ಬಿಸಿಲೂರು ಕಲಬುರ್ಗಿಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಬಾಳೆ ಸೇರಿ ತೋಟಗಾರಿಕಾ ಬೆಳೆಗಳು ನೆಲಕಚ್ಚಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಂಗಾಲಾಗಿದ್ದಾರೆ.
ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ
ಕಲಬುರ್ಗಿ (ಮೇ.18): ಬಿಸಿಲೂರು ಕಲಬುರ್ಗಿಯಲ್ಲಿ (Kalaburagi) ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ (Rain) ಬಾಳೆ ಸೇರಿ ತೋಟಗಾರಿಕಾ ಬೆಳೆಗಳು ನೆಲಕಚ್ಚಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಂಗಾಲಾಗಿದ್ದಾರೆ. ಬಿಸಿಲೂರು, ಸೂರ್ಯನಗರಿ ಎನಿಸಿಕೊಂಡಿರುವ ಕಲಬುರ್ಗಿಯಲ್ಲಿ ಕಳೆದ ರಾತ್ರಿ ಭಾರಿ ಮಳೆ ಸುರಿದಿದೆ. 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಿಂದಾಗಿ ಕಾದ ಹಂಚಿನಂತೆ ಆಗಿದ್ದ ಭೂಮಿಯನ್ನು ಮಳೆ ತಂಪುಗೊಳಿಸಿದೆ. ಆದಾಗ್ಯೂ ಗುಡುಗು ಸಿಡಿಲಬ್ಬರದ ಬಿರುಗಾಳಿ ಸಹಿತ ಸುರಿದ ಭಾರಿ ಮಳೆ ತೋಟಗಾರಿಕಾ ಬೆಳೆಗಳನ್ನು ನಾಶಗೊಳಿಸಿದೆ. ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಬಾಳೆ ಬೆಳೆ (Banana Crop) ಬಿರುಗಾಳಿಗೆ ಸಂಪೂರ್ಣ ನೆಲಕಚ್ಚಿ ಹೋಗಿದೆ. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತರು (Farmers) ಕಂಗಾಲಾಗಿದ್ದಾರೆ.
ಚಿಂಚೋಳಿಯಲ್ಲಿ ಅತಿ ಹೆಚ್ಚು ಹಾನಿ: ಕಲಬುರ್ಗಿ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಭಾರಿ ಪ್ರಮಾಣದ ಮಳೆ ಸುರಿದಿದೆಯಾದರೂ, ಚಿಂಚೋಳಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಹಾನಿ ಸಂಭವಿಸಿದೆ. ಚಿಂಚೋಳಿ ತಾಲೂಕಿನ ಅಂತಾವರಂ ಬಳಿ ಸಿಡಿಲಿಗೆ ಯಲಿಯಾ ಎನ್ನುವ 35 ವರ್ಷದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿಕಿತ್ಸೆಗಾಗಿ ಆತನನ್ನ ಬೀದರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದೆಡೆ ಅದೇ ಚಿಂಚೋಳಿ ತಾಲೂಕಿನ ಅಣವಾರ ಗ್ರಾಮದಲ್ಲಿ ಸಿಡಿಲು ಬಡಿದು 4 ಕುರಿಗಳು ಸಾವಿಗೀಡಾಗಿವೆ. ಅದೇ ಸ್ಥಳದಲ್ಲಿದ್ದ 10 ಕುರಿಗಳಿಗೆ ಗಂಭೀರ ಗಾಯಗಳಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿವೆ.
Chikkamagaluru: ಕಾಫಿನಾಡಿನಲ್ಲಿ ಮಳೆ ಅಬ್ಬರ: ಸಿಡಿಲು ಬಡಿದು 18 ಕುರಿ ಸಾವು!
ಚಿಂಚೋಳಿ ತಾಲೂಕಿನ ಚಿಕ್ಕಲಿಂಗದಳ್ಳಿ ಗ್ರಾಮದಲ್ಲಿ ಬಿರುಗಾಳಿಯ ಅಬ್ಬರಕ್ಕೆ ಹಲವು ಮನೆಗಳ ತಗಡಿನ ಮೇಲ್ಛವಣಿ ಹಾರಿ ಹೋಗಿವೆ . ಈ ಗ್ರಾಮದಲ್ಲಿ ಹತ್ತಾರು ಮನೆಗಳು ಹಾನಿಗಿಡಾಗಿವೆ. ಅಲ್ಲದೆ ಟ್ರಾಕ್ಟರ್ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದು ಟ್ರಾಕ್ಟರ್ ಜಖಂಗೊಂಡ ಘಟನೆಯೂ ಸಂಭವಿಸಿದೆ. ಇನ್ನೊಂದೆಡೆ ಚಿಂಚೋಳಿ ತಾಲೂಕಿನ ಕನಕಪುರ ಗ್ರಾಮದಲ್ಲಿ ಬಿರುಗಾಳಿಯಿಂದ ವಿದ್ಯುತ್ ಪರಿವರ್ತಕ ನೆಲಕ್ಕುರುಳಿ ಬಿದ್ದಿದೆ. ಪರಿಣಾಮ ಇಡೀ ಗ್ರಾಮ 12 ಗಂಟೆಗೂ ಹೆಚ್ಚು ಕಾಲ ಕಗ್ಗತ್ತಲೆಯಲ್ಲಿ ಕಳೆಯುವಂತಾಯಿತು.
ನೆಲಕ್ಕುರುಳಿದ ಬಾಳೆ: ಭಾರಿ ಬಿರುಗಾಳಿ ಮಳೆಯಿಂದಾಗಿ ಚಿಂಚೋಳಿ ತಾಲ್ಲೂಕಿನ ಹತ್ತಾರು ಗ್ರಾಮಗಳಲ್ಲಿ ತೋಟಗಾರಿಕಾ ಬೆಳೆಗಳು ಹಾನಿಗೀಡಾಗಿವೆ. ವಿಶೇಷವಾಗಿ ರೈತರು ಬೆಳೆದ ಬಾಳೆ ಮರಗಳು ಬಿರುಗಾಳಿಗೆ ಸಂಪೂರ್ಣ ನೆಲಕಚ್ಚಿವೆ. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಂಗಾಲಾಗಿದ್ದಾರೆ. ಚಿಂಚೋಳಿ ತಾಲೂಕಿನ ಹತ್ತಾರು ಗ್ರಾಮಗಳ 50 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ ಮತ್ತು ಪಪ್ಪಾಯ ಬೆಳೆಗಳು ಹಾನಿಗೀಡಾಗಿವೆ.
ಅಫಜಲಪುರದಲ್ಲೂ ನೆಲಕ್ಕುರುಳಿದ ಬಾಳೆ: ಚಿಂಚೋಳಿ ತಾಲೂಕು ಮಾತ್ರ ಅಲ್ಲದೆ ಅಫಜಲಪುರ ತಾಲೂಕಿನಲ್ಲಿಯೂ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಅಫಜಲಪುರ ಹೊರವಲಯದ ಚಿಂಚೋಳಿ ಗ್ರಾಮದಲ್ಲಿ ಹತ್ತು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಬಾಳೆ ನೆಲಕಚ್ಚಿದೆ. ಬಾಳೆಗಿಡಗಳು ಹಣ್ಣು ಬಿಡುವ ಹೊತ್ತಲ್ಲಿಯೇ ಅಬ್ಬರಿಸಿದ ಬಿರುಗಾಳಿ ಮಳೆ , ಬೆಳೆದುನಿಂತ ಬಾಳೆ ಮರಗಳನ್ನು ನೆಲಕ್ಕುರುಳಿಸಿದೆ. ರೈತಾಪಿ ವರ್ಗದವರು ಕಂಗಾಲಾಗಿದ್ದಾರೆ.
ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: ನೂರಾರು ಜಾನುವಾರುಗಳು ಬಲಿ
ಪರಿಹಾರಕ್ಕೆ ಆಗ್ರಹ: ಬಿರುಗಾಳಿ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ರೈತ ಸಮುದಾಯ ಆಗ್ರಹಿಸಿದೆ. ತೋಟಗಾರಿಕೆ ಇಲಾಖೆ ಕೂಡಲೇ ತೋಟಗಾರಿಕಾ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಮತ್ತು ಕೂಡಲೇ ಪರಿಹಾರ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.