ಅಯೋಧ್ಯೆ ರಾಮಮಂದಿರ ಅಡಿಪಾಯಕ್ಕೆ ರಾಜ್ಯದ ಗ್ರಾನೈಟ್‌

By Kannadaprabha NewsFirst Published Oct 26, 2021, 10:07 AM IST
Highlights
  • ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರ
  •  ಭವ್ಯ ರಾಮಮಂದಿರದ ತಳಪಾಯವನ್ನು ಹನುಮನ ನಾಡೆನಿಸಿದ ಕನ್ನಡ ನೆಲದ ಶಿಲೆಗಳು ಭದ್ರಗೊಳಿಸಲಿವೆ

ವರದಿ :  ಕೆ.ಆರ್‌.ರವಿಕಿರಣ್‌

 ದೊಡ್ಡಬಳ್ಳಾಪುರ (ಅ.26):  ಅಯೋಧ್ಯೆ (Ayodhya) ರಾಮಜನ್ಮಭೂಮಿಯಲ್ಲಿ (Ram Janma Bhumi) ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ (Ram Temple) ತಳಪಾಯವನ್ನು ಹನುಮನ (Hanuman) ನಾಡೆನಿಸಿದ ಕನ್ನಡ ನೆಲದ ಶಿಲೆಗಳು ಭದ್ರಗೊಳಿಸಲಿವೆ. ಈ ಮೂಲಕ ರಾಮಮಂದಿರದಲ್ಲಿ ಕರುನಾಡಿನ (karnataka) ಶಿಲಾ ವೈಭವ ಅಮರವಾಗಲಿದೆ.

"

ದೊಡ್ಡಬಳ್ಳಾಪುರ-ದೇವನಹಳ್ಳಿ (Doddaballapura - Devanahalli) ಭಾಗದ ಶಿಲೆಗಳು ಅತ್ಯಂತ ಗಟ್ಟಿಯಾದ ಮತ್ತು ವಿಶಿಷ್ಟಮಾದರಿಗಳನ್ನು ಕೆತ್ತಲು ಪೂರಕವಾದ ಶಿಲಾ ರಚನೆಗಳಿಂದಾಗಿವೆ ಎಂಬುದು ಅನೇಕರ ಅಭಿಪ್ರಾಯ. ಇದಕ್ಕಾಗಿಯೇ ಈ ಭಾಗದ ಕೊಯಿರಾ (Koera) ಬೆಟ್ಟಪ್ರಸಿದ್ಧ. ಈ ಬೆಟ್ಟದಿಂದ ಕಡೆದ ಕಲ್ಲುಗಳು ಕನ್ಯಾಕುಮಾರಿಯ ವಿವೇಕಾನಂದ ರಾಕ್‌ನ ತಳಪಾಯ ನಿರ್ಮಾಣಕ್ಕೂ ಬಳಸಲ್ಪಟ್ಟಿವೆ. ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಕೂಡ ಇಲ್ಲಿನ ಕಲ್ಲುಗಳನ್ನೇ ಬಳಸಲಾಗಿದೆ. ಅನೇಕ ಶಿಲಾ ಮೂರ್ತಿಗಳನ್ನು ಕೆತ್ತಲೂ ಈ ಶಿಲೆಗಳು ಪೂರಕವಾಗಿವೆ. ಇತ್ತೀಚೆಗೆ ನಟ ಅರ್ಜುನ್‌ ಸರ್ಜಾ (Arjun Sarja)ಸ್ಥಾಪಿಸಿದ ಹನುಮ ಮೂರ್ತಿಯನ್ನೂ ಇದೇ ಕಲ್ಲಿನಿಂದಲೇ ಕೆತ್ತಲಾಗಿತ್ತು.

ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ಗ್ರಾನೈಟ್‌!

ಸಾದಹಳ್ಳಿ ಎಂಬ ಕಲ್ಲುಗಾವಲು:

ಸಾದಹಳ್ಳಿಯ ಸುತ್ತಮುತ್ತ ಬೃಹತ್‌ ಕಲ್ಲು ಕ್ವಾರಿಗಳು (Mining) ಈಗ ಕಾರ್ಯನಿರ್ವಹಿಸುತ್ತಿವೆ. ದೇಶದ ಹಲವು ಮಹತ್ವದ ನಿರ್ಮಾಣ ಕಾಮಗಾರಿಗಳಲ್ಲಿ ಇಲ್ಲಿನ ಶಿಲೆಗಳನ್ನು ಬಳಸಲಾಗುತ್ತಿದೆ. ಬಹುಮುಖ್ಯವಾಗಿ ಇಲ್ಲಿನ ಕಲ್ಲು ಗುಡ್ಡಗಳು ಬೃಹತ್‌ ಬಂಡೆಗಳಿಂದ ಮಾಡಲ್ಪಟ್ಟಿದ್ದು ಕಠಿಣ ಶಿಲೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಕಲ್ಲು ಕ್ವಾರಿಗಳಲ್ಲಿ ಗ್ರಾನೈಟ್‌ (Granite) ಉತ್ಪಾದನೆ ಹೆಚ್ಚಿದೆ. ದೇಶಾದ್ಯಂತ ಬೇಡಿಕೆಯೂ ಹೆಚ್ಚಿದೆ. ಸಾವಿರಾರು ಎಕರೆ ಪ್ರದೇಶ ಆವರಿಸಿರುವ ಕಲ್ಲುಗಣಿಗಳ ದುರ್ಗಮ ಹಾದಿ ಮೈ ಜುಂ ಎನಿಸುತ್ತದೆ. ಇಂತಹ ಕಲ್ಲುಗಾವಲಿನಲ್ಲಿ ತೆಗೆದು ಒಪ್ಪ ಮಾಡಿದ ಗ್ರಾನೈಟ್‌ಗಳು ಇಂದು ರಾಮಮಂದಿರದ ಅಡಿಪಾಯಕ್ಕೆ ಬಳಕೆಯಾಗುತ್ತಿವೆ.

300 ಲೋಡ್‌ ಗ್ರಾನೈಟ್‌ ಪೂರೈಕೆಗೆ ತಯಾರಿ:

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಸಾದಹಳ್ಳಿ ಕಲ್ಲುಕ್ವಾರಿಗಳಿಂದ 300 ಲೋಡ್‌ ಬಿಳಿ  (White) ಹಾಗೂ ಗುಲಾಬಿ ಬಣ್ಣದ ಗ್ರಾನೈಟ್‌ (pink granite) ಶಿಲೆಗಳು ರವಾನೆಯಾಗಲಿವೆ. ಇದಕ್ಕಾಗಿ ಕ್ವಾರಿಗಳಲ್ಲಿ ನಿತ್ಯ ಗ್ರಾನೈಟ್‌ ಶಿಲಾ ಪದರಗಳ ಬೇರ್ಪಡಿಸುವಿಕೆ, ಕತ್ತರಿಸುವಿಕೆ ಹಾಗೂ ಹೊಳಪು ಕೊಡುವ ಕಾರ‍್ಯಗಳಲ್ಲಿ 800ಕ್ಕೂ ಅಧಿಕ ಕಾರ್ಮಿಕರು ತೊಡಗಿದ್ದಾರೆ. ಬರುವ ಮೇ ತಿಂಗಳ ಒಳಗೆ ಶಿಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಯೋಧ್ಯೆಗೆ ತಲುಪಿಸುವ ಕಾರ‍್ಯಯೋಜನೆ ಹೊಂದಲಾಗಿದೆ ಎಂಬ ಮಾಹಿತಿ ಇದೆ.

ಅಯೋಧ್ಯೆಯಿಂದ ನಾವು ಕಲಿಯಬೇಕಾದ ಪಾಠಗಳು!

ಸೋಮವಾರ 6 ಲಾರಿಗಳಿಗೆ ಚಾಲನೆ:

ಸಾದಹಳ್ಳಿಯ ಶ್ರೀಹನುಮಾನ್‌ ಗ್ರಾನೈಟ್‌ ಸಂಸ್ಥೆಯು ಈ ಶಿಲೆಗಳನ್ನು ಪೂರೈಸುತ್ತಿದ್ದು, ವಿವೇಕಾನಂದ ಸೇವಾ ಸಮಿತಿ ಸಹಯೋಗದಲ್ಲಿ ಸೋಮವಾರ ಮೊದಲ ದಿನ ಆರು ಲಾರಿಗಳಲ್ಲಿ ಶಿಲೆ ಸಾಗಾಟಕ್ಕೆ ಚಾಲನೆ ನೀಡಲಾಯಿತು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ರಸ್ತೆಯ ಸಾದಹಳ್ಳಿ ಗೇಟ್‌ ಬಳಿ ಶಿಲೆಗಳ ಪೂಜೆ ಮತ್ತು ಅವುಗಳನ್ನು ಹೊತ್ತ ಲಾರಿಗಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಅಯೋಧ್ಯೆ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Trust) ವಿಶ್ವಸ್ಥ, ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಶಿಲಾಪೂಜೆ ನೆರವೇರಿಸಿ ಲಾರಿಗಳಿಗೆ ಹಸಿರು ನಿಶಾನೆ ತೋರಿದರು.

ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್‌ ಎಂ. (Gopal M), ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ತಿಪ್ಪೇಸ್ವಾಮಿ, ವಿಶ್ವ ಹಿಂದು ಪರಿಷತ್‌ನ ಬಿ.ಎನ್‌. ಮೂರ್ತಿ, ಬಿಜೆಪಿ (BJP) ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ (BL Santhosh), ವಿಹಿಂಪ ಬೆಂಗಳೂರಿನ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಆರ್‌ಎಸ್‌ಎಸ್‌ನ ಹಿರಿಯರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಶಾಸಕ ಎಸ್‌.ಆರ್‌.ವಿಶ್ವನಾಥ್‌, ಆನಂದ ಗುರೂಜಿ, ಸ್ಥಳೀಯ ಶಾಸಕ ನಿಸರ್ಗ ನಾರಾಯಣ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ಮಾರ್ಗ ಮಧ್ಯೆ ದೇವನಹಳ್ಳಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ಮೊದಲಾದೆಡೆ ಗ್ರಾನೈಟ್‌ ಹೊತ್ತ ಲಾರಿಗಳಿಗೆ ವಿಶ್ವಹಿಂದು ಪರಿಷತ್‌, ಬಜರಂಗದಳ ಸೇರಿದಂತೆ ಅನೇಕ ಸಂಘಟನೆಗಳಿಂದ ಪೂಜಿಸಿ ಬೀಳ್ಕೊಡಲಾಯಿತು.

click me!