* ರಥೋತ್ಸವದಲ್ಲೂ ವಿಜೃಂಭಿಸಿದ ಪುನೀತ್ ರಾಜ್‌ಕುಮಾರ್
* ಅಪ್ಪು ಫೋಟೋ ಹಿಡಿದು ತೇರು ಎಳೆದ ಅಭಿಮಾನಿಗಳು
* ತೇರು ನೋಡಲು ಬಂದವರು ಅಪ್ಪು ಫೋಟೋ ನೋಡ್ತಿದ್ರು
ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ, (ಮಾ.20): ನಗುವಿನ ಒಡೆಯ, ಕರ್ನಾಟಕ ರತ್ನ, ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ (Puneeth Rajkumar( ಅವರ ಮೇಲಿನ ಅಭಿಮಾನ ರಾಜ್ಯದಲ್ಲಿ ಇನ್ನೂ ಕಡಿಮೆ ಆಗಿಲ್ಲ ಮುಂದೆಯೂ ಅಗಲ್ಲ ಬಿಡಿ.
undefined
ಅದಕ್ಕೆ ನಿದರ್ಶನವೆಂಬಂತೆ, ಇಂದು(ಭಾನುವಾರ) ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನಲ್ಲಿರುವ ಕೋಟೆನಾಡಿನ ಪ್ರಸಿದ್ದ ಪುಣ್ಯಕ್ಷೇತ್ರ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ನಡೆದ, ತಿಪ್ಪಜ್ಜನ ಬೃಹತ್ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ತೇರು ಎಳೆಯುವ ವೇಳೆಯಲ್ಲಿ, ಪವರ್ ಸ್ಟಾರ್ ಪೋಟೋ ಕೈಯಲ್ಲಿ ಹಿಡಿದು ಅಪ್ಪು, ಅಪ್ಪು ಎಂದು ಘೋಷ ವಾಕ್ಯ ಕೂಗುವ ಮೂಲಕ ಅಭಿಮಾನಿಗಳ ದೇವರಾದ ಕರುನಾಡ ರತ್ನನನ್ನು ಮನದಲ್ಲಿ ನೆನೆದರು.
ವಿಜೃಂಭಣೆಯಿಂದ ಜರುಗಿದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ, ಕಣ್ಣಾಯಿಸಿದಷ್ಟು ಜನವೋ ಜನ
ರಥೋತ್ಸವದ ವೇಳೆ ಲಕ್ಷಾಂತರ ಭಕ್ತರು ನೆರೆದಿದ್ದರೂ ಎಲ್ಲರ ಗಮನ ಮಾತ್ರ ಅಪ್ಪು ಭಾವಚಿತ್ರದ ಮೇಲೆ ಇತ್ತು ಎಂದ್ರೆ ತಪ್ಪಾಗಲಿಕ್ಕಿಲ್ಲ. ಅದೇನೆ ಇರ್ಲಿ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ಮಾತಿನಂತೆ ಅಪ್ಪು ಅಭಿಮಾನಿಗಳು ಎಲ್ಲೆಡೆ ಅವರನ್ನು ಸ್ಮರಿಸ್ತಿರೋದು ನಿಜಕ್ಕೂ ದೊಡ್ಮನೆಗೆ ಸಂದ ದೊಡ್ಡ ಗೌರವವೇ ಸರಿ....
ಅಭಿಮಾನಿಗಳ ಎಮೋಷನ್ ಆಗಿ ಬದಲಾಗಿದೆ
ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಅಭಿಮಾನಿಗಳ ಪಾಲಿಗೆ ‘ಜೇಮ್ಸ್’ ಎಂದರೆ ಕೇವಲ ಸಿನಿಮಾವಾಗಿ ಉಳಿದಿಲ್ಲ. ಇದು ಅಪ್ಪು ನಟಿಸಿದ ಕೊನೇ ಚಿತ್ರವಾದ್ದರಿಂದ ಒಂದು ಎಮೋಷನ್ ಆಗಿ ಬದಲಾಗಿದೆ. ‘ಜೇಮ್ಸ್’ ಸಿನಿಮಾ (James Movie) ರಿಲೀಸ್ ಆದಾಗ ಜನರಿಗೆ ಊಟದ ವ್ಯವಸ್ಥೆ ಮಾಡುವುದಾಗಿ ಹಲವು ಅಭಿಮಾನಿಗಳು (Puneeth Rajkumar Fans) ಈ ಹಿಂದೆಯೇ ಮಾತು ನೀಡಿದ್ದರು. ಅದಕ್ಕೆ ತಕ್ಕಂತೆಯೇ ಫ್ಯಾನ್ಸ್ ನಡೆದುಕೊಂಡಿದ್ದಾರೆ.
ಅನೇಕ ಕಡೆಗಳಲ್ಲಿ ಅನ್ನ ಸಂತರ್ಪಣೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶಿವೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿದೆ. 2.25 ಕ್ವಿಂಟಾಲ್ ರೈಸ್ ತಯಾರಿಸಿ ಅಂದಾಜು 4 ಸಾವಿರ ಜನರಿಗೆ ಊಟ ಬಡಿಸಲಾಗಿದೆ. ಚಿಕನ್ ಊಟ ಸವಿದ ಅಭಿಮಾನಿಗಳು ‘ಜೇಮ್ಸ್’ ಸಿನಿಮಾ ನೋಡಿದ್ದಾರೆ. ಇನ್ನು, ಅನೇಕ ಕಡೆಗಳಲ್ಲಿ ವಿವಿಧ ರೀತಿಯಲ್ಲಿ ಪುನೀತ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಹುಬ್ಬಳ್ಳಿಯ ಅಭಿಮಾನಿಯೊಬ್ಬರು 100 ವೃದ್ಧರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿ ಗಮನ ಸೆಳೆದಿದ್ದರು. ಅನೇಕ ಕಡೆಗಳಲ್ಲಿ ಸಸಿ ನೆಡುವ ಮೂಲಕ ಅಪ್ಪು ಹುಟ್ಟುಹಬ್ಬವನ್ನು ಆಚರಿಸಲಾಗಿದೆ.