ಸಿಜೆ ರಾಯ್ ಹಾದಿಯಲ್ಲಿ ಮತ್ತೊಂದು ಬಲಿ: ಇಡಿ ದಾಳಿ ಭೀತಿಯಿಂದ ಬಿಬಿಎಂಪಿ ನಿವೃತ್ತ ಚೀಫ್ ಇಂಜಿನಿಯರ್ ಆತ್ಮ*ಹತ್ಯೆ!

Published : Feb 25, 2026, 04:47 PM IST
BBMP Engineer death like Businessman CJ Roy

ಸಾರಾಂಶ

ಇಡಿ ವಿಚಾರಣೆಗೆ ಹಾಜರಾಗಬೇಕಿದ್ದ ದಿನವೇ ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ ಪರಮೇಶ್ವರಯ್ಯ ತಮ್ಮ ಕೋರಮಂಗಲ ನಿವಾಸದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಇಡಿ ದಾಳಿಯ ನಂತರ ಅವರು ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. 

ಬೆಂಗಳೂರು (ಫೆ.25): ಜಾರಿ ನಿರ್ದೇಶನಾಲಯದ (ED) ದಾಳಿ ಮತ್ತು ವಿಚಾರಣೆಯ ಭೀತಿ ರಾಜಧಾನಿಯಲ್ಲಿ ಮತ್ತೊಂದು ಬಲಿ ಪಡೆದಿದೆ. ಉದ್ಯಮಿ ಸಿಜೆ ರಾಯ್ ಆತ್ಮ*ಹತ್ಯೆ ಮಾಡಿಕೊಂಡ ಮಾದರಿಯಲ್ಲೇ, ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ (Chief Engineer) ಪರಮೇಶ್ವರಯ್ಯ ಅವರು ಇಂದು ಬೆಳ್ಳಂಬೆಳಗ್ಗೆ ಕೋರಮಂಗಲದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಇಂದು ಅವರು ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕಿತ್ತು ಎಂಬುದು ಈ ಸಾವಿನ ಹಿಂದಿನ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ.

ಏನಿದು ಘಟನೆ?

ಬಿಬಿಎಂಪಿಯ ಮಹಾದೇವಪುರ ವಲಯದಲ್ಲಿ ಮುಖ್ಯ ಇಂಜಿನಿಯರ್ ಆಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಮೇಶ್ವರಯ್ಯ (ಪರಮೇಶ್ವರ್), ಕೋರಮಂಗಲದಲ್ಲಿ ವಾಸವಿದ್ದರು. ಕಳೆದ 20 ದಿನಗಳ ಹಿಂದೆಯಷ್ಟೇ ಇವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ದಾಳಿಯ ನಂತರ ಪರಮೇಶ್ವರಯ್ಯ ಅವರು ತೀವ್ರವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ.

ಇಂದು ಇಡಿ ವಿಚಾರಣೆಗೆ ಹಾಜರಾಗಬೇಕಿತ್ತು:

ಪರಮೇಶ್ವರಯ್ಯ ಅವರಿಗೆ ಇಂದು (ಫೆಬ್ರವರಿ 25) ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಇಂದು ಬೆಳಗ್ಗೆ ವಿಚಾರಣೆಗೆ ಹೋಗಬೇಕಿದ್ದ ಅವರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಗ್ಗ ತಂದು ನೇಣು ಬಿಗಿದುಕೊಂಡಿದ್ದಾರೆ. ಇಡಿ ವಿಚಾರಣೆಯ ವೇಳೆ ಎದುರಿಸಬೇಕಾದ ಪ್ರಶ್ನೆಗಳು ಮತ್ತು ಅದರಿಂದ ಉಂಟಾಗಬಹುದಾದ ಕಾನೂನು ಸಂಕಷ್ಟಗಳಿಗೆ ಹೆದರಿ ಅವರು ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಮಾನಸಿಕ ಖಿನ್ನತೆ ಮತ್ತು ಚಿಕಿತ್ಸೆ:

ಇಡಿ ದಾಳಿಯ ನಂತರ ಪರಮೇಶ್ವರಯ್ಯ ಅವರು ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮನೆಯವರ ಜೊತೆ ಹೆಚ್ಚು ಮಾತನಾಡುತ್ತಿರಲಿಲ್ಲ ಮತ್ತು ಪದೇ ಪದೇ ಇಡಿ ಪ್ರಕರಣದ ಬಗ್ಗೆಯೇ ಚಿಂತಿಸುತ್ತಿದ್ದರು. ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಮನೋವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಕೂಡ ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅವರ ಮಗ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದು, ತಂದೆಯ ಸಾವಿನ ಸುದ್ಧಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.

ಸಿಜೆ ರಾಯ್ ನೆನಪಿಸಿದ ಸಾವು:

ಪರಮೇಶ್ವರಯ್ಯ ಅವರ ಈ ಸಾವು ಇತ್ತೀಚೆಗಷ್ಟೇ ನಡೆದಿದ್ದ ಖ್ಯಾತ ಉದ್ಯಮಿ ಸಿಜೆ ರಾಯ್ ಅವರ ಆತ್ಮ*ಹತ್ಯೆ ಪ್ರಕರಣವನ್ನು ನೆನಪಿಸುತ್ತಿದೆ. ಸಿಜೆ ರಾಯ್ ಕೂಡ ಇಡಿ ಅಧಿಕಾರಿಗಳು ನಡೆಸಿದ್ದ ಸತತ ದಾಳಿ ಮತ್ತು ವಿಚಾರಣೆಗೆ ಹೆದರಿ ಮಾನಸಿಕವಾಗಿ ಜರ್ಜರಿತರಾಗಿ ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈಗ ಒಬ್ಬ ಉನ್ನತ ಅಧಿಕಾರಿಯೂ ಅದೇ ರೀತಿ ಪ್ರಾಣ ಕಳೆದುಕೊಂಡಿರುವುದು ತನಿಖಾ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

PREV
Read more Articles on
click me!

Recommended Stories

ನಾಳೆ ಬೆಂಗಳೂರಿಗೆ ಜಲಸಂಕಟ: ನಗರದ ಪ್ರಮುಖ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತ!
ಡ್ರೋನ್ ಕ್ಯಾಮೆರಾ ಕಣ್ಣಿಗೂ ಬೀಳದ ಕಾಡಾನೆಗಳಿಗೆ ಸಿಂಹ ಸ್ವಪ್ನವಾದ ನಾಯಿಗಳು; ಅರಣ್ಯ ಇಲಾಖೆಗೆ ರೋಸಿ-ಸಿಂಧು ಫೇವರೇಟ್!