ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಸರ್ಕಾರದಿಂದ ಸಮಿತಿ ರಚನೆ, ಆಂಧ್ರಕ್ಕೆ ಹೊರಟ ಅಧ್ಯಯನ ತಂಡ

Published : Aug 02, 2025, 09:02 PM IST
tulunadu  AI Image

ಸಾರಾಂಶ

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿ ಆಂಧ್ರಪ್ರದೇಶದಲ್ಲಿ ಅನುಸರಿಸಿದ ಮಾದರಿಯನ್ನು ಅಧ್ಯಯನ ಮಾಡಿ ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದೆ.  

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳ ಬಗ್ಗೆ ಆಂಧ್ರಪ್ರದೇಶ ರಾಜ್ಯಕ್ಕೆ ತೆರಳಿ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಸಹಿತ ಐದು ಮಂದಿಯ ತಂಡವನ್ನು ಎರಡನೇ ಭಾಷೆಯನ್ನು ಅಧಿಕೃತ ಭಾಷೆ ಎಂದು ಘೋಷಿಸಲು ಅನುಸರಿಸಿರುವ ಮಾನದಂಡಗಳ ಅಧ್ಯಯನ ಮಾಡುವ ಸಲುವಾಗಿ ರಚನೆ ಮಾಡಲಾಗಿದೆ. ಆಂಧ್ರ ಪ್ರದೇಶಕ್ಕೆ ಅಧ್ಯಯನ ನಡೆಸಲು ನಿಯೋಜಿಸಿರುವ ಸಮಿತಿಯ ಅಧ್ಯಕ್ಷರಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕ ಗಾಯಿತ್ರಿ ಅವರು ನಿಯೋಜಿತರಾಗಿದ್ದು, ಕಾನೂನು ಇಲಾಖೆಯ ಉಪಕಾರ್ಯದರ್ಶಿ ವನಿತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪಕಾರ್ಯದರ್ಶಿ ಮೂರ್ತಿ ಕೆ.ಎನ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯರಾದ ಸುಧಾಕರ ಶೆಟ್ಟಿ ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಈ ಹಿಂದೆ ಆಂಧ್ರಪ್ರದೇಶದಲ್ಲಿ ಅಲ್ಲಿನ ಇತರ ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಅಂಗೀಕಾರ ಮಾಡಿರುವ ಬಗ್ಗೆ ಮಾಹಿತಿಯನ್ನು ತರಿಸಿಕೊಳ್ಳಲಾಗಿತ್ತು. ಇದೀಗ ಆಂಧ್ರಪ್ರದೇಶದಲ್ಲಿ ಎರಡನೇ ಭಾಷೆಯನ್ನು ಯಾವ ಸ್ವರೂಪ, ಪ್ರಮಾಣದಲ್ಲಿ ಅಧಿಕೃತ ಭಾಷೆ ಎಂದು ಜಾರಿಗೊಳಿಸಲಾಗಿದೆ ಎಂಬುದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸರ್ಕಾರ ಈ ಸಮಿತಿಯನ್ನು ರಚಿಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಆದೇಶಿಸಿದೆ.

ತುಳು ಇತಿಹಾಸ:

ಸುಮಾರು 10ನೇ ಶತಮಾನದಲ್ಲಿ ತುಳು ಬ್ರಾಹ್ಮಣರು ದಕ್ಷಿಣ ಭಾರತದ ಭಾಗಗಳಲ್ಲಿ ತಿಗಳಾರಿ ಲಿಪಿ ಎಂಬ ಬ್ರಾಹ್ಮಿ ಆಧಾರಿತ ಲಿಪಿಯನ್ನು ಬಳಸಿ ಬರೆಯುತ್ತಿದ್ದರು. ಈ ಲಿಪಿಯು ತುಳುನಾಡಿನಲ್ಲಿ ವಿಶಿಷ್ಟವಾಗಿ ಬಳಕೆಯಲ್ಲಿದ್ದು, ಅದನ್ನು ತುಳು ಲಿಪಿ ಎಂಬ ಹೆಸರಿನಿಂದಲೂ ಪರಿಚಯಿಸಲಾಗಿತ್ತು. ಹೆಚ್ಚಾಗಿ ಸಂಸ್ಕೃತ ಶ್ಲೋಕಗಳನ್ನು ಬರೆಯಲು ಈ ಲಿಪಿಯನ್ನು ಉಪಯೋಗಿಸುತ್ತಿದ್ದರು. ಆದರೆ, ಲಿಪಿಯ ಬಳಕೆ ಹೆಚ್ಚಾಗದ ಕಾರಣದಿಂದಾಗಿ ಕಾಲಕ್ರಮೇಣ ಈ ಲಿಪಿಯ ಉಪಯೋಗ ನಶಿಸುತ್ತಾ ಹೋಗಿತು. ಇತ್ತೀಚಿನ ದಿನಗಳಲ್ಲಿ ಈ ಪುರಾತನ ಲಿಪಿಯ ಪುನರುಜ್ಜೀವನಕ್ಕಾಗಿ ವಿವಿಧ ಮಟ್ಟಗಳಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ತಿಗಳಾರಿ ಲಿಪಿಯು ಹಲವಾರು ಅಂಶಗಳಲ್ಲಿ ಮಲೆಯಾಳಂ ಲಿಪಿಗೆ ಹೋಲಿಕೆಯಿರುವುದು ವಿಶೇಷ.

ಇಂದಿನ ಕಾಲದಲ್ಲಿ ತುಳು ಭಾಷೆಯನ್ನು ಬರೆಯಲು ಸಾಮಾನ್ಯವಾಗಿ ಕನ್ನಡ ಲಿಪಿಯನ್ನೇ ಉಪಯೋಗಿಸಲಾಗುತ್ತದೆ. ಆದರೆ, ಮಾಧ್ವ ಪರಂಪರೆಯ ತಿಗಳಾರಿ ಬ್ರಾಹ್ಮಣರು ರಚಿಸಿರುವ ಸರ್ವಮೂಲ ಗ್ರಂಥಗಳು ಮೂಲ ತುಳು ಲಿಪಿಯಲ್ಲಿ ಲಭ್ಯವಿದ್ದು, ಇವುಗಳಿಗೆ ಸುಮಾರು 700 ವರ್ಷಗಳ ಇತಿಹಾಸವಿದೆ. ಈ ಪುರಾತನ ಗ್ರಂಥಗಳು ತುಳು ಭಾಷೆಯ ನಿಜವಾದ ಮೂಲ ಲಿಪಿಯನ್ನು ಪತ್ತೆಹಚ್ಚಲು ಇಂದು ಮಹತ್ವವಾಗಿ ಸಹಾಯವಾಗುತ್ತಿವೆ.

ತುಳು ಭಾಷೆ ಪಂಚ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದೆ. ಕರ್ನಾಟಕದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ಇದನ್ನು ಹೆಚ್ಚಾಗಿ ಚಾಲ್ತಿಯಲ್ಲಿದೆ. ಇದು ಅಲ್ಲಿನ ವ್ಯವಹಾರಿಕ ಭಾಷೆಯೂ ಹೌದು. ತುಳು ಮಾತಾಡುವವರನ್ನು ತುಳುವರು (ತುಳುವಿನಲ್ಲಿ ತುಳುವೆರ್) ಎಂದು ಕರೆಯುತ್ತಾರೆ.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ