ಉಪ ಚುನಾವಣೆಗೆ ಸಿಗುತ್ತಾ ತಡೆ : ವಿಶ್ವಾಸದಲ್ಲಿ ಅನರ್ಹ ಶಾಸಕ

By Kannadaprabha NewsFirst Published Sep 23, 2019, 10:50 AM IST
Highlights

ಕರ್ನಾಟಕ ಉಪ ಚುನಾವಣೆಗೆ ತಡೆ ಸಿಗುವ ವಿಶ್ವಾಸ ಇದೆ ಎಂದು ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ. 

ಮೈಸೂರು [ಸೆ.23]:  ಉಪಚುನಾವಣೆಗೆ ದಿನಾಂಕ ನಿಗದಿಯಾಗುವ ಮುನ್ನವೇ ನಾವು ಸುಪ್ರೀಂ ಕೋರ್ಟ್‌ಗೆ ಹೋಗಿರುವುದರಿಂದ ಸೋಮವಾರ ಚುನಾವಣೆಗೆ ತಡೆ ಸಿಗಲಿದೆ ಎಂದು ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಎಚ್‌. ವಿಶ್ವನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

ದುಡ್ಡಿಗಾಗಿ ಮಾರಾಟ ಆಗಿದ್ದಾಗಿ ಥರ್ಡ್‌ ಗ್ರೇಡ್‌ ಜನ ಆರೋಪಿಸಿದ್ದಾರೆ. ನಾವು ಯಾರು ದುಡ್ಡಿಗಾಗಿ ರಾಜೀನಾಮೆ ನೀಡಿಲ್ಲ. ಯಾರೂ ಕೂಡಾ ಇಂತಹ ಆರೋಪ ಮಾಡಬಾರದು. ಈಗ ಎಂಟಿಬಿ ನಾಗರಾಜ್‌ 10 ಕೋಟಿ ರು. ಕಾರಿನಲ್ಲಿ ಓಡಾಡುತ್ತಾರೆ. ಅವರೂ ಮಾರಾಟ ಆಗಿದ್ದಾರಾ ಎಂದು ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಪ್ರಶ್ನಿಸಿದರು.

ರಾಜ್ಯದಲ್ಲಿ ರಾಕ್ಷಸ ರಾಜಕೀಯ ನಡೆಯುತ್ತಿದೆ. ಕ್ರಿಯಾಶೀಲತೆಯ ಪತನದಿಂದ ತೆಗೆದುಕೊಂಡ ನಿರ್ಧಾರದಿಂದ ನಮ್ಮನ್ನು ಅನರ್ಹ ಗೊಳಿಸಲಾಗಿದೆ. ಸ್ಪೀಕರ್‌ ಆದೇಶ ಮತ್ತು ಅವರ ನಡವಳಿಕೆಯನ್ನು ಸುಪ್ರೀಂ ಕೋರ್ಟ್‌ ಗಮನಿಸಿದೆ. ನಮ್ಮ ಪ್ರಕರಣ ವಿಚಾರಣೆ ಯಲ್ಲಿರುವಾಗಲೇ, ಚುನಾವಣೆ ದಿನಾಂಕ ನಿಗದಿಯಾಗಿದೆ. ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದ್ದು, ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಧ್ಯಮಗಳು ಅನರ್ಹ ಶಾಸಕ ಎಂದು ಬಳಸುತ್ತಿವೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ . 80 ಕೋಟಿ ರು. ಹಣ ನೀಡಲಾಗಿತ್ತು. ಮತ್ತೆ ಸಿಎಂ ಆಗಬೇಕೆಂಬ ಉದ್ದೇಶದಿಂದ ಹಣ ಸಂಗ್ರಹಿಸಿ ಕೊಟ್ಟಿದ್ದರು. ಅಂತಹವರು ಹಣಕ್ಕೆ ಮಾರಿಕೊಂಡಿದ್ದಾರೆ ಅಂತಾ ಸಿದ್ದರಾಮಯ್ಯ ಹೇಳೋದು ಸರಿಯಲ್ಲ. ನಮಗೆ ಈಗಲೂ ಕುಮಾರಸ್ವಾಮಿ ನಾಯಕರು. ಅವರ ಬಗ್ಗೆ ಈಗಲೂ ಗೌರವವಿದೆ. ಕುಮಾರಸ್ವಾಮಿ ಅವರನ್ನು ಎಲ್ಲಾ ರೀತಿ ನೋಡಿಕೊಳ್ಳುತ್ತಿರುವವರು ನನ್ನ ಪ್ರಶ್ನೆಗೆ ಉತ್ತರಿಸಬೇಕು ಎಂದು ಮಾಜಿ ಸಚಿವ ಸಾ.ರಾ. ಮಹೇಶ್‌ಗೆ ತಿರುಗೇಟು ನೀಡಿದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

click me!