇ ಬೇಸರವಿಲ್ಲ. ನಾವೆಲ್ಲರೂ ಪಕ್ಷದ ಸಿದ್ಧಾಂತಕ್ಕಾಗಿ ರಾಜಕೀಯಕ್ಕೆ ಬಂದಿದ್ದೇವೆಯೇ ಹೊರತು ಕೇವಲ ಅಧಿಕಾರ ಅನುಭವಿಸುವುದಕ್ಕಾಗಿ ಅಲ್ಲ. ನಾನು ಒಬ್ಬ ಒಬಿಸಿ (OBC) ಸಮುದಾಯದ ಹುಡುಗ, ದೇಶದಲ್ಲಿ ಒಬಿಸಿ ಚಳವಳಿಯನ್ನು ಮತ್ತಷ್ಟು ಬಲಪಡಿಸಬೇಕು ಎನ್ನುವುದು ನನ್ನ ಮುಖ್ಯ ಉದ್ದೇಶವಾಗಿದೆ. ಒಂದು ವೇಳೆ ನಾನು ಕೇವಲ ಅಧಿಕಾರಕ್ಕಾಗಿಯೇ ರಾಜಕೀಯಕ್ಕೆ ಬಂದಿದ್ದರೆ, ಮೈಮೇಲೆ ಇಲ್ಲದ ವಿವಾದಗಳನ್ನು ಎಳೆದುಕೊಂಡು ಕಾಂಟ್ರವರ್ಸಿಗಳನ್ನು ಮಾಡಿಕೊಳ್ಳುತ್ತಿರಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ನಿರ್ಧಾರವನ್ನು ಶಾಸಕ ಪ್ರದೀಪ್ ಈಶ್ವರ್ ಮುಕ್ತವಾಗಿ ಸ್ವಾಗತಿಸಿದ್ದಾರೆ. "ಈ ನಿರ್ಧಾರಕ್ಕಾಗಿ ನಾನು ಗೌರವಾನ್ವಿತ ಡಿ.ಕೆ. ಶಿವಕುಮಾರ್ ಸಾಹೇಬರಿಗೆ ಹಾಗೂ ಬಿ.ಕೆ. ಹರಿಪ್ರಸಾದ್ ಸಾಹೇಬರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಡಿ.ಕೆ. ಶಿವಕುಮಾರ್ ಅವರು ಪಕ್ಷವನ್ನು ಮತ್ತು ರಾಜ್ಯವನ್ನು ಮುಂದಿನ ಹಂತದ ಅಭಿವೃದ್ಧಿಯತ್ತ ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ ಎಂಬ ವಿಶ್ವಾಸ ನನಗಿದೆ" ಎಂದರು.
ಮುಂದುವರಿದು ಮಾತನಾಡಿದ ಅವರು, "ಒಬ್ಬ ಪ್ರಭಾವಿ ಒಬಿಸಿ ನಾಯಕರಾಗಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಪಕ್ಷದ ಅತ್ಯುನ್ನತ ಪಟ್ಟವನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಿದೆ. ಸಮಸ್ತ ಒಬಿಸಿ ಸಮುದಾಯಗಳ ಪರವಾಗಿ ನಾನು ಪಕ್ಷದ ಹೈಕಮಾಂಡ್‌ಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಪ್ರದೀಪ್ ಈಶ್ವರ್ ತಿಳಿಸಿದರು.