ಮಂಗಳೂರು: ಕಪಿಲ, ಫಲ್ಗುಣಿ ನದಿಗಳಲ್ಲಿ ಪ್ರವಾಹ

By Kannadaprabha NewsFirst Published Aug 8, 2019, 1:13 PM IST
Highlights

ಮಂಗಳೂರು ಸೇರಿ ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಬೆಳ್ತಂಗಡಿ ತಾಲೂಕಿನ ಪ್ರಮುಖ ನದಿಗಳು ದಡ ಮೀರಿ ಹರಿಯುತ್ತಿದೆ. ನೇತ್ರಾವತಿ, ಕಪಿಲ, ಫಲ್ಗುಣಿ ನದಿಗಳು ಹಾಗೂ ತೊರೆಗಳು ದಡ ಮೀರಿ ಹರಿಯುತ್ತಿದ್ದು, ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಮಂಗಳೂರು(ಆ.08): ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದಿದ್ದು ಪ್ರಮುಖ ನದಿಗಳು ದಡ ಮೀರಿ ಹರಿಯುತ್ತಿದ್ದು ತಾಲೂಕಿನಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣಗೊಂಡಿದೆ.

ನೇತ್ರಾವತಿ, ಕಪಿಲ, ಫಲ್ಗುಣಿ ನದಿಗಳು ಹಾಗೂ ತೊರೆಗಳು ದಡ ಮೀರಿ ಹರಿಯುತ್ತಿದೆ. ದಿಡುಪೆ ಪ್ರದೇಶದಲ್ಲಿ ಗದ್ದೆ ಹಾಗೂ ತೋಟಗಳಿಗೆ ನೀರು ನುಗ್ಗಿದೆ. ವಿವಿಧೆಡೆ ರಸ್ತೆಗೆ ಮರಗಳು ಉರುಳಿ ಬಿದ್ದಿದೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಇಂದು ಅಪರಾಹ್ನದಿಂದ ಮಳೆಯ ಅಬ್ಬರ ಒಂದಿಷ್ಟುಕಡಿಮೆಯಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.

ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ದಡ ಮೀರಿ ಹರಿಯುತ್ತಿದ್ದು ಇಂದು ನದಿ ನೀರು ಮೇಲೆ ನುಗ್ಗಿದ್ದು ವಾಹನ ನಿಲುಗಡೆ ಪ್ರದೇಶಗಳು ನೀರಿನಿಂದ ಆವೃತವಾಗಿದೆ. ಶಿಶಿಲ ಪ್ರದೇಶದಲ್ಲಿ ಕಪಿಲಾ ನದಿ ದಡ ಮೀರಿ ಹರಿಯುತ್ತಿದೆ. ಸೇತುವೆಯ ಮೇಲೂ ನೀರು ಹರಿದಿದ್ದು ಗದ್ದೆ ತೋಟಗಳಿಗೆ ನೀರು ನುಗ್ಗಿದೆ. ಶಿಶಿಲ ಶಿಶಿಲೇಶ್ವರ ದೇವಸ್ಥಾನಕ್ಕೂ ನೀರು ನುಗ್ಗಿದೆ.

ವಿದ್ಯುತ್‌ ಕಂಬಗಳು ಧರೆಗೆ:

ಮಡಂತ್ಯರು ಸಮೀಪ ಕೊಲ್ಪೆದಬೈಲು ಎಂಬಲ್ಲಿ ಬೃಹತ್‌ ಮರವೊಂದು ರಸ್ತೆಗೆ ಉರುಳಿ ಬಿದ್ದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮರ ಮುರಿದು ಬಿದ್ದಾಗ ವಿದ್ಯುತ್‌ ಕಂಬಗಳೂ ಮುರಿದು ಬಿದ್ದದೆ ಸ್ಥಳೀಯರ ಸಹಕಾರದೊಂದಿಗೆ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಲಾಯಿತು.

ಮನೆಯ ಮೇಲೆ ಮರ:

ಕಾಜೂರು ಬಳಿ ರಸ್ತೆಗೆ ಅಡ್ಡಲಾಗಿ ಮರವೊಂದು ಮುರಿದು ಬಿದ್ದಿದ್ದು ವಿದ್ಯುತ್‌ ಕಂಬಗಳೂ ಧರೆಗುರುಳಿದೆ. ಕೆಲ ಗಂಟೆಗಳ ಕಾಲ ಇಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶಿರ್ಲಾಲು ಗ್ರಾಮದ ಕೊರಗಪ್ಪ ಮಲೆಕುಡಿಯ ಎಂಬವರ ಮನೆಯ ಮೇಲೆ ಮರ ಮುರಿದು ಬಿದ್ದು ಭಾಗಶಃ ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿನ ನಿವಾಸಿ ಚಿನ್ನಯ್ಯ ಕುಲಾಲ್‌ ಎಂಬುವರ ಮನೆಯ ಹಿಂಭಾಗ ಕುಸಿದಿದ್ದು ಮನೆಗೆ ಭಾಗಶ ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕೊಡಗು: ಭಾಗಮಂಡಲ ವ್ಯಾಪ್ತಿಯಲ್ಲಿ 292 ಮಿ.ಮೀ ಮಳೆ

ತೋಟ, ಗದ್ದೆಗೆ ನುಗ್ಗಿದ ನೀರು:

ನೇತ್ರಾವತಿ ನದಿ ಎಲ್ಲೆಡೆ ದಡ ಮೀರಿ ಹರಿಯುತ್ತಿದ್ದು, ನದಿ ದಡದಲ್ಲಿರುವ ತೋಟ ಹಾಗೂ ಗದ್ದೆಗಳಿಗೆ ನೀರು ನುಗ್ಗಿದೆ. ದಿಡುಪೆ ಸಮೀಪಗದ್ದೆ ಹಾಗೂ ತೋಟಗಳಲ್ಲಿ ನೀರು ನಿಂತಿದ್ದು ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಕೆಲವೆಡೆ ಗದ್ದೆಗಳು ಸಂಪೂರ್ಣ ಕೊಚ್ಚಿ ಹೋಗಿದೆ. ನಿರಂತರವಾಗಿ ಬೀಸುತ್ತಿರುವ ಗಾಳಿಗೆ ವಿವಿಧೆಡೆಗಳಲ್ಲಿ ಅಡಿಕೆ ತೆಂಗು ಹಾಗೂ ರಬ್ಬರ್‌ ಮರಗಳು ಉರುಳಿ ಬಿದ್ದಿದ್ದು ಹಾನಿ ಸಂಭವಿಸಿದೆ.

ಮಂಗಳೂರು: 50 ಮನೆಗಳಿಗೆ 5 ಲಕ್ಷ ರು.ಗೂ ಅಧಿಕ ಹಾನಿ

click me!