ಅಡಕೆ ರೈತರ ಬದುಕು ಅತಂತ್ರ: ಗುಟ್ಕಾ ನಿಷೇಧದ ಪ್ರಸ್ತಾಪ ಕೈಬಿಡಿ ಎಂದು ಸಿ.ಟಿ.ರವಿ ಆಗ್ರಹ!

Kannadaprabha News   | Kannada Prabha
Published : Sep 05, 2026, 10:40 AM IST
CT Ravi

ಸಾರಾಂಶ

ಗುಟ್ಕಾ ನಿಷೇಧದ ಕುರಿತ ಸರ್ಕಾರದ ಹೇಳಿಕೆಯಿಂದ ಅಡಕೆ ಬೆಲೆ ಕುಸಿದಿರುವುದನ್ನು ಖಂಡಿಸಿ ಶಾಸಕ ಸಿ.ಟಿ. ರವಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಈ ಪ್ರಸ್ತಾಪವನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿದರು. ಜೊತೆಗೆ, ಚಿಕ್ಕಮಗಳೂರು ಮತ್ತು ಕಡೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದು ಹಾಗೂ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

ಚಿಕ್ಕಮಗಳೂರು: ಗುಟ್ಕಾ ನಿಷೇಧದ ಕುರಿತು ರಾಜ್ಯ ಸರ್ಕಾರ ನೀಡಿರುವ ಹೇಳಿಕೆಯಿಂದ ಅಡಕೆ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬದುಕಿಗೆ ಮರಣ ಶಾಸನವಾಗುವ ಗುಟ್ಕಾ ಹಾಗೂ ಅಡಕೆ ನಿಷೇಧ ಪ್ರಸ್ತಾಪವನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದು ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿ ಆಗ್ರಹಿಸಿದರು.

ಸಖರಾಯಪಟ್ಟಣದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಹಾಗೂ ಜಿಲ್ಲಾ ರೈತ ಮೋರ್ಚಾ ದಿಂದ ಶುಕ್ರವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ ಅಡಕೆ ಬೆಲೆ ಕ್ವಿಂಟಾಲ್‌ಗೆ ₹57–58 ಸಾವಿರ ಇದ್ದಾಗ ₹60–65 ಸಾವಿರಕ್ಕೆ ಏರಿಕೆಯಾಗುವ ನಿರೀಕ್ಷೆಯಿತ್ತು. ಆದರೆ ಸರ್ಕಾರದ ಗುಟ್ಕಾ ನಿಷೇಧದ ಹೇಳಿಕೆ ಬೆನ್ನಲ್ಲೇ ₹5–6 ಸಾವಿರದಷ್ಟು ಬೆಲೆ ಕುಸಿದಿದೆ. ರೈತರು ನಷ್ಟ ಅನುಭವಿಸುವಂತಾಗಿದೆ ಎಂದರು.

ಕೇವಲ ಒಂದು ಹೇಳಿಕೆಯಿಂದ ಲಕ್ಷಾಂತರ ರೈತರ ಬದುಕಿನ ಮೇಲೆ ಪರಿಣಾಮ ಬೀರುವಂತಾಗ ಬಾರದು. ಗುಟ್ಕಾ ಕಂಪನಿಗಳಿಗೆ ಅನುಕೂಲವಾಗುವ ನೀತಿಗಳ ಬದಲಿಗೆ ರೈತರ ಹಿತ ಕಾಪಾಡುವ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಬರಪೀಡಿತ ಘೋಷಣೆಗೆ ಒತ್ತಾಯ:

ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು. ಕಡೂರು ಭಾಗದಲ್ಲಿ ನಿರೀಕ್ಷಿತ ಮಳೆಯಾಗದೆ ಕೆರೆಗಳು ಬತ್ತಿವೆ. ಬೋರ್‌ವೆಲ್‌ಗಳು ಬತ್ತುತ್ತಿವೆ, ರಾಗಿ ಬೆಳೆಯಲು ಸಾಧ್ಯವಾಗಿಲ್ಲ. ಜೋಳ, ಸೂರ್ಯ ಕಾಂತಿ ಸೇರಿದಂತೆ ವಿವಿಧ ಬೆಳೆಗಳು ಒಣಗಿವೆ. ಅಡಕೆ ತೋಟಗಳಿಗೂ ನೀರಿನ ಕೊರತೆ ಎದುರಾಗಿದೆ ಎಂದರು.

ಬರಪೀಡಿತ ತಾಲೂಕು ಘೋಷಣೆಗೂ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ತಕ್ಷಣ ಬರ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ಲೋಡ್‌ಶೆಡ್ಡಿಂಗ್ ಹಾಗೂ ವಿದ್ಯುತ್ ಕೊರತೆಯಿಂದ ರೈತರ ಪಂಪ್‌ಸೆಟ್‌ಗಳು ಕಾರ್ಯ ನಿರ್ವಹಿಸದೆ ತೊಂದರೆಯಾಗುತ್ತಿದೆ. ಟ್ರಾನ್ಸ್‌ಫಾರ್ಮರ್‌ಗಳಿಗೆ ಹೆಚ್ಚಿನ ಹಣ ಪಾವತಿಸಿ ಕಾಯಬೇಕಾದ ಪರಿಸ್ಥಿತಿಯಿದೆ ಸರ್ಕಾರ ಈ ಸಮಸ್ಯೆ ಪರಿಹರಿಸಬೇಕು ಎಂದರು.

₹1,281 ಕೋಟಿ ನೀರಾವರಿ ಯೋಜನೆ ಪೂರ್ಣಗೊಳಿಸಿ

ತಮ್ಮ ಅವಧಿಯಲ್ಲಿ ಮಂಜೂರಾದ ₹1,281 ಕೋಟಿ ಮೊತ್ತದ ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಷರತ್ತಿನೊಂದಿಗೆ 2022–23ರಲ್ಲಿ ಯೋಜನೆ ಆರಂಭಿಸಲಾಗಿತ್ತು. ನಿಗದಿಯಂತೆ ಕಾಮಗಾರಿ ನಡೆದಿದ್ದರೆ 2025ರ ವೇಳೆಗೆ ಕೆರೆಗಳಿಗೆ ನೀರು ಹರಿಯಬೇಕಿತ್ತು. ಯೋಜನೆ ಪೂರ್ಣಗೊಂಡರೆ ಅಂತರ್ಜಲ ಮರುಪೂರಣವಾಗುವ ಜತೆಗೆ ಜಾನುವಾರುಗಳಿಗೆ ಕುಡಿವ ನೀರು ಹಾಗೂ ತೋಟಗಳನ್ನು ಉಳಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಯೋಜನೆಗೆ ಈಗಾಗಲೇ ನಾಲ್ಕೂವರೆ ವರ್ಷ ಕಳೆದಿದ್ದು, ಸರ್ಕಾರಕ್ಕೆ ಇನ್ನೂ ಆರು ತಿಂಗಳ ಕಾಲಾವಕಾಶ ನೀಡುತ್ತೇವೆ. ಈ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ವಿವಿಧ ಸರ್ಕಾರಿ ಯೋಜನೆಗಳಡಿ ಫಲಾನುಭವಿಗಳಿಗೆ ಬಾಕಿ ಉಳಿದ ಹಣವನ್ನು ಗೌರಿ–ಗಣೇಶ ಹಬ್ಬದೊಳಗೆ ಬಿಡುಗಡೆ ಮಾಡಬೇಕು. ಬಡವರು ಹಣಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಬೇಕು ಎಂದರು.

ಗುಟ್ಕಾ–ಅಡಕೆ ನಿಷೇಧದ ಪ್ರಸ್ತಾಪ ಕೈಬಿಡುವುದು, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದು ಮತ್ತು ₹1,281 ಕೋಟಿ ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರಹಳ್ಳಿ ಮಹೇಶ್, ಬೀಕನಹಳ್ಳಿ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಜಿಲ್ಲಾ ಕಾರ್ಯದರ್ಶಿ ಚಿಕ್ಕದೇವನೂರು ರವಿ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಪಾದಮನೆ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಂಬಯ್ಯನೂರು ಆನಂದಪ್ಪ, ಗ್ರಾಮಾಂತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಕೇತುಮಾರನಹಳ್ಳಿ ಉಮೇಶ್, ನಗರ ರೈತ ಮೋರ್ಚಾ ಅಧ್ಯಕ್ಷ ನಿಶಾಂತ್, ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಎಸ್.ಟಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕೊಲ್ಲಾಭೋವಿ, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಗೌಡ್ರು, ಮುಖಂಡರಾದ ಪಿಳ್ಳೇನ ಹಳ್ಳಿ ರಮೇಶ್, ಅಣ್ಣಾ ನಾಯ್ಕ, ಲಕ್ಷ್ಮಣ ನಾಯ್ಕ್ ಉಪಸ್ಥಿತರಿದ್ದರು.

PREV
Read more Articles on
click me!

Recommended Stories

'ಮೋದಿ ಮಾತಾಡಿದ್ರೆ ಕಾನೂನು ಬೇರೆಯಾಗಲ್ಲ' ನಿಂಗಮ್ಮನ ಇಡ್ಲಿ ಬಂಡಿ ತೆರವು ಸಮರ್ಥಿಸಿದ ಪ್ರಿಯಾಂಕ್‌ ಖರ್ಗೆ
ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-3ಗೆ ರಂಗು: ತಾರೆಯರ ಸಮ್ಮುಖದಲ್ಲಿ ಅದ್ದೂರಿ ಚಾಲನೆ