ಕಲಬುರಗಿ: ಅನ್ಯಾಯವಾದವರಿಗೆ ದಿಕ್ಕಾಯ್ತು ಕೋರ್ಟ್‌, ಕಾನೂನು ಸಮರದಿಂದ ಪರಿಹಾರ ಪಡೆದ ರೈತ..!

By Kannadaprabha NewsFirst Published May 19, 2023, 12:35 PM IST
Highlights

ಸತತ 4 ವರ್ಷ ಕಾನೂನು ಸಮರ ನಡೆಸಿ 4,40,056 ಲಕ್ಷ ರು ಬೆಳೆವಿಮೆ ಪರಿಹಾರ ಪಡೆದ ಹೊನಗುಂಟಾ ರೈತ, ಬೆಳೆ ವಿಮೆ ಕಂಪನಿ ಅವೈಜ್ಞಾನಿಕ ಪರಿಹಾರ ನೀಡೋದಕ್ಕೆ ಚಾಟೀ ಬಿಸಿದ ನ್ಯಾಯಾಲಯ

ಕಲಬುರಗಿ(ಮೇ.19):  ಅತಿವೃಷ್ಟಿ-ಅನಾವೃಷ್ಟಿಯಾಗಿ ಬೆಳೆಹಾನಿಯಾದರೂ ಸೂಕ್ತ ಬೆಳೆವಿಮೆ ಸಿಗುತ್ತಿಲ್ಲವೆಂಬ ರೈತರ ಅಸಮಾಧಾನ ಹಾಗೂ ಅಳಲಿಗೆ ನ್ಯಾಯಾಲಯ ಸೂಕ್ತ ಪರಿಹಾರ ಕಲ್ಪಿಸಿದ ಐತಿಹಾಸಿಕ ತೀರ್ಪು ಹೊರ ಬಂದಿದೆ. ಬೆಳೆ ಹಾನಿಗೆ ತಕ್ಕ ಪರಿಹಾರ ನೀಡಬೇಕು ಎಂದು ಇಲ್ಲಿನ ಖಾಯಂ ಜನತಾ ನ್ಯಾಯಾಲಯ ಐತಿಹಾಸಿಕ ಆದೇಶ ನೀಡಿ ಜಿಲ್ಲೆಯ ರೈತನೊಬ್ಬನಿಗೆ ಒಟ್ಟು 4,40,056 ಬೆಳೆವಿಮೆಪರಿಹಾರ ದೊರಕಿಸಿ ಕೊಟ್ಟಿದೆ.

ಹಾನಿಗೆ ತಕ್ಕ ಬೆಳೆವಿಮೆ ಪರಿಹಾರ ಸಿಕ್ಕಿಲ್ಲ ಎಂದು ರೈತರು ಕೊರಗುವುದನ್ನೇ ಕೇಳಿದ್ದೇವೆ ಹಾಗೂ ಸೂಕ್ತ ಪರಿಹಾರ ನೀಡುವಂತೆ ರೈತರೊಬ್ಬರು ಸೂಕ್ತ ದಾಖಲಾತಿಗಳೊಂದಿಗೆ ನ್ಯಾಯಾಲಯದ ಮೋರೆ ಹೋಗಿ ಸೂಕ್ತ ಪರಿಹಾರ ಪಡೆದು ರಾಜ್ಯದಲ್ಲೇ ಮಾದರಿಯಾಗಿ ಹೊರ ಹೊಮ್ಮಿದ್ದಾರೆ.

ಬಾಗಲಕೋಟೆ: ಕುಸಿದ ಅರಿಷಿಣ ಬೀಜದ ಬೇಡಿಕೆ, ಆತಂಕದಲ್ಲಿ ಮಾರಾಟಗಾರ

ಜಿಲ್ಲೆಯ ಶಹಾಬಾದ್‌ ತಾಲೂಕಿನ ಹೊನಗುಂಟಾ ಗ್ರಾಮದ ಈರಣ್ಣ ಶಿವಶಂಕ್ರಪ್ಪ ಪಸಾರ ಎಂಬ ರೈತ ಸತತ ನಾಲ್ಕು ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೊರಾಟ ಕೈಗೊಂಡು ಬೆಳೆಹಾನಿಗೆ ತಕ್ಕ ಬೆಳೆವಿಮೆ ಪರಿಹಾರ ಪಡೆದಿದ್ದಾರೆ.
ಇವರಿಗೆ ಪರಿಹಾರ ದೊರಕಿಸಲು ಇಲ್ಲಿನ ಮಹಾತ್ಮಾಗಾಂಧೀಜಿ ಗ್ರಾಹಕರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಹಾಗೂ ನ್ಯಾಯವಾದಿಗಳಾದ ವೈಜನಾಥ ಎಸ್‌. ಝಳಕಿ ಅವರು ಸೂಕ್ತ ದಾಖಲಾತಿಗಳೊಂದಿಗೆ ಕಾನೂನೂ ಹೋರಾಟ ನಡೆಸಿ ರೈತನಿಗೆ ನ್ಯಾಯ ಕಲ್ಪಿಸಿದ್ದಾರೆ. ಬೆಳೆ ವಿಮೆ ಪರಿಹಾರದಲ್ಲಾದ ಅನ್ಯಾಯ- ಶೋಷಣೆ ವಿರುದ್ದ ನ್ಯಾಯಾಲಯ ಮೆಟ್ಟಿಲೇರಿ ಇಷ್ಟೊಂದು ಮೊತ್ತದಪರಿಹಾರದ ನ್ಯಾಯ ಪಡೆದಿರುವುದು ಅಪರೂಪದ ಪ್ರಕರಣವಾಗಿದೆ.

ಪ್ರಕರಣ ವಿವರ:

2016ರಲ್ಲಿ ಅತಿವೃಷ್ಟಿಯಿಂದ ರೈತ ಈರಣ್ಣ ಅವರ 20 ಎಕರೆ ಭೂಮಿಯ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿತ್ತು. ಆ ಸಂದರ್ಭದಲ್ಲಿ ರೈತ ಬೆಳೆ ಸಂಪೂರ್ಣ ಹಾನಿಯಾಗಿದೆ ಎಂದು ಪರಿಹಾರ ಕೋರಿ ಸಂಬಂಧಪಟ್ಟ ಯುನಿವರ್ಸಲ್‌ ಸೊಂಪೋ ಜನರಲ್‌ ಇನ್ಸುರೆನ್ಸ್‌ ಕಂಪನಿ, ಬೆಳೆಸಾಲ ನೀಡಿದ ಶಹಬಾದ್‌ ಸಿಂಡಿಕೇಟ್‌ ಬ್ಯಾಂಕ್‌ ಶಾಖೆಗೆ, ಕೃಷಿ ಇಲಾಖೆಗೆ ಲಿಖಿತವಾಗಿ ದೂರು ಸಲ್ಲಿಸಿದರು.

ದೂರು ಸಲ್ಲಿಕೆ ನಂತರ ವಿಮಾ ಕಂಪನಿ ಅಧಿಕಾರಿಗಳು ಹುನಗುಂಟಾ ಗ್ರಾಮದ ರೈತ ಈರಣ್ಣ ಅವರ ಹೊಲಕ್ಕೆ ಹೋಗಿ ಬೆಳೆ ಹಾನಿಯ ಪರಿಶೀಲನೆ ಮಾಡಿತು. ಈ ಸಂದರ್ಭದಲ್ಲೇ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಆದರೆ ಯುನಿವರ್ಸಲ್‌ ಸೊಂಪೋ ಜನರಲ್‌ ಇನ್ಸುರೆನ್ಸ್‌ ಕಂಪನಿಯವರು ರೈತನಿಗೆ ಕೇವಲ 2158 ರು. ಮಾತ್ರ ಬೆಳೆವಿಮೆ ಪರಿಹಾರ ನೀಡಿ ಕೈ ತೊಳೆದುಕೊಂಡಿತ್ತು.

ಆದರೆ ನೀಡಿರುವ ಈ ಪರಿಹಾರ ಅವೈಜ್ಞಾನಿಕವಾಗಿದೆ. 20 ಎಕರೆಯಲ್ಲಿನ ತೊಗರಿ ಬೆಳೆ ಸಂಪೂರ್ಣಹಾನಿಯಾಗಿರುವುದರಿಂದ ನಿಯಮಾವಳಿ ಪ್ರಕಾರ ನಿಗದಿಪಡಿಸಿದ ವಿಮಾ ಪರಿಹಾರದ ಮೊತ್ತ 3,31,854 ಲಕ್ಷ ರು. ನೀಡಬೇಕೆಂದು ನೊಂದ ರೈತ ಈರಣ್ಣ ವಿಮಾ ಕಂಪನಿಗೆ ಪುನಃ ಮನವಿ ಮಾಡಿದರು. ಅದಲ್ಲದೇ ಬೆಳೆವಿಮೆ ಪರಿಹಾರದಲ್ಲಿನ ಶೋಷಣೆ ಹಾಗೂ ಅನ್ಯಾಯದ ಬಗ್ಗೆ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ಗಮನಕ್ಕೆ ತಂದರು.

ಇದಾದ ಬಳಿಕ ರೈತ ಎಷ್ಟೇ ವಿನಂತಿಸಿದರೂ ವಿಮಾ ಕಂಪನಿ ನಿಯಮಾನುಸಾರ ಬೆಳೆವಿಮೆ ಪರಿಹಾರ ನೀಡಲು ಮನಸ್ಸು ಮಾಡಲಿಲ್ಲ. ಇದರಿಂದ ನೊಂದ ರೈತ ಈರಣ್ಣ ತನಗೆ ಸೂಕ್ತ ನ್ಯಾಯ ದೊರಕಿಸಿ ಕೊಡುವಂತೆ ಮಹಾತ್ಮಾಗಾಂಧೀಜಿ ಗ್ರಾಹಕರ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ವೈಜನಾಥ್‌ ಎಸ್‌. ಝಳಕಿ ಅವರಿಗೆ ಸಂಪರ್ಕಿಸಿ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಕೋರಿದ ಪ್ರಯುಕ್ತ ನ್ಯಾಯವಾದಿಯವರು, ರೈತನಿಗೆ ಸೂಕ್ತ ಬೆಳೆವಿಮೆಪರಿಹಾರ ನೀಡುವಂತೆ ವಿಮಾ ಕಂಪನಿಗೆ ರೈತನ ಪರವಾಗಿ ಕಾನೂನು ಸೂಚನಾ (ಲೀಗಲ್‌ ನೊಟೀಸ್‌) ಪತ್ರ ನೀಡಿದರು.

ಆದರೆ ಯುನಿವರ್ಸಲ್‌ ಸೊಂಪೋ ಜನರಲ್‌ ಇನ್ಸುರೆನ್ಸ್‌ ಕಂಪನಿ ಅದಕ್ಕೆ ಸೂಕ್ತವಾಗಿ ಸ್ಪಂಧಿಸಲಿಲ್ಲ. ಇದಾದ ಬಳಿಕ ರೈತ ದಿನಾಂಕ 1.1.2018 ರಂದು ಕಾಯಂ ಜನತಾ ನ್ಯಾಯಾಲಯ ಕಲಬುರಗಿಯಲ್ಲಿ ವಿಮಾ ಕಂಪನಿ ವಿರುದ್ಧ ದೂರು ದಾಖಲಿಸಿ ಸೂಕ್ತ ಬೆಳೆವಿಮೆ ಪರಿಹಾರ ದೊರಕಿಸುವಂತೆ ಕೋರಿದರು.

ಈ ದೂರು ದಾಖಲಿಸಿಕೊಂಡ ಮಾನ್ಯ ನ್ಯಾಯಾಲಯ ವಿಮಾ ಕಂಪನಿಗೆ ನೊಟೀಸ್‌ ನೀಡಿತು. ಇದಾದ ಬಳಿಕ ವಿಮಾ ಕಂಪನಿಯು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿ ತಾವು ರೈತನಿಗೆ ನೀಡಿದ ರು. 2158. ಸೂಕ್ತವಾಗಿದೆ. ರೈತನು ಸಲ್ಲಿಸಿದ ದೂರಿನ ಅಂಶಗಳು ಸತ್ಯಕ್ಕೆ ದೂರಾಗಿವೆ ಎಂದು ಹೇಳಿ, ರೈತನ ದೂರು ಅರ್ಜಿ ವಜಾ ಮಾಡುವಂತೆ ಕೋರಿ ತಕಾರರು ಅರ್ಜಿ ಸಲ್ಲಿಸಿತ್ತು.

ಉಡುಪಿ: ತಡವಾದ ಮಳೆ, ಮಟ್ಟು ಗುಳ್ಳ ಉತ್ತಮ ಇಳುವರಿ, ರೈತರು ಫುಲ್ ಖುಷ್..!

ಇದಾದ ಬಳಿಕ ನ್ಯಾಯಾಲಯವು ರೈತ ಹಾಗೂ ವಿಮಾ ಕಂಪನಿಯರು ಸಲ್ಲಿಸಿದ ಸಾಕ್ಷಿ, ದಾಖಲೆಗಳು ಹಾಗೂ ಅವರಿಬ್ಬರ ವಕೀಲರು ನ್ಯಾಯಾಲಯದಲ್ಲಿ ಮಾಡಿರುವ ವಾದ - ಪ್ರತಿವಾದ ಆಲಿಸಿ ಈ ಪ್ರಕರಣದಲ್ಲಿ ವಿಮಾ ಕಂಪನಿಯವರು ತಮ್ಮ ವಾದ ಸಾಬೀತುಪಡಿಸಲು ಸೂಕ್ತ ದಾಖಲೆಗಳು ಸಲ್ಲಿಸದೇ ಇರುವುದರಿಂದ ಹಾಗೂ ಅರ್ಜಿದಾರ ರೈತ ತನ್ನ ಪ್ರರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲಾತಿಗಳು ಸಲ್ಲಿಸಿದ್ದು, ಮನಗಂಡು ವಿಮಾ ಕಂಪನಿಯವರು ರೈತನಿಗೆ ನೀಡಿರುವ ಬೆಳೆವಿಮೆ ಪರಿಹಾರ ರು.2158 ಅಸಮಂಜಸ ಹಾಗೂ ಅವೈಜ್ಞಾನಿಕವಾಗಿದ್ದು, ಆತನಿಗೆ ಬೆಳೆವಿಮೆ ನಿಯಮಾವಳಿ ಪ್ರಕಾರ ಬಾಕಿ ಇರುವ ಖಾತ್ರಿ ವಿಮಾ ಬೆಳೆ ವಿಮಾ ಪರಿಹಾರ ರು. 3,29,696 ಶೇ.6 ಪ್ರತಿಶತ ಪ್ರಕರಣ ದಾಖಲಿಸಿದ ದಿನದಿಂದ ಪರಿಹಾರ ನೀಡುವವರೆಗೂ ವಾರ್ಷಿಕ ಬಡ್ಡಿಯೊಂದಿಗೆ ರೈತನಿಗೆ ರು.5 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡಬೇಕೆಂದು ನ್ಯಾಯಲಯ ಐತಿಹಾಸಿಕ ತೀರ್ಪು ನೀಡಿ, ಈ ತೀರ್ಪನ್ನು ಯುನಿವರ್ಸಲ್‌ ಸೊಂಪೋ ಜನರಲ್‌ ಇನ್ಸುರೆನ್ಸ್‌ ಕಂಪನಿ ಅವರು ಎರಡು ತಿಂಗಳ ಒಳಗಾಗಿ ಪಾಲಿಸುವಂತೆ ಆದೇಶಿಸಿತ್ತು.

ಆದರೆ ವಿಮಾ ಕಂಪನಿಯವರು ನಿಗದಿತ ಸಮಯದಲ್ಲಿ ನ್ಯಾಯಾಲಯದ ತೀರ್ಪು ಪಾಲಿಸಲು ವಿಳಂಬ ಮಾಡಿದ್ದರಿಂದ ನೊಂದ ರೈತ ನ್ಯಾಯಾಲಯದ ಆದೇಶ ಜಾರಿಗಾಗಿ ಪುನ: ಯುನಿವರ್ಸಲ್‌ ಸೊಂಪೋ ಜನರಲ್‌ ಇನ್ಸುರೆ®್ಸ… ಕಂಪನಿ ವಿರುದ್ಧ ಸಂಬಂಧಪಟ್ಟಹಿರಿಯ ಸಿವಿಲ್‌ ನ್ಯಾಯಾಲಯ ಕಲಬುರಗಿಯಲ್ಲಿ 20.07.2022ರಂದು ಇಪಿ ದಾಖಲಿಸಿದ ನಂತರ ನಾಯ್ಯಾಲಯ ವಿಮಾ ಕಂಪನಿಗೆ ಸಮನ್ಸ್‌ ಜಾರಿ ಮಾಡಿತು. ಇದಾದ ಬಳಿಕ ವಿಮಾ ಕಂಪನಿಯವರು ರೈತರಿನಿಗೆ ಒಟ್ಟು ರು. 4,40,056 ರು. ಬೆಳೆವಿಮಾ ಪರಿಹಾರದ ಡಿಡಿಯನ್ನು (ಡಿ.ಡಿ. ದಿನಾಂಕ 15.3.2023) ನೀಡಿದೆ. ಈ ಮೂಲಕ ರೈತ ಈರಣ್ಣ ಸತತ 4 ವರ್ಷ ಕಾನೂನು ಹೋರಾಟ ಮಾಡಿ ತಮ್ಮ ನ್ಯಾಯಸಮ್ಮತ ಬೆಳೆವಿಮೆ ಹಣ ಪಡೆದಿದ್ದಾನೆ.

click me!