ಡಿ.ಕೆ. ಶಿವಕುಮಾರ್ ಅವರು ಬಂದ ಮೇಲೆ ಅಡೆತಡೆ ದೂರವಾಗಿ ಈ ಯೋಜನೆ ಯಶಸ್ವಿ ಆಗಿದೆ. ಇದು ಕಾಂಗ್ರೆಸ್ ಸರ್ಕಾರದ ಯೋಜನೆಯಾಗಿದ್ದು, ಸಮುದ್ರಕ್ಕೆ ಹೋಗುತ್ತಿದ್ದ ನೀರನ್ನು ತಿರುಗಿಸಿ ಹರಿಸಲಾಗುತ್ತಿದೆ. ಈ ಮಹತ್ತರ ಯೋಜನೆಯನ್ನು ಜನರಿಗೆ ಅರ್ಪಣೆ ಮಾಡಲು ಸಿಎಂ ಬರುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಭಗೀರಥ ಕೆಲಸ. ಈ ಯೋಜನೆಗಾಗಿ ಸಕಲೇಶಪುರದ ಜನ ತ್ಯಾಗ ಮಾಡಿದ್ದಾರೆ: ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ
ಹಾಸನ(ಸೆ.04): ಪೋಲಾಗಿ ಸಮುದ್ರ ಸೇರುತ್ತಿದ್ದ ನೀರನ್ನು ತಿರುಗಿಸಿ ಎತ್ತಿನಹೊಳೆ ಯೋಜನೆ ಮುಖಾಂತರ ಬಯಲುಸೀಮೆ ಜಿಲ್ಲೆಗಳಿಗೆ ಹರಿಸುವ ಪ್ರಯತ್ನ ಯಶಸ್ವಿಯಾಗಿದ್ದು, ಇದೊಂದು ಭಗೀರಥ ಪ್ರಯತ್ನದ ಕೆಲಸವಾಗಿದೆ. ಇದರ ಉದ್ಘಾಟನೆಯನ್ನು ಸೆಪ್ಟೆಂಬರ್ ೬ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೆರವೇರಿಸುವುದಾಗಿ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಶಾಸಕ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್ ನೇತೃತ್ವದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೇಮಾವತಿ ಬಿಟ್ಟರೆ ಜಿಲ್ಲೆಯ ಪ್ರಮುಖ ಯೋಜನೆ ಎತ್ತಿನಹೊಳೆ ಆಗಿದ್ದು, ತುಮಕೂರು ಕೋಲಾರದವರೆಗೆ ನೀರು ಹರಿಸೋ ಯೋಜನೆ ಇದಾಗಿದೆ. ೨೦೧೪ರಲ್ಲಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಆಗ ಈ ಯೋಜನೆ ಜಾರಿ ಆಗುವುದಿಲ್ಲ ಎಂದು ಈ ಜಿಲ್ಲೆಯ ವಿರೋಧಿ ಬಣ ಹೇಳುತ್ತಾ ಬಂದಿತ್ತು. ಆದರೆ ಈಗ ಆ ಯೋಜನೆ ಫಲಪ್ರದವಾಗಿದೆ. ಸೆಪ್ಟೆಂಬರ್ ೬ರಂದು ನಡೆಯುವ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ, ಫಲಾನುಭವಿ ಜಿಲ್ಲೆ ಹಾಗೂ ತಾಲೂಕುಗಳ ಶಾಸಕರು, ಸಚಿವರು ಭಾಗಿಯಾಗುತ್ತಾರೆ. ಒಂದೇ ಪಂಪ್‌ನಿಂದ ಹರಿಯುತ್ತಿರುವ ನೀರಿನಿಂದ ಈಗಾಗಲೆ ಹಲವು ಕೆರೆಗಳು ತುಂಬಿವೆ. ಇನ್ನೂ ನಾಲ್ಕು ವಿಯರ್‌ಗಳಿಂದ ನೀರು ಹರಿಯುವ ಯೋಜನೆಗೆ ಚಾಲನೆ ಸಿಗಲಿದೆ. ಡಿ.ಕೆ. ಶಿವಕುಮಾರ್ ಅವರು ಬಂದ ಮೇಲೆ ಅಡೆತಡೆ ದೂರವಾಗಿ ಈ ಯೋಜನೆ ಯಶಸ್ವಿ ಆಗಿದೆ. ಇದು ಕಾಂಗ್ರೆಸ್ ಸರ್ಕಾರದ ಯೋಜನೆಯಾಗಿದ್ದು, ಸಮುದ್ರಕ್ಕೆ ಹೋಗುತ್ತಿದ್ದ ನೀರನ್ನು ತಿರುಗಿಸಿ ಹರಿಸಲಾಗುತ್ತಿದೆ. ಈ ಮಹತ್ತರ ಯೋಜನೆಯನ್ನು ಜನರಿಗೆ ಅರ್ಪಣೆ ಮಾಡಲು ಸಿಎಂ ಬರುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಭಗೀರಥ ಕೆಲಸ. ಈ ಯೋಜನೆಗಾಗಿ ಸಕಲೇಶಪುರದ ಜನ ತ್ಯಾಗ ಮಾಡಿದ್ದಾರೆ. ಬೇಲೂರು ಅರಸೀಕೆರೆ ಭಾಗಕ್ಕೆ ಅನುಕೂಲ ಆಗಲಿದೆ. ಬೇಲೂರು ತಾಲೂಕಿನ ಐದಳ್ಳ ಕಾವಲು ಬಳಿ 5 ಕಿಲೋ ಮೀಟರ್ ಕೆಲಸ ಆದರೆ ಅರಸೀಕೆರೆಗೂ ನೀರು ಹರಿಯಲಿದೆ ಎಂದರು.
ಬೇಲೂರಿನ ಸರ್ಕಾರಿ ಹಾಸ್ಟೆಲಲ್ಲಿ ಮದ್ಯ, ಗಾಂಜಾ, ಸಿಗರೇಟ್ ಪತ್ತೆ: ಅಮಲಲ್ಲಿ ವಿದ್ಯಾರ್ಥಿಗಳು
ಮುಡಾ ಮಾಜಿ ಆಯುಕ್ತರ ಅಮಾನತು ಸರಿಯಾಗಿದೆ: ಈ ಹಿಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ ಅಮಾನತು ಪ್ರಕರಣದ ಕುರಿತಾಗಿ ಮಾತನಾಡುತ್ತಾ, ಆಯುಕ್ತ ದಿನೇಶ್ ತಪ್ಪು ಮಾಡಿದ್ದ ಹಾಗಾಗಿ ಅಮಾನತು ಮಾಡಲಾಗಿದೆ. ಅವನ ಅಮಾನತು ಸರಿಯಾಗಿದೆ. ದೇವರಾಜ್ ಇಲ್ಲಾ, ಅವನಿಗೆ ಜಮೀನೇ ಬಂದಿಲ್ಲ. ಅವನಿಗೆ ನಕಲಿ ದಾಖಲೆ ಮಾಡಲಾಗಿದೆ ಎಂದು ವಾದ ಮಾಡಲಾಗಿದೆ. ನನ್ನ ಬಳಿಯೇ ದಾಖಲೆ ಇದೆ. ದೇವರಾಜ್‌ಗೆ ಅಧಿಕಾರ ಕೊಟ್ಟಿರೋದು ಅವನ ಮಕ್ಕಳು. ಜವರ ಬಿನ್ ನಿಂಗನ ಮಕ್ಕಳು ದಾಖಲೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ೧೯೯೨ರವರೆಗೆ ಮೈಲಾರಯ್ಯನ ಬಳಿ ಇತ್ತು. ನಂತರ ಮೂರನೆ ಮಗ ದೇವರಾಜ್‌ಗೆ ಬಂದಿದೆ. ಆ ವಿರೋಧ ಪಕ್ಷದ ಲಾಯರ್ ಎಲ್ಲಾ ಒಳ್ಳೆ ಪಾಯಿಂಟ್ ಬಿಟ್ಟಿದ್ದಾರೆ. ಬರೇ ದೇವರಾಜ್‌ಗೆ ಜಮೀನೇ ಬಂದಿಲ್ಲ ಎಂದು ಹೇಳಿದ್ದಾರೆ ಎಂದು ಮುಡಾ ಹಗರಣದ ದೂರುದಾರರ ಪರ ವಕೀಲರ ವಾದದ ಬಗ್ಗೆ ಲೇವಡಿ ಮಾಡಿದಂತಿತ್ತು.
ಜೀತ ಮಾಡ್ತೇನೆ:
ಅಲ್ಲಿ ನಾವು ಹೋಗಿ ವಾದ ಮಾಡಲು ಆಗಲ್ಲ. ನಮ್ಮ ವಕೀಲರು ಮಾಡ್ತಾರೆ. ನಾನು ಸಂಪೂರ್ಣ ಕಡತ ಸ್ಟಡಿ ಮಾಡಿದೀನಿ. ಈಗಲೂ ಬಿಟ್ಟರೇ ನಾನೇ ಕೇಸ್ ಹೂಡುತೀನಿ ಎಂದ ಶಿವಲಿಂಗೇಗೌಡರು ನನ್ನೇ ವಾದ ಮಾಡಲು ಬಿಡಲಿ. ನಾನು ಕೇಸ್ ಗೆಲ್ಲದೆ ಹೋದರೆ ನಾನು ನಿಮ್ಮನೆ ಜೀತ ಮಾಡ್ತೇನೆ ಎಂದು ಸವಾಲು ಹಾಕಿದರು. ಮುಡಾದವರು ಜಮೀನೇ ಇಲ್ಲದೆ ಹೇಗೆ ಸ್ವಾಧೀನ ಮಾಡಿದ್ರು. ಅಲ್ಲಿ ಬರೀ ಸುಳ್ಳು ವಾದ ಮಾಡ್ತಾರೆ. ದೇವರಾಜ್ ಬಳಿ ಜಮಿನೇ ಇಲ್ಲದೆ ನೋಂದಣಿ ಹೇಗಾಯ್ತು? ಡಿಸಿ ಹೋಗಿ ಸ್ಥಳ ಮಹಜರ್ ಮಾಡಿ ಬಂದಿದ್ದಾರೆ. ಪಾರ್ವತಿ ಮೇಡಂಗೆ ಬಂದ ಮೇಲೆ ಸಿಎಂ ಏನು ಮಾಡಿದ್ದಾರೆ. ತಪ್ಪಾಗಿದ್ದರೆ ಏನು ಮಾಡ್ತಾ ಇದ್ದರು. ಕಮಿಟಿಯಲ್ಲಿ ಸಾ ರಾ ಮಹೇಶ್, ಜಿ ಟಿ ದೇವೇಗೌಡ, ರಾಮದಾಸ್ ಎಲ್ಲಾ ಇರಲಿಲ್ಲವೇ. ಅವರು ಹೇಗೆ ತೀರ್ಮಾನ ಮಾಡಿದ್ರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವರೇನು ಶಾಸಕರಲ್ಲವಾ, ಯಾರೋ ಹೇಳಿದ್ರೆ ಮಾಡಿಬಿಡ್ತಾರಾ! ಸಿದ್ದರಾಮಯ್ಯ ಅವರ ಪತ್ನಿಗೆ ಭೂಮಿ ಕೊಟ್ಟರೆ ನಾವೆಲ್ಲ ಸಾವಿರಾರು ಜಾಗ ಹೊಡ್ಕೊಬಹುದು ಎಂದು ತೀರ್ಮಾನ ಮಾಡಿದ್ದಾರೆ. ತಾವು ಬೇಕಾದಷ್ಟು ಸೈಟ್ ಪಡೆಯಲು ಸಿಎಂ ಪತ್ನಿಗೆ ಸೈಟ್ ಕೊಡಲಾಗಿದೆ. ಅವರ ಹಣೇಬರ ಗೊತ್ತಾಗುತ್ತದೆ ತಡೀರಿ ಎಂದು ಹೇಳಿದರು.
ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಸೆಪ್ಟಂಬರ್ ೬ರ ಶುಕ್ರವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಲೇಶಪುರ ತಾಲೂಕಿಗೆ ಆಗಮಿಸಿ ಎತ್ತಿನಹೊಳೆ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಮಲೆನಾಡು ಭಾಗದಲ್ಲಿ ನೀರು ಹರಿದು ಸಮುದ್ರಕ್ಕೆ ಹೋಗುತಿತ್ತು. ಇದನ್ನು ತಡೆದು ಬಯಲುಸೀಮೆ ಜಿಲ್ಲೆಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ರಾಜ್ಯ ಸರಕಾರದ ಉಪಮುಖ್ಯಮಂತ್ರಿಗಳು ನೀರಾವರಿ ಸಚಿವರಾದ ಮೇಲೆ ಸಭೆ ಮಾಡಿ ಅದರಲ್ಲಿ ಉತ್ತಮ ನಿರ್ಧಾರ ತೆಗೆದುಕೊಂಡು ಕಾಮಗಾರಿಗಳಿಗೆ ಇದ್ದ ತೊಡಕುಗಳಿಗೆ ಅವರು ತೆಗೆದುಕೊಂಡ ದಿಟ್ಟ ನಿರ್ಧಾರವೇ ಕಾರಣವಾಗಿದೆ ಎಂದು ಶ್ಲಾಘಿಸಿದರು.
ಮೋದಿ ಪ್ರಧಾನಿಯಾದ ನಂತರ ಕಾಶ್ಮೀರದಲ್ಲಿ ಉಗ್ರರ ಉಪಟಳ ನಿಂತಿದೆ: ಹೆಚ್‌ಡಿ ದೇವೇಗೌಡ
ನೀರು ಇಲ್ಲದ ಬರದ ಜಿಲ್ಲೆಗಳಿಗೆ ಇಲ್ಲಿಂದ ನೀರು ಹರಿಸಲಾಗುತ್ತದೆ. ಈ ವಿಚಾರದಿಂದ ನನಗೆ ಹೆಮ್ಮೆ ಆಗುತ್ತಿದೆ. ಎತ್ತಿನಹೊಳೆ ಯೋಜನೆಯಲ್ಲಿ ಸಣ್ಣಪುಟ್ಟ ತೊಡಕುಗಳಿದ್ದರೆ ಸರಿಮಾಡಿಕೊಳ್ಳಲಾಗುವುದು. ದೊಡ್ಡ ಸಮಸ್ಯೆ ಯಾವುದು ಇಲ್ಲದಿರುವುದರಿಂದ ನೂರಕ್ಕೆ ನೂರರಷ್ಟು ಇದು ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ. ಶಿವರಾಂ , ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಎಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ಮುರಳಿ ಮೋಹನ್, ಪಟೇಲ್ ಶಿವಪ್ಪ, ಗೌಡಗೆರೆ ಪ್ರಕಾಶ್, ಶ್ರೀಧರ್ ಗೌಡ ಇತರರು ಇದ್ದರು.