ಬೆಂಗಳೂರಿನ ಪಟಾಕಿ ಮಳಿಗೆಯಲ್ಲಿ ಶನಿವಾರ ಸಂಜೆ 14 ಕಾರ್ಮಿಕರ ಸಾವಿನ ಬೆನ್ನಲ್ಲಿಯೇ, ರಾಜ್ಯದ ವಿವಿಧೆಡೆ ಭಾನುವಾರ 4 ಬೆಂಕಿ ಅವಘಡಗಳಲ್ಲಿ ನಾಲ್ವರು ಸಜೀವ ದಹನ ಆಗಿದ್ದಾರೆ.
ಶಿವಮೊಗ್ಗ/ಮಂಡ್ಯ/ ಕೊಡಗು (ಅ.08): ರಾಜ್ಯದ ವಿವಿಧೆಡೆ ನಿನ್ನೆಯಿಂದ ಭಾರಿ ಬೆಂಕಿ ಅವಘಡಗಳು ಸಂಭವಿಸುತ್ತಿವೆ. ರಾಜಧಾನಿ ಬೆಂಗಳೂರಿನ ಆನೇಕಲ್ ಬಳಿ ಪಟಾಕಿ ಮಳಿಗೆಗೆ ಬೆಂಕಿ ಹೊತ್ತಿಕೊಂಡು 14 ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಈ ಘಟನೆಯ ಬೆನ್ನಲ್ಲೇ ಭಾನುವಾರ ನಾಲ್ಕು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಿವಮೊಗ್ಗ, ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ಒಟ್ಟು ನಾಲ್ಕು ಬೆಂಕಿ ಪ್ರಕರಣಗಳು ವರದಿಯಾಗಿವೆ.
ಭಾನುವಾರ ಬೆಳಗ್ಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅರಳಸುರುಳಿ ಸಮೀಪದ ಗಣಪತಿ ಕಟ್ಟೆಯ ರಾಘವೇಂದ್ರ ಎಂಬವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಮೂವರು ಸಜೀವ ದಹನವಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ಹಾಲು ಒಕ್ಕೂಟದ ಮೆಗಾ ಡೈರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಕೊಡಗು ಜಿಲ್ಲೆಯಲ್ಲಿ ಖಾಸಗಿ ಶಾಲಾ ಬಸ್‌ಗೆ ಬೆಂಕಿ ಹತ್ತಿಕೊಂಡಿದೆ. ಮತ್ತೊಂದೆಡೆ ಕೊಡಗಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಬೆಂಕಿಯ ಕೆನ್ನಾಲಿಗೆಗೆ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಆನೇಕಲ್ ಪಟಾಕಿ ಮಳಿಗೆ ಬೆಂಕಿ 10 ಮಂದಿ ಸಜೀವ ದಹನ: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ
ಮಂಡ್ಯ ಮನ್‌ಮುಲ್‌ನಲ್ಲಿ ಬೆಂಕಿ ಅವಘಡ: ರಾಜ್ಯದ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಹಾಲು ಒಕ್ಕೂಟವಾದ ಮಂಡ್ಯ ಹಾಲು ಒಕ್ಕೂಟ ನಿಗಮದ (ಮನ್‌ಮುಲ್) ಮೆಗಾ ಡೈರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ತುಪ್ಪ ಹಾಗೂ ಖೋವಾ ತಯಾರಿಕಾ ಘಟಕದ ಅನೇಕ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಮಂಡ್ಯದ ಮದ್ದೂರು ಬಳಿಯ ಗೆಜ್ಜಲಗೆರೆಯ ಮನ್‌ಮುಲ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಕಳೆದ 5 ತಿಂಗಳ ಹಿಂದೆ ಉದ್ಘಾಟನೆಯಾಗಿದ್ದ ಮೆಗಾ ಡೈರಿಯಲ್ಲಿ ಇಂದು ಬೆಳಗ್ಗೆ 7 ಗಂಟೆ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತಿದೆ. ಇತ್ತೀಚೆಗೆ ಆರಂಭವಾಗಿದ್ದ ಮೆಗಾ ಡೈರಿಯ ತುಪ್ಪ ಹಾಗೂ ಖೋವಾ ತಯಾರಿಕಾ ಘಟಕಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ಮೌಲ್ಯದ ಯಂತ್ರೋಪಕರಣಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಇನ್ನು ಯಾರಿಗೂ ಪ್ರಾಣಾಪಾಯ ಆಗಿಲ್ಲ.
ಶಿವಮೊಗ್ಗದಲ್ಲಿ ಅಗ್ನಿ ಅವಘಡಕ್ಕೆ 3 ಮಂದಿ ಸಜೀವ ದಹನ: ಶಿವಮೊಗ್ಗ ಜಿಲ್ಲೆಯ ಭಾನುವಾರ ಬೆಳಗ್ಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅರಳಸುರುಳಿ ಸಮೀಪದ ಗಣಪತಿ ಕಟ್ಟೆಯ ರಾಘವೇಂದ್ರ ಎನ್ನುವವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಮೂವರು ಸಜೀವ ದಹನವಾಗಿದ್ದಾರೆ. ರಾಘವೇಂದ್ರ( 65) ನಾಗರತ್ನ (55 ) ಶ್ರೀರಾಮ್ (30) ಸಜೀವ ದಹನಗೊಂಡವರು. ಮತ್ತೋರ್ವ ಪುತ್ರ ಭರತ್ (28) ನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿ ಭರತ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಿನ ಜಾವ 5 ಗಂಟೆಗೆ ನಡೆದ ಅಗ್ನಿ ಆಕಸ್ಮಿಕ ಕಂಡುಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. ಶಿವಮೊಗ್ಗದ ಅಗ್ನಿ ದುರಂತದ ಮನೆಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದ್ದಾರೆ. ಅಗ್ನಿ ದುರಂತದ ಘಟನೆಯನ್ನು ಪರಿಶೀಲಿಸಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಸ್ಥಳೀಯ ಪೊಲೀಸರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಅತ್ತಿಬೆಲೆ ಪಟಾಕಿ ದುರಂತ 14 ಕಾರ್ಮಿಕರು ಬಲಿ, ಮೃತರಲ್ಲಿ 8 ಮಂದಿ ಒಂದೇ ಗ್ರಾಮದ ವಿದ್ಯಾರ್ಥಿಗಳು!
ಕೊಡಗು ಸಿಲಿಂಡರ್ ಸ್ಪೋಟದ ಬೆಂಕಿಗೆ ವ್ಯಕ್ತಿ ಬಲಿ: ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ತೊಂಡೂರಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ದಂಪತಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೇ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಮಡಿಕೇರಿ ರಮೇಶ್ (48) ಎಂದು ಗುರುತಿಸಲಾಗಿದೆ. ಇನ್ನು ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಪತ್ನಿ ರೂಪಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಮೃತ ರಮೇಶ್ ಕಳೆದ 8 ವರ್ಷಗಳ ಹಿಂದೆ ವಿಕಾಸ್ ಜನಸೇವಾ ಟ್ರಸ್ಟ್ ನ ಆಶ್ರಮ ಆರಂಭಿಸಿ 36 ವೃದ್ಧರಿಗೆ ಆಶ್ರಯ ನೀಡಿದ್ದರು. ಆದರೆ, ಈಗ ಅವರೇ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ್ದಾರೆ.