
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜು.08): ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡಿಕೊಂಡಿದ್ದ ಗಜರಾಜ ಅಚಾನಕ್ಕಾಗಿ ಕಾಡಿನಿಂದ ನಾಡಿನ ಕಡೆಗೆ ಬಂದಿದ್ದ. ರಾತ್ರಿ ಬಂದವನು ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದ. ಹೀಗೆ ಬಿದ್ದು ಬರೋಬ್ಬರಿ ಎರಡು ದಿನಗಳ ಕಾಲ ನೀರಿನಲ್ಲಿ ಜೀವನ್ಮರಣದ ಮಧ್ಯೆ ಹೋರಾಡಿದ ಕರುಣಾಜನಕ ಕಥೆ ಇಲ್ಲಿದೆ. ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವನ ಸಂಘರ್ಷ ಮಿತಿ ಮೀರಿದೆ. ಆದರೆ ಯಾವುದೇ ವನ್ಯ ಜೀವಿಗಳು ತೊಂದರೆಗೆ ಸಿಲುಕಿದಾಗ ಅವುಗಳು ಕಂಡು ಕೊಡಗಿನ ಜನರು ಮಮ್ಮಲ ಮರುತ್ತಾರೆ ಎನ್ನುವುದಕ್ಕೆ ಇದೊಂದು ಘಟನೆ ಸಾಕ್ಷಿಯಾಯಿತು.
ಹೌದು ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದಲ್ಲಿರುವ ಕನ್ನಂಬಾಡಿ ಎಂಬ ಗ್ರಾಮದಲ್ಲಿ ಕಾಡಾನೆಯೊಂದು ಗ್ರಾಮದತ್ತ ಬಂದು ಆಕಸ್ಮಿಕವಾಗಿ ಕೆರೆಗೆ ಬಿದ್ದಿತ್ತು. ಹೀಗೆ ಕೆರೆಗೆ ಬಿದ್ದ ಕಾಡಾನೆಗೆ ಮೇಲೆ ಬರಲಾರದೆ ಸಂಕಷ್ಟಕ್ಕೆ ಸಿಲುಕಿ ಜೀವನ್ಮರಣದ ಮಧ್ಯೆ ಪರದಾಡುವಂತೆ ಆಗಿತ್ತು. ಕೆರೆಯಲ್ಲಿ ಸಂಪೂರ್ಣ ಕೆಸರು ತುಂಬಿದ್ದರಿಂದ ಅದರಿಂದ ಮೇಲೆ ಬರಲಾರದಂತೆ ಕಾಡಾನೆ ಒದ್ದಾಡಿತ್ತು. ಇದರಿಂದ ನಿನ್ನೆ ಬೆಳಿಗ್ಗೆ ಕಾಡಾನೆ ಕೆರೆಯಲ್ಲಿ ಇರುವುದನ್ನು ಸ್ಥಳೀಯರು ಗಮನಿಸಿದ್ದರು. ಆರಂಭದಲ್ಲಿ ಕೆರೆಯಲ್ಲಿ ಈಜಾಡುತ್ತಿರಬಹುದು. ತಾನೆ ಮೇಲೆ ಬಂದು ಹೋಗಬಹುದು ಎಂದು ಎಣಿಸಿ ಜನರು ಸುಮ್ಮನಿದ್ದರು.
ಆದರೆ ನಿನ್ನೆ ಮಧ್ಯಾಹ್ನವಾದರೂ ಕಾಡಾನೆ ಮೇಲೆ ಬಾರದಿದ್ದಾಗ ಅದು ಅಪಾಯಕ್ಕೆ ಸಿಲುಕಿದೆ ಎಂದರಿತು ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ವಿಪರ್ಯಾಸವೆಂದರೆ ನಿನ್ನೆಯೇ ಮಾಹಿತಿ ನೀಡಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇಂದು ಮಧ್ಯಾಹ್ನವಾದರೂ ಅದನ್ನು ರಕ್ಷಿಸುವುದಕ್ಕೆ ಮುಂದಾಗಲಿಲ್ಲ. ಯಾವುದೇ ಅಧಿಕಾರಿ ಕನಿಷ್ಠ ಅತ್ತ ತಿರುಗಿ ನೋಡಲಿಲ್ಲ. ಇತ್ತ ಆನೆ ಸಮಯವಾದಂತೆಲ್ಲಾ ನಿತ್ರಾಣಗೊಳ್ಳುತ್ತಾ ಹೋಗಿತ್ತು. ಇಷ್ಟೊಂದು ಹೇಳಿದರೂ ಯಾರೂ ಕಾಡಾನೆಯನ್ನು ರಕ್ಷಿಸುವುದಕ್ಕೆ ಬಾರಲಿಲ್ಲವಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಇಂತಹ ಪ್ರಕರಣ ನಡೆಯುತ್ತಲೇ ಇರುತ್ತವೆ. ಕಾಡಿನಲ್ಲಿ ಅವುಗಳಿಗೆ ಸರಿಯಾದ ಆಹಾರ ನೀರು ಸಿಗದಿದ್ದಾಗ ನಾಡಿನತ್ತ ಬರುತ್ತವೆ. ಬಂದು ಹೀಗೆ ಸಮಸ್ಯೆಯಲ್ಲಿ ಸಿಲುಕುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಹತ್ತು ಪ್ರಕರಣಗಳು ನಡೆದಾಗ ಅರಣ್ಯ ಇಲಾಖೆ ಗಮನಕ್ಕೆ ತಂದರೆ ಅವುಗಳಲ್ಲಿ ನಾಲ್ಕೈದು ಪ್ರಕರಣಗಳನ್ನ ಮಾತ್ರ ಪರಿಶೀಲಿಸುತ್ತಾರೆ. ಉಳಿದಂತೆ ಸುಮ್ಮನಾಗುತ್ತಾರೆ ಎಂದು ಪರಿಸರವಾದಿಗಳು, ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೀಗೆ ಎರಡು ದಿನಗಳ ಕಾಲ ನೀರಿನಲ್ಲಿಯೇ ಪರದಾಡಿದ ಕಾಡಾನೆ ಕನಿಷ್ಠ ಸೊಂಡಿಲನ್ನು ಮೇಲೆತ್ತಲಾಗದೆ ಪರದಾಡುತಿತ್ತು. ಎಲ್ಲರೂ ಈ ಕಾಡಾನೇ ಬದುಕುವುದಿಲ್ಲ ಎನ್ನುವ ಆತಂಕದಲ್ಲಿಯೇ ಮರುಗುತ್ತಿದ್ದರು. ಅರಣ್ಯ ಬದಿಗಳಲ್ಲಿ ತೋಟ ಹೊಂದಿರುವ ರೈತರು ತಮ್ಮ ತೋಟಗಳಲ್ಲಿ ಕಾಫಿಗಿಡ ನೆಟ್ಟರೆ ಬಂದು ಗಲಾಟೆ ಮಾಡುತ್ತಾರೆ. ಗಿಡಗಳನ್ನು ಕಿತ್ತೆಸೆದು ಪ್ರಕರಣ ದಾಖಲಿಸುತ್ತಾರೆ. ಆದರೆ ಕಾಡಾನೆಯೊಂದು ಕೆರೆಗೆ ಬಿದ್ದು ಎರಡು ದಿನಗಳಾದರೂ ಅದನ್ನು ರಕ್ಷಿಸಲು ಮುಂದಾಗಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಇಂದು ಮಧ್ಯಾಹ್ನದವರೆಗೆ ಕೆರೆಯಲ್ಲಿ ಇದ್ದ ಕಾಡಾನೆ ತಾನಾಗಿಯೇ ಕೆರೆ ಬಿಟ್ಟು ಮೇಲೆ ಬಂದಿದೆ. ಈ ಕುರಿತು ದೂರುವಾಣಿ ಮೂಲಕ ಪ್ರತಿಕ್ರಿಯಿಸಿರುವ ಅರಣ್ಯ ಅಧಿಕಾರಿಗಳು ಆನೆಗಳು ಆರೋಗ್ಯದಲ್ಲಿ ಸಮಸ್ಯೆಯಾಗಿ ನಿತ್ರಾಣಗೊಂಡಾಗ ತಮ್ಮ ದೇಹದ ಭಾರವನ್ನು ತಾಳಲಾರದೆ ಕೆರೆಗೆ ಇಳಿದು ರೆಸ್ಟ್ ಮಾಡುತ್ತವೆ. ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದ್ದಂತೆ ಅವುಗಳೇ ಮೇಲೆ ಹೋಗುತ್ತವೆ ಎಂದಿದ್ದಾರೆ. ಕಾಡಾನೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೇಲೆ ಬರಲು ಹೋರಾಡಿ ಆಗಲಾರದೆ ಒದ್ದಾಡಿತೋ, ಇಲ್ಲ ಆರೋಗ್ಯದಲ್ಲಿ ಸಮಸ್ಯೆ ಆಗಿ ಕೆರೆಗೆ ಇಳಿದು ಸುಧಾರಿಸಿಕೊಂಡಿತೋ ಏನೋ. ಏನೆ ಆಗಲಿ ಆನೆ ಮಾತ್ರ ಕೆರೆಯಿಂದ ಮೇಲೆ ಬಂದು ಸುಖಾಂತ್ಯ ಕಂಡಿದ್ದು ಮಾತ್ರ ಎಲ್ಲರಿಗೂ ಸಂತಸ ತಂದಿದೆ.