ಆಕೆ ಸಾವು ಬದುಕಿನ ನಡುವೆ ಹಲವು ವರ್ಷಗಳಿಂದ ಹೋರಾಡುತ್ತಿದ್ದ ವಯೋವೃದ್ಧೆ. ಕಣ್ಣು ಕಾಣಲ್ಲ, ಮಲಗಿದ್ದಲ್ಲಿಂದ ಮೇಲೇಳಲು ಆಗಲ್ಲ. ತನಗಿರುವ ಓರ್ವ ಮಾನಸಿಕ ಅಸ್ವಸ್ಥ ಮಗನಿಂದ ತಿನ್ನಲು ಕೂಡಾ ಏನೂ ದೊರಕುತ್ತಿರಲಿಲ್ಲ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ (ಮಾ.23): ಆಕೆ ಸಾವು ಬದುಕಿನ ನಡುವೆ ಹಲವು ವರ್ಷಗಳಿಂದ ಹೋರಾಡುತ್ತಿದ್ದ ವಯೋವೃದ್ಧೆ. ಕಣ್ಣು ಕಾಣಲ್ಲ, ಮಲಗಿದ್ದಲ್ಲಿಂದ ಮೇಲೇಳಲು ಆಗಲ್ಲ. ತನಗಿರುವ ಓರ್ವ ಮಾನಸಿಕ ಅಸ್ವಸ್ಥ ಮಗನಿಂದ ತಿನ್ನಲು ಕೂಡಾ ಏನೂ ದೊರಕುತ್ತಿರಲಿಲ್ಲ. ಮಲಗಿದ್ದಲ್ಲೇ ಮಲ- ಮೂತ್ರ ಮಾಡುತ್ತಾ, ನೆರೆ ಹೊರೆಯವರು ಏನಾದ್ರೂ ನೀಡಿದ್ರೆ ತಿಂದು ಬದುಕಿತ್ತಾ ಸಾವಿಗಾಗಿ ಮುಂದೆ ನೋಡುತ್ತಿದ್ದ ಆ ವೃದ್ಧೆಯನ್ನು ಕೊನೆಗೂ ಬದುಕು ಕೈಬೀಸಿ ಕರೆದಿದೆ. ಅದು ಹೇಗೆ ಅಂತೀರಾ. ಈ ಸ್ಟೋರಿ ನೋಡಿ.
ಗುಜರಿಗೆ ಸೇರಬೇಕಾಗಿದ್ದ ವಿವಿಧ ಪಾತ್ರೆ-ಪಗಡಿ, ಖುರ್ಚಿ ಮುಂತಾದವು ಆ ಮನೆಯ ಹೊರಗೆ ರಾಶಿ ಬಿದ್ದಿತ್ತು. ಕಲ್ಲಿನಿಂದ ಕಟ್ಟಿರುವ ಆ ಮನೆ ಉತ್ತಮವಾಗಿದ್ರೂ ಮನೆ ಮೇಲೆ ಮುಚ್ಚಿರುವ ಹರಿದ ಟಾರ್ಪಾಲು, ಪೊದೆಗಳು ಹಾಗೂ ಕಸಗಳ ರಾಶಿಯಿಂದಾಗಿ ಭೂತ ಬಂಗಲೆಯಂತೆ ಕಾಣುತ್ತಿತ್ತು. ಇವುಗಳ ನಡುವೆ ರಾಶಿ ರಾಶಿ ಬಟ್ಟೆ, ಕಸಗಳು ತುಂಬಿರುವ ನೆಲದಲ್ಲಿ ಅಂಗಾತ ಮಲಗಿರುವ ಕೃಶಕಾಯದ ವೃದ್ಧೆ. ಅದೆಷ್ಟೋ ದಿನಗಳಿಂದ ದೇಹಕ್ಕೆ ಸರಿಯಾದ ಆಹಾರ ದೇಹವಂತೂ ಅಸ್ಥಿಪಂಜರದಂತಾಗಿದ್ರೆ, ಒಂದೆಡೆ ಮೇಲೇಳಲಾಗದೆ, ಮತ್ತೊಂದೆಡೆ ಕಣ್ಣೂ ಕಾಣದೆ ಸಾವನ್ನು ಎದುರು ನೋಡುತ್ತಿದ್ದಳು ಆ ವೃದ್ಧೆ.
ಇದೇನು ಯಾವುದೋ ಪುಸ್ತಕದ ಕಥೆ ಹೇಳ್ತಿದ್ದೀವಿ ಅನ್ಕೊಂಡ್ರಾ.ಇಲ್ಲ. ಇದು ಕಾರವಾರ ಹೊರಭಾಗದ ಹಣಕೋಣ ಗ್ರಾಮದಲ್ಲಿದ್ದುಕೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವೃದ್ಧೆ 57 ವರ್ಷದ ಚಂದ್ರಕಲಾ ಚಂದ್ರಕಾಂತ್ ಕಾಂಬ್ಳೆಯವರ ಸ್ಥಿತಿಯ ಕಥೆ. ಕಳೆದ 5 ವರ್ಷಗಳಿಂದ ತೀವ್ರ ಸಂಕಷ್ಟದಲ್ಲಿದ್ದ ಚಂದ್ರಕಲಾ ಅವರ ಕುಟುಂಬ ಹೇಗೋ ಜೀವನ ಸಾಗಿಸುತ್ತಿತ್ತು. ಕುಟುಂಬಕ್ಕೆ ಆಸರೆಯಾಗಿದ್ದ ಹಿರಿಯ ಮಗ ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಸುಮಾರು 6 ತಿಂಗಳ ಹಿಂದೆ ವೃದ್ಧೆ ಚಂದ್ರಕಲಾ ಅವರ ಪತಿ ಚಂದ್ರಕಾಂತ್ ಕಾಂಬ್ಳೆ ಕೂಡಾ ಮೃತಪಟ್ಟಿದ್ದರು.
KH Muniyappa: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾದರೆ ಸ್ವಾಗತ
ಕಿರಿಯ ಮಗ ಮಾನಸಿಕ ಅಸ್ವಸ್ಥನಾಗಿದ್ದು, ಒಮ್ಮೆ ಮನೆಯಿಂದ ಹೊರಟರೆ ಎರಡು ದಿನಕ್ಕೊಮ್ಮೆ ಮನೆಗೆ ಹಿಂತಿರುಗುತ್ತಿದ್ದ. ವೃದ್ಧೆಯ ಹೊಟ್ಟೆ ತುಂಬಿಸಲು ಯಾವುದಾದರೊಂದು ಫ್ರೂಟಿ ಪ್ಯಾಕೇಟ್ ಮಾತ್ರ ನೀಡುತ್ತಿದ್ದ. ಕಿರಿಯ ಪುತ್ರ ಬಾರದ ದಿನಗಳಲ್ಲಿ ನೆರೆಹೊರೆಯವರೇ ವೃದ್ಧೆಗೆ ಊಟ ನೀಡುತ್ತಿದ್ದರು. ಕನಸ ರಾಶಿಯಲ್ಲಿ ಅಂಗಾತ ಬಿದ್ದುಕೊಂಡು ಅಲ್ಲೇ ಮಲ ಮೂತ್ರ ವಿಸರ್ಜನೆ ಮಾಡುತ್ತಾ, ಕಣ್ಣು ಕಾಣದ ಕಾರಣ ಯಾರಾದರೂ ಊಟವನ್ನು ನೀಡಿದರೆ ತಟ್ಟೆಯನ್ನು ಎದೆಯ ಮೇಲಿರಿಸಿಕೊಂಡು ವೃದ್ಧೆ ಊಟ ಮಾಡುತ್ತಿದ್ದರು. ಪಡಬಾರದ ಕಷ್ಟಪಟ್ಟುಕೊಂಡು ನರಕ ಜೀವನ ಕಂಡ ಈ ವೃದ್ಧೆ ಕೊನೆಗೂ ಕಾರವಾರದ ಜನಶಕ್ತಿ ವೇದಿಕೆಯ ಸಹಾಯದಿಂದ ರಕ್ಷಣೆಗೊಳಗಾಗಿದ್ದಾರೆ.
ರಾಶಿ ರಾಶಿ ಕಸಗಳು, ಸುತ್ತೆಲ್ಲಾ ಬಿದ್ದಿರುವ ಬಟ್ಟೆಗಳ ರಾಶಿ, ಅವುಗಳ ನಡುವೆ ಮಲ ಮೂತ್ರವನ್ನು ಒರೆಸಿರುವ ಬಟ್ಟೆಗಳು, ಮನೆ ಸುತ್ತಲೂ ತುಂಬಿರುವ ಗಬ್ಬು ನಾತದ ನಡುವೆಯೇ ಆ ವೃದ್ಧೆ ಅಂಗಾತ ಮಲಗಿಕೊಂಡು ದಿನದೂಡುತ್ತಿತ್ತು. ಉರೂರು ತಿರುಗಾಡಿ ಎರಡು ದಿನಕ್ಕೊಮ್ಮೆ ಬರುತ್ತಿದ್ದ ಮಾನಸಿಕ ಅಸ್ವಸ್ಥ ಪುತ್ರನೂ ಅದೇ ಮನೆಯಲ್ಲಿ ರಾತ್ರಿ ಕಳೆದು ಸ್ನಾನವೂ ಮಾಡದೆ ಬಟ್ಟೆ ಬದಲಾಯಿಸಿಕೊಂಡು ತೆರಳುತ್ತಿದ್ದ. ಸಾಕಷ್ಟು ಸಮಯಗಳಿಂದ ಈ ಮನೆಯ ಸ್ಥಿತಿ ನೋಡಿ ರೋಸಿ ಹೋದ ಸ್ಥಳೀಯರು, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ್ ಅವರಿಗೆ ಮಾಹಿತಿ ನೀಡಿದ್ದರು.
ನಂತರ ಸ್ಥಳಕ್ಕೆ ಆಗಮಿಸಿದ ಅವರು ವೃದ್ದೆಯ ಪರಿಸ್ಥಿತಿ ಕಂಡು ಆ್ಯಂಬುಲೆನ್ಸ್ ಮೂಲಕ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೃದ್ಧೆಗೆ ಹಾಗೂ ಆತನ ಮಾನಸಿಕ ಅಸ್ವಸ್ಥ ಪುತ್ರನಿಗೆ ಚಿಕಿತ್ಸೆ ಒದಗಿಸುವುದಲ್ಲದೇ, ತಮ್ಮ ಸಂಘಟನೆಯ ಸದಸ್ಯರ ಮೂಲಕ ಈ ಹಾಳುಕೊಂಪೆಯಂತಾಗಿರುವ ಮನೆಯನ್ನು ಮತ್ತೆ ಸ್ವಚ್ಛಗೊಳಿಸಿ ಮನುಷ್ಯರು ಕುಳಿತುಕೊಳ್ಳಲು ಯೋಗ್ಯವಾಗುವಂತೆ ಮಾಡಿಕೊಡೋದಾಗಿ ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಮಾಹಿತಿ ನೀಡಿದ್ರೂ, ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಅಧಿಕಾರಿಗಳು ಬೇಜವಬ್ದಾರಿ ವರ್ತನೆ ನಡೆಸಿದ್ದರಿಂದ ನಾವೇ ಖುದ್ದಾಗಿ ಬಂದು ವೃದ್ಧೆಯ ರಕ್ಷಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಸಾಮಾಜಿಕ ಕಾರ್ಯಕರ್ತ ಮಾಧಮ ನಾಯ್ಕ್.
ಹಿಂದೂಗಳು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಅಲ್ಲಿ ಮಾಂಸ ಖರೀದಿ ಮಾಡುತ್ತಾರಾ: ಸಿಟಿ ರವಿ ಪ್ರಶ್ನೆ
ಒಟ್ಟಿನಲ್ಲಿ ನರಕ ಯಾತನೆಯೊಂದಿಗೆ ಕೊನೆಯುಸಿರೆಳಯಬೇಕಾಗಿದ್ದ ವೃದ್ಧೆ ಚಂದ್ರಕಲಾ ಕೊನೆಗೂ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವಂತಾಗಿದೆ. ಹಾಳು ಕೊಂಪೆಯಂತಿರುವ ಮನೆಯಲ್ಲೇ ಸತ್ತು ಕೊಳೆಯಬೇಕಿದ್ದ ವೃದ್ಧೆ ಜನಶಕ್ತಿ ವೇದಿಕೆಯ ಸಹಾಯದಿಂದಾಗಿ ಕೊನೆಗೂ ತನ್ನ ಅಂತಿಮ ದಿನಗಳನ್ನು ಉತ್ತಮವಾಗಿ ಕಳೆಯುವಂತಾಗಿರೋದು ಇನ್ನೂ ಮಾನವೀಯ ಹೃದಯಗಳು ಸಮಾಜದಲ್ಲಿವೆ ಅನ್ನೋದಕ್ಕೆ ಉತ್ತಮ ಉದಾಹರಣೆ.