ಮೈಸೂರು (ಆ.27): ಕೋವಿಡ್ ನಿರ್ವಹಣೆಗೆ ಸರ್ಕಾರ ಬದ್ಧವಾಗಿದ್ದು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಬಳಿಕ ಮಾತನಾಡಿದ ಅವರು, ನೆರೆಯ ಕೇರಳ ಮತ್ತು ಇತರ ರಾಜ್ಯಗಳಲ್ಲಿ 3ನೇ ಅಲೆಯ ಭೀತಿ ಎದುರಾಗಿದೆ. ಅದಕ್ಕೆ ಎಲ್ಲಾ ರೀತಿಯ ಕಾರ್ಯಕ್ರಮ ರೂಪಿಸಿಕೊಂಡಿದ್ದೇವೆ. ಕೋವಿಡ್‌ಗೆ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದರು.
ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತ ಕ್ರಮ ಕೈಗೊಂಡಿತು. ಎಲ್ಲರಿಗೂ ಲಸಿಕೆ ಹಾಕಿಸಲಾಗುತ್ತಿದೆ. ಲಸಿಕೆ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಮೊದಲ ಸುತ್ತಿನ ಲಸಿಕೆ ವಿತರಣೆಯು ಬಹುಪಾಲು ಮುಗಿದಿದ್ದು, ಎರಡನೇ ಸುತ್ತಿನ ಲಸಿಕೆ ಹಾಕಲಾಗುತ್ತಿದೆ. ಇನ್ನು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಶಾಲಾ- ಕಾಲೇಜು ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಶ್ವಾಸಕೋಶದ ಕ್ಯಾನ್ಸರ್ ಇದ್ದವರಲ್ಲಿ ಕೋವಿಡ್ ಸೋಂಕಿನ ಅಪಾಯ ಹೆಚ್ಚು
ಗುಂಪು ಮನೆ ಯೋಜನೆ
ಪತ್ರಕರ್ತರಿಗೆ ನಿವೇಶನ ಸೌಲಭ್ಯ ಕಲ್ಪಿಸಿಕೊಡಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಇದೆ. ಇದಕ್ಕೆ ಪ್ರತಿಯಾಗಿ ನಾವು ಎಂಡಿಎ ವತಿಯಿಂದ ನಿರ್ಮಿಸುತ್ತಿರುವ ಸುಸಜ್ಜಿತ ಗುಂಪುಮನೆ ನೀಡಲು ಉದ್ದೇಶಿಸಿದ್ದೇವೆ. ಆದ್ಯತೆಯ ಮೇರೆಗೆ ಈ ಮನೆಗಳನ್ನು ವಿತರಿಸಲಾಗುವುದು. ಸರ್ಕಾರದಿಂದ ಅನುಮತಿ ದೊರೆತ ಕೂಡಲೇ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಬೇಕಾದ ಸಿಎ ನಿವೇಶನ ಕೊಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೂಡ್ಲಿ ಗುರುರಾಜ್, ಸಿ.ಕೆ. ಮಹೇಂದ್ರ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ. ಮಹೇಶ್ವರನ್, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪುರಸ್ಕೃತರಾದ ಅಂಶಿ ಪ್ರಸನ್ನಕುಮಾರ್ ಮತ್ತು ಈಚನೂರು ಕುಮಾರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ದಿ ಹಿಂದು ಪತ್ರಿಕೆಯ ಡೆಪ್ಯೂಟಿ ಎಡಿಟರ್ ಆರ್. ಕೃಷ್ಣಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿಜಯಕರ್ನಾಟಕ ದಿನಪತ್ರಿಕೆಯ ಹಿರಿಯ ಉಪ ಸಂಪಾದಕ ಎಚ್.ಕೆ. ನಾಗೇಶ್ ಅವರಿಗೆ ವರ್ಷದ ಹಿರಿಯ ಉಪ ಸಂಪಾದಕ, ಟೈಮ್ಸ… ಆಫ್ ಇಂಡಿಯಾದ ಛಾಯಾಗ್ರಾಹಕ ಎಸ್.ಆರ್. ಮಧುಸೂದನ್ ಅವರಿಗೆ ವರ್ಷದ ಹಿರಿಯ ಛಾಯಾಗ್ರಾಹಕ ಪ್ರಶಸ್ತಿ, ಕೆ.ಆರ್. ನಗರದ ಮೈಸೂರು ಮಿತ್ರ ವರದಿಗಾರ ಕೆ.ಟಿ. ರಮೇಶ್ ಅವರಿಗೆ ವರ್ಷದ ಗ್ರಾಮಾಂತರ ಪತ್ರಕರ್ತ ಪ್ರಶಸ್ತಿ, ಪಬ್ಲಿಕ್ ಟಿವಿ ವರದಿಗಾರ ಕೆ.ಪಿ. ನಾಗರಾಜ್‌ಗೆ ವರ್ಷದ ಹಿರಿಯ ದೃಶ್ಯ ಮಾಧ್ಯಮ ವರದಿಗಾರ ಪ್ರಶಸ್ತಿ ಮತ್ತು ಪಬ್ಲಿಕ್ ಟಿವಿ ಕ್ಯಾಮರಾಮನ್ ಇ ಕಾರ್ತಿಕ್‌ಗೆ ವರ್ಷದ ಹಿರಿಯ ದೃಶ್ಯ ಮಾಧ್ಯಮ ಕ್ಯಾಮರಾಮನ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಉದಯವಾಣಿಯ ವರದಿಗಾರ ಸತೀಶ್ ದೇಪುರ ಅವರಿಗೆ ವರ್ಷದ ಕನ್ನಡ ವರದಿಗಾರಿಕೆ ಪ್ರಶಸ್ತಿ, ಹುಣಸೂರಿನ ಪ್ರಜಾವಾಣಿ ವರದಿಗಾರ ಎಚ್.ಎಸ್. ಸಚ್ಚಿತ್ ಅವರಿಗೆ ವರ್ಷದ ಕನ್ನಡ ಗ್ರಾಮಾಂತರ ವರದಿ ಪ್ರಶಸ್ತಿ, ಸ್ಟಾರ್ ಆಫ್ ಮೈಸೂರು ಪತ್ರಿಕೆಯ ವರದಿಗಾರ ರಾಜಕುಮಾರ್ ಭಾವಸಾರ್‌ಗೆ ವರ್ಷದ ಇಂಗ್ಲಿಷ್ ವರದಿ ಪ್ರಶಸ್ತಿ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಛಾಯಾಗ್ರಾಹಕ ಎಸ್. ಉದಯಶಂಕರ್‌ಗೆ ವರ್ಷದ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿ, ದೂರದರ್ಶನ ವರದಿಗಾರ ಜಿ. ಜಯಂತ್ ಮತ್ತು ಕ್ಯಾಮರಾಮನ್ ರಾಮು ಅವರಿಗೆ ವರ್ಷದ ಅತ್ಯುತ್ತಮ ವಿದ್ಯುನ್ಮಾನ ವರದಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮೈಸೂರು ವಿವಿ ಕುಲಪತಿ ಡಾ.ಜಿ. ಹೇಮಂತ್‌ಕುಮಾರ್ ಪ್ರಧಾನ ಭಾಷಣ ಮಾಡಿದರು. ಎಂಡಿಎ ಅಧ್ಯಕ್ಷ ಎಚ್.ವಿ. ರಾಜೀವ್ ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ಎಲ್. ನಾಗೇಂದ್ರ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಗರ ಉಪಾಧ್ಯಕ್ಷ ಎಂ.ಎಸ್. ಬಸವಣ್ಣ ಇದ್ದರು. ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಸ್ವಾಗತಿಸಿದರು. ಆಕಾಶವಾಣಿಯ ಜಿ.ಎನ್. ಮಂಜುನಾಥ್ ನಿರೂಪಿಸಿದರು. ಸನ್ಮಾನಿತರನ್ನು ನಗರ ಕಾರ್ಯಗರ್ಶಿ ರಂಗಸ್ವಾಮಿ, ಗ್ರಾಮೀಣ ಕಾರ್ಯದರ್ಶಿ ಮಹದೇವ್, ಖಜಾಂಚಿ ನಾಗೇಶ್ ಪಾಣತ್ತಲೆ, ಗ್ರಾಮೀಣ ಉಪಾಧ್ಯಕ್ಷ ಧರ್ಮಾಪುರ ನಾರಾಯಣ ಪರಿಚಯಿಸಿದರು.