ಫೆಬ್ರವರಿ 28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ, ಯಾವ ದಿನ ಯಾವ ಸಬ್ಜೆಕ್ಟ್ ಇಲ್ಲಿದೆ ಸಂಪೂರ್ಣ ಮಾಹಿತಿ

Published : Feb 17, 2026, 04:40 PM IST
Karnataka 2nd PUC Exams 2026

ಸಾರಾಂಶ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಫೆಬ್ರವರಿ 28 ರಿಂದ ನಡೆಯಲಿದ್ದು, 7.1 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಮತ್ತು ಮುಂದಿನ ವರ್ಷದಿಂದ ಫೇಷಿಯಲ್ ಅಟೆಂಡೆನ್ಸ್ ಜಾರಿ.

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ (2nd PUC) ವಾರ್ಷಿಕ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆಯಲಿವೆ. ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ – 1 ವೇಳಾಪಟ್ಟಿ

ಫೆಬ್ರವರಿ 28: ಕನ್ನಡ, ಅರೇಬಿಕ್

ಮಾರ್ಚ್ 2: ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ

ಮಾರ್ಚ್ 3: ಇಂಗ್ಲಿಷ್

ಮಾರ್ಚ್ 4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ಮಾರ್ಚ್ 5: ಇತಿಹಾಸ

ಮಾರ್ಚ್ 6: ಭೌತಶಾಸ್ತ್ರ

ಮಾರ್ಚ್ 7: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ

ಮಾರ್ಚ್ 9: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ

ಮಾರ್ಚ್ 10: ಅರ್ಥಶಾಸ್ತ್ರ

ಮಾರ್ಚ್ 11: ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ

ಮಾರ್ಚ್ 12: ಹಿಂದಿ

ಮಾರ್ಚ್ 13: ರಾಜ್ಯಶಾಸ್ತ್ರ

ಮಾರ್ಚ್ 14: ಲೆಕ್ಕಶಾಸ್ತ್ರ, ಗಣಿತ

ಮಾರ್ಚ್ 16: ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ

ಮಾರ್ಚ್ 17: ಹಿಂದುಸ್ತಾನಿ ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ

ನೋಂದಾಯಿತ ವಿದ್ಯಾರ್ಥಿಗಳ ವಿವರ ಹೀಗಿದೆ:

ಹೊಸಬರು: 6,46,801

ಪುನರಾವರ್ತಿತ ವಿದ್ಯಾರ್ಥಿಗಳು: 50,540

ಖಾಸಗಿ ಅಭ್ಯರ್ಥಿಗಳು: 13,022

ಒಟ್ಟು ಪರೀಕ್ಷಾ ಕೇಂದ್ರಗಳು: 1,217

ಈ ಬಾರಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 7, 2026ರಂದು ಪ್ರಕಟಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆ ಮುಂಚಿತವಾಗಿಯೇ ಘೋಷಿಸಿದೆ. ಪರೀಕ್ಷೆಗೆ ಮುನ್ನವೇ ಫಲಿತಾಂಶ ದಿನಾಂಕ ಪ್ರಕಟಿಸಿರುವುದು ರಾಜ್ಯದಲ್ಲಿ ಇದೇ ಮೊದಲ ಬಾರಿಯಾಗಿದೆ.

ಪೊಲೀಸ್, ಗುಪ್ತಚರ ಇಲಾಖೆ ಜೊತೆ ಪೂರ್ವಸಿದ್ಧತಾ ಸಭೆ

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪರೀಕ್ಷೆಗಳ ಸುಗಮ ಹಾಗೂ ಪಾರದರ್ಶಕ ನಿರ್ವಹಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ, ಪೊಲೀಸ್ ಕಮಿಷನರ್ ಸೂರಳ್ಕರ್ ವಿಕಾಸ್ ಕಿಶೋರ್, ಪರೀಕ್ಷಾ ಮಂಡಳಿಯ ನಿರ್ದೇಶಕ ಗೋಪಾಲಕೃಷ್ಣ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವರು ಮಾತನಾಡಿ,

“ಇಂದು ಬೆಳಗ್ಗೆ ಪೊಲೀಸ್ ಇಲಾಖೆ, ಗುಪ್ತಚರ ವಿಭಾಗ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿಗಳು, ಬಿಇಒ ಹಾಗೂ ಡಿಡಿಪಿಐಗಳ ಜತೆ ಚರ್ಚೆ ನಡೆಸಲಾಗಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಈ ಬಾರಿ ಪರೀಕ್ಷಾ ಸಿದ್ಧತೆ ಮಾಡಿಕೊಂಡಿದ್ದೇವೆ,” ಎಂದು ತಿಳಿಸಿದರು.

ವೆಬ್‌ಕಾಸ್ಟಿಂಗ್, ಮೂಲಭೂತ ಸೌಲಭ್ಯಕ್ಕೆ ಆದ್ಯತೆ

2024ರಿಂದಲೇ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಯಲ್ಲಿದ್ದು, ಈ ಬಾರಿ ಕೂಡ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಕಡ್ಡಾಯವಾಗಿ ಅಳವಡಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಪರೀಕ್ಷಾ ದಿನಗಳಲ್ಲಿ ಮಕ್ಕಳ ಪ್ರಯಾಣಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ

ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳು BMTC ಹಾಗೂ KSRTC ಬಸ್‌ಗಳಲ್ಲಿ ಹಾಲ್‌ಟಿಕೆಟ್ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು. ಇದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

SATS ನೋಂದಣಿ ಸಮಸ್ಯೆಗೆ ಪರಿಹಾರ, ಮುಂದಿನ ವರ್ಷದಿಂದ ಫೇಷಿಯಲ್ ಅಟೆಂಡೆನ್ಸ್ ಕಡ್ಡಾಯ

ಕೆಲವು ಖಾಸಗಿ ಶಾಲೆಗಳು SATS ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ನೋಂದಣಿಯನ್ನು ಸರಿಯಾಗಿ ಮಾಡದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಫೇಷಿಯಲ್ ಅಟೆಂಡೆನ್ಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಇದರಿಂದ ವಿದ್ಯಾರ್ಥಿಗಳ ನಿಖರ ಹಾಜರಾತಿ ದಾಖಲಾಗಲಿದ್ದು, ನೋಂದಣಿ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದು ಅವರು ಹೇಳಿದರು.

ಪರೀಕ್ಷಾ ಸಹಾಯವಾಣಿ ಸಂಖ್ಯೆ

ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ಸಮಸ್ಯೆಗಳಿಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು:

080-23310076 / 080-23310075

PREV
Read more Articles on
click me!

Recommended Stories

ಹಾವೇರಿ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ನಿಂತವರ ಮೇಲೆ ನುಗ್ಗಿದ ಬಸ್; ನಾಲ್ವರಿಗೆ ಗಾಯ, 2 ವರ್ಷದ ಮಗು ಸಾವು!
ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವದ ಸಂಭ್ರಮದ ನಡುವೆಯೇ ಮಠದ ಹಳೆ ವಿದ್ಯಾರ್ಥಿ ಸಾವು!