ಇತ್ತೀಚಿನ ವೋಟ್‌ಬ್ಯಾಂಕ್ ರಾಜಕಾರಣಕ್ಕೆ ಕನ್ನಡ ಭಾಷೆ, ಕನ್ನಡಿಗರು ಹಾಗೂ ಯುವಕರು ಬಲಿಪಶುಗಳಾಗುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದರು.
ಹೊಸದುರ್ಗ (ನ.30): ಇತ್ತೀಚಿನ ವೋಟ್‌ಬ್ಯಾಂಕ್ ರಾಜಕಾರಣಕ್ಕೆ ಕನ್ನಡ ಭಾಷೆ, ಕನ್ನಡಿಗರು ಹಾಗೂ ಯುವಕರು ಬಲಿಪಶುಗಳಾಗುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದರು. ಪಟ್ಟಣದ ಅಶೋಕ ರಂಗಮಂದಿರಲ್ಲಿ ಸೋಮವಾರ ರಾತ್ರಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ಆಯೋಜಿಸಿದ್ದ ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ರಾಜ್ಯೋತ್ಸವದ ಉತ್ಸವಗಳು ಕೇವಲ ಒಂದು ದಿನದ ಉತ್ಸವಗಳಾಗದೇ ನಿತ್ಯೋತ್ಸವ ಆಗಬೇಕು.
ಅನೇಕ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕ ಹಿರಿಯರ ತ್ಯಾಗ ಬಲಿದಾನದಿಂದಾಗಿ 1956ರಲ್ಲಿ ಏಕೀಕರಣವಾಯಿತು. ಅಂದು ಒಂದಾದ ದಿವಸವನ್ನು ನಾವೆಲ್ಲಾ ರಾಜ್ಯೋತ್ಸವ ದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ. ಅನೇಕ ಪ್ರದೇಶಗಳು ಕರ್ನಾಟಕದೊಳಗೆ ಸೇರಲು ಬಾಕಿ ಇವೆ. ಇದರ ಬಗ್ಗೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ ಎಂದರು. ಭಾಷಾ ಅಲ್ಪಸಂಖ್ಯಾತರು ಹೆಚ್ಚು ಕರ್ನಾಟಕಕ್ಕೆ ವಲಸೆ ಬರುತ್ತಿದ್ದಾರೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಮತ್ತು ಕೇರಳ ಸೇರಿದಂತೆ ಇನ್ನೂ ಅನೇಕ ಪ್ರದೇಶಗಳಿಂದ ವಲಸೆ ಬಂದರೆ, ಈಗ ಉತ್ತರ ಭಾರತದಿಂದ ಹಿಂದಿ ಮಾತನಾಡುವ ಹೆಚ್ಚು ಜನ ವಲಸೆ ಬರುತ್ತಿರುವುದು ಬೇಸರದ ಸಂಗತಿ.
ರೈತರಿಗೆ ಅನ್ಯಾಯವಾಗುವ ಕಾಯ್ದೆ ಜಾರಿಯಾಗಲು ಬಿಡಲ್ಲ: ಡಿ.ಕೆ.ಶಿವಕುಮಾರ್
ಲಾಲುಪ್ರಸಾದ್ ಯಾದವ್ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ 10,701 ರೈಲ್ವೆ ಡಿ.ಗ್ರೂಫ್ ನೇಮಕಾತಿ ಪರೀಕ್ಷೆ ಬರೆಯಲು 3 ಸಾವಿರ ಬಿಹಾರಿಗಳನ್ನು ಕರೆತಂದ ಹುನ್ನಾರ ನಡೆದಿತ್ತು. ಆದರೆ ಅದನ್ನು ತಡೆ ಹಿಡಿಯುವ ಕೆಲಸ ಕರವೇ ಮಾಡಿತ್ತು. ಅದರ ಪರಿಣಾಮವಾಗಿ 4701 ಉದ್ಯೋಗದಲ್ಲಿ 3882 ಜನ ಕನ್ನಡಿಗರು ಆಯ್ಕೆಯಾದರು ಎಂದರು. ರಾಜಕೀಯ ಓಲೈಕೆಗಾಗಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಜಗಳ ತಂದಿಟ್ಟಿದೆ. ಯುವಕರು ಪಕ್ಷಗಳ ಕಡೆಗೆ ವಾಲುವ ಬದಲು ಕನ್ನಡದ ರಕ್ಷಣೆ ಮತ್ತು ಹೋರಾಟದ ಕಡೆ ಮುಖ ಮಾಡಬೇಕಿದೆ.
ಕಾವೇರಿ, ಮಹದಾಯಿ, ಕೃಷ್ಣ, ಉದ್ಯೋಗ, ಡಾ.ಸರೋಜಿನಿ ಮಹಿಷಿ ವರದಿ ಮತ್ತು ಬೆಳಗಾವಿ ಗಡಿ ಸಮಸ್ಯೆಗಳು ಹಾಗೆ ಇವೆ. ಆದರೆ ಈ ಬಗ್ಗೆ ಕರವೇ ನಿರಂತರ ಹೋರಾಟ ನಡೆಸುತ್ತಿದೆ ಎಂದರು. ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಸಂಸ್ಕೃತದಲ್ಲಿ ವಚನಗಳು, ಕವನಗಳು, ಕೀರ್ತನೆಗಳು ಮತ್ತು ವೇದ ಉಪನಿಷತ್ತುಗಳು ಇದ್ದ ಸಂದರ್ಭದಲ್ಲಿಯೇ ಕನ್ನಡದಲ್ಲಿ ವಚನಗಳನ್ನು ಬರೆದವರು 12ನೇ ಶತಮಾನದ ಬಸವಾದಿ ಶರಣರು. ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಸಾಹಿತ್ಯ ವಚನ ಸಾಹಿತ್ಯ. ವಚನ ಸಾಹಿತ್ಯ ಜನಪದ, ಜನಪರ, ಜನಹಿತ ಸಾಹಿತ್ಯವಾಗಿದೆ. ಆದರೆ ಕರ್ನಾಟಕದಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಬೇಕಿರುವುದು ದುರಂತವಾಗಿದೆ.
ಹಾಗಾಗಿ ಕನ್ನಡ ಬೆಳೆಸಲು ಕನ್ನಡವನ್ನು ಬಳಸಬೇಕು ಎಂದು ಹೇಳಿದರು. ಭಗೀರಥ ಪೀಠದ ಪುರುಷೋತ್ತಮನಾಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರವೇ ಜಿಲ್ಲಾಧ್ಯಕ್ಷ ಟಿ.ರಮೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಧ್ಯಕ್ಷ ಜಿ.ಲೋಕೇಶ್ ಕೋಡಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಬಿ.ಪಿ ಓಂಕಾರಪ್ಪ, ಹೆಚ್.ವಿ ಓಂಕಾರಪ್ಪ, ಕೋಡಿಹಳ್ಳಿ ತಮ್ಮಣ್ಣ, ಹೆಚ್.ಬಿ ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ, ರಾಜ್ಯ ಉಪಾಧ್ಯಕ್ಷ ಪುಟ್ಟೆಗೌಡ, ಜಿಲ್ಲಾ ಮಹಿಳಾ ಅಧ್ಯಕ್ಷೆ ಚಂದ್ರಕಲಾ, ತಾಲೂಕು ಘಟಕದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.
ವಿಜಯಪುರದಲ್ಲಿ ವಿಚಿತ್ರ ಹಬ್ಬದ ಆಚರಣೆ: ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ
ನಮ್ಮನ್ನಾಳುವ ಬಿಜೆಪಿ, ಕಾಂಗ್ರೇಸ್ ಮತ್ತು ಜೆಡಿಎಸ್ ಶಾಸಕ: ಕನ್ನಡ ನಾಡು ನುಡಿಗಾಗಿ ಜೈಲಿಗೆ ಹೋಗಿಲ್ಲ. ಬದಲಾಗಿ ಕರ್ನಾಟಕವನ್ನೇ ಲೂಟಿ ಮಾಡಿ ಜೈಲಿಗೆ ಹೋದವರ ಸಂಖ್ಯೆ ಜಾಸ್ತಿ ಇದೆ. ಇಂದಿನ ಜನಪ್ರತಿನಿಧಿಗಳಿಗೆ ಕನ್ನಡ ಬೇಕಾಗಿಲ್ಲ. ಚುನಾವಣೆ ಗೆಲ್ಲುವುದೇ ಮುಖ್ಯವಾಗಿದೆ. ಕನ್ನಡ ಚಳುವಳಿಗಾರರ ವಿರುದ್ದ ಅಸಭ್ಯ ಟೀಕೆ ಮಾಡುತ್ತಿರುವ ಜನಪ್ರತಿನಿಧಿಗಳ ನಡೆ ಸರಿಯಿಲ್ಲ
-ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರವೇ.