ಎಂಜಿ, ಬ್ರಿಗೇಡ್‌ ರಸ್ತೆಯಲ್ಲಿನ್ನು ಹೊಸ ವರ್ಷಾಚರಣೆಗೆ ನಿಷೇಧ?

By Kannadaprabha NewsFirst Published Jan 2, 2020, 8:06 AM IST
Highlights

ಬೆಂಗಳೂರಿನ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ನಡೆಯುವ ಅದ್ದೂರಿ ಹೊಸ ವರ್ಷಾಚರಣೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. 

ಬೆಂಗಳೂರು [ಜ.02]:  ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಕೆಲವು ಪುಂಡರು ಯುವತಿಯರ ಜತೆ ಅಸಭ್ಯ ವರ್ತನೆ ತೋರುತ್ತಿರುವ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನಗರದ ಬ್ರಿಗೇಡ್‌ ರಸ್ತೆಯಲ್ಲಿ ಮುಂದಿನ ವರ್ಷದಿಂದ ಆಚರಣೆ ನಿಷೇಧಿಸುವ ಅಥವಾ ಪರ್ಯಾಯ ಸ್ಥಳದಲ್ಲಿ ಆಚರಣೆಗೆ ಅವಕಾಶ ನೀಡುವ ದಿಸೆಯಲ್ಲಿ ರಾಜ್ಯ ಸರ್ಕಾರ ಚಿಂತನೆ ಆರಂಭಿಸಿದೆ.

ಈ ಸೂಚನೆ ನೀಡಿರುವ ಕಂದಾಯ ಸಚಿವ ಆರ್‌.ಅಶೋಕ್‌ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರು, ಬ್ರಿಗೇಡ್‌ ರಸ್ತೆ ಮತ್ತು ಎಂ.ಜಿ.ರಸ್ತೆಯಲ್ಲಿ ನಗರದ ಜನತೆ ಜಮಾಯಿಸಿ ವರ್ಷಚರಣೆ ಮಾಡಿಕೊಂಡ ಬಳಿಕ ಅನುಚಿತ ವರ್ತನೆಯಂತಹ ಘಟನೆಗಳು ನಡೆಯುತ್ತವೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಪರ್ಯಾಯ ತಾಣದಲ್ಲಿ ನೂತನ ವರ್ಷದ ಸ್ವಾಗತಕ್ಕೆ ಅವಕಾಶ ನೀಡುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಸಚಿವರು, ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ಕೆಲವು ಪಾನಮತ್ತ ಕಿಡಿಗೇಡಿಗಳು ದುರ್ನಡತೆ ತೋರುತ್ತಿದ್ದಾರೆ. ಇದರಿಂದ ನಗರಕ್ಕೆ ಕೆಟ್ಟಹೆಸರು ಬರಲಿದೆ. ಅಲ್ಲದೇ, ರಾಜ್ಯಕ್ಕೂ ಕಳಂಕ. ಬ್ರಿಗೇಡ್‌ ರಸ್ತೆ, ಎಂ.ಜಿ.ರಸ್ತೆ ಸೇರಿದಂತೆ ನಗರದ ಕೆಲವು ಭಾಗದಲ್ಲಿ ವರ್ಷಾಚರಣೆ ಅಗತ್ಯವಾದರೂ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಂಜಿ ರಸ್ತೆಯಲ್ಲಿ ಚಪ್ಪಲಿ ಏಟು ತಿಂದ ಕಾಮಾಂಧರು ಸಿಕ್ಕಾಕ್ಕಂಡ್ರು! ನಮ್ಮೂರವರಲ್ಲ...

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ನಗರದ ಹಲವು ಭಾಗಗಳಲ್ಲಿ ಹೊಸ ವರ್ಷಾಚರಣೆ ವೇಲೆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಮುಂದಿನ ವರ್ಷ ಆಚರಣೆ ಮಾಡಬೇಕೇ, ಬೇಡವೇ ಎಂಬುದರ ಬಗ್ಗೆ ಸರ್ಕಾರ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.

ಕಂದಾಯ ಸಚಿವ ಆರ್‌.ಅಶೋಕ್‌, ನಗರದ ಬ್ರಿಗೇಡ್‌ ರಸ್ತೆ, ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ ತೋರಿದ ಪುಂಡರ ವಿರುದ್ಧ ಕಿಡಿಕಾರಿದರು. ಕೆಲವು ಯುವಕರಿಂದ ಕಿರುಕುಳ ಆಗಿದ್ದು, ಕಿಡಿಗೇಡಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನದಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಎದುರಾಗಬಹುದು. ಹೀಗಾಗಿ ಹೊಸ ವರ್ಷಾಚರಣೆಗೆ ಪರ್ಯಾಯ ಸ್ಥಳ ನಿಗದಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಅರಮನೆ ಮೈದಾನ ಅಥವಾ ಬೇರಾವುದೇ ಸ್ಥಳದಲ್ಲಿ ನಡೆಸಲು ಅವಕಾಶ ಕಲ್ಪಿಸಬಹುದೇ? ಎಂಬುದರ ಕುರಿತ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

click me!