ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗೆ ಒಕ್ಕಲಿಗ ಜನಾಂಗದಿಂದ ನಾಲ್ವರು ಲಾಬಿ ನಡೆಸುತ್ತಿದ್ದಾರೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗೆ ಒಕ್ಕಲಿಗ ಜನಾಂಗದಿಂದ ನಾಲ್ವರು ಲಾಬಿ ನಡೆಸುತ್ತಿದ್ದಾರೆ.
undefined
ಮೈಸೂರಿನ ಚಾಮರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆ ಸ್ಪರ್ಧಿಸಿ, ಸೋತಿರುವ ಎಂಡಿಎ, ಮೈಮುಲ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ. ಬಸವೇಗೌಡ,. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ದಕ್ಷಿಣ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದಿಂದ ಮೂರು ಬಾರಿ ವಿಧಾನ ಪರಿಷತ್ತಿಗೆ, ಚಾಮರಾಜ ಕ್ಷೇತ್ರದಿಂದ ಒಮ್ಮೆ ವಿಧಾನಸಭೆಗೆ ಸ್ಪರ್ಧಿಸಿ ಸೋತಿರುವ ವಕ್ತಾರ ಎಂ. ಲಕ್ಷ್ಮಣ್, ಕಳೆದ ವರ್ಷ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಡಾ.ಸುಶ್ರುತ್- ಈ ನಾಲ್ವರು ಒಕ್ಕಲಿಗ ಕೋಟಾದಲ್ಲಿ ಟಿಕೆಟ್‌ಗೆ ಲಾಬಿ ನಡೆಸುತ್ತಿದ್ದಾರೆ.
ಇದಲ್ಲದೇ ಮೈಸೂರು ಹಾಗೂ ಕರ್ನಾಟಕ ಮುಕ್ತ ವಿವಿಯ ವಿಶ್ರಾಂತ ಕುಲಪತಿ, 2018 ರಲ್ಲಿ ಚಾಮರಾಜ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸೋತಿರುವ ಪ್ರೊ.ಕೆ.ಎಸ್. ರಂಗಪ್ಪ ಅವರು ಕೂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಾಧ್ಯವಾದಲ್ಲಿ ತಮಗೂ ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.
ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಅವರು ಕೂಡ ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧವಿರುವುದಾಗಿ ಹೇಳಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಂದೆ ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರವನ್ನು ತ್ಯಾಗ ಮಾಡಿದ ಮಾಜಿ ಶಾಸಕ ಡಾ.ಯತೀಂದ್ರ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಬೇಕು ಎಂಬ ಒತ್ತಡ ಕೇಳಿ ಬಂದಿತ್ತು. ತಂದೆಯವರು ಹಾಗೂ ಪಕ್ಷ ತೀರ್ಮಾನಿಸಿದರೆ ಸಿದ್ಧವಿರುವುದಾಗಿ ಡಾ.ಯತೀಂದ್ರ ಹೇಳಿದ್ದರು. ಆದರೆ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಹಿಂದೆ ಸರಿದಿದ್ದಾರೆ ಎಂದು ಗೊತ್ತಾಗಿದೆ.
ಕೆ.ಆರ್. ನಗರದಿಂದ ಮೂರು ಬಾರಿ ಕಾಂಗ್ರೆಸ್, ಹುಣಸೂರಿನಿಂದ ಒಂದು ಬಾರಿ ಜೆಡಿಎಸ್ ಟಿಕೆಟ್ ಮೇಲೆ ವಿಧಾನಸಭೆ ಸದಸ್ಯರಾಗಿದ್ದ, ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದ ಎಚ್. ವಿಶ್ವನಾಥ್ 2009 ರಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿದ್ದರು. 2014 ರಲ್ಲಿ ಸೋತಿದ್ದರು. ಈಗ ಬಿಜೆಪಿ ಸರ್ಕಾರ ಇದ್ದಾಗ ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶಿತರಾಗಿದ್ದರು. ಪ್ರಸ್ತುತ ಕಾಂಗ್ರೆಸ್ ಜೊತೆ ಗುರುತಿಸಿಕೊಂಡು, ಮತ್ತೊಂದು ಬಾರಿ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಬಹಿರಂಗವಾಗಿಯೇ ಕೇಳುತ್ತಿದ್ದಾರೆ.
ಇದನ್ನು ಹೊರತುಪಡಿಸಿದರೆ ಜೆ.ಜೆ. ಆನಂದ ಎಂಬವರು ಟಿಕೆಟ್ ಕೇಳುತ್ತಿದ್ದಾರೆ. ಇದನ್ನು ಪಕ್ಷ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ.
ಅದೇ ರೀತಿ ವೀರಶೈವ ಜನಾಂಗದ, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ ಕೂಡ ಟಿಕೆಟ್ ಕೇಳುತ್ತಿದ್ದಾರೆ. ಇತ್ಚೀಚೆಗೆ ಮುಖಂಡ ಗುರುಮಲ್ಲೇಶ್ ಕೂಡ ಟಿಕೆಟ್ ಕೇಳುತ್ತಿದ್ದಾರೆ.
ಒಕ್ಕಲಿಗರಿಗೆ ಟಿಕೆಟ್?
ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಸೂರು ಜಿಲ್ಲೆಗೆ ಸೇರಿದವರು. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಸವಾಲಿದೆ. ಈಗಾಗಲೇ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ ಕಳೆದೆರಡು ಬಾರಿಯು ಕ್ರಮವಾಗಿ ಕುರುಬ ಜನಾಂಗದ ಎಚ್. ವಿಶ್ವನಾಥ್ ಹಾಗೂ ಸಿ.ಎಚ್. ವಿಜಯಶಂಕರ್ ಸೋತಿದ್ದಾರೆ. ಎರಡೂ ಬಾರಿಯೂ ಪರೋಕ್ಷವಾಗಿ ಜೆಡಿಎಸ್ ಬೆಂಬಲಿಸಿತ್ತು. ಆದರೆ ಈ ಬಾರಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದರಿಂದ ಕಾಂಗ್ರೆಸ್ ಪಕ್ಷ ಕೂಡ ಒಕ್ಕಲಿಗ ಜನಾಂಗದವರನ್ನೇ ಅಭ್ಯರ್ಥಿಯನ್ನಾಗಿಸಬೇಕು. ಪಕ್ಷದ ಸಾಂಪ್ರದಾಯಿಕ ಮತಗಳ ಜೊತೆಗೆ ಗಣನೀಯ ಪ್ರಮಾಣದಲ್ಲಿ ಒಕ್ಕಲಿಗ ಮತಗಳನ್ನು ಸೆಳೆದು ಗೆಲ್ಲಬೇಕು ಎಂದು ತಂತ್ರ ರೂಪಿಸುತ್ತಿದ್ದಾರೆ. ಕೊಡಗಿನ ಕೆಲ ಮುಖಂಡರು ಈ ಬಾರಿ ತಮ್ಮ ಜಿಲ್ಲೆಗೆ ಅವಕಾಶ ಮಾಡಿಕೊಡುವಂತೆ ಕೇಳಿದ್ದಾರೆ. ಆದರೆ ಮೈಸೂರು ಜಿಲ್ಲೆಯವರಿಗೆ ಛಾನ್ಸ್ ಹೆಚ್ಚು.
ಕೆಪಿಸಿಸಿ ವತಿಯಿಂದ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಅಲ್ಲಿ ಜನಾಭಿಪ್ರಾಯ ಯಾರ ಪರವಾಗಿರುತ್ತದೆ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಮೈಸೂರು ಹಾಗೂ ಕೊಡಗು ಜಿಲ್ಲೆಯ ಪಕ್ಷದ ಶಾಸಕರು, ಮಾಜಿ ಶಾಸಕರನ್ನು ಭೇಟಿ ಮಾಡಿ, ಲಾಬಿ ನಡೆಸುತ್ತಿದ್ದಾರೆ. ಅಭ್ಯರ್ಥಿ ಆಯ್ಕೆ ಸಂಬಂಧ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ಅವರು ಅಭಿಪ್ರಾಯ ಸಂಗ್ರಹಕ್ಕೆ ಬಂದ ನಂತರ ಲಾಬಿ ಮತ್ತಷ್ಟು ಚುರುಕಾಗಲಿದೆ. ಇದಾದ ನಂತರ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಅಭ್ಯರ್ಥಿಯನ್ನು ಆಖೈರುಗೊಳಿಸಲಿದ್ದಾರೆ.
ಅ. 9 ರಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದ್ದು, ಇಲ್ಲಿ ಕೂಡ ಲೋಕಸಭಾ ಚುನಾವಣೆಯ ಸಿದ್ಧತಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹೇಳಿದ್ದಾರೆ.