Dharwad assembly constituency: ಪಶ್ಚಿಮದಲ್ಲಿ ಉದಯಿಸಬೇಕಿದೆ ಅಭಿವೃದ್ಧಿಯ ಬೆಳಕು!

By Kannadaprabha News  |  First Published May 20, 2023, 4:34 AM IST

ತಮ್ಮ ಸರ್ಕಾರವಿದ್ದಾಗಲೇ ಸಮರ್ಪಕ ಅನುದಾನ ತರಲು ಹೆಣಗಾಡಬೇಕಾದ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದಲ್ಲಿದ್ದುಕೊಂಡು ಶಾಸಕ ಅರವಿಂದ ಬೆಲ್ಲದ ಅವರು ಕ್ಷೇತ್ರಕ್ಕೆ ಏನು ಮಾಡಿಯಾರು? ಎಂಬ ಪ್ರಶ್ನೆ ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಕ


ಸವಾಲಿನ ಹಾದಿ ಭಾಗ- 2

ಬಸವರಾಜ ಹಿರೇಮಠ

Tap to resize

Latest Videos

 ಧಾರವಾಡ (ಮೇ.20) : ತಮ್ಮ ಸರ್ಕಾರವಿದ್ದಾಗಲೇ ಸಮರ್ಪಕ ಅನುದಾನ ತರಲು ಹೆಣಗಾಡಬೇಕಾದ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದಲ್ಲಿದ್ದುಕೊಂಡು ಶಾಸಕ ಅರವಿಂದ ಬೆಲ್ಲದ ಅವರು ಕ್ಷೇತ್ರಕ್ಕೆ ಏನು ಮಾಡಿಯಾರು? ಎಂಬ ಪ್ರಶ್ನೆ ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಕಳೆದ ಐದು ವರ್ಷಗಳ ಕಾಲ ಆಡಳಿತದ ಪಕ್ಷದಲ್ಲಿದ್ದುಕೊಂಡು ಆಡಳಿತ ನಡೆಸಿದ ಶಾಸಕ ಅರವಿಂದ ಬೆಲ್ಲದ ಅವರಿಗೆ ಕಾಂಗ್ರೆಸ್‌ ಆಡಳಿತದಲ್ಲಿ ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಳ್ಳುವುದು ದೊಡ್ಡ ಸವಾಲೇ ಸರಿ.

ರಾಜ್ಯದಲ್ಲಿ ಬೆಂಗಳೂರು ಹೊರತು ಪಡಿಸಿ ಹುಬ್ಬಳ್ಳಿ-ಧಾರವಾಡ(Hubballi-dharwad) 2ನೇ ಅತೀ ದೊಡ್ಡ ನಗರ ಎನಿಸಿಕೊಂಡಿದೆ. ಹು-ಧಾ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿಯೇ ಅತೀ ದೊಡ್ಡ ವಿಧಾನಸಭಾ ಕ್ಷೇತ್ರ ಹು-ಧಾ ಪಶ್ಚಿಮ ಕ್ಷೇತ್ರ. ಕಳೆದ ಎರಡು ಅವಧಿ 10 ವರ್ಷಗಳ ಕಾಲ ಅರವಿಂದ ಬೆಲ್ಲದ ಹಾಗೂ ನಾಲ್ಕು ಅವಧಿ ಅವರ ತಂದೆ ಚಂದ್ರಕಾಂತ ಬೆಲ್ಲದ ಆಳಿದ್ದಾರೆ. ಸುಮಾರು ಮೂರು ದಶಕಗಳ ಕಾಲ ಬೆಲ್ಲದ ಕುಟುಂಬದ ಹಿಡಿತದಲ್ಲಿರುವ ಈ ಕ್ಷೇತ್ರವು ಹುಬ್ಬಳ್ಳಿ ಪಶ್ಚಿಮ ಭಾಗ ಹಾಗೂ ಧಾರವಾಡದ ಬಹುತೇಕ ನಗರ ಪ್ರದೇಶ ಹೊಂದಿದೆ.

Govt formation in Karnataka: ಯಾರಾರಿಗೆ ಸಿಗಲಿದೆ ಸಚಿವಗಿರಿ? ಸೋತರೂ ಶೆಟ್ಟರ್‌ ಕೈ ಹಿಡಿಯಲಿದೆ ಲಕ್‌!

ಪ್ರತ್ಯೇಕ ಮಹಾನಗರ ಪಾಲಿಕೆ

ಮಹಾನಗರ ಪಾಲಿಕೆಯಲ್ಲಿ ಧಾರವಾಡ ನಗರಕ್ಕೆ ಮಲತಾಯಿ ಧೋರಣೆ ತೋರಲಾಗುತ್ತಿದೆ ಎಂದು ಹತ್ತಾರು ವರ್ಷಗಳಿಂದ ಆರೋಪವಿದೆ. ಹೀಗಾಗಿ, ಧಾರವಾಡದ ಜನರು ಹೋರಾಟ ವೇದಿಕೆ ಮಾಡಿಕೊಂಡು ಕಳೆದ ಎರಡ್ಮೂರು ವರ್ಷಗಳಿಂದ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಹತ್ತು ಹಲವು ಹೋರಾಟಗಳನ್ನು ಮಾಡಿದ್ದಾರೆ. ಪ್ರತಿಫಲವಾಗಿ ಶಾಸಕ ಬೆಲ್ಲದ ಅವರು ತಮ್ಮ ಪ್ರಣಾಳಿಕೆಯಲ್ಲಿ ಪ್ರತ್ಯೇಕ ಪಾಲಿಕೆ ಮಾಡುವುದಾಗಿ ಪ್ರಕಟಿಸಿದ್ದಲ್ಲದೇ, ಅಧಿಕಾರಕ್ಕೆ ಬಂದು ಆರು ತಿಂಗಳಲ್ಲಿ ಪ್ರತ್ಯೇಕ ಪಾಲಿಕೆ ರಚಿಸುವುದಾಗಿ ಘೋಷಣೆ ಸಹ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಈ ಕಾರ್ಯ ಮಾಡಿಕೊಂಡು ಬರುವ ದೊಡ್ಡ ಸವಾಲು ಬೆಲ್ಲದ ಮೇಲಿದೆ.

ಕ್ರೀಡಾ ಸಂಕೀರ್ಣ

2018ರಿಂದಲೇ ಇಲ್ಲಿಯ ಕೋರ್ಚ್‌ ವೃತ್ತದಲ್ಲಿ ಕ್ರೀಡಾ ಸಂಕೀರ್ಣ ಕುಂಟುತ್ತಾ ಸಾಗುತ್ತಿದೆ. ಇದ್ದ ಈಜುಗೊಳ ತೆರವುಗೊಳಿಸಿ ಕಳೆದ ಐದು ವರ್ಷಗಳ ಪೈಕಿ ಈಗ ಕ್ರೀಡಾ ಸಂಕೀರ್ಣದ ಕಂಬಗಳು ಮೇಲಕ್ಕೇಳುತ್ತಿವೆ. ಕೋವಿಡ್‌ ಹಾವಳಿ ಹಾಗೂ ತಾಂತ್ರಿಕ ಕಾರಣದಿಂದ ವಿಳಂಬವಾಗುತ್ತಿದ್ದು, ಈ ಕ್ರೀಡಾ ಸಂಕೀರ್ಣ ಕಾಮಗಾರಿ ಮುಗಿಯಲು ಇನ್ನೆಷ್ಟುವರ್ಷಗಳು ಬೇಕೆಂದು ಜನರೇ ಪ್ರಶ್ನಿಸುತ್ತಿದ್ದಾರೆ. ಅದಾಜು ವೆಚ್ಚ .14 ಕೋಟಿಯಿಂದ ಈಗ .35 ಕೋಟಿಗೆ ಏರಿಕೆಯಾಗಿದೆ. ಎಲ್ಲ ರೀತಿಯ ಕ್ರೀಡೆಗಳು ಈ ಸಂಕೀರ್ಣದಲ್ಲಿ ಇರಲಿವೆ ಎಂಬ ಆಸೆ ಹೊತ್ತು ಕ್ರೀಡಾಳುಗಳು ದಿನಗಳನ್ನು ಎಣಿಸುತ್ತಿದ್ದಾರೆ.

ಕೆರೆ, ಉದ್ಯಾನವನಗಳು

ಧಾರವಾಡದ ಸೌಂದರ್ಯವೇ ಪರಿಸರ. ಆದರೆ, ಪರಿಸರಕ್ಕೆ ಪೂರಕವಾದ ಒಂದೂ ಕೆರೆ-ಕಟ್ಟೆಗಳು ಸರಿಯಾಗಿಲ್ಲ. ಹೇಳಿಕೊಳ್ಳುವ ಒಂದೂ ಉದ್ಯಾನವನ ಇಲ್ಲ. ಕೆಲಗೇರಿ ಕೆರೆ, ಸಾಧನಕೇರಿ, ನವಲೂರು, ಕೋಳಿಕೆರೆ ಪರಿಸ್ಥಿತಿ ಕೇಳುವಂತಿಲ್ಲ. ಕೊಳಚೆ ನೀರಿನಿಂದ ಹಸಿರು ನೀರಿನ ಕೆರೆಗಳಾಗಿವೆ. ಜಲಚರಗಳು ಸಾಯುತ್ತಿವೆ. ಎಲ್ಲ ಕೆರೆಗಳು ದೊಡ್ಡ ಗಟಾರುಗಳಾಗಿವೆ. ಇನ್ನು, ಕಿತ್ತೂರು ಚೆನ್ನಮ್ಮ ಪಾರ್ಕ್, ಆಜಾದ ಪಾರ್ಕ್ ಬರೀ ವಾಕಿಂಗ್‌ ಪ್ರಿಯರಿಗೆ ಮಾತ್ರ ಸೀಮಿತವಾಗಿವೆ. ಆರ್‌.ಎನ್‌. ಶೆಟ್ಟಿಕ್ರೀಡಾಂಗಣ ಹೊರತು ಪಡಿಸಿ ಮತ್ತೊಂದು ಕ್ರೀಡಾಂಗಣವಿಲ್ಲ. ಕಲಾಭವನ ಇದ್ದೂ ಇಲ್ಲದಂತಾಗಿದೆ. ಇರುವ ರಂಗಾಯಣದ ಸಾಂಸ್ಕೃತಿಕ ಭವನ, ಸೃಜನಾ, ಆಲೂರು ಭವನಗಳಲ್ಲಿ ಸಾಂಸ್ಕೃತಿಕ, ಸಭೆ-ಸಮಾರಂಭಗಳಾಗುತ್ತಿವೆಯೇ ಹೊರತು ರಂಗಭೂಮಿ ಚಟುವಟಿಕೆಗೆ ಸುಸಜ್ಜಿತ ರಂಗಮಂದಿರವಿಲ್ಲ ಎನ್ನುವ ಬೇಸರ ರಂಗಾಸಕ್ತರದ್ದು.

ಎಲ್ಲೆಡೆ ಕಾಂಕ್ರಿಟ್‌ ರಸ್ತೆಗಳನ್ನು ಮಾಡಲಾಗಿದೆ. ಆದರೆ, ಅಪೂರ್ಣ. ಇದರಿಂದ ಬೈಕ್‌ ಅಪಘಾತಗಳಾಗುತ್ತಿವೆ. ರಾತ್ರಿ ಹೊತ್ತು ಪಾದಾಚಾರಿಗಳು ಬಿದ್ದು ಕೈಕಾಲು ಮುರಿದುಕೊಳ್ಳುವ ಸ್ಥಿತಿ ಉಂಟಾಗಿದೆ. ಚುನಾವಣೆ ಅವಸರದಲ್ಲಿ ನೂರಕ್ಕೂ ಹೆಚ್ಚು ಕಾಮಗಾರಿಗೆ ಬೆಲ್ಲದ ಅವರು ಭೂಮಿ ಪೂಜೆ ಮಾಡಿದ್ದು, ಅವುಗಳ ಕಾಮಗಾರಿ ಇನ್ನಾದರೂ ಆರಂಭ ಮಾಡಬೇಕಿದೆ. ಏಳೆಂಟು ದಿನಕ್ಕೊಮ್ಮೆ ಕುಡಿಯುವ ನೀರಿನಿಂದ ಜನತೆ ರೋಸಿ ಹೋಗಿದ್ದಾರೆ. ಬಿಆರ್‌ಟಿಎಸ್‌ನ ತೊಂದರೆಗಳಿಗೆ ಪರಿಹಾರ ಬೇಕಿದೆ. ಧಾರವಾಡಕ್ಕೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಿದ್ದು, ವಿದ್ಯಾರ್ಥಿ ನಿಲಯಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಶಾಸಕರು ಗಮನ ಹರಿಸಬೇಕಿದೆ ಎನ್ನುವುದು ಜನತೆಯ ಆಶಯ.

Govt formation in Karnataka: ಹೊಸ ಸರ್ಕಾರಕ್ಕೆ ನೂರೆಂಟು ಸವಾಲು!

ವಿಶೇಷ ಕೆಲಸಗಳಾಬೇಕು

ಪಶ್ಚಿಮ ಕ್ಷೇತ್ರದ ಹುಬ್ಬಳ್ಳಿ ಭಾಗ ಅಭಿವೃದ್ಧಿ ಹೊಂದಿದೆಯೇ ಹೊರತು ಧಾರವಾಡ ಮಾತ್ರ ಹಿಂದುಳಿದಿದೆ. ಹತ್ತು ವರ್ಷಗಳ ಕಾಲ ಬೆಲ್ಲದ ಅವರಿಂದ ಒಂದೂ ವಿಶೇಷ ಕೆಲಸವಾಗಿಲ್ಲ. ಬರೀ ತಮ್ಮ ಉದ್ಯಮ ಅಭಿವೃದ್ಧಿ ಹೊರತು ಕ್ಷೇತ್ರದ ಅಭಿವೃದ್ಧಿಗೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲಿಲ್ಲ. ಈಗ ಕಾಂಗ್ರೆಸ್‌ ಆಡಳಿತದಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಪಿ.ಎಚ್‌. ನೀರಲಕೇರಿ, ರಾಜಕೀಯ ವಿಶ್ಲೇಷಕರು

click me!