• ಬಿಜೆಪಿ ಸಭೆಗೆ ಗೈರಾದ ಬೆಳಗಾವಿಯ ಬಹುತೇಕ ಬಿಜೆಪಿ ಶಾಸಕರು
• ಶಾಸಕರಿಗೆ ಬರಲೇಬೇಕೆಂದು ಮೆಸೇಜ್ ನೀಡಿರಲಿಲ್ಲ ಅಂದ್ರು ರವಿಕುಮಾರ್
• ಬಿಜೆಪಿ ಅಭ್ಯರ್ಥಿಗಳಾದ ಅರುಣ್ ಶಹಾಪುರ್, ಹನುಮಂತ ನಿರಾಣಿಗೆ ಢವಢವ?
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಮೇ.19): ಜೂನ್ 13ರಂದು ವಾಯುವ್ಯ ಶಿಕ್ಷಕರ, ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಬೆಳಗಾವಿ, ಬಾಗಲಕೋಟ, ವಿಜಯಪುರ ಕ್ಷೇತ್ರ ವ್ಯಾಪ್ತಿಗೆ ಬರುವ ವಾಯುವ್ಯ ಶಿಕ್ಷಕರ ಹಾಗೂ ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್ ಪಕ್ಷದಿಂದ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ ಹಾಗೂ ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಸುನೀಲ್ ಸಂಕ್‌ರನ್ನು ಕಣಕ್ಕಿಳಿಸಿದೆ. ಇತ್ತ ಬಿಜೆಪಿ ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಅರುಣ್ ಶಹಾಪುರ್ ಹಾಗೂ ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಹನುಮಂತ ನಿರಾಣಿರನ್ನು ಕಣಕ್ಕಿಳಿಸಿದೆ.
ಬೆಳಗಾವಿ, ವಿಜಯಪುರ, ಬಾಗಲಕೋಟ ಕ್ಷೇತ್ರದ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ. ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇಬ್ಬರು ಸಂಸದರು, ಓರ್ವ ರಾಜ್ಯಸಭಾ ಸದಸ್ಯರು ಇದ್ದಾರೆ. ಇಷ್ಟೆಲ್ಲಾ ಇದ್ದರೂ ಇತ್ತೀಚೆಗೆ ನಡೆದ ಬೆಳಗಾವಿ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಹಾಂತೇಶ ಕವಟಗಿಮಠ ಸೋಲುಂಡಿದ್ದರು. ಇದಕ್ಕೆ ಕಾರಣ ಬಿಜೆಪಿಯಲ್ಲಿನ ಭಿನ್ನಮತ. ಸದ್ಯ ಇದೇ ವಿಚಾರ ಈಗ ಬಿಜೆಪಿ ಅಭ್ಯರ್ಥಿಗಳ ಟೇನ್ಷನ್‌ಗೆ ಕಾರಣವಾಗಿದೆ. ನಿನ್ನೆ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಆಗಿರುವ ರವಿಕುಮಾರ್ ನೇತೃತ್ವದಲ್ಲಿ ಚುನಾವಣೆ ಪೂರ್ವಭಾವಿ ಸಭೆ ನಡೆಯಿತು.
ರೈತರ ಕೋಟಿಗಟ್ಟಲೇ ಕಬ್ಬಿನ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳು: ಸಂಕಷ್ಟದಲ್ಲಿ ಅನ್ನದಾತ..!
ಈ ಸಭೆಗೆ ಬೆಳಗಾವಿ ಬಿಜೆಪಿಯ ಘಟಾನುಘಟಿ ನಾಯಕರೇ ಗೈರಾಗಿದ್ದರು. ಬಿಜೆಪಿಯ 13 ಕ್ಷೇತ್ರಗಳ ಪೈಕಿ 9 ಶಾಸಕರು ಗೈರಾಗಿದ್ದರು. ಸಚಿವ ಉಮೇಶ ಕತ್ತಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಜಾರಕಿಹೊಳಿ ಬ್ರದರ್ಸ್ ಸಭೆಗೆ ಗೈರಾಗಿದ್ದು ಎದ್ದು ಕಾಣುತ್ತಿತ್ತು. ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಮಂಗಲ ಅಂಗಡಿ, ಅಣ್ಣಾಸಾಬ್ ಜೊಲ್ಲೆ ಶಾಸಕರಾದ ಅಭಯ್ ಪಾಟೀಲ, ಪಿ ರಾಜೀವ್, ಮಹಾಂತೇಶ ದೊಡಗೌಡರ ಭಾಗಿಯಾಗಿದ್ರೆ ಶಾಸಕ ಅನಿಲ್ ಬೆನಕೆ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸಭೆಗೆ ತಡವಾಗಿ ಆಗಮಿಸಿದ್ದರು. ಬಿಜೆಪಿ ಆಂತರಿಕ ಸಭೆಯಲ್ಲಿ ಎರಡೂ ಕ್ಷೇತ್ರಗಳ ಗೆಲುವಿಗೆ ರಣತಂತ್ರ ರೂಪಿಸಲು ಕರೆದಿದ್ದ ಸಭೆಯಿಂದಲೇ ಬಿಜೆಪಿ ಘಟಾನುಘಟಿ ನಾಯಕರು ದೂರ ಉಳಿದಿದ್ದು ಅಭ್ಯರ್ಥಿಗಳ ನಿದ್ದೆಗೆಡಿಸಿದೆ.
'ಬೆಳಗಾವಿ ಸ್ಥಳೀಯ ಸಂಸ್ಥೆಗಳ ಪರಿಷತ್ ಸೋಲಿಗೆ ಬಡ್ಡಿ ಸಮೇತ ಉತ್ತರಿಸುತ್ತೇವೆ': ಇನ್ನು ಬಿಜೆಪಿ ಸಭೆಗೆ ಹಲವು ಶಾಸಕರು ಗೈರಾದ ವಿಚಾರಕ್ಕೆ ಬೆಳಗಾವಿಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, 'ನಾವು ಇವತ್ತು ಎಲ್ಲಾ ಶಾಸಕರು ಸಭೆಗೆ ಬರಲೇಬೇಕು ಎಂಬ ಮೆಸೇಜ್ ಮಾಡಿರಲಿಲ್ಲ.ಮೇ 21ರಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಭೆ ನಡೆಯುತ್ತೆ. ಆ ಸಭೆಗೆ ಎಲ್ಲಾ ಹಾಲಿ, ಮಾಜಿ ಶಾಸಕರು, ಸಂಸದರು ಬರ್ತಾರೆ' ಎಂದರು. ಇನ್ನು ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ವಿಚಾರಕ್ಕೆ ಪ್ರತಿಕ್ರಿಯಿಸಿ, 'ಅದರಿಂದ ನಮಗೆ ಪಾಠ ಆಗಿದೆ ಈಗ. ಆ ಪಾಠಕ್ಕೆ ಬಡ್ಡಿ ಸಮೇತವಾಗಿ ಈ ಎರಡು ಚುನಾವಣೆಯಲ್ಲಿ ಬಹಳ ದೊಡ್ಡ ಅಂತರದಿಂದ ಗೆಲ್ಲುತ್ತೇವೆ. ಬಹಳ ದೊಡ್ಡ ಅಂತರದಿಂದ ಗೆದ್ದು ರಾಜ್ಯಕ್ಕೆ ಪಕ್ಷದಿಂದ ಸಂದೇಶ ಕೊಡ್ತೇವೆ. ಚುನಾವಣೆ ಗೆಲ್ಲಲು ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ. ಐದು ಮತದಾರರಿಗೆ ಓರ್ವ ಕಾರ್ಯಕರ್ತರ ನೇಮಿಸಲು ಯೋಜನೆ ರೂಪಿಸಿದ್ದು ಆ ಎಲ್ಲಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಭೆ ಮಾಡ್ತಾರೆ' ಎಂದರು.
'ಬೆಳಗಾವಿ ರಾಜಕಾರಣ ಒಂದು ರೀತಿ ಡೀಮ್ಡ್ ಯೂನಿವರ್ಸಿಟಿ ಇದ್ದ ಹಾಗೇ': ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಬಿಜೆಪಿ ಸಭೆಗೆ ಬೆಳಗಾವಿ ಬಹುತೇಕ ಬಿಜೆಪಿ ಶಾಸಕರು ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಎಂಎಲ್‌ಸಿ ಅಶ್ವತ್ಥ್ ನಾರಾಯಣ್, 'ಬೆಳಗಾವಿ ರಾಜಕಾರಣ ಒಂದು ರೀತಿ ಡೀಮ್ಡ್ ಯೂನಿವರ್ಸಿಟಿ ಇದ್ದ ಹಾಗೇ. ಇದನ್ನು ಕಳೆದ ಹಲವು ದಶಕಗಳಿಂದ ನೋಡಿಕೊಂಡು ಬಂದಿದ್ದೇವೆ. ವಾಯುವ್ಯ ಶಿಕ್ಷಕರ, ಪದವೀಧರ ಕ್ಷೇತ್ರ ಬಿಜೆಪಿಯದ್ದು ಅಂತಾ ಎಲ್ಲರಿಗೂ ಗೊತ್ತು. ಇದರಲ್ಲಿ ಯಾವುದೇ ರೀತಿ ಒಳರಾಜಕಾರಣ ನಡೆಯಲ್ಲ. ಎಲ್ಲರೂ ಒಟ್ಟಿಗೆ ಕೆಲಸ ಮಾಡ್ತೀವಿ, ಮೇ 21ರಂದು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡ್ತೀವಿ.
ಗುಂಪುಗಾರಿಕೆ, ಒಳರಾಜಕಾರಣ ಏನೂ ನಡೆಯಲ್ಲ' ಎಂದರು. ಇನ್ನು ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿ, 'ಜನ ಪಕ್ಷ, ಕಾರ್ಯಕ್ಷೇತ್ರ ನೋಡಿ ವೋಟ್ ಹಾಕ್ತಾರೆ. ಪ್ರಧಾನಿ ಮೋದಿ ಗುಜರಾತ್‌ನಿಂದ ಬಂದು ಕಾಶಿಯಲ್ಲಿ ಚುನಾವಣೆ ನಿಂತು ಪ್ರಧಾನಿಯಾಗಲಿಲ್ವೇ?ಹೊರಗಿಂದ ಬಂದವರು ಎಂಬ ಪ್ರಶ್ನೆ ಬರುವುದಿಲ್ಲ. ಬೆಳಗಾವಿ ನಗರ, ಗ್ರಾಮಾಂತರ, ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಸಭೆ ಮಾಡಿದ್ದೆವೆ. ಬಾಗಲಕೋಟ ವಿಜಯಪುರದಲ್ಲೂ ಸಭೆ ಮಾಡಿದ್ದೇವೆ. ವಿಧಾನಸಭಾ ಕ್ಷೇತ್ರವಾರು ಮಂಡಲ ಮಟ್ಟದಲ್ಲಿ 21 ಸಭೆಗಳನ್ನ ಮಾಡ್ತೇವೆ.
ಮೇ 21ರಂದು ಬೆಳಗಾವಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿ ಚುನಾವಣೆ ಕಚೇರಿ, ವಾರ್ ರೂಂ ಉದ್ಘಾಟನೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬರಲಿದ್ದಾರೆ.ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೆಲವೊಂದು ವ್ಯತ್ಯಾಸದಿಂದ ಬಿಜೆಪಿಗೆ ಸೋಲಾಗಿದೆ. ಈ ಬಾರಿ ಪ್ಲ್ಯಾನ್ ಮಾಡಿ ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ. ಬಸವರಾಜ ಹೊರಟ್ಟಿ ಬಿಜೆಪಿ ಸೇರುತ್ತಿದ್ದು ನಾಲ್ಕು ಕ್ಷೇತ್ರಗಳಲ್ಲಿ ಗೆದ್ದು ಬರಲಿದ್ದೇವೆ. ವಾಯುವ್ಯ ಕ್ಷೇತ್ರದಲ್ಲಿ ಹನುಮಂತ ನಿರಾಣಿ, ಅರುಣ್ ಶಹಾಪುರ್ ಗೆಲ್ಲಲಿದ್ದಾರೆ' ಎಂಬ ವಿಶ್ವಾಸ ವ್ಯಕ್ತಪಡಿಸಿದರು.
'ಎಲ್ಲಾ ನಾಯಕರು ಆಶೀರ್ವಾದ ಮಾಡಿ ಬೆನ್ನು ತಟ್ಟಿದ್ದಾರೆ': ಬೆಳಗಾವಿ ಬಿಜೆಪಿ ಭಿನ್ನಮತ ಅಭ್ಯರ್ಥಿ ಗೆಲುವಿಗೆ ಮುಳುವಾಗುತ್ತೆ ಎಂಬ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ವಾಯುವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ, ' ಈ ರೀತಿ ಚರ್ಚೆ ಇರಬಹುದು, ಆದರೆ ಮತದಾರರು ನಿಶ್ಚಯಿಸಿದ್ದಾರೆ. ನಮ್ಮಲ್ಲಿ ಯಾವುದೂ ಬಣ ರಾಜಕೀಯ ಇಲ್ಲ ಎಲ್ಲರೂ ಒಂದಾಗಿದ್ದಾರೆ. ಪಕ್ಷದ ಚಿಹ್ನೆ ಮೇಲೆ ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಎಲ್ಲಾ ನಾಯಕರು ನನಗೆ ಆಶೀರ್ವಾದ ಮಾಡಿ ಟಿಕೆಟ್ ಕೊಡಿಸಿ ಬೆನ್ನು ತಟ್ಟಿದ್ದಾರೆ. ಎಲ್ಲರೂ ಒಂದಾಗಿ ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ' ಎಂದರು.
ನಿರಾಣಿ ಸಹೋದರರ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ಚುನಾವಣೆಯಲ್ಲಿ ಮುಳುವಾಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಹನುಮಂತ ನಿರಾಣಿ, 'ಯತ್ನಾಳ ನಮ್ಮ ಪಕ್ಷದವರೇ, ನಮ್ಮ ಪಕ್ಷದ ನಾಯಕರು. ವೈಯಕ್ತಿಕ ವಿಚಾರದಲ್ಲಿ ಏನೇ ಇರಬಹುದು. ಪಕ್ಷದ ದೃಷ್ಟಿಯಿಂದ ನಾವೆಲ್ಲರೂ ಒಂದೇ' ಎಂದರು. ಇನ್ನು ಪದವೀಧರರಿಗೆ ಉದ್ಯೋಗವಕಾಶ ಇರದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, 'ನಿರಾಣಿ ಪರಿವಾರ, ನಿರಾಣಿ ಇಂಡಸ್ಟ್ರೀಸ್ ವತಿಯಿಂದ 10 ಸಾವಿರ ಯುವಕರಿಗೆ ಕೆಲಸ ಕೊಟ್ಟಿದ್ದೇವೆ. ಅಪರೋಕ್ಷವಾಗಿ 40 ಸಾವಿರ ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಿದ್ದು,ಬೇರೆ ಬೇರೆ ಸಂಘ ಸಂಸ್ಥೆ, ಕಾರ್ಖಾನೆಗಳಲ್ಲಿ ಕೆಲಸ ಕೊಡಿಸುವ ಕೆಲಸ ಮಾಡಿದ್ದೇವೆ. ನನ್ನ ಸಹೋದರ ಸಚಿವ ಮುರುಗೇಶ್ ನಿರಾಣಿ 2010ರಲ್ಲಿ ಜಿಮ್ ಸಮಾವೇಶ ಮಾಡಿದಾಗ ಲಕ್ಷಾಂತರ ಕೋಟಿ ಅನುದಾನ ಆ ಸಂದರ್ಭದಲ್ಲಿ ಹರಿದು ಬಂದಿದೆ.ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡುವ ಉದ್ದೇಶವಿದೆ. ಆ ನಿಟ್ಟಿನಲ್ಲಿ ಸಚಿವ ಮುರುಗೇಶ್ ನಿರಾಣಿ ಕೆಲಸ ಮಾಡ್ತಿದ್ದಾರೆ' ಎಂದರು.
Belagavi ಸಂಪುಟ ವಿಸ್ತರಿಸಿದ್ರೆ ಗಡಿ ಉಸ್ತುವಾರಿ ಸಚಿವರ ನೇಮಿಸಿ ಕನ್ನಡಿಗರ ಆಗ್ರಹ
ಒಟ್ಟಾರೆಯಾಗಿ ಬೆಳಗಾವಿ ಬಿಜೆಪಿಯಲ್ಲಿನ ಭಿನ್ನಮತ ಯಾರೂ ಬಹಿಂರವಾಗಿ ಒಪ್ಪಿಕೊಳ್ಳಲ್ಲ ಆದರೂ ಎಂಎಲ್‌ಸಿ ಅಶ್ವತ್ಥ್ ನಾರಾಯಣ್ ಹೇಳುವ ಹಾಗೇ ಬೆಳಗಾವಿ ರಾಜಕಾರಣ ಒಂದು ರೀತಿ ಡೀಮ್ಡ್ ಯೂನಿವರ್ಸಿಟಿ ಅನ್ನೋದಂತೂ ಸತ್ಯ. ಪರಿಷತ್ ಚುನಾವಣೆಯಲ್ಲಿ ಒಳರಾಜಕಾರಣ ನಡೆಯಲ್ಲ ಅಂತಾ ಅವರು ಹೇಳಿದರೂ ಸಹ ಬೆಳಗಾವಿಯಲ್ಲಿ ಪಕ್ಷಕ್ಕಿಂತ ವೈಯಕ್ತಿಕ ಪ್ರತಿಷ್ಠೆ, ಜಿದ್ದಾಜಿದ್ದಿ ನಡೆಯುತ್ತಿರೋದನ್ನು ಈ ಭಾಗದ ಜನ ನೋಡಿಕೊಂಡು ಬಂದಿದ್ದಾರೆ. ಸದ್ಯ ಮೇ 21ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೆಳಗಾವಿ ಬಿಜೆಪಿ ಹಾಲಿ, ಮಾಜಿ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಸೇರಿ ಪ್ರಮುಖ ನಾಯಕರ ಸಭೆ ಕರೆದಿದ್ದು ಈ ಸಭೆಗೆ ಯಾವೆಲ್ಲ ನಾಯಕರು ಬರುತ್ತಾರೆ, ಕಳೆದ ಬಾರಿ ಬೆಳಗಾವಿ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಯಲ್ಲಿ ಮಹಾಂತೇಶ ಕವಟಗಿಮಠ ಸೋಲಿಗೆ ಕಾರಣವಾದ ಭಿನ್ನಮತ ಮರುಕಳಿಸದಂತೆ ಯಾವ ಹೆಜ್ಜೆ ಇಡುತ್ತಾರೆ ಕಾದು ನೋಡಬೇಕು.