ಕಾಮಗಾರಿಯೇ ಮುಗಿಯದ ಪಂಪ್‌ವೆಲ್‌ ಫ್ಲೈಓವರ್‌ಗೆ ಕೊನೆಗೂ ಉದ್ಘಾಟನೆ ಭಾಗ್ಯ..?

By Kannadaprabha NewsFirst Published Jan 2, 2020, 8:00 AM IST
Highlights

ಕಳೆದೊಂದು ದಶಕದಿಂದ ಕಾಮಗಾರಿ ಮುಗಿಯದೆ ಅತಿ ಹೆಚ್ಚು ಟ್ರೋಲ್‌ಗೆ ಒಳಗಾಗಿರುವ ಪಂಪ್‌ವೆಲ್‌ ಫ್ಲೈಓವರ್‌ ಕೊನೆಗೂ ಬುಧವಾರ ಉದ್ಘಾಟನೆಗೊಂಡಿತು! ಅದಕ್ಕಾಗಿ ಸ್ವತಃ ನಳಿನ್‌ ಕುಮಾರ್‌, ವೇದವ್ಯಾಸ ಕಾಮತ್‌ ಸೇರಿದಂತೆ ಬಿಜೆಪಿ ನಾಯಕರು ಬಂದಿದ್ದರು..!

ಮಂಗಳೂರು(ಜ.02): ಕಳೆದೊಂದು ದಶಕದಿಂದ ಕಾಮಗಾರಿ ಮುಗಿಯದೆ ಅತಿ ಹೆಚ್ಚು ಟ್ರೋಲ್‌ಗೆ ಒಳಗಾಗಿರುವ ಪಂಪ್‌ವೆಲ್‌ ಫ್ಲೈಓವರ್‌ ಕೊನೆಗೂ ಬುಧವಾರ ಉದ್ಘಾಟನೆಗೊಂಡಿತು! ಅದಕ್ಕಾಗಿ ಸ್ವತಃ ನಳಿನ್‌ ಕುಮಾರ್‌, ವೇದವ್ಯಾಸ ಕಾಮತ್‌ ಸೇರಿದಂತೆ ಬಿಜೆಪಿ ನಾಯಕರು ಬಂದಿದ್ದರು..!

ಇದು ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ನೇತೃತ್ವದಲ್ಲಿ ನಡೆದ ಅಣಕು ಉದ್ಘಾಟನೆಯ ಸ್ಯಾಂಪಲ್‌. ಜನವರಿ ಮೊದಲ ವಾರದಲ್ಲಿ ಮೇಲ್ಸೇತುವೆ ಉದ್ಘಾಟನೆ ಎಂದು ನೀಡಿದ್ದ ಗಡುವು ತಪ್ಪಿದ್ದರಿಂದ ಇದನ್ನು ಪ್ರತಿಭಟಿಸಿ ಕಾಂಗ್ರೆಸಿಗರು ಬಿಜೆಪಿ ಮುಖಂಡರ ಮುಖವಾಡಗಳೊಂದಿಗೆ ಪಂಪ್‌ವೆಲ್‌ ಬಳಿ ಬೀದಿಗಿಳಿದಿದ್ದರು. ಪಂಪ್‌ವೆಲ್‌ ಫ್ಲೈಓವರ್‌ ಉದ್ಘಾಟನೆ ನಡೆಸಿ ಅಣಕವಾಡಿದ್ದಾರೆ.

ಮಂಗಳೂರು: NMC ಕೇಬಲ್ ವಾಹಿನಿ ಮುಖ್ಯಸ್ಥ ಅನುಮಾನಾಸ್ಪದ ಸಾವು

ಪ್ರತಿಕೃತಿ ಎಸೆದರು:

ಮೇಲ್ಸೇತುವೆ ಬಳಿ ಕಟ್ಟಲಾದ ಹಗ್ಗವನ್ನು ಕತ್ತರಿಸುವ ಮೂಲಕ ಫ್ಲೈಓವರ್‌ನ ಉದ್ಘಾಟನೆಯ ಅಣಕು ಪ್ರದರ್ಶಿದರು. ಮಾತ್ರವಲ್ಲದೆ, ಸಂಸದರು ಹಾಗೂ ಶಾಸಕರ ಪ್ರತಿಕೃತಿಗಳನ್ನು ಸೇತುವೆಯ ಕೆಳಭಾಗಕ್ಕೆ ಎಸೆಯುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.

ನೀರುಳ್ಳಿ, ಬೆಳ್ಳುಳ್ಳಿ ಹಾರ:

ಪ್ರತಿಭಟನೆಯಲ್ಲಿ ಸಂಸದ ನಳಿನ್‌ ಕುಮಾರ್‌ ಅವರ ಕಟೌಟ್‌ಗೆ ನೀರುಳ್ಳಿ- ಬೆಳ್ಳುಳ್ಳಿ ಹಾರವನ್ನೂ ಹಾಕುವ ಮೂಲಕ ಬೆಲೆಏರಿಕೆಯ ಕುರಿತೂ ಕಾಂಗ್ರೆಸ್‌ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುತ್ತಿಗೆ ಎಚ್ಚರಿಕೆ:

ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಫೆಬ್ರವರಿ ಮೊದಲ ವಾರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎಂಜಿನಿಯರ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಐವನ್‌ ಡಿಸೋಜ ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಮೊಹಿಯುದ್ದೀನ್‌ ಬಾವ, ಶಾಹುಲ್‌ ಹಮೀದ್‌, ನಾಗೇಂದ್ರ ಕುಮಾರ್‌ ಮತ್ತಿತರರಿದ್ದರು.

ಟೋಲ್‌ ಸಂಗ್ರಹ ತಡೆ ನಾಟಕ

ತಲಪಾಡಿಯಲ್ಲಿ ಸಂಸದರು ಹಾಗೂ ಶಾಸಕರು ಟೋಲ್‌ ನಿಯಮ ಉಲ್ಲಂಘಿಸಿ ಸುಂಕ ಸಂಗ್ರಹಿಸದಂತೆ ಗುತ್ತಿಗೆದಾರರನ್ನು ತಡೆಹಿಡಿದಿರುವ ನಾಟಕವಾಡಿದ್ದಾರೆ. ಇವರ ಪ್ರತಿಭಟನೆ ಎಷ್ಟುದಿನ ಮುಂದುವರಿಯುತ್ತದೆ ಹೇಳಲಿ. ಮುಂದೆ ಎಷ್ಟುದಿನದವರೆಗೆ ಪ್ರಯಾಣಿಕರು ಟೋಲ್‌ ನೀಡದೆ ಪ್ರಯಾಣಿಸಬಹುದು ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಐವನ್‌ ಡಿಸೋಜ ಹೇಳಿದ್ದಾರೆ.

ಗೋಲಿಬಾರ್ ಮೃತರಿಗೆ ಪರಿಹಾರ ನೀತಿ: ಬೊಮ್ಮಾಯಿ

click me!