
ಚಾಮರಾಜನಗರ: ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ದಾಳಿಯಿಂದ ಸರಣಿ ಸಾವುಗಳು ಸಂಭವಿಸಿದ ಹಿನ್ನೆಲೆ, ನವೆಂಬರ್ 7ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಅರಣ್ಯ ಸಫಾರಿಯನ್ನು ಪುನಾರಂಭಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ತಾಂತ್ರಿಕ ಸಮಿತಿಯ ಮಧ್ಯಂತರ ವರದಿಯ ಆಧಾರದ ಮೇಲೆ, ಸಫಾರಿಯನ್ನು ಹಂತ ಹಂತವಾಗಿ ಹಾಗೂ ನಿಯಂತ್ರಿತ ರೀತಿಯಲ್ಲಿ ಪುನಾರಂಭಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಫಾರಿ ತಾತ್ಕಾಲಿಕ ಸ್ಥಗಿತದ ನಂತರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಲಾಗಿತ್ತು. ಜನವರಿ 2ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಲಾಗಿದೆ. ತಾಂತ್ರಿಕ ಸಮಿತಿ ಮಧ್ಯಂತರ ವರದಿ ಸಲ್ಲಿಸಿದ್ದು, ಸ್ಥಳೀಯರು, ಪ್ರವಾಸೋದ್ಯಮ ವಲಯ ಮತ್ತು ಸಾರ್ವಜನಿಕರಿಂದ ಸಫಾರಿ ಪುನಾರಂಭಕ್ಕೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಶೇ.50ರಷ್ಟು ಸಫಾರಿ ಪುನಾರಂಭಕ್ಕೆ ಅನುಮತಿ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಫಾರಿ ಪುನಾರಂಭದೊಂದಿಗೆ ಅವಧಿ ಮತ್ತು ವಾಹನಗಳ ಸಂಖ್ಯೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಈ ಮೊದಲು ಬಂಡೀಪುರದಲ್ಲಿ ದಿನಕ್ಕೆ ಸುಮಾರು 8 ಗಂಟೆಗಳ ಕಾಲ ನಡೆಯುತ್ತಿದ್ದ ಸಫಾರಿಯನ್ನು ಈಗ 5 ಗಂಟೆಗಳಿಗೆ ಕಡಿತಗೊಳಿಸಲಾಗಿದೆ. ಸುಂಕದಕಟ್ಟೆ ವ್ಯಾಪ್ತಿಯಲ್ಲಿ 6 ಗಂಟೆಗಳ ಕಾಲ ಸಫಾರಿಯನ್ನು ನಡೆಸಲು ಅನುಮತಿ ನೀಡಲಾಗಿದ್ದು, ನಾಗರಹೊಳೆಯಲ್ಲಿ ಮೊದಲ ಹಂತದಲ್ಲಿ ಕೇವಲ 4 ಗಂಟೆಗಳ ಕಾಲ ಮಾತ್ರ ಸಫಾರಿ ನಡೆಸಲು ತೀರ್ಮಾನಿಸಲಾಗಿದೆ.
ಅದೇ ರೀತಿ, ಈ ಹಿಂದೆ ಬಳಸುತ್ತಿದ್ದ ಸಫಾರಿ ವಾಹನಗಳ ಪೈಕಿ ಶೇ.50ರಷ್ಟು ವಾಹನಗಳನ್ನು ಮಾತ್ರ ಸಫಾರಿಗೆ ಬಳಸಲು ನಿರ್ಧರಿಸಲಾಗಿದೆ. ಉಳಿದ ಶೇ.50ರಷ್ಟು ವಾಹನಗಳನ್ನು ಅರಣ್ಯದಂಚಿನ ಗ್ರಾಮಗಳ ಸುತ್ತ ಗಸ್ತು ಹೆಚ್ಚಿಸಲು ಬಳಸಲಾಗುತ್ತದೆ. ಬಂಡೀಪುರ, ಬಿ.ಆರ್.ಟಿ. ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಿಬ್ಬಂದಿ ಕೊರತೆ ಇರುವ ಹಿನ್ನೆಲೆ, ಸಿಬ್ಬಂದಿ ಹಾಗೂ ವಾಹನಗಳ ಬಳಕೆಯ ಬಗ್ಗೆ ವಿಶೇಷವಾಗಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವರು ಹೇಳಿದರು.
ಹೆಗ್ಗಡ ದೇವನಕೋಟೆ ಸೇರಿದಂತೆ ಬಂಡೀಪುರ–ನಾಗರಹೊಳೆ ವ್ಯಾಪ್ತಿಯ ರೈತರು, ಸ್ಥಳೀಯ ನಿವಾಸಿಗಳು ಹಾಗೂ ರಿಸಾರ್ಟ್ ಸಿಬ್ಬಂದಿಗಳು ಸಫಾರಿ ಪುನಾರಂಭಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸಫಾರಿ ಸ್ಥಗಿತದಿಂದ ಜೀವನೋಪಾಯಕ್ಕೆ ತೀವ್ರ ಅಡ್ಡಿಯಾಗಿದೆ ಎಂದು ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಸಫಾರಿಯನ್ನು ನಿಯಂತ್ರಿತವಾಗಿ ಹಾಗೂ ಹಂತ ಹಂತವಾಗಿ ಪುನಾರಂಭಿಸುವ ಬಗ್ಗೆ ಸರ್ಕಾರ ಗಂಭೀರ ಚರ್ಚೆ ನಡೆಸಿದೆ.
ರಾಜ್ಯದಲ್ಲಿ ಹುಲಿಗಳನ್ನು ಹಿಡಿಯುವ ಕಾರ್ಯಾಚರಣೆಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆ, ಈ ಕುರಿತು ಸ್ಪಷ್ಟನೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಹುಲಿ ಅಥವಾ ಚಿರತೆ ಸೆರೆ ಕಾರ್ಯಾಚರಣೆಗಳನ್ನು ಎನ್‌ಟಿಸಿಎ (ನ್ಯಾಷನಲ್ ಟೈಗರ್ ಕನ್ಸರ್ವೇಶನ್ ಅಥಾರಿಟಿ) ಮಾನದಂಡಗಳ ಪ್ರಕಾರವೇ ನಡೆಸಲಾಗುತ್ತದೆ ಎಂದು ಹೇಳಿದರು. ಮಾನದಂಡದಂತೆ ಸಮಿತಿ ರಚಿಸಿ, ಸಮಿತಿಯ ಶಿಫಾರಸ್ಸಿನ ಆಧಾರದಲ್ಲೇ ಸೆರೆ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ಈ ಸಮಿತಿಯಲ್ಲಿ ಎನ್‌ಟಿಸಿಎ ಪ್ರತಿನಿಧಿಯೂ ಭಾಗಿಯಾಗಿರುತ್ತಾರೆ ಎಂದು ಅವರು ತಿಳಿಸಿದರು.
ಹುಲಿ ಮತ್ತು ಚಿರತೆ ದಾಳಿಯಿಂದ ರಾಜ್ಯದ ಹಲವೆಡೆ ಸಾವು–ನೋವುಗಳು ಹೆಚ್ಚಾದ ಹಿನ್ನೆಲೆ ಸರ್ಕಾರ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದರ ಪರಿಣಾಮವಾಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳ ಅರಣ್ಯ ಉದ್ಯಾನವನಗಳಿಗೆ ಹೆಚ್ಚಿನ ಪ್ರವಾಸಿಗರು ತೆರಳಿದ್ದು, ಅಲ್ಲಿನ ಸಫಾರಿ ಬುಕ್ಕಿಂಗ್‌ಗಳು ಹೆಚ್ಚಾಗಿವೆ ಎಂದು ಕರ್ನಾಟಕ ಇಕೋ–ಟೂರಿಸಂ ರೆಸಾರ್ಟ್ಸ್ ಅಸೋಸಿಯೇಶನ್ (KETRA) ಆರೋಪಿಸಿತ್ತು. ಬಂಡೀಪುರ–ನಾಗರಹೊಳೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 35 ರಿಸಾರ್ಟ್‌ಗಳಿಗೆ ದಿನಕ್ಕೆ ಸರಾಸರಿ 3 ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿದ್ದು, ಸುಮಾರು 8,000 ಜನರು ಪರಿಸರ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿರುವ ಕಾರಣ ಸಫಾರಿ ಸ್ಥಗಿತವು ಅವರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂಬ ವರದಿಗಳು ಬಂದಿದ್ದವು.
ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಸಾರ್ವಜನಿಕ ಸುರಕ್ಷತೆ ಮತ್ತು ಅರಣ್ಯ ಸಂರಕ್ಷಣೆಗೆ ಆದ್ಯತೆ ನೀಡುತ್ತಾ, ನಿಯಂತ್ರಿತ ಹಾಗೂ ಹಂತ ಹಂತದ ಸಫಾರಿ ಪುನಾರಂಭಕ್ಕೆ ಸರ್ಕಾರ ತೀರ್ಮಾನಿಸಿದೆ. ತಾಂತ್ರಿಕ ಸಮಿತಿಯ ಸಂಪೂರ್ಣ ವರದಿ ಸಲ್ಲಿಕೆಯ ನಂತರ, ಸಫಾರಿಯನ್ನು ಪೂರ್ಣ ಪ್ರಮಾಣದಲ್ಲಿ ಪುನಾರಂಭಿಸುವ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.