
ಬೆಳ್ತಂಗಡಿ (ಆ.2): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ತಾನು ಮೇಲಿನವರ ಸೂಚನೆಯ ಮೇರೆಗೆ ಹೂತುಹಾಕಿದ್ದೇನೆ ಎಂದು ಅನಾಮಿಕ 'ಭೀಮ' ವ್ಯಕ್ತಿ ನೀಡಿದ್ದ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ನೇಮಿಸಿದೆ. ಕಳೆದ ಐದು ದಿನಗಳಿಂದ ದೂರುದಾರ ಸೂಚಿಸಿದ 13 ಸ್ಥಳಗಳಲ್ಲಿ ಹೂತುಹಾಕಿದ್ದ ಶವಗಳನ್ನು ತೆಗೆಯುವ ಪ್ರಯತ್ನ ಮಾಡಲಾಗಿದೆ. ಬಹುತೇಕ ಆತ ತೋರಿಸಿದ್ದ ಎಲ್ಲಾ ಪಾಯಿಂಟ್‌ಗಳಲ್ಲೂ ಏನೂ ಸಿಕ್ಕಿಲ್ಲ. ಒಂದು ಪಾಯಿಂಟ್‌ನಲ್ಲಿ ಮಾತ್ರವೇ ಮಾನವನ ಅದರಲ್ಲೂ ಪುರುಷರ ಮೂಳೆಗಳು ಸಿಕ್ಕಿವೆ.
ಹೀಗಿರುವಾಗ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಹೊಸ ದೂರದಾರನ ಆಗಮನವಾಗಿದೆ. ಸಾಮಾಜಿಕ ಹೋರಾಟಗಾರ ಇಚಿಲಂಪಾಡಿ ನಿವಾಸಿ ಜಯನ್ ಟಿ, ಎಸ್‌ಐಟಿ ಕಚೇರಿಗೆ ಆಗಮಿಸಿ ಹೊಸ ದೂರು ನೀಡಿದ್ದಾರೆ. ಜಯಂತ್ ಟಿ ಸೌಜನ್ಯ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು. 15 ವರ್ಷಗಳ ಹಿಂದೆ ಹೆಣ್ಣು ಮಗಳ ಅನುಮಾನಾಸ್ಪದ ಸಾವಿನ ಬಗ್ಗೆ ದೂರು ನೀಡಲು ಅವರು ಆಗಮಿಸಿದ್ದಾರೆ.
ಸಾವಿಗೀಡಾದ 15 ವರ್ಷದ ಬಾಲಕಿಯನ್ನ ಹೂತು ಹಾಕಲಾಗಿದೆ. ಕಾನೂನು ಪ್ರಕ್ರಿಯೆ ನಡೆಸದೇ ಆ ಬಾಲಕಿಯ ಶವ ಹೂತು ಹಾಕಲಾಗಿದೆ. ಹೂತು ಹಾಕಿದ ಜಾಗ ಗೊತ್ತಿದೆ, ನಾನು ಅದಕ್ಕೆ ಪ್ರತ್ಯಕ್ಷದರ್ಶಿ. ನನಗೆ ಈಗಲೂ ಆ ಜಾಗ ಗೊತ್ತು, ಎಸ್ಐಟಿ ಅಧಿಕಾರಿಗಳು ಅನುಮತಿ ಕೊಟ್ಟರೆ ಅದನ್ನು ತೋರಿಸುತ್ತೇನೆ.
ಅದು ಕೊಲೆಯೋ ಮತ್ತೊಂದೋ ಗೊತ್ತಿಲ್ಲ, ಆದರೆ ಶವ ಸ್ವಲ್ಪ ಕೊಳೆತಿತ್ತು. ಕಾನೂನು ಪ್ರಕ್ರಿಯೆ ಮಾಡದೇ ಧರ್ಮಸ್ಥಳ ಗ್ರಾಮದಲ್ಲಿ ಹೂಳಲಾಗಿದೆ. ಎಸ್ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದೇನೆ, ಸೋಮವಾರ ಬರಲು ಹೇಳಿದ್ದಾರೆ ಎಂದು ಜಯಂತ್ ತಿಳಿಸಿದ್ದಾರೆ.
ಈ ಬಗ್ಗೆ ನಾನು ಎಲ್ಲಾ ಸಾಕ್ಷಿ ಇಟ್ಟುಕೊಂಡೇ ಆರೋಪ ಮಾಡುತ್ತಿದ್ದೇನೆ. ನನ್ನ ಕುಟುಂಬದ ಪದ್ಮಲತಾ ಕೊಲೆಯಾದಾಗ ನಮಗೆ ನ್ಯಾಯ ಸಿಕ್ಕಿಲ್ಲ. ವ್ಯವಸ್ಥೆ ಮೇಲೆ ನಂಬಿಕೆ ಇರದ ಕಾರಣಕ್ಕೆ ಆಗ ಯಾವುದೇ ದೂರು ಕೊಟ್ಟಿರಲಿಲ್ಲ. ಈಗ ನಾನು ಎಸ್ಐಟಿ ಮೇಲೆ ನಂಬಿಕೆ ಬಂದು ದೂರು ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇಂದೂ ಸಿಗದ ಕಳೇಬರ: ಮುಸುಕುಧಾರಿ ದೂರುದಾರ ಗುರುತಿಸಿದ ಸ್ಥಳದಲ್ಲಿ ಉತ್ಖನನ ಕಾರ್ಯಾಚರಣೆ ತೀವ್ರಗೊಂಡಿದೆ. ಐದನೇ ದಿನದ ಕಾರ್ಯಾಚರಣೆಗೆ ಮಳೆ ಅಡ್ಡಿಪಡಿಸಿದ್ದು, 9 ಹಾಗೂ 10ನೇ ಪಾಯಿಂಟ್‌ಅನ್ನು ಅಗೆಯಲಾಗಿದೆ. 9ನೇ ಪಾಯಿಂಟ್‌ನಲ್ಲಿ ಕನಿಷ್ಠ ಮೂರು ಶವಗಳಾದರೂ ಸಿಗಲಿದೆ ಎಂದು ದೂರುದಾರ ಹೇಳಿದ್ದ. ಆದರೆ, 9 ಪಾಯಿಂಟ್‌ನಲ್ಲಿ ಎಷ್ಟೇ ಅಗೆದರೂ ಒಂದೂ ಕಳೇಬರ ಪತ್ತೆಯಾಗಿಲ್ಲ. ಇದರಿಂದಾಗಿ ಮಧ್ಯಾಹ್ನದ ಬಳಿಕ 10ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆದಿದೆ. ಅಲ್ಲೂ ಕೂಡ ಯಾವುದೇ ಕಳೇಬರ ಸಿಕ್ಕಿಲ್ಲ. ಇನ್ನು ದೂರುದಾರ ಗುರುತು ಮಾಡಿದ 3 ಪಾಯಿಂಟ್‌ಗಳು ಮಾತ್ರವೇ ಬಾಕಿ ಉಳಿದಿದೆ.
ನಾಳೆ ಭಾನುವಾರವಾಗಿರುವ ಕಾರಣ ಕಾರ್ಯಾಚರಣೆ ನಡೆಸಯುವುದು ಅನುಮಾನವಾಗಿದೆ. ಇಲ್ಲಿಯವರೆಗಿನ ಕಾರ್ಯಾಚರಣೆಯಲ್ಲಿ 6ನೇ ಪಾಯಿಂಟ್‌ನಲ್ಲಿ ಮಾತ್ರವೇ ಕಳೇಬರ ಪತ್ತೆಯಾಗಿತ್ತು.