Bengaluru Record Rainfall: ಸಿಲಿಕಾನ್‌ ಸಿಟಿಯಲ್ಲಿ ದಶಕದ ದಾಖಲೆಯ ಬೇಸಿಗೆ ಮಳೆ!

By Kannadaprabha News  |  First Published Mar 21, 2022, 7:41 AM IST

*ಚೋಳನಾಯಕನಹಳ್ಳಿ ವಾರ್ಡ್‌ನಲ್ಲಿ 4.3 ಸೆ.ಮೀ. ಮಳೆ
*ಮಾರ್ಚ್ ತಿಂಗಳ ದಶಕದ ದಾಖಲೆ


ಬೆಂಗಳೂರು (ಮಾ. 21): ಶನಿವಾರವಷ್ಟೇ ಈ ವರ್ಷದ ಮೊದಲ ಮಳೆಯ ಸಿಂಚನ ಅನುಭವಿಸಿದ್ದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಭಾನುವಾರ ದಾಖಲೆಯ ಬೇಸಿಗೆ ಮಳೆ ಸುರಿದಿದೆ. ಇದರಿಂದಾಗಿ ನಗರದಲ್ಲಿ ಬಿಸಿಲಿನ ಝಳ ಕಡಿಮೆಯಾಗಿ ಆಹ್ಲಾದಕರ ವಾತಾವರಣ ನೆಲೆಯಾಗಿದೆ. ಇನ್ನೂ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸಂಜೆ ನಾಲ್ಕರ ಅಸುಪಾಸಿಗೆ ಬಲವಾದ ಗಾಳಿ ನಗರವನ್ನು ಆವರಿಸಿತ್ತು. ಇದರಿಂದ ನಗರಾದ್ಯಂತ ಧೂಳು ಆವರಿಸಿ, ಮನೆಯ ಹೊರಗೆ ಕಾರ್ಯನಿಮಿತ್ತ ಹೋಗಿದ್ದವರು ಪರದಾಡುವ ಸ್ಥಿತಿ ಉಂಟಾಗಿತ್ತು. ಆದರೆ ಇದರ ಜೊತೆಜೊತೆಗೆ ದಟ್ಟಕರಿ ಮೋಡ ನಗರವನ್ನು ಕವಿದು ಮಳೆಯ ಸಿಂಚನಕ್ಕೆ ಕಾರಣವಾಯಿತು. 

ಇದೇ ವೇಳೆ ಯಲಹಂಕ ಮತ್ತು ಬೆಂಗಳೂರು ಪೂರ್ವ ವಲಯದ ಕೆಲ ಭಾಗದಲ್ಲಿ ಭರ್ಜರಿ ಮಳೆಯಾಗಿದ್ದು, ಉಳಿದ ವಲಯಗಳಲ್ಲಿಯೂ ಹಗುರ, ತುಂತುರು ಮಳೆಯಾಗಿದೆ. ಸಂಜೆ 4ರ ಸುಮಾರಿಗೆ ಮಳೆ ಆಗಿದ್ದು, ಆ ಬಳಿಕ ಬಿಡುವು ನೀಡಿದ್ದ ಮಳೆ ಪುನಃ ರಾತ್ರಿ 10ರ ಸುಮಾರಿಗೆ ಧಾರಾಕಾರವಾಗಿ ಸುರಿಯಿತು.

Tap to resize

Latest Videos

ಇದನ್ನೂ ಓದಿ: Summer Rain: ಕರ್ನಾಟಕದಾದ್ಯಂತ ಮುಂದಿನ 3-4 ದಿನ ಬೇಸಿಗೆ ಮಳೆ

ವಿಶ್ವನಾಥ ನಾಗೇನಹಳ್ಳಿ ವಾರ್ಡ್‌ನ ಚೋಳನಾಯಕನಹಳ್ಳಿ ವಾರ್ಡ್‌ನಲ್ಲಿ ಈ ದಶಕದ ಗರಿಷ್ಠ ಮಳೆಯಾಗಿದೆ. ಇಲ್ಲಿ 4.3 ಸೆಂ.ಮೀ ಮಳೆ ಸುರಿದಿದ್ದು ನಗರದಲ್ಲಿ ಈ ದಶಕದಲ್ಲಿ ಮಾರ್ಚ್ ತಿಂಗಳ ಒಂದು ದಿನದಲ್ಲಿ ಸುರಿದ ಅತಿ ಹೆಚ್ಚಿನ ಮಳೆಯಾಗಿದೆ. 2018ರ ಮಾಚ್‌ರ್‍ 17ರಂದು 3.84 ಸೆಂ.ಮೀ. ಮತ್ತು 2017ರ ಮಾ.8ರಂದು 3.68 ಸೆಂ.ಮೀ. ಮಳೆಯಾಗಿತ್ತು. 1981ರ ಮಾ.28ಕ್ಕೆ 6.10 ಸೆಂ.ಮೀ ಮಳೆ ಸುರಿದಿರುವುದು ಮಾರ್ಚ್ ತಿಂಗಳ ಒಂದು ದಿನದ ಸಾರ್ವಕಾಲಿಕ ಗರಿಷ್ಠ.

ಹೆಬ್ಬಾಳ ಸರ್ವಿಸ್‌ ರೋಡ್‌, ನ್ಯೂ ಬಿಇಎಲ್‌ ರಸ್ತೆ, ತುಮಕೂರು ರಸ್ತೆ, ಮೇಖ್ರಿ ಸರ್ಕಲ್‌, ಭೂಪಸಂದ್ರ, ನಾಗರಬಾವಿ, ಗೊರಗುಂಟೆಪಾಳ್ಯದಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ವಿಲ್ಸನ್‌ ಗಾರ್ಡನ್‌ನ ಹೊಂಬೇ ಗೌಡ ನಗರ ಮತ್ತು ಜೆಪಿ ನಗರ ಐದನೇ ಹಂತದಲ್ಲಿ ಮರ ಬಿದ್ದಿದ್ದು, ಯಾವುದೇ ಹಾನಿ ಆಗಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಹೆಬ್ಬಾಳ, ಗೊರಗುಂಟೆಪಾಳ್ಯ, ಕೆಂಗೇರಿ, ಶೇಷಾದ್ರಿಪುರ, ಮಲ್ಲೇಶ್ವರ, ಮೆಜೆಸ್ಟಿಕ್‌, ರಾಜಾಜಿನಗರ, ಸುಬ್ರಹ್ಮಣ್ಯನಗರ, ಶ್ರೀರಾಂಪುರ, ವಿಲ್ಸನ್‌ ಗಾರ್ಡನ್‌, ಶಾಂತಿನಗರ, ಮಾಗಡಿ ರಸ್ತೆ, ಯಶವಂತಪುರ, ವಿಜಯನಗರ, ನಾಗರಬಾವಿ, ಹಂಪಿ ನಗರ, ಚಾಮರಾಜಪೇಟೆ, ಗಿರಿನಗರ, ಕಾವಲ್‌ಭೈರಸಂದ್ರ, ಸಿ.ವಿ. ರಾಮನ್‌ ನಗರ, ಯಲಹಂಕ, ಮಹಾದೇವಪುರ, ದೊಡ್ಡನೆಕ್ಕುಂದಿ, ಕೊಟ್ಟಿಗೆಪಾಳ್ಯ, ಸುಂಕದಕಟ್ಟೆ, ಜಯನಗರ, ಜೆಪಿ ನಗರ, ಆರ್‌ಟಿ ನಗರ, ಎಚ್‌ಎಸ್‌ಆರ್‌ ಬಡಾವಣೆ, ಶೆಟ್ಟಿಹಳ್ಳಿ ಪ್ರದೇಶಗಳಲ್ಲಿ ಮಳೆಯಾಗಿದೆ.

ಇದನ್ನೂ ಓದಿಅಕಾಲಿಕ ಮಳೆಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ಭರವಸೆ ನೀಡಿದ ಬಿ ಸಿ ಪಾಟೀಲ್

ಎಚ್‌ಎಂಟಿ ವಾರ್ಡ್‌ನಲ್ಲಿ 1.9 ಸೆಂ.ಮೀ., ಕೊಡಿಗೇಹಳ್ಳಿ 1.7 ಸೆಂ.ಮೀ., ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ 1.5 ಸೆಂ.ಮೀ., ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 1 ಸೆಂ.ಮೀ ಮಳೆಯಾಗಿದೆ. ಬಂಗಾಳಕೊಲ್ಲಿಯ ಅಂಡಮಾನ್‌ ನಿಕೋಬಾರ್‌ ಭಾಗದಲ್ಲಿನ ವಾಯುಭಾರ ಕುಸಿತ, ಮಧ್ಯ ಭಾರತದಲ್ಲಿ ಸೃಷ್ಟಿಯಾಗಿರುವ ಮೇಲ್ಮೈ ಸುಳಿಗಾಳಿ ಮುಂತಾದವುಗಳ ಪ್ರಭಾವದಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ‌

ಈ ವಿದ್ಯಮಾನ ಇನ್ನೂ ಎರಡುಮೂರು ದಿನ ಮುಂದುವರಿಯುವುರದಿಂದ ರಾಜ್ಯರಾಜಧಾನಿಯಲ್ಲಿ ಬಿಸಿಲಿನ ತಾಪ ಕಡಿಮೆ ಇರಲಿದೆ. ವೇಗದ ಗಾಳಿ ಮತ್ತು ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಉಷ್ಣತೆ 30-32 ಡಿಗ್ರಿ ಸೆಲ್ಸಿಯಸ್‌ನ ಅಸುಪಾಸಿನಲ್ಲಿ ದಾಖಲಾಗಲಿದೆ.

click me!