ಅನೇಕ ದಶಕಗಳಿಂದ ರೈತರ ಬೆಳೆ ಹಾನಿ ಮಾಡುತ್ತಿರುವ ಜಿಂಕೆ ಹಾವಳಿ ತಡೆಯುವಲ್ಲಿ, ಬೆಳೆ ರಕ್ಷಣೆ ದೃಷ್ಟಿಯಿಂದ ರೋಣ ಭಾಗದಲ್ಲಿ ಜಿಂಕೆ ವನ ನಿರ್ಮಿಸಬೇಕೆಂಬುದು ತಾಲೂಕಿನ ರೈತರು ಬಹುವರ್ಷಗಳ ನಿರೀಕ್ಷೆಯಾಗಿದೆ. ರೋಣ ಮತಕ್ಷೇತ್ರದ ನೂತನ ಶಾಸಕ ಜಿ.ಎಸ್. ಪಾಟೀಲ ಅವರು ಈ ಕುರಿತು ಪ್ರಾಧಾನ್ಯತೆ ನೀಡುತ್ತಾರೆಯೇ ಎಂದು ತಾಲೂಕಿನ ರೈತರು ಕಾಯುತ್ತಿದ್ದಾರೆ.
ಪಿ.ಎಸ್. ಪಾಟೀಲ
ರೋಣ (ಮೇ.19) : ಅನೇಕ ದಶಕಗಳಿಂದ ರೈತರ ಬೆಳೆ ಹಾನಿ ಮಾಡುತ್ತಿರುವ ಜಿಂಕೆ ಹಾವಳಿ ತಡೆಯುವಲ್ಲಿ, ಬೆಳೆ ರಕ್ಷಣೆ ದೃಷ್ಟಿಯಿಂದ ರೋಣ ಭಾಗದಲ್ಲಿ ಜಿಂಕೆ ವನ ನಿರ್ಮಿಸಬೇಕೆಂಬುದು ತಾಲೂಕಿನ ರೈತರು ಬಹುವರ್ಷಗಳ ನಿರೀಕ್ಷೆಯಾಗಿದೆ. ರೋಣ ಮತಕ್ಷೇತ್ರದ ನೂತನ ಶಾಸಕ ಜಿ.ಎಸ್. ಪಾಟೀಲ ಅವರು ಈ ಕುರಿತು ಪ್ರಾಧಾನ್ಯತೆ ನೀಡುತ್ತಾರೆಯೇ ಎಂದು ತಾಲೂಕಿನ ರೈತರು ಕಾಯುತ್ತಿದ್ದಾರೆ.
ಸತತ ನೆರೆ, ಅತಿವೃಷ್ಟಿಮತ್ತು ಅನಾವೃಷ್ಟಿಹೀಗೆ ಒಂದಿಲ್ಲೊಂದು ಪ್ರಕೃತಿ ಹೊಡೆತಕ್ಕೆ ರೈತ ಸಮುದಾಯ ಸಿಲುಕಿ ನಲುಗುತ್ತಾ ಬಂದಿದೆ. ಇದರೊಂದಿಗೆ ರೋಣ ತಾಲೂಕಿನ ಭಾಗದಲ್ಲಿ ಜಿಂಕೆಗಳು ವಿಪರೀತವಾಗಿ, ಇದರಿಂದ ಬೆಳೆಗಳ ರಕ್ಷಣೆ ರೈತರಿಗೆ ತೀವ್ರ ತಲೆನೋವಾಗಿದೆ. ಬಹುದೊಡ್ಡ ಪ್ರಮಾಣದಲ್ಲಿ ಜಿಂಕೆಗಳು ತಂಡೋಪ ತಂಡವಾಗಿ ಬೆಳೆದು ನಿಂತ ಪೈರುಗಳ ಮೇಲೆ ದಾಳಿ ಮಾಡಿ ಹಾನಿಯುಂಟು ಮಾಡುತ್ತಾ ಬಂದಿದೆ. ನೆರೆ, ಬರಕ್ಕೆ ತುತ್ತಾಗಿ ಅಳಿದುಳಿದ ಬೆಳೆಯಾದರೂ ಕೈಗೆ ಸಿಕ್ಕೀತೂ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಜಿಂಕೆ ಹಾವಳಿಯಿಂದಾಗಿ ಎಲ್ಲವನ್ನೂ ಕಳೆದುಕೊಳ್ಳುವಂತಹ ಸಂದಿಗ್ಧತೆ ಎದುರಾಗುತ್ತಿದೆ.
ಚುಕ್ಕಿ ಜಿಂಕೆಯ ಜೊತೆ ಶ್ವೇತವರ್ಣದ ಜಿಂಕೆ ಪತ್ತೆ: ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ
ಪ್ರತಿವರ್ಷ ತಾಲೂಕಿನ ಸವಡಿ, ಕೃಷ್ಣಾಪುರ, ಅಬ್ಬಿಗೇರಿ, ಜಕ್ಕಲಿ, ಹೊಸಳ್ಳಿ, ಜಿಗಳೂರ, ಚಿಕ್ಕಮಣ್ಣೂರ, ಮುಗಳಿ, ಕೊತಬಾಳ, ಹಿರೇಹಾಳ, ಕಳಕಾಪುರ, ಹಾಳಜೇರಿ, ಮಾರನಬಸರಿ, ಡ.ಸ. ಹಡಗಲಿ, ಹೊನ್ನಾಪುರ, ಸಂದಿಗವಾಡ, ಅರಹುಣಸಿ, ಮೇಲ್ಮಠ, ಸೋಮನಕಟ್ಟಿ, ಯಾವಗಲ್ಲ, ಕೌಜಗೇರಿ ಸೇರಿದಂತೆ ಅನೇಕ ಗ್ರಾಮಗಳ 50 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಜಿಂಕೆಗಳು ದಾಂಗುಡಿ ಇಡುತ್ತಿವೆ. ಹಾನಿ ಕುರಿತು ಅರಣ್ಯ ಇಲಾಖೆ ಕಾಟಾಚಾರಕ್ಕೆ ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ಕಳುಹಿಸುತ್ತಿದೆ. ರೈತರಿಗೆ ಉಂಟಾದ ನಷ್ಟದ ಪ್ರಮಾಣದಲ್ಲಿ ಪರಿಹಾರ ಸಿಗುತ್ತಿಲ್ಲ. ಎರಡೂವರೆ ದಶಕಗಳಿಂದ ರೈತ ಬೆಳೆರಕ್ಷಣೆಗೆ ಹೆಣಗಾಡುತ್ತಿದ್ದಾನೆ. ಹೊಲಕ್ಕೆ ಜಿಂಕೆ ಬರದಂತೆ ತಡೆಯಲು ಸಾಧ್ಯವಾಗಿಲ್ಲ.
ಬೆಳೆಹಾನಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಜಿಂಕೆ ಹಾವಳಿಯಿಂದ ಮುಕ್ತಿ ಒದಗಿಸುವ ನಿಟ್ಟಿನಲ್ಲಿ ಈ ಭಾಗದಲ್ಲೊಂದು ಜಿಂಕೆ ಸಂರಕ್ಷಣಾ ವನ ಸ್ಥಾಪನೆ ಮಾಡಬೇಕು ಎಂಬುದು ರೈತರ ಬಹುವರ್ಷಗಳ ಬೇಡಿಕೆ. ಸರ್ಕಾರಕ್ಕೆ ಲಿಖಿತ ಮತ್ತು ಸಚಿವರಿಗೆ ಮೌಖಿಕ ಮನವಿ ಮಾಡುತ್ತಲೇ ಬಂದಿದ್ದಾರೆ. ಈ ವರೆಗೂ ಬೇಡಿಕೆ ಈಡೇರಿಲ್ಲ.
ಅರಣ್ಯ ಸಚಿವರಿಗೂ ಬೇಡಿಕೆಯಿಟ್ಟದ್ದ ರೈತರು:
ಈ ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವರಾಗಿದ್ದ ಆರ್. ಶಂಕರ ಅವರು 2018 ಜುಲೈ 19ರಂದು ಗಜೇಂದ್ರಗಡ ಮತ್ತು ರೋಣ ತಾಲೂಕಿನಲ್ಲಿ ಪ್ರವಾಸ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಈ ಭಾಗದ ರೈತರು ಜಿಂಕೆ ಹಾವಳಿ ಕುರಿತು ಸಚಿವರಿಗೆ ವಿವರಿಸಿ, ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು. ಆಗ ಸಚಿವ ಆರ್. ಶಂಕರ ಅವರು ಕೂಡಲೇ ಮುಖ್ಯಮಂತ್ರಿ ಗಮನಕ್ಕೆ ತರುವ ಜತೆಗೆ ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ, ಈ ಭಾಗದಲ್ಲೊಂದು ಜಿಂಕೆ ಸಂರಕ್ಷಣಾ ವನ ಸ್ಥಾಪನೆ ಮಾಡುವ ದಿಶೆಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಜತೆಗೆ ರೈತರು ತಮ್ಮ ಹೊಲದ ಸುತ್ತಲೂ ಸೋಲಾರ್ ತಂತಿಬೇಲಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಕೆಲವು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಬಳಿಕ ಆನಂದ ಸಿಂಗ್ ಅರಣ್ಯ ಇಲಾಖೆ ಮಂತ್ರಿಯಾದರು. ಆನಂತರ ಅರವಿಂದ ಲಿಂಬಾವಳಿ ಅವರು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವರು. ಆಗಲೂ ಈ ಭಾಗರ ರೈತರು ಸಚಿವರಿಗೆ ಮನವಿ ಸಲ್ಲಿಸಿದರು. ಆದರೆ ಈ ವರೆಗೂ ರೈತರ ಬೇಡಿಕೆ ಈಡೆæೕರಿಲ್ಲ. ರೋಣ ಮತಕ್ಷೇತ್ರದ ನೂತನ ಶಾಸಕರಾದ ಜಿ.ಎಸ್. ಪಾಟೀಲ ಅವರು ಕೃಷಿ ಪ್ರಧಾನ ಕುಟುಂಬದಿಂದ ಬಂದಿರುವರಾಗಿದ್ದು, ರೈತರ ಒಡನಾಡಿಯಾಗಿದ್ದಾರೆ. ರೈತರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಅವರಿಂದಲಾದರೂ ಈ ಭಾಗದಲ್ಲಿ ಜಿಂಕೆ ಸಂರಕ್ಷಣಾ ವನ ನಿರ್ಮಾಣ ಕೂಗಿಗೆ ಸ್ಪಂದನೆ ಸಿಗುವುದೇ ಎಂಬುದು ತಾಲೂಕಿನ ರೈತರ ನಿರೀಕ್ಷೆಯಾಗಿದೆ.
20 ವರ್ಷಗಳಿಂದ ರೋಣ ತಾಲೂಕಿನಲ್ಲಿ ಜಿಂಕೆ ಹಾವಳಿ ವಿಪರೀತವಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿದೆ. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ರೋಣ ತಾಲೂಕಿನಲ್ಲಿ ಜಿಂಕೆ ಸಂರಕ್ಷಣಾ ವನ ಸ್ಥಾಪನೆಗೆ ಮುಂದಾಗಬೇಕು.
ಮುತ್ತಣಗೌಡ ಚೌಡರಡ್ಡಿ ಅಧ್ಯಕ್ಷರು ಕರ್ನಾಟಕ ರೈತ ಸಂಘ, ಗದಗ
ಜಿಂಕೆ ಬೇಟೆಯಾಡಿದ ಕಳ್ಳರು ರೈತರನ್ನು ಕಂಡು ಓಡುವಾಗ ಆಗಿದ್ದೇ ದುರಂತ
ರೋಣ ಮತ್ತು ಗಜೇಂದ್ರಗಡ ತಾಲೂಕಿನ ಅನೇಕ ಕಡೆಗಳಲ್ಲಿ ಜಿಂಕೆಗಳ ಹಾವಳಿಯಿಂದ ಪ್ರತಿ ವರ್ಷ ಅಪಾರ ಬೆಳೆ ಹಾನಿಯಾಗುತ್ತಿರುವುದನ್ನು ಕಂಡಿದ್ದೇನೆ. ಈ ಕುರಿತು ನಾನು ಸಹ ಈ ಹಿಂದೆ ಅನೇಕ ಬಾರಿ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಸಚಿವರ ಗಮನಕ್ಕೆ ತಂದಿದ್ದೇನೆ. ಈ ಭಾಗದಲ್ಲಿ ಜಿಂಕೆ ಸಂರಕ್ಷಣೆ ವನ ಅತಿ ಅವಶ್ಯವಿದೆ. ಈ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಜಿಂಕೆವನ ನಿರ್ಮಾಣ ಯಾವ ಸ್ಥಳದಲ್ಲಿ ಸೂಕ್ತ ಎಂಬುದರ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.
ಜಿ.ಎಸ್. ಪಾಟೀಲ ಶಾಸಕರು, ರೋಣ