ತುಮಕೂರು(ಮಾ.21) ಪಾವಗಡ ಸಮೀಪ ಪಳವಳ್ಳಿ ಕೆರೆ ಏರಿ ಮೇಲೆ 6 ಜನರನ್ನು ಬಲಿ ಪಡೆದ ಬಸ್ ದುರಂತಕ್ಕೆ ಸಂಬಂಧಿಸಿ ಬಸ್ ಚಾಲಕ ರಘು ಎಂಬಾತನನ್ನು ಭಾನುವಾರ ಬಂಧಿಸಲಾಗಿದೆ.
ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಪಳವಳ್ಳಿ ಕೆರೆ ಸಮೀಪ ಶನಿವಾರ ಪಲ್ಟಿಯಾಗಿತ್ತು. ಮಿತಿಮೀರಿ ಪ್ರಯಾಣಿಕರನ್ನು ತುಂಬಿಕೊಂಡಿದ್ದು ಮತ್ತು ಅತಿ ವೇಗದ ಚಾಲನೆಯೇ ಈ ದುರಂತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಚಾಲಕ ಮೊಬೈಲ್ನಲ್ಲಿ ಮಾತನಾಡುತ್ತಾ ಬಸ್ ಓಡಿಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿತ್ತು. ಘಟನೆ ಬೆನ್ನಲ್ಲೇ ಚಾಲಕ ರಘು ಮತ್ತು ನಿರ್ವಾಹಕ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದರು.
ಸಾರಿಗೆ ಬಸ್ ಸಂಚಾರ:
ಪಳವಳ್ಳಿ ಬಳಿ ಸಂಭವಿಸಿದ ದುರಂತದಿಂದ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ಈ ಭಾಗದಲ್ಲಿ 4 ಹೆಚ್ಚುವರಿ ಬಸ್ನ ಸೌಲಭ್ಯ ಒದಗಿಸಿದೆ. ವೈ.ಎನ್.ಹೊಸಕೋಟೆಯಿಂದ ಪಾವಗಡ ಮಾರ್ಗದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ನಾಲ್ಕು ಹೆಚ್ಚುವರಿ ಬಸ್ ಓಡಾಟ ಆರಂಭವಾಗಿದೆ.
ಮೃತರ ಕುಟುಂಬಕ್ಕೆ 50 ಸಾವಿರ ರೂ, ಗಾಯಾಳುಗಳಿಗೆ 10 ಸಾವಿರ ರೂ ಎಚ್ಡಿಕೆ ನೆರವು
ಸಹೋದರಿಯರ ಅಂತ್ಯ ಸಂಸ್ಕಾರ
ಬಸ್ ದುರಂತದಲ್ಲಿ ಮೃತಪಟ್ಟಆರು ಮಂದಿಯಲ್ಲಿ ಅಮೂಲ್ಯ ಹಾಗೂ ಹರ್ಷಿತಾ ಸಹೋದರಿಯರಾಗಿದ್ದು, ಅವರ ಅಂತ್ಯಕ್ರಿಯೆ ಪಾವಗಡ ತಾಲೂಕು ಪೋತಗಾನಹಳ್ಳಿ ಗ್ರಾಮದಲ್ಲಿ ಭಾನುವಾರ ನೆರವೇರಿತು. ಹನುಮಂತರಾಯ ಮತ್ತು ಲಕ್ಷ್ಮೇನರಸಮ್ಮ ದಂಪತಿಯ ಈ ಇಬ್ಬರು ಪುತ್ರಿಯರ ಪೈಕಿ ಅಮೂಲ್ಯ ಸ್ಥಳದಲ್ಲೇ ಸಾವಿಗೀಡಾದರೆ, ಹರ್ಷಿತಾ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಸದಾ ಜತೆಯಾಗಿಯೇ ಇರುತ್ತಿದ್ದ ಇಬ್ಬರು ಮಕ್ಕಳ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
5 ವಿದ್ಯಾರ್ಥಿಗಳು ಸೇರಿ 6 ಜನ ಬಲಿ
ಮಿತಿಗಿಂತ ಹೆಚ್ಚಿನ ಜನರನ್ನು ಹೇರಿಕೊಂಡು ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಐವರು ವಿದ್ಯಾರ್ಥಿಗಳು ಸೇರಿ ಆರು ಮಂದಿ ಮೃತಪಟ್ಟಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಬಳಿ ಶನಿವಾರ ಬೆಳಗ್ಗೆ ನಡೆದಿದೆ. ಈ ಭೀಕರ ಅಪಘಾತದಲ್ಲಿ 25ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದಲ್ಲೇ ಮಗಳು, ಅತ್ತೆಯನ್ನ ಕಳೆದುಕೊಂಡಿದ್ದೇನೆ, ಗಾಯಾಳುಗಳಿಗೆ ಸಮಧಾನ ಹೇಳಿದ ಸಚಿವ
ಜಿಲ್ಲೆಯ ಸೂಲನಾಯಕನಹಳ್ಳಿಯ ಅಮೂಲ್ಯ(16), ಅಜಿತ್ (18), ಬೆಸ್ತರಹಳ್ಳಿಯ ಶಹನವಾಜ್ (18), ವೈ.ಎನ್.ಹೊಸಕೋಟೆಯ ಕಲ್ಯಾಣ್(18), ದಾದುವಲ್ಲಿ(26), ಹೃಷಿಕಾ(21) ಮೃತರು. ಘಟನೆಗೆ ಸಂಬಂಧಿಸಿ ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಘಟನೆ ನಡೆದಿದ್ದು ಹೇಗೆ?:
ವೈ.ಎನ್.ಹೊಸಕೋಟೆಯಿಂದ ಪಾವಗಡಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಳವಳ್ಳಿ ಕಟ್ಟೆ(ಪಾವಗಡದಿಂದ 5 ಕಿ.ಮೀ. ದೂರ) ಬಳಿ ಸಾಗುತ್ತಿದ್ದಾಗ ಕೆರೆ ಏರಿ ಮೇಲಿನ ಇಕ್ಕಟ್ಟಾದ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಈ ವೇಳೆ ಬಸ್ ಓವರ್ಲೋಡ್ ಆಗಿತ್ತು. ಬಸ್ಸಿನ ಒಳಗೆ ಸುಮಾರು 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಬಸ್ನ ಟಾಪ್ ಮೇಲೆ 20ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದರು. ಸಾಮರ್ಥ್ಯಕ್ಕಿಂತ ಅಧಿಕ ಮಂದಿಯಿದ್ದ ಬಸ್ ಅನ್ನು ಚಾಲಕ ಅತೀ ವೇಗವಾಗಿ ಚಲಾಯಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಹೇಳಿದರೂ ಕೇಳಲಿಲ್ಲ:
ಅಪಘಾತಕ್ಕೂ ಮೊದಲು ನಿಲ್ದಾಣವೊಂದರಲ್ಲಿ ಕೆಲವರು ಚಾಲಕನಿಗೆ ಮಿತಿಮೀರಿದ ವೇಗದಲ್ಲಿ ಬಸ್ ಓಡಿಸದಂತೆ ಮನವಿಯನ್ನೂ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೂ ಇದನ್ನು ಕಿವಿಗೆ ಹಾಕಿಕೊಳ್ಳದ ಚಾಲಕ ತಿರುವಿನಲ್ಲೂ ವೇಗವಾಗಿ ಬಸ್ ಓಡಿಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಬಸ್ನಲ್ಲಿದ್ದ ಪ್ರಯಾಣಿಕರೇ ಆರೋಪಿಸಿದ್ದಾರೆ.
ಪಾವಗಡ ಹಾಗೂ ವೈ.ಎನ್.ಹೊಸಕೋಟೆ ಮಾರ್ಗವಾಗಿ ಸರ್ಕಾರಿ ಬಸ್ಗಳ ಕೊರತೆಯಿಂದಾಗಿ ಖಾಸಗಿ ಬಸ್ಗಳ ಓಡಾಟ ಹೆಚ್ಚಿದ್ದು, ಪರೀಕ್ಷಾ ಸಮಯದ ಕಾರಣ ವಿದ್ಯಾರ್ಥಿಗಳು ಖಾಸಗಿ ಬಸ್ಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಘಟನೆಯಲ್ಲಿ ಗಾಯಗೊಂಡವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೇ ಇದ್ದಾರೆ.