
ದಕ್ಷಿಣ ಕನ್ನಡ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Mangaluru International Airport) ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್ ನ್ಯಾಷನಲ್ (Airports Council International- ಎಸಿಐ) ವತಿಯಿಂದ ಗ್ರಾಹಕ ಅನುಭವದಲ್ಲಿ ಲೆವೆಲ್- 4 ಮಾನ್ಯತೆಯನ್ನು ಪಡೆದಿದೆ. 2024ರ ಫೆಬ್ರವರಿಯಲ್ಲಿ ಲೆವೆಲ್- 3 ಮಾನ್ಯತೆ ಪಡೆದಿರುವ ಮಂಗಳೂರು ಏರ್‌ಪೋರ್ಟ್ ಇದೀಗ ಮುಂದಿನ ಹಂತದ ಮಾನ್ಯತೆ ಪಡೆದಿದೆ.
ಈ ಮಾನ್ಯತೆಯನ್ನು ಎಸಿಐ ಜುಲೈ 16ರಂದು ನೀಡಿದ್ದು, ಒಂದು ವರ್ಷದ ಅವಧಿಗೆ ಮಾನ್ಯವಾಗಿದೆ. ಮುಂದಿನ ಹಂತದಲ್ಲಿ ಲೆವೆಲ್-5 (ಅತ್ಯುತ್ತಮ ಶ್ರೇಣಿಯ ಮಾನ್ಯತೆ) ತಲುಪುವ ಗುರಿ ಹೊಂದಲಾಗಿದೆ.
ಈ ಮಾನ್ಯತೆಯು ವಿಮಾನ ನಿಲ್ದಾಣದ ಸಂಸ್ಕೃತಿ, ಆಡಳಿತ, ಕಾರ್ಯಾಚರಣೆಗಳ ಸುಧಾರಣೆ, ಗ್ರಾಹಕ ಸ್ನೇಹಿ ಸೇವೆಗಳು ಇತ್ಯಾದಿ ಅಂಶಗಳನ್ನು ಮೌಲ್ಯಮಾಪನ ಮಾಡುತ್ತದೆ. ಕಳೆದ ಒಂದು ವರ್ಷದಲ್ಲಿ ಮಂಗಳೂರು ವಿಮಾನ ನಿಲ್ದಾಣವು ತಂತ್ರಜ್ಞಾನ ಆಧಾರಿತ ನಾವೀನ್ಯತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿತ್ತು. ಈ ಪ್ರಯತ್ನಗಳ ಫಲವಾಗಿ ಪ್ರಯಾಣಿಕರ ಪ್ರಯಾಣ ಅನುಭವ ಮತ್ತು ಕಾರ್ಯಾಚರಣೆ ಗಣನೀಯ ಸುಧಾರಣೆ ಕಂಡಿದೆ ಎಂದು ಏರ್‌ಪೋರ್ಟ್ ಆಡಳಿತ ತಿಳಿಸಿದೆ.
ರಾಜ್ಯದಲ್ಲಿರುವ ಕೇವಲ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ಏರ್ಪೋರ್ಟ್ ಕೂಡ ಒಂದಾಗಿದೆ. 73 ವರ್ಷಗಳ ಹಿಂದೆ ಇದನ್ನು ಓಪನ್ ಮಾಡಲಾಯ್ತು. ಅಂದರೆ 25 ಡಿಸೆಂಬರ್ 1951ರಲ್ಲಿ ಇದನ್ನು ತೆರೆಯಲಾಯ್ತು. ರಾಜ್ಯದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ದೇಶೀಯ ತಾಣಗಳ ಜೊತೆಗೆ, ಮಧ್ಯಪ್ರಾಚ್ಯದ ಪ್ರಮುಖ ನಗರಗಳಿಗೆ ಪ್ರತಿದಿನ ವಿಮಾನಗಳು ಹೊರಡುತ್ತವೆ . ಇದು ಬೆಟ್ಟದ ತುದಿಯಲ್ಲಿದ್ದು, ಎರಡು ಟೇಬಲ್‌ಟಾಪ್ ರನ್‌ವೇಗಳನ್ನು ಹೊಂದಿರುವ ರಾಜ್ಯದ ಏಕೈಕ ವಿಮಾನ ನಿಲ್ದಾಣವಾಗಿದೆ. ಭಾರತದಲ್ಲಿನ ಇತರ ಎರಡು ಟೇಬಲ್‌ಟಾಪ್ ರನ್‌ವೇ ಹೊಂದಿರುವ ವಿಮಾನ ನಿಲ್ದಾಣಗಳೆಂದರೆ ಕೇರದ ಕೋಝಿಕ್ಕೋಡ್ ಮತ್ತು ಮಿಜೋರಾಂ ನ ಲೆಂಗ್‌ಪುಯಿ .