Karnataka Budget 2026-27: ಧಾರವಾಡಕ್ಕೆ ಕೊಟ್ಟಿದ್ದು ಬೆಟ್ಟದಷ್ಟು, ಅನುಷ್ಠಾನ ಮಾತ್ರ ಎಳ್ಳಷ್ಟು!

Kannadaprabha News, Ravi Janekal |   | Kannada Prabha
Published : Mar 06, 2026, 07:30 AM IST
Karnataka Budget 2026

ಸಾರಾಂಶ

ಕಳೆದ ವರ್ಷದ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಗೆ ನೀಡಿದ ಭರವಸೆಗಳ ಪೈಕಿ ಬೆಣ್ಣಿಹಳ್ಳ ಕಾಮಗಾರಿ ಮತ್ತು ಶಾಲಾ ಉನ್ನತೀಕರಣದಂತಹ ಕೆಲವು ಕಾರ್ಯಗಳು ಆರಂಭ  ಆದರೆ, ತಂತ್ರಜ್ಞಾನ ಕೇಂದ್ರ, ಆರೋಗ್ಯ ಕೇಂದ್ರಗಳ ಪ್ರತ್ಯೇಕ ಪಾಲಿಕೆಯಂತಹ ಪ್ರಮುಖ ಘೋಷಣೆ ಇನ್ನೂ ಅನುಷ್ಠಾನಗೊಂಡಿಲ್ಲ ಅಥವಾ ವಿವಾದದಲ್ಲಿ ಸಿಲುಕಿವೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ ಮಾ.6): ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವರ್ಷ ಮಂಡಿಸಿದ್ದ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಗೆ ಸಿಕ್ಕಿರುವ ಅನುದಾನ ಅನುಷ್ಠಾನ ಆಗಿರುವುದೆಷ್ಟು ಎಂದು ಅವಲೋಕಿಸಿದಾಗ ಸಿಕ್ಕಿರುವ ಲೆಕ್ಕ.

ಆಗಿರುವುದೇನು?

ಇದರಲ್ಲಿ ಅತ್ಯಂತ ಖುಷಿ ಸಂಗತಿಯೆಂದರೆ ಬೆಣ್ಣಿಹಳ್ಳದ ಕಾಮಗಾರಿ ಆರಂಭವಾಗಿರುವುದು. ಕಳೆದ ಬಜೆಟ್‌ನಲ್ಲಿ ಬೆಣ್ಣಿಹಳ್ಳದ ಪ್ರವಾಹ ಶಾಶ್ವತ ತಡೆಗೆ ₹ 200 ಕೋಟಿ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಅನುದಾನ ಬಿಡುಗಡೆಯಾಗಿ ಕಾಮಗಾರಿಗೂ ಚಾಲನೆ ದೊರೆತಿದೆ. ಆದರೆ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಹೋರಾಟಗಾರರ ಬೇಡಿಕೆ.

ಇನ್ನು ಹುಬ್ಬಳ್ಳಿಯಲ್ಲಿನ ಅಂಧ ಬಾಲಕರ ಸರ್ಕಾರಿ ಪ್ರಾಠಶಾಲೆಯನ್ನು ಉನ್ನತೀಕರಿಸುವುದು. ಕಳೆದ ವರ್ಷದ ವರೆಗೂ ಅದು ಪ್ರಾಥಮಿಕ ಶಾಲೆಯಾಗಿತ್ತು. ಅದನ್ನು ಪ್ರೌಢಶಾಲೆಯನ್ನಾಗಿ ಪರಿವರ್ತಿಸುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ಕಳೆದ ವರ್ಷವೇ 8ನೆಯ ತರಗತಿಯನ್ನು ಪ್ರಾರಂಭಿಸಲಾಗಿದೆ. ಆದರೆ ಅದಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಿಲ್ಲ.. ಜತೆಗೆ ಶಿಕ್ಷಕರ ನೇಮಕಾತಿಗೂ ಮುಂದಾಗಿಲ್ಲ. ಏಳು ಜನ ಶಿಕ್ಷಕರಿರಬೇಕಿರುವ ಜಾಗೆಯಲ್ಲಿ ಮೂವರು ಕಾಯಂ, ನಾಲ್ಕು ಜನ ಹೊರಗುತ್ತಿಗೆ ಶಿಕ್ಷಕರಿದ್ದಾರೆ. ಜತೆಗೆ ಖಾಸಗಿ ಎನ್‌ಜಿಒ ನೆರವುಗಳೊಂದಿಗೆ ಎಂಟನೆಯ ತರಗತಿ ಮಕ್ಕಳಿಗೆ ಕಲಿಸಿದ್ದಾರೆ. ಈ ಸಲ 9ನೆಯ ತರಗತಿ ಪ್ರಾರಂಭವಾಗಲಿದೆ. ಜತೆಗೆ ಇಲ್ಲಿನ ಶಿಕ್ಷಕರೊಬ್ಬರು ನಿವೃತ್ತಿಯಾಗಲಿದ್ದಾರೆ. ಅದಕ್ಕಾಗಿ ಶಿಕ್ಷಕರ ನೇಮಕ ಮಾಡಬೇಕಿದೆ. ಈ ಹಿಂದೇ ಸರ್ಕಾರ ₹ 26 ಲಕ್ಷ ಅನುದಾನ ನೀಡುವುದಾಗಿ ಹೇಳಿತ್ತು. ಅದರಂತೆ ಅನುದಾನ ನೀಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.

ಏನೇನು ಆಗಿಲ್ಲ: 

ಅಳ್ನಾವರ, ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಉನ್ನತೀಕರಿಸುವ ಕೆಲಸ ಆಗಿಲ್ಲ. ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜಿಸುವ ಸಲುವಾಗಿ ಕಿಯೋನಿಕ್ಸ್‌ ವತಿಯಿಂದ ಪ್ಲಗ್‌ ಆ್ಯಂಡ್‌ ಫ್ಲೇ ಸೌಲಭ್ಯಗಳನ್ನು ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರವನ್ನು (ಜಿಟಿಸಿ) ಹುಬ್ಬಳ್ಳಿಯಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿತ್ತು. ಆದರೆ ಪ್ರಾರಂಭವಾಗಿಲ್ಲ.

ಇನ್ನು ಜಾಗತಿಕ ಸಾಮರ್ಥ್ಯ ಕೇಂದ್ರಗಳ ವಲಯದಲ್ಲಿ ಕಿಯೋನಿಕ್ಸ್‌ ಮೂಲಕ ಗ್ಲೋಬಲ್‌ ಇನ್ನೋವೇಶನ್‌ ಡಿಸ್ಟ್ರಿಕ್ಟ್ ಅನ್ನಾಗಿ ಧಾರವಾಡ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿಕೊಂಡಿತ್ತು. ಇದಲ್ಲದೇ, ಸ್ಥಳೀಯ ಆರ್ಥಿಕ ಆಕ್ಸಿಲರೇಟರ್‌ ಕಾರ್ಯಕ್ರಮದಡಿ ಹುಬ್ಬಳ್ಳಿ-ಧಾರವಾಡ ನವೋದ್ಯಮ ಪರಿಸರ ವ್ಯವಸ್ಥೆ ಅಭಿವೃದ್ಧಿ ಮಾಡುವುದಾಗಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಇದರಿಂದಾಗಿ ತಂತ್ರಜ್ಞಾನದಲ್ಲಿ ಜಿಲ್ಲೆಗೆ ಆದ್ಯತೆ ಸಿಕ್ಕಂತಾಗಿತ್ತು. ಆದರೆ, ಇದ್ಯಾವುದು ಆಗಲೇ ಇಲ್ಲ. ಬರೀ ಘೋಷಣೆಗಷ್ಟೇ ಸೀಮಿತವಾದಂತಾಗಿದೆ. ಇನ್ನು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪತ್ತೆ ಹಚ್ಚಲು ಎಐ ಆಧಾರಿತ ವಿದ್ಯುನ್ಮಾನ ಕ್ಯಾಮೆರಾ ಅಳವಡಿಸುವುದಾಗಿ ಹೇಳಿದ್ದ ಸರ್ಕಾರ ಅದನ್ನು ಮರೆತಂತೆ ಆಗಿದೆ.

ಒಟ್ಟಿನಲ್ಲಿ ಸರ್ಕಾರ ಕಳೆದ ವರ್ಷ ಬಜೆಟ್‌ನಲ್ಲಿ ಬೆಟ್ಟದಷ್ಟು ಘೋಷಣೆ ಮಾಡಿ ಎಳ್ಳಷ್ಟು ಮಾತ್ರ ಈಡೇರಿಸಿರುವುದಂತೂ ಸತ್ಯ. ಈ ಸಲ ಏನೇನು ನೀಡುತ್ತದೆಯೋ ನೋಡಬೇಕು.

ಧಾರವಾಡ ಪಾಲಿಕೆ?

ಇನ್ನೊಂದು ಪ್ರಮುಖ ವಿಷಯವೆಂದರೆ ಧಾರವಾಡ ಪ್ರತ್ಯೇಕ ಪಾಲಿಕೆ ಮಾಡುವುದಾಗಿ ಬಜೆಟ್‌ಗೂ ಮುನ್ನವೇ ಘೋಷಿಸಿತ್ತು. ಆದರೂ ಅದನ್ನು ಆಯವ್ಯಯದಲ್ಲಿ ಸೇರಿಸಿತ್ತು. ಪ್ರತ್ಯೇಕ ಪಾಲಿಕೆಯ ಸರ್ಕಾರ ಅನುಮೋದನೆಯನ್ನೂ ನೀಡಿದ್ದು ಆಗಿದೆ. ಅದಕ್ಕೆ ರಾಜ್ಯಪಾಲರ ಅಂಕಿತ ಇನ್ನು ಬಿದ್ದಿಲ್ಲ. ಈ ನಡುವೆ ಇದಕ್ಕೆ ಇದೀಗ ಬಿಜೆಪಿ ಶಾಸಕರೇ ಅಪಸ್ವರ ತೆಗೆದಿದ್ದು, ಪ್ರತ್ಯೇಕ ಪಾಲಿಕೆ ಬೇಡ. ಅಭಿವೃದ್ಧಿಗೆ, ಅನುದಾನಕ್ಕೆ ಹಿನ್ನಡೆಯಾಗುತ್ತದೆ. ಒಂದೇ ಪಾಲಿಕೆ ಇರಲಿ ಎಂದು ಧ್ವನಿ ಎತ್ತಿದ್ದಾರೆ. ಈ ಸಂಬಂಧ ಪಾಲಿಕೆ ಠರಾವು ಪಾಸು ಮಾಡಿ ಕಳುಹಿಸಲಿ. ಪ್ರತ್ಯೇಕ ಪಾಲಿಕೆ ನಿರ್ಧಾರ ಹಿಂಪಡೆಯಲಿ ಎಂದು ಆಗ್ರಹಿಸುತ್ತಿದ್ದಾರೆ. ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

PREV
Read more Articles on
click me!

Recommended Stories

ನಾನೂ ಕಾಫಿರ ಕೃತಿ ಲೋಕಾರ್ಪಣೆ: ಸತ್ಯದ ಬಗ್ಗೆ ಮಾತನಾಡಲು ಹಿಂದೂಗಳು ಭಯಪಡುವ ಸ್ಥಿತಿ ಇದೆ -ಕವಿ ಡಾ.ಹರೀಶ್‌
Karnataka Budget 2026-27: ಇಂದಿನ ಬಜೆಟ್‌ನಲ್ಲಿ ಬೆಳಗಾವಿಗೆ ಸಿಗುತ್ತಾ ಬಂಪರ್‌? ಬೇಡಿಕೆಗಳೇನು?