ದೇಶಕ್ಕಾಗಿ 27 ವರ್ಷ ಸೇವೆಗೈದ ಸೈನಿಕನಿಗೆ 18 ವರ್ಷದಿಂದ ಜಮೀನು ಕೊಡದ ಕರ್ನಾಟಕ ಸರ್ಕಾರ

By Sathish Kumar KH  |  First Published Aug 8, 2023, 6:33 PM IST

ಬರೋಬ್ಬರಿ 27 ವರ್ಷ ದೇಶದ ಗಡಿ ಕಾಯ್ದು ಬಂದ ಮಾಜಿ ಸೈನಿಕನಿಗೆ ಕರ್ನಾಟಕ ಸರ್ಕಾರದಿಂದ 18 ವರ್ಷವಾದರೂ ಜಮೀನು ಕೊಡದೇ ಅಲೆದಾಡಿಸುತ್ತಿದೆ.


ವರದಿ- ಮುಸ್ತಾಕ್‌ ಪೀರ್ಜಾದೆ, ಏಷ್ಯಾನೆಟ್‌ ಸುವರ್ಣ ನ್ಯೂಸ್
ಬೆಳಗಾವಿ (ಆ.08): ಆತ ದೇಶಕ್ಕಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿ ಊರಿಗೆ ಬಂದು ನೆಲೆಸಿದ ಯೋಧ. ಬಿಎಸ್‌ಎಫ್ ನಲ್ಲಿ 27 ವರ್ಷಗಳ ಕಾಲ ತನ್ನ ಕುಟುಂಬ ಊರು ಬಿಟ್ಟು ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ ವಾಪಸ್ ಆಗಿದ್ದಾನೆ. ಸರ್ಕಾರದ ನಿಯಮಾವಳಿ ಪ್ರಕಾರ ಜಮೀನಿಗಾಗಿ ಅರ್ಜಿ ಸಲ್ಲಿಸಿ ಬರೋಬ್ಬರಿ 18 ವರ್ಷಗಳೇ ಕಳೆದಿವೆ. ಕಚೇರಿ ಕಚೇರಿ ಅಲೆದಾಡಿ ಸುಸ್ತಾಗಿದ್ದ ಆ ಮಾಜಿ ಸೈನಿಕ ಹೈಕೋರ್ಟ್ ಮೆಟ್ಟಿಲೇರಿದ್ದ. ಈಗ ಹೈಕೋರ್ಟ್ ತೀರ್ಪು ನೀಡಿದರೂ ಈ ಮಾಜಿ ಸೈನಿಕನಿಗೆ ಜಮೀನು ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. 

ಹೌದು, ಹೀಗೆ ಸರ್ಕಾರಿ ಕಚೇರಿ ಕಚೇರಿ ಅಲೆದಾಡುತ್ತಿರುವ ವ್ಯಕ್ತಿಯ ಹೆಸರು ಭರತ್ ಕುರಣೆ ಅಂತಾ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ನಿವಾಸಿ. 27 ವರ್ಷಗಳ ಕಾಲ ಬಿಎಸ್‌ಎಫ್ ನಲ್ಲಿ ಯೋಧನಾಗಿ ಕಾರ್ಯನಿರ್ವಹಿಸಿ ತಾಯ್ನಾಡಿಗೆ ಮರಳಿದ್ದಾರೆ. ತನ್ನ ಕುಟುಂಬ ಸ್ವಂತ ಊರು, ಸಂಬಂಧಿಕರನ್ನು ಬಿಟ್ಟು ದೇಶದ ವಿವಿಧೆಡೆ 27 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಂದ ಇವರು ನಿಯಮಾನುಸಾರ ಸರ್ಕಾರಿ ಜಮೀನಿಗಾಗಿ ರಾಯಬಾಗ ತಹಶಿಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. 2005ರಲ್ಲಿ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡಲಿಲ್ಲವಂತೆ. ಬಳಿಕ 2013ರಲ್ಲೂ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ಕಿವಿಗೊಡದೇ ಇದ್ದಾಗ ಕೋರ್ಟ್ ಮೊರೆ ಹೋಗಿದ್ದರಂತೆ. ಭರತ್ ಕುರಣೆ ಒಬ್ಬರೇ ಅಲ್ಲ ಇವರ ಜೊತೆ ರಾಯಬಾಗ ತಾಲೂಕಿನ ಇಬ್ಬರು ಮಾಜಿ ಯೋಧರೂ ಸೇರಿ ಕೋರ್ಟ್ ಮೆಟ್ಟಿಲೇರಿದ್ದಾರೆ. 

Tap to resize

Latest Videos

ಬೆಂಗಳೂರು ಸುರಂಗ ರಸ್ತೆಗೆ ಗ್ಲೋಬಲ್‌ ಟೆಂಡರ್‌ ಕರೆದ ಸರ್ಕಾರ: ಅಪ್ಡೇಟ್‌ ಮಾಹಿತಿ ಕೊಟ್ಟ ಡಿ.ಕೆ. ಶಿವಕುಮಾರ್

ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದ ವಿಠ್ಠಲ ಹುಟ್ಟಿ, ಚಿಂಚಲಿಯ ಸುಭಾಸ್ ಪೋಲ್ ಎಂಬುವರು ಸಹ ನ್ಯಾಯಾಲಯದ ಮೊರೆ ಹೋಗಿದ್ದರು. ಜಮೀನು ನೀಡುವಂತೆ ಹೈಕೋರ್ಟ್ ಧಾರವಾಡ ಪೀಠ ಆದೇಶ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ವಂತೆ. ಇನ್ನು ರಾಯಬಾಗ ತಹಶಿಲ್ದಾರ್ ಕಚೇರಿಗೆ ಅಲೆದಾಡಿ ಅಲೆದಾಡಿ ಸುಸ್ತಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಿಂಚಲಿ ಗ್ರಾಮದ ನಿವಾಸಿ ಮಾಜಿ ಯೋಧ ಭರತ್ ಕುರಣಿ ಆರೋಪಿಸಿದ್ದಾರೆ. ಬೆಳಗಾವಿ ಜಿಲ್ಲಾಡಳಿತ, ರಾಯಬಾಗ ತಹಶಿಲ್ದಾರ್ ವಿರುದ್ಧ ಮಾಜಿ ಯೋಧ ಭರತ್ ಕುರಣಿ ಆಕ್ರೋಶ ವ್ಯಕ್ತಪಡಿಸಿದ್ದು, '2005 ಹಾಗೂ 2013ರಲ್ಲಿ ಜಮೀನಿಗಾಗಿ ಅರ್ಜಿ ಸಲ್ಲಿಸಿದಾಗ ಸ್ಪಂದನೆ ಸಿಗಲಿಲ್ಲ. 

2021ರಲ್ಲಿ ಸರ್ಕಾರ ಹೊರಡಿಸಿದ ಸುತ್ತೋಲೆ ಪ್ರಕಾರ ಅರ್ಜಿ ಹಾಕಿ ಕೋರ್ಟ್‌ ಮೊರೆ ಹೋದೆ. ಧಾರವಾಡ ಹೈಕೋರ್ಟ್ ಪೀಠದಲ್ಲಿ ‌ನನ್ನ ಪರ ಆದೇಶ ಬಂತು. ಬಳಿಕವೂ ಅಧಿಕಾರಿಗಳು ಜಮೀನು ನೀಡಲು ಬರಲ್ಲ ಅಂತಾ ಹೇಳಿದರು. 2022ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಹಾಕಿದೆ, ಆಗ ಜಮೀನು ಕೊಡೋದಾಗಿ ಅಧಿಕಾರಿಗಳು ಹೇಳಿದ್ದರು. ಆಗಿನ ತಹಶಿಲ್ದಾರ್ ಸ್ಪಂದನೆ ಮಾಡದೇ ಇದ್ದಾಗ ಮತ್ತೆ ಕೋರ್ಟ್ ಮೊರೆ ಹೋದೆ. ಎರಡು ತಿಂಗಳಲ್ಲಿ ಜಮೀನು ನೀಡಿ 25 ಸಾವಿರ ದಂಡ ನೀಡುವಂತೆ ಕೋರ್ಟ್ ಆದೇಶಿಸಿದೆ. ಫೆಬ್ರವರಿಯಲ್ಲಿ ಧಾರವಾಡ ಹೈಕೋರ್ಟ್ ಪೀಠ ತೀರ್ಪು ನೀಡಿದ್ದು ಅದರ ಪ್ರತಿಯೂ ನನ್ನ ಬಳಿ ಇದೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 

ಕೋರ್ಟ್ ಆದೇಶದಂತೆ ಜಮೀನು ನೀಡಲಿ ಎಂದು ನಾನು ಮನವಿ ಮಾಡುವೆ‌. 27 ವರ್ಷ ಬಿಎಸ್‌ಎಫ್‌ನಲ್ಲಿ ದೇಶದೆಲ್ಲೆಡೆ ಸೇವೆ ಸಲ್ಲಿಸಿ ಬಂದಿದ್ದೇನೆ‌. ನನಗೆ ನಾಲ್ಕು ಮಂದಿ ಮಕ್ಕಳಿದ್ದಾರೆ, ನನ್ನ ಬಳಿ ಜಮೀನು ಇಲ್ಲ. ಸರ್ಕಾರಿ ಪಡ ಇದ್ದಿದ್ದನ್ನು ಗೈರಾಣು ಜಮೀನು ಮಾಡಿದಾಗ ಕೋರ್ಟ್‌‌ನಲ್ಲಿ ತಕರಾರು ಸಲ್ಲಿಸಿದ್ದೆವು‌‌. 2005ರಿಂದ ಜಮೀನಿಗಾಗಿ ಪರದಾಡುತ್ತಿದ್ದು ಈಗ ಇಲ್ಲಿಗೆ ಬಂದು ನಿಂತಿದೆ. ಫೆಬ್ರವರಿ 24ರಂದೇ ನ್ಯಾಯಾಲಯದಲ್ಲಿ ಆದೇಶವಾಗಿದೆ, ಆದೇಶ ಪ್ರತಿ ತರಲು ನಮಗೂ ತಡವಾಯಿತು. ಕೋರ್ಟ್ ಆದೇಶ ಪ್ರಕಾರ ಕ್ರಮ ಕೈಗೊಳ್ಳಲಿ' ಎಂದು ಆಗ್ರಹಿಸಿದ್ದಾರೆ.

ಕಲುಷಿತ ನೀರು ಪೂರೈಕೆಯಿಂದ 6 ಜನರ ಬಲಿ ಪಡೆದ ಕವಾಡಿಗರಹಟ್ಟಿ: ಈಗಿನ ಸ್ಥಿತಿ ನೋಡಿ..

ಇನ್ನು ಮಾಜಿ ಯೋಧನ ಸಮಸ್ಯೆ ಬಗ್ಗೆ ರಾಯಬಾಗ ತಹಶಿಲ್ದಾರ್ ಸುರೇಶ್ ಮುಂಜೆರನ್ನು ಕೇಳಿದ್ರೆ ತಾವು ಈಗ ಹೊಸದಾಗಿ ರಾಯಬಾಗ ತಹಶಿಲ್ದಾರ್ ಆಗಿ ನೇಮಕಗೊಂಡಿದ್ದು. ಈ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇ‌ನೆ ಎನ್ನುವ ಮೂಲಕ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. ಅದೇನೇ ಇರಲಿ ದೇಶಕ್ಕಾಗಿ ಕುಟುಂಬ ತೊರೆದು ಸೇವೆ ಸಲ್ಲಿಸಿದ ಯೋಧನ ನೆರವಿಗೆ ಸರ್ಕಾರ ಧಾವಿಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.

click me!